
ಮಂಗಳೂರು: ನಾಡಿನ ಹೆಮ್ಮೆ ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಎರಡು ದಿನಗಳ ಕಾಲ ವಿಶಿಷ್ಟವಾಗಿ ನಡೆಯಲಿದೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರು, ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯರಾದ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ತಿಳಿಸಿದೆ.
ಭಾರತದ ಪರಿಕಲ್ಪನೆಯನ್ನು ಸಾರುವ ಮಂಗಳೂರು ಲಿಟ್ ಫೆಸ್ಟ್ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿ ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜ.10ರಂದು ಬೆಳಿಗ್ಗೆ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ಗಣ್ಯರಾದ ಶತಾವಧಾನಿ ಡಾ. ಆರ್. ಗಣೇಶ್, ಮೀನಾಕ್ಷಿ ಜೈನ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರವಿ. ಎಸ್ (ಮಿಥಿಕ್ ಸೊಸೈಟಿ), ಡಾ. ಅಜಕ್ಕಳ ಗಿರೀಶ್ ಭಟ್ ಹಾಜರಿರುತ್ತಾರೆ.
ಸಮಾರಂಭದಲ್ಲಿ ಈ ವರ್ಷದ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ಮೀನಾಕ್ಷಿ ಜೈನ್ ಅವರ ಜೊತೆಗೆ ವಿಶೇಷ ಸಂವಾದ ನಡೆಯಲಿದೆ. ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭೈರಪ್ಪ ಅವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ ಎಂಬ ಗೋಷ್ಠಿ ಆಯೋಜಿಸಲಾಗಿದ್ದು, ಶತಾವಧಾನಿ ಆರ್ ಗಣೇಶ್ ಮತ್ತು ಜಿ.ಬಿ. ಹರೀಶ ಈ ಗೋಷ್ಠಿ ನಡೆಸಿಕೊಡಲಿದ್ದಾರೆ.
ಭಾರತದ ಗುಪ್ತಚರ ಸಂಸ್ಥೆಯಾದ ‘ರಾ’ದ ಮಾಜಿ ಮುಖ್ಯಸ್ಥರಾದ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ.
ಲಿಟ್ ಫೆಸ್ಟ್ ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯ ರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ. ಆರ್ ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ಅವರು ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಮಾಧ್ಯಮ ರಂಗದ ಪ್ರಖ್ಯಾತ ಹೆಸರುಗಳಾದ ಎಎನ್ಐ ಸಂಪಾದಕೀಯ ನಿರ್ದೇಶಕರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಅವರು ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬದುಕುಳಿದವರು ಕಂಡಂತೆ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ಖ್ಯಾತ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಅವರು ಭಾಗವಹಿಸಲಿದ್ದಾರೆ. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ವಿಶೇಷವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಇಲ್ಲಿ ಅನೇಕ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾರತ್ ಫೌಂಡೇಷನ್ ಟ್ರಸ್ಟಿ ಸುನೀಲ್ ಕುಲಕರ್ಣಿ, ಸದಸ್ಯರಾದ ದುರ್ಗಾ ರಾಮದಾಸ್ ಕಟೀಲ್, ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


