ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳಗಂಗೋತ್ರಿ ಘಟಕದ ವತಿಯಿಂದ ಕ್ರಿಡಾಂಗಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಪಿ. ಶ್ರೀಧರ, ವಲಯ ಅರಣ್ಯಾಧಿಕಾರಿಗಳು, ಮಂಗಳೂರು ಇವರು ಮಾತಾನಾಡುತ್ತಾ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ. ಉಸಿರಾಡಲು ಆಮ್ಲಜನಕ, ಆಹಾರ, ಆಶ್ರಯ ಎಲ್ಲವನ್ನೂ ನೀಡಿ ನಮಗೆ ಬದುಕನ್ನು ಕಟ್ಟಿಕೊಟ್ಟಿರುವ ಪ್ರಕೃತಿಗೆ ನಾವೆಲ್ಲರೂ ಋಣಭಾರವಾಗಿದ್ದೇವೆ. ಕೊನೆಯ ಪಕ್ಷ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರದ ಋಣ ತೀರಿಸಲು ನಾವು ಪ್ರಯತ್ನಿಸಬೇಕು. ಎಲ್ಲ ಜೀವಿಗಳ ಉಗಮದ ನಂತರ ಮಾನವನ ಉಗಮವಾಗಿದ್ದು; ಮಾನವನಿಲ್ಲದೆ ಜೀವಸಂಕುಲ ಅಸ್ಥಿತ್ವದಲ್ಲಿರುತ್ತದೆ. ಆದರೆ ಜೀವವೈವಿಧ್ಯ ಇಲ್ಲದೇ ಮಾನವ ಉಳಿಯಲಾರ. ಗಿಡಮರಗಳನ್ನು ನೆಡುವ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ನೆರವು ಸಹಕಾರವನ್ನು ನೀಡಲು ಅರಣ್ಯ ಇಲಾಖೆಯು ಸದಾ ಸಿದ್ಧವಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಎಂ. ಲೋಕೇಶ್ ಅವರು ವಹಿಸಿ ಮಾತಾನಾಡಿದರು, ಗಿಡಗಳನ್ನು ನೆಟ್ಟು ಸಂಭ್ರಮಿಸುವ ವನಮಹೋತ್ಸವ ಒಂದು ಅರ್ಥಪೂರ್ಣ ಕಾರ್ಯಕ್ರಮ. ಆದರೆ ನೆಟ್ಟ ಗಿಡಗಳನ್ನು ಪೋಷಿಸಿ ಉಳಿಸದಿದ್ದರೆ ಅದು ಒಣಮಹೋತ್ಸವ ಆಗುತ್ತದೆ. ಅದಕ್ಕೆ ಆಸ್ಪದ ನೀಡದೆ ಮಳೆಗಾಲದಲ್ಲಿ ನೆಟ್ಟ ಗಿಡಗಳನ್ನು ಬೇಸಿಗೆಯಲ್ಲಿ ನೀರೆರೆದು ಪೋಷಿಸಿ ಉಳಿಸಿ, ಬೆಳೆಸುವ ಬಗ್ಗೆಯೂ ಕಾಳಜಿ ವಹಿಸಬೇಕು. ಆವಾಗ ಮಾತ್ರ ವನಮಹೋತ್ಸವ ಸಾರ್ಥಕವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್ನಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಹಣ್ಣುಹಂಪಲುಗಳನ್ನು ನೀಡುವ ಗಿಡಗಳನ್ನು ನೆಟ್ಟು ಇನ್ನಷ್ಟೂ ಹಸಿರಿನಿಂದ ಸಮೃದ್ಧಿಗೊಳಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಜೀವವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಎನ್.ಎಸ್.ಎಸ್. ಸಂಯೋಜಕರಾದ ಡಾ. ತ್ರಿವೇಣಿ ಅರಸ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಹೆಚ್. ಎಲ್. ಶಶಿರೇಖ, ಡಾ. ರಾಜು ಚಲನಾವರ್, ಡಾ. ಜೆರಾಲ್ಡ್ ಸಂತೋಷ ಡಿ’ಸೋಜ, ಡಾ.ಪ್ರಸನ್ನ, ಶ್ರೀ ರಮೇಶ್ ಹೆಚ್. ಎನ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಿ. ಶ್ರೀಧರ ಅವರು ಗಿಡಗಳನ್ನು ವೈಜ್ಞಾನಿಕವಾಗಿ ಹೇಗೆ ನೆಡಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಮೊದಲ ಹಂತದಲ್ಲಿ ಕ್ರೀಡಾಂಗಣದ ಸುತ್ತಮುತ್ತಲು ಸುಮಾರು ನೂರು ಗಿಡಗಳನ್ನು ನೆಡಲಾಯಿತು. ಎನ್.ಎಸ್.ಎಸ್. ಮತ್ತು ದೈಹಿಕ ಶಿಕ್ಷಣ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.