ದಾವಣಗೆರೆಯ ಕರಿಯ, ರಾಯಚೂರು ಜಿಲ್ಲೆಯ ನೀರ ಮಾನ್ವಿಯ ಸಂದೀಪ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದೇವರ ನಿಂಬರಿಗೆಯಲ್ಲಿ 6 ವರ್ಷದ ಕಂದಮ್ಮ ಕಾಂಚನಾ, ಕಲಬುರಗಿ ಜಿಲ್ಲೆಯಲ್ಲಿ ನವನಾಥ ಎಂಬ 5 ವರ್ಷದ ಬಾಲಕ (ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು), ಬಾಗಲಕೋಟೆ ಜಿಲ್ಲೆ ಸಿಕ್ಕೇರಿಯ ಕಲ್ಲವ್ವ(ಕೊನೆಗೂ ಬದುಕಿದ್ದು ಸಂತಸ) ಹಾಗೇ ಬಾಗಲಕೋಟೆ ಜಿಲ್ಲೆ ಸೂಳಿಕೆರೆಯಲ್ಲಿ ತಿಮ್ಮಣ್ಣ ಹೀಗೇ ಇನ್ನೆಷ್ಟು ಪುಟಾಣಿಗಳು ಬೇಕು ಕೊಳವೆ ಬಾವಿಗೆ?
ಇನ್ನೇನು ಕಣ್ತೆರದು ಬದುಕಿನ ವಾತಾವರಣಕ್ಕೆ ಹೊಂದಿಕೊಳ್ಳುವ ಮುನ್ನವೇ ಮುಗ್ಧ ಕಂದಮ್ಮಗಳು ಮಣ್ಣಲ್ಲಿ ಮಣ್ಣಾಗುವುದು ತರವೇ? ತೆರೆದ ಕೊಳವೆ ಬಾವಿಗೆ ಇನ್ನೂ ಅದೆಷ್ಟು ಮಕ್ಕಳ ಆಹುತಿ ನೀಡಬೇಕು? ಮೊಗ್ಗಿನ ಕನಸುಗಳ ಕತ್ತು ಹಿಸುಕುವುದು ಎಷ್ಟು ಸಮಂಜಸ? ಮನಸ್ಸು ಮಮ್ಮಲ ಮರುಗುತ್ತದೆ.
ಬೆಳಗಾವಿ ಜಿಲ್ಲೆಯ ಝಂಜರವಾಡ ಗ್ರಾಮದ 6 ವರ್ಷದ ಬಾಲಕಿ ಕಾವೇರಿ ಕೊನೆಗೂ ತೆರೆದ ಕೊಳವೆ ಬಾವಿಗೆ ಬಲಿಯಾಗಿಬಿಟ್ಟಳು. ಹಡೆದ ಕರುಳಿನ ಆರ್ತನಾದ ಅಂತಃಕರುಣಿ ದೇವರಿಗೂ ಕೇಳಿಸದೇ ಹೋಯಿತು. ಆದರೆ ಇಲ್ಲಿ, ಆಡಳಿತಾತ್ಮಕ ವೈಫಲ್ಯ ಹಾಗೂ ಜಮೀನಿನ ಮಾಲಿಕರ ನಿರ್ಲಕ್ಷ್ಯತನ ಎದ್ದು ಕಾಣುತ್ತದೆ. ಇದು ಬದಲಾಗಬೇಕು.
ರಾಜ್ಯದಲ್ಲಿ ಮೇಲಿಂದ ಮೇಲೆ ಆಗುತ್ತಿದ್ದ ಕೊಳವೆ ಬಾವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡಾ ಖಡಕ್ ಸೂಚನೆ ನೀಡಿತ್ತು. ಮಾರ್ಗಸೂಚಿಗಳನ್ನೂ ಸುಪ್ರೀಂ ನೀಡಿದ್ದು, ಅವುಗಳ ಪಾಲನೆ ಮಾಡದ ಪರಿಣಾಮವೇ ಇಂದು ದುರಂತಗಳು ಹೆಚ್ಚಲು ಕಾರಣ.
ಹೀಗೇ ರಾಜ್ಯದಲ್ಲಿ ಏನಿಲ್ಲವೆಂದರೂ ಕಳೆದ ಒಂದು ದಶಕದಲ್ಲಿ 9 ಪ್ರಕರಣಗಳು ಘಟಿಸಿದ್ದು, ನಮ್ಮಲ್ಲಿನ ನಿರ್ಲಕ್ಷ್ಯತೆ, ಸಾಂದರ್ಭಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿರುವ ಕೊಳವೆ ಬಾವಿಗಳ ಕುರಿತು ಸಮೀಕ್ಷೆಯೊಂದನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಸುತ್ತೋಲೆಯನ್ನೂ ಹೊರಡಿಸಿದ್ದು ಗಮನಾರ್ಹ.
ಎಲ್ಲ ಜಿಲ್ಲೆಗಳಲ್ಲಿರುವ ತೆರೆದ ಕೊಳವೆ ಬಾವಿಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸುತ್ತೋಲೆ ಹೊರಡಿಸಿತ್ತು. ಆದರೆ ಯಾವುದೇ ಕ್ರಮಗಳು ಸೂಕ್ತ ರೀತಿಯಲ್ಲಿ ಕಾರ್ಯಾರೂಪಕ್ಕೆ ಬರದ ಕಾರಣ ಅವಘಡಗಳು ಮಾತ್ರ ಸಂಭವಿಸುತ್ತಲೇ ಇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸುವುದಾಗಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೂ ತಾಕೀತು ಮಾಡಿದ್ದಾರೆ.
ಇಲ್ಲಿ ಅನುಮತಿ ನೀಡುವ ಜಿಲ್ಲಾ ಆಡಳಿತ, ಕೊಳವೆ ಬಾವಿ ಕೊರೆಯಿಸುವ ಜಮೀನಿನ ಮಾಲಿಕ ಹಾಗೂ ಕೊರೆಯುವವರು ಎಲ್ಲರೂ ಬದ್ಧತೆ ಮೆರೆಯಬೇಕಿದೆ. ಜೊತೆಗೆ ಸಾರ್ವಜನಿಕರಲ್ಲಿಯೂ ಈ ಕುರಿತು ಜಾಗೃತಿ ಮೂಡಬೇಕಿದ್ದು, ಪೋಷಕರು ಮಕ್ಕಳೆಡೆಯೂ ಒಂದು ಗಮನ ಇಡುವುದೂ ಅವಶ್ಯಕ. ಇದು ನ್ಯೂಸ್-13 ಕಳಕಳಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.