
ಫ್ರೆಂಚ್ ವ್ಯಂಗ್ಯ ವಾರಪತ್ರಿಕೆ ಚಾರ್ಲಿ ಹೆಬ್ಡೊಯು ಪ್ರಕಟಿಸಿದ ಪ್ರವಾದಿ ಮೊಹಮ್ಮದ್ ಅವರ ಒಂದೇ ಒಂದು ವಿಡಂಬನಾತ್ಮಕ ವ್ಯಂಗ್ಯಚಿತ್ರವು ಜನವರಿ 7, 2015ರಂದು ಕೌಚಿ ಸಹೋದರರನ್ನು ಪ್ಯಾರಿಸ್ ಕಚೇರಿಗಳ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸಿತು. ಕೇವಲ 10 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡ ಭೀಕರ ದೃಶ್ಯಕ್ಕೆ ಜಗತ್ತು ಸಾಕ್ಷಿಯಾಯಿತು. ಫ್ರೆಂಚ್ ಮೂಲದ ಅಲ್ಜೀರಿಯನ್ ಮುಸ್ಲಿಂ ಸಹೋದರರಾದ ಸೈದ್ ಕೌಚಿ ಮತ್ತು ಚೆರಿಫ್ ಕೌಚಿ ನಡೆಸಿದ ಈ ಭಯೋತ್ಪಾದಕ ಗುಂಡಿನ ದಾಳಿಯು ಮಾನವೀಯತೆಯನ್ನು ಕಲುಕಿದ ದುರಂತವಾಗಿ ಉಳಿದುಹೋಯಿತು.
ಬೆಳಿಗ್ಗೆ 11:30ರ ಸುಮಾರಿಗೆ, ಅಸಾಲ್ಟ್ ರೈಫಲ್ಗಳೊಂದಿಗೆ ನುಗ್ಗಿದ ಕೌಚಿ ಸಹೋದರರು ಮೊದಲು ಚಾರ್ಲಿ ಹೆಬ್ಡೋ ಗುಮಾಸ್ತ ಫ್ರೆಡೆರಿಕ್ ಬೊಯಿಸ್ಸೊ ಅವರನ್ನು ಕೊಂದರು. ನಂತರ ವ್ಯಂಗ್ಯಚಿತ್ರಕಾರ ಕೊರಿನ್ನೆ “ಕೊಕೊ” ರೇ ಅವರನ್ನು ಬಲವಂತ ಮಾಡಿ ಎರಡನೇ ಮಹಡಿಯ ಸಂಪಾದಕೀಯ ಸಭೆಯ ಬಾಗಿಲು ತೆರೆಸಿದರು, ಮೊದಲು ಪೊಲೀಸ್ ಅಧಿಕಾರಿ ಫ್ರಾಂಕ್ ಬ್ರಿನ್ಸೊಲಾರೊ ಮೇಲೆ ನಂತರ ಸಂಪಾದಕ ಸ್ಟೀಫನ್ “ಚಾರ್ಬ್” ಚಾರ್ಬೊನಿಯರ್ ಅವರ ಮೇಲೆ ಗುಂಡು ಹಾರಿಸಿದರು.
ಚಾರ್ಬೊನಿಯರ್, ಕ್ಯಾಬು, ವೊಲಿನ್ಸ್ಕಿ, ಟಿಗ್ನಸ್ ಮತ್ತು ಹೊನೊರೆಯಂತಹ ವ್ಯಂಗ್ಯಚಿತ್ರಕಾರರು, ಅಂಕಣಕಾರ ಬರ್ನಾರ್ಡ್ ಮಾರಿಸ್, ಮನೋವಿಶ್ಲೇಷಕ ಎಲ್ಸಾ ಕಯಾಟ್, ನಕಲು ಸಂಪಾದಕ ಮುಸ್ತಫಾ ಔರ್ರಾಡ್ ಮತ್ತು ಅತಿಥಿ ಮೈಕೆಲ್ ರೆನಾಡ್ ಅವರನ್ನು ಬಂದೂಕುಧಾರಿಗಳು ಕ್ಷಣ ಮಾತ್ರದಲ್ಲಿ ಕೊಂದು ಹಾಕಿದರು. ನಂತರ ಆರಂಭವಾದ ಪೊಲೀಸ್ ಫೈರಿಂಗ್ಗೆ ಕಾಲ್ಕಿತ್ತ ಬಂದೂಕುಧಾರಿಗಳು ಬೀದಿಯಲ್ಲಿ ಪೊಲೀಸ್ ಅಧಿಕಾರಿ ಅಹ್ಮದ್ ಮೆರಾಬೆಟ್ ಅವರನ್ನು ಕೊಂದರು. ಅಹ್ಮದ್ ಅವರು ಉಗ್ರರ 12ನೇ ಬೇಟೆಯಾದರು.
ಆದರೆ ಭಯಾನಕ ಘಟನೆಯಲ್ಲಿ ಬದುಕುಳಿದವರು ಇಂದಿಗೂ ಆಳವಾದ ನೋವುಗಳೊಂದಿಗೆ ಜೀವಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ಸಿಗೋಲೀನ್ ವಿನ್ಸನ್ ಮತ್ತು ಕೊರಿನ್ “ಕೊಕೊ” ರೇ. ಇವರಿಬ್ಬರು ದಾಳಿಯ ನಂತರ, ಅಪರಾಧಭಾವ ಮತ್ತು ದುಃಸ್ವಪ್ನಗಳೊಂದಿಗೆ ಹೋರಾಡುತ್ತಿದ್ದಾರೆ. ಇವರ ಕಥೆಗಳು ಭಯೋತ್ಪಾದನೆಯ ಹಿಡಿತ ನಿಂತ ನಂತರವೂ ಎಷ್ಟು ದೀರ್ಘಕಾಲ ಉಳಿಯುತ್ತದೆ ಎಂಬುದರತ್ತ ಬೆಳಕು ಚೆಲ್ಲುತ್ತವೆ. ಇದರಲ್ಲಿ ಸಿಗೋಲೀನ್ ವಿನ್ಸನ್ ಅವರ ಕಥೆಯು ವಿಶೇಷವಾಗಿ ಮಹತ್ವದ್ದು – ಏಕೆಂದರೆ ಆಕೆಯನ್ನು ಉಗ್ರರು ಮಹಿಳೆ ಎಂಬ ಕಾರಣಕ್ಕೆ ಕೊಂದು ಹಾಕಲಿಲ್ಲ ಆದರೆ ಅವಳಿಗೆ ಕುರಾನ್ ಓದಲು ಹಾಗೂ ಮತಾಂತರಗೊಳ್ಳಲು ಬೆದರಿಕೆ ಹಾಕಿದ್ದರು.
ಚಾರ್ಲಿ ಹೆಬ್ಡೊಯ ಸಮರ್ಪಿತ ಅಪರಾಧ ವರದಿಗಾರ್ತಿ ಸಿಗೋಲೀನ್ ವಿನ್ಸನ್, ಜನವರಿ 7, 2015ರಂದು ಎರಡನೇ ಮಹಡಿಯ ಸಂಪಾದಕೀಯ ಸಭೆಯಲ್ಲಿ ಕುಳಿತಿದ್ದರು. ಕೊರಿನ್ “ಕೊಕೊ” ರೇ ಅವರನ್ನು ಬೆದರಿಸುವ ಮೂಲಕ ಈ ಮಹಡಿಯ ಬಾಗಿಲು ತೆರೆದ ಕೌಚಿ ಸಹೋದರರು ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದರು. 2012ರಲ್ಲಿ ಕಾರ್ಮಿಕ ವಕೀಲೆ ವೃತ್ತಿಯನ್ನು ತೊರೆದು ನ್ಯಾಯಾಲಯದ ಪ್ರಕರಣಗಳನ್ನು ವಿಡಂಬನಾತ್ಮಕ ಶೈಲಿಯಲ್ಲಿ ವರದಿ ಮಾಡಲು ಚಾರ್ಲೆ ಹೆಬ್ಡೋ ಪತ್ರಿಕೆಗೆ ಸೇರಿದ ವಿನ್ಸನ್ ಅವರ ಮೇಲೆ ಗುಂಡು ಉಗ್ರರು ಹಾರಿಸಿಲ್ಲವಾದರೂ ಅವರ ಸುತ್ತಮುತ್ತಲಿದ್ದವರು ಎಲ್ಲರೂ ಗುಂಡೇಟಿಗೆ ಬಲಿಯಾಗಿ ಹೋಗಿದ್ದರು.
ವಿನ್ಸನ್ ಅದೇಗೋ ನೆಲದ ಮೇಲೆ ತೆವಳಿ ಅಡಗಿಕೊಂಡಳು, ಆದರೆ ಚೆರಿಫ್ ಕೌಚಿ ಆಕೆಯನ್ನು ಗುರುತಿಸಿ, ತನ್ನ AK-47 ಅನ್ನು ಆಕೆಯ ತಲೆಗೆ ಗುರಿಯಿಟ್ಟ. ಗನ್ಪೌಡರ್ ಹೊಗೆ ಮತ್ತು ಕಿರುಚಾಟದ ಅವ್ಯವಸ್ಥೆಯ ನಡುವೆ, ಆಕೆ ತನ್ನ ಜೀವಕ್ಕಾಗಿ ಬೇಡಿಕೊಂಡಳು, ಸಹೋದ್ಯೋಗಿಗಳಾದ ವೊಲಿನ್ಸ್ಕಿ ಮತ್ತು ಕಾಬು ಅವಳ ಹತ್ತಿರದಲ್ಲೇ ಸತ್ತು ಬಿದ್ದಿದ್ದರು.
“ನೀನು ಮಹಿಳೆ ಎಂಬ ಕಾರಣಕ್ಕಾಗಿ ನಾನು ನಿನ್ನನ್ನು ಕೊಲ್ಲುತ್ತಿಲ್ಲ – ನಾವು ಮಹಿಳೆಯರನ್ನು ಕೊಲ್ಲುವುದಿಲ್ಲ” ಎಂದು ಕೌಚಿ ತನ್ನ ಗನ್ ಕೆಳಗಿಳಿಸಿದ. ಆದರೆ ಆಕೆ ಇಸ್ಲಾಂಗೆ ಮತಾಂತರಗೊಳ್ಳಬೇಕು, ಕುರಾನ್ ಓದಬೇಕು, ಮುಸುಕು ಧರಿಸಬೇಕು ಮತ್ತು ಅಲ್ಲಾಹನ ಮಹಿಮೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದ. “ಅಲ್ಲಾಹು ಅಕ್ಬರ್!” ಎಂದು ಕೂಗುತ್ತಾ ಅವಳಿಂದ ದೂರ ಸರಿದ, ಆಕೆಯನ್ನು ಸತ್ತವರ ನಡುವೆ ಜೀವಂತವಾಗಿ ಬಿಟ್ಟ. ವಿನ್ಸನ್ ಕುಸಿದು ಬಿದ್ದಳು, ರಕ್ತ ಆಕೆಯ ಸುತ್ತಲೂ ಮಡುಗಟ್ಟಿತ್ತು, ಆಕೆಯ ಹೃದಯ ಬಡಿಯುತ್ತಿತ್ತು. ಬಂದೂಕುಧಾರಿಗಳು ತಮ್ಮ ಕೆಲಸ ಮುಗಿಸಿ ಹೊರಟ ಬಳಿಕ ಆಕೆ ನಿಧಾನಕ್ಕೆ ಎದ್ದು ಫೋನ್ ಕರೆ ಮಾಡಲು ಸತ್ತು ಬಿದ್ದ ದೇಹಗಳ ಮೇಲೆ ಹೆಜ್ಜೆ ಹಾಕಿದಳು, ಆಘಾತದಿಂದ “ಅವರೆಲ್ಲರೂ ಸತ್ತಿದ್ದಾರೆ” ಎಂದು ಪಿಸುಗುಟ್ಟಿದಳು, ಭಯಾನಕತೆಯ ವಿರುದ್ಧ ಆಕೆಯ ಹೋರಾಟ ನಮಗೆ ಅತ್ಯಲ್ಪವೆಂದು ತೋರುತ್ತದೆ, ಆದರೆ ಆಕೆ ಇಂದಿಗೂ ಭಯಾನಕತೆಯ ನೆನಪಿನೊಂದಿಗೆ ಜೀವಂತವಿದ್ದೂ ಸತ್ತಂತೆ ಬದುಕುತ್ತಿದ್ದಾಳೆ.
ಒಂದು ದಶಕದ ನಂತರವೂ ಅಪರಾಧಭಾವ ವಿನ್ಸನ್ಳನ್ನು ಕಾಡುತ್ತಿದೆ; ನಾನು ಯಾಕೆ ಬದುಕುಳಿದೆ ಎಂದು ಆಕೆ ಆಶ್ಚರ್ಯ ಪಡುತ್ತಾಳೆ, ದಾಳಿಯ ನಂತರ ತಾನು ಎದುರಿಸುತ್ತಿರುವ ದುಃಸ್ವಪ್ನಗಳನ್ನು ಆಕೆ ವಿವರಿಸುತ್ತಾಳೆ. 2025ರ ಸಂದರ್ಶನಗಳಲ್ಲಿ, ಆಕೆ ಸತ್ತು ಹೋದ ತನ್ನವರ ಬಗ್ಗೆ ಗೌರವದ ಮಾತನ್ನಾಡಿದ್ದಾಳೆ ಮತ್ತು ಆಘಾತದ ಹೊರತಾಗಿಯೂ ಮುಕ್ತ ಅಭಿವ್ಯಕ್ತಿಯನ್ನು ಸಮರ್ಥಿಸಿದ್ದಾಳೆ.
ಭಯೋತ್ಪಾದನೆಯು ಸಮಾಜಗಳ ಮೇಲೆ ಎಷ್ಟು ಆಳವಾದ ಗಾಯಗಳನ್ನು ಮಾಡುತ್ತದೆ ಎಂಬುದಕ್ಕೆ ಚಾರ್ಲೆ ಹಿಬ್ಡೋ ಪ್ರಕರಣ ಒಂದು ಸಾಕ್ಷಿಯಷ್ಟೇ. ವೈಯಕ್ತಿಕ ನಂಬಿಕೆಗಳನ್ನು ಎಲ್ಲರ ಮೇಲೆ ಹೇರಲು ನೀಚ ಕೃತ್ಯ ಎಸಗುವ ಜಿಹಾದಿ ಗುಂಪುಗಳಿಂದ ಉದ್ರೇಕಿಸಲ್ಪಟ್ಟ ಮತ್ತು ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ಕೌಚಿ ಸಹೋದರರು, ಮುಕ್ತ ವಾಕ್ ಸ್ವಾತಂತ್ರ್ಯ ಮತ್ತು ವಿಡಂಬನೆಯ ವಿರುದ್ಧ ಹಿಂಸೆಯನ್ನು ಬಳಸಿದರು. ವಿನ್ಸನ್ಳನ್ನು ಅವರು ಉಳಿಸಿದರಾದರೂ ಕುರಾನ್ ಓದುವಂತೆ, ಮತಾಂತರವಾಗುವಂತೆ ಅವರು ಬೆದರಿಸಿದ್ದು ಮತಾಂಧತೆ ಎಷ್ಟರ ಮಟ್ಟಿಗೆ ಅವರನ್ನು ಕ್ರೂರಿಗಳನ್ನಾಗಿ ಮಾಡಿತ್ತು ಎಂಬುದನ್ನು ಪ್ರತಿಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



