ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಕೇವಲ ಪಕ್ಷಗಳ ಸೋಲು ಗೆಲುವಷ್ಟೇ ಮುಖ್ಯವಾಗಿಲ್ಲ. ವಿವಿಧ ಪಕ್ಷಗಳಲ್ಲಿನ ಅನೇಕ ನಾಯಕರ ರಾಜಕೀಯ ಭವಿಷ್ಯದ ಮೇಲೂ ಇದು ಪರಿಣಾಮ ಬೀರದೇ ಇರದು.
ಜಾತಿ ಸಮೀಕರಣ, ಅನುಕಂಪ, ಆರೋಪ, ಪ್ರತ್ಯಾರೋಪಗಳ ತಂತ್ರ ಇತ್ಯಾದಿಗಳ ಲೆಕ್ಕಾಚಾರಗಳ ಮೂಲಕ ತಮ್ಮ ತಮ್ಮ ಪಕ್ಷವನ್ನು ಗೆಲುವಿನ ದಡ ಸೇರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ನಾಯಕರ ಈ ಶ್ರಮದ ಹಿಂದೆ ಕೇವಲ ಗೆಲುವಿನ ಅಪೇಕ್ಷೆಯಲ್ಲದೇ, ಅನೇಕರ ಭವಿಷ್ಯವೂ ಅಡಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರ ಮಧ್ಯದ ಪ್ರತಿಷ್ಠೆ ಉಪ ಚುನಾವಣೆಯಲ್ಲಿ ಪ್ರಧಾನವಾಗಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಇದು ಮುಖ್ಯಮಂತ್ರಿಗೂ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ಶ್ರೀನಿವಾಸ್ ಪ್ರಸಾದ್ ಸೋತರೆ ಸಿದ್ದರಾಮಯ್ಯನವರಿಗೆ ವರ, ಇಲ್ಲದಿದ್ದಲ್ಲಿ ಹಿಂದುಳಿದವರ ನಾಯಕರಾಗಿ ಶ್ರೀನಿವಾಸ್ ಪ್ರಸಾದ್ ಮಿಂಚಿದರೂ ಆಶ್ಚರ್ಯವಿಲ್ಲ.
ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ್ ಪ್ರಸಾದ್ ಅವರು ಅನುಕಂಪದ ಅಲೆ ಸೃಷ್ಟಿಸಲು ಸರ್ಕಸ್ ಮಾಡಿ ಕೈ ಸುಟ್ಟುಕೊಂಡರು ಎನಿಸುತ್ತದೆ. ಬಿಎಸ್ವೈ ವಿರುದ್ಧ ಉರುಳಿಸಲು ಹೋದ ಕಾಂಗ್ರೆಸ್ ದಾಳ ವಿಫಲವಾಗಿದೆ. ಈ ಕ್ಷೇತ್ರವೂ ಕೂಡಾ ಬಿಎಸ್ವೈ ಹಾಗೂ ಸಿದ್ದರಾಮಯ್ಯನವರ ನಡುವಿನ ಜಿದ್ದಾಜಿದ್ದಿಯಿಂದ ಕೂಡಿದೆ ಎಂದೇ ಕರೆಯಲಾಗುತ್ತಿದೆ.
ಒಂದು ಹಂತದಲ್ಲಿ ರಾಜ್ಯ ರಾಜಕೀಯದಲ್ಲಿ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪನವರು ಉಪ ಚುನಾವಣೆ ಕದನವನ್ನು ಶತಾಯ ಗತಾಯ ಗೆಲ್ಲಲೇಬೇಕೆಂದು ಹಟತೊಟ್ಟಿದ್ದಾರೆ. ಕಮಲ ಅರಳಿದ್ದೇ ಆದಲ್ಲಿ, ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದ ಮೇಲಿನ ಹಿಡಿತ ಇನ್ನಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಪಕ್ಷಕ್ಕಾದ ಹಾನಿಯನ್ನು ಭರಿಸಿಕೊಡುವ ನೈತಿಕ ಜವಾಬ್ದಾರಿಯೂ ಬಿಎಸ್ವೈ ಹೆಗಲ ಮೇಲಿದೆ ಎನ್ನಬಹುದು.
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ಕುಳಿತಿರುವ ಜಿ.ಪರಮೇಶ್ವರ್ ಕೂಡಾ ಈ ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತರಾಗಿದ್ದಾರೆ ಎನ್ನಬಹುದು. ಸದ್ಯ ಕೆಪಿಸಿಸಿ ಅಧ್ಯಕ್ಷ ಗದ್ದುಗೆಯಲ್ಲಿರುವ ಅವರು, ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಿದರೆ ತಮಗೆ ವರವಾಗಿ ಪರಿಣಮಿಸಲಿದೆ ಎಂಬ ಅರಿವು ಅವರಿಗಿದೆ.
ಅಲ್ಲದೇ ಗುಂಡ್ಲುಪೇಟೆಯ ಉಸ್ತುವಾರಿ ವಿಶೇಷವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟ್ಟಿರುವ ಇವರು, ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದರೆ, ತಮ್ಮ ಅಪೇಕ್ಷೆ ಈಡೇರಿಕೆ ಸುಲಭವಾಗಬಹುದು ಎಂದು ಲೆಕ್ಕಾಚಾರ ಹಾಕಿರದೇ ಇರಲಾರರು.
ಈ ಉಪ ಚುನಾವಣೆ ಅಭ್ಯರ್ಥಿಗಳ ಅಥವಾ ಪಕ್ಷಗಳ ಗೆಲುವಿನ ಲೆಕ್ಕಾಚಾರವನ್ನೂ ಮೀರಿದೆ. ಪಕ್ಷದ ವರ್ಚಸ್ಸಿನೊಂದಿಗೆ, ವೈಯಕ್ತಿಕ ಶ್ರೇಯಸ್ಸು, ರಾಜಕೀಯ ಜೀವನದ ಇನ್ನಷ್ಟು ಭದ್ರತೆಗಾಗಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ಮೋದಿ ಅಲೆ, ಇನ್ನೊಂದೆಡೆ ಉತ್ತರ ಪ್ರದೇಶದ ಖಡಕ್ ಮುಖ್ಯಮಂತ್ರಿ ಯೋಗಿಯ ದಿಟ್ಟ ನಿರ್ಣಯಗಳು, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪರಿಣಾಮ ಪರಿಗಣಿಸಿದರೆ ಕಮಲದ ಮುಖ ಅರಳುವ ಸಂಭವವೇ ಜಾಸ್ತಿ ಎನ್ನಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುವಿನ ನಿರ್ಣಯವೇ ಇಲ್ಲಿ ನಿರ್ಣಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.