ಬೆಳ್ತಂಗಡಿ : ದ್ವೈತ ಮತದ ಮೂಲಕ ಪರಮಾತ್ಮ ಬೇರೆ ನಾವು ಬೇರೆ, ಅವನು ಸ್ವತಂತ್ರ ನಾವು ಅಸ್ವತಂತ್ರ, ಅವನು ಸರ್ವವ್ಯಾಪಿ, ಸರ್ವಶಕ್ತ ಅವನ ಅನುಗ್ರಹದಿಂದ ಮಾತ್ರ ನಮಗೆ ಜೀವನ ಎಂಬುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ನುಡಿದರು.
ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ 20 ದಿನಗಳ ಕಾಲ ನಡೆದ ವೇದ ಪಾಠ ಶಿಬಿರಕ್ಕೆ ಭೇಟಿ ನೀಡಿ ಶಿಬಿರದ 122 ವಟುಗಳಿಗೆ ಆಶೀರ್ವಚನ ನೀಡಿದರು. ಶ್ರೀಗಳು ಶಿಬಿರದ ವಟುಗಳಿಗೆ ಪ್ರಥಮ ಗುರುಗಳು ಯಾರು?,ಗಾಯತ್ರೀ ಮಂತ್ರದಅರ್ಥವೇನು?, ಉಜಿರೆ ಯಾಕೆ ಪ್ರಸಿದ್ಧಿ ಪಡೆದ ಕರ್ಮಭೂಮಿ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ವಟುಗಳಿಗೆ ಹನುಮಂತ ಮತ್ತು ಮಧ್ವಾಚಾರ್ಯರ ಕಥೆಯನ್ನು ತಿಳಿಸಿದರು.
ಶ್ರೀರಾಮ ಭಕ್ತ ಹನುಮಂತನ ಸ್ವಾಮಿ ಸೇವಕ, ಸಮುದ್ರವನ್ನು ಹಾರಿ ಲಂಕೆಗೆ ಪಯಣಿಸುವ ಸಂದರ್ಭದಲ್ಲಿ ಸಮುದ್ರ ಮಧ್ಯೆ ಪರ್ವತರಾಜನೇ ಪ್ರತ್ಯಕ್ಷನಾಗಿ ವಿಶ್ರಾಂತಿ ಪಡೆದು ಹೋಗುವಂತೆ ವಿನಂತಿಸಿಕೊಳ್ಳುತ್ತಾನೆ. ಆದರೆ ದೇವರ ಸೇವೆ ಮೊದಲು, ಅದನ್ನು ಮುಗಿಸಿದ ಮೇಲೆಯೇ ವಿಶ್ರಾಂತಿ ಪಡೆಯುವೆ ಎನ್ನುತ್ತಾನೆ. ಘೋರ ರಾಕ್ಷಸನು ಎದುರಾಗಿ ತನ್ನ ಬಾಯಿಯೊಳಗೆ ಪ್ರವೇಶಿಸಿದ ಮೇಲೆಯೇ ಪ್ರಯಾಣ ಮುಂದುವರಿಸಬೇಕೆಂದು ತಿಳಿಸಿದಾಗ ತನ್ನ ದೇಹದ ಗಾತ್ರವನ್ನು ಬೃಹದಾಕಾರವಾಗಿ ಬೆಳೆಸಿ ಕ್ಷಣ ಮಾತ್ರದಲ್ಲೇ ಕುಬ್ಜ ಮೂರ್ತಿಯಾಗಿ ಬಾಯಿಯೊಳಕ್ಕೆ ಹೊಕ್ಕು ಹೊರ ಬರುತ್ತಾನೆ. ಹೀಗೆ ಹನುಮಂತನಲ್ಲಿನ ಭಕ್ತಿ, ಶಕ್ತಿ, ಯುಕ್ತಿ ನಮಗೆಲ್ಲರಿಗೂ ಅನುಕರಣೀಯ ಎಂದು ಶ್ರೀಗಳು ವಿವರಿಸಿದರು.
ಆಚಾರ್ಯ ಮಧ್ವರು ಉಜಿರೆಗೆ ಬಂದಾಗ ಪೌರೋಹಿತ್ಯ, ಹೋಮ, ಹವನದ ಬಗ್ಗೆ ಕೇಳಿದ ಸಾವಿರಾರು ಜನರ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಸಮರ್ಪಕ ಉತ್ತರ ನೀಡಿ ಸೈ ಎನಿಸಿಕೊಂಡ ಅವರು ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲೇ ಕುಳಿತುಕೊಂಡು ‘ಕರ್ಮ ನಿರ್ಣಯ’ ಮಹಾ ಗ್ರಂಥವನ್ನು ರಚಿಸಿದರು. ಅಂತಹ ಮಹಾಜ್ಞಾನಿಯ ಪಾದ ಸ್ಪರ್ಶವಾದ ಈ ಪುಣ್ಯ ಸ್ಥಳದಲ್ಲಿ ಕಲಿತುಕೊಂಡ ವಿದ್ಯೆಗಟ್ಟಿಯಾಗಿ ನಿಂತು ನಿಮ್ಮ ಮುಂದಿನ ಜೀವನಕ್ಕೆದಾರಿದೀಪವಾಗಲಿ ಎಂದು ಹಾರೈಸಿದರು.
ಮನವಿ ಪತ್ರ : ತುಳು ಶಿವಳ್ಳಿ ಸಭಾದ ವತಿಯಿಂದ ಬ್ರಾಹ್ಮಣ ಸಮೂದಾಯದಲ್ಲಿನ ವಧುಗಳ ಕೊರತೆ, ವಿವಾಹ ಸಂಬಂಧಿತ ಸಮಸ್ಯೆಗಳು, ನಿತ್ಯ ಕರ್ಮಗಳು, ಬ್ರಾಹ್ಮಣಾರಾಧನೆ ಇತ್ಯಾದಿಗಳಿಗೆ ಸೂಕ್ತ ಪರಿಹಾರವನ್ನು ಅಷ್ಟಮಠದ ಯತಿಗಳಿ ‘ಏಕ ಮತ’ದಲ್ಲಿ ನೀಡುವಂತೆ ಪ್ರಾರ್ಥಿಸಿ ಗೌರವಾಧ್ಯಕ್ಷರಾದ ವಿಜಯರಾಘವ ಪಡ್ವೆಟ್ನಾಯರ ನೇತೃತ್ವದಲ್ಲಿ ಮನವಿ ಪತ್ರವನ್ನು ಪೇಜಾವರ ಶ್ರೀಗಳಿಗೆ ಸಲ್ಲಿಸಲಾಯಿತು. ಇದೇ ಸಂದರ್ಭ ಶ್ರೀಗಳನ್ನು ಫಲ ಪುಷ್ಪತಾಂಬೂಲ ಕಾಣಿಕೆ ನೀಡಿಗೌರವಿಸಲಾಯಿತು.
ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಪರಾರಿ ವೆಂಕಟ್ರಮಣ ಹೆಬ್ಬಾರ್, ಜಯರಮ ಪಡ್ಡಿಲ್ಲಾಯ, ಮುರಳೀಕೃಷ್ಣ ಆಚಾರ್ಯ, ರಾಮಕೃಷ್ಣ ಕಲ್ಲೂರಾಯ, ಶ್ರೀಕಾಂತ ರಾವ್, ವಿಠಲ ಅಮ್ಮಿನ್ನಾಯ, ಉಪಾಧ್ಯಾರುಗಳಾದ ಹರ್ಷಆಚಾರ್, ಕೇಶಮೂರ್ತಿ, ಅಜಯ್, ಪ್ರಮೋದ, ಸುದರ್ಶನಾಚಾರ್, ಸಭಾದ ಕೋಶಾಧಿಕಾರಿ ಮೋಹನ ಕೆದಿಲಾಯ, ರಾಧಾಕೃಷ್ಣಕಲ್ಲೂರಾಯ, ವಿಷ್ಣುಮೂರ್ತಿ ಭಟ್, ರಾಜಪ್ರಸಾದ್ ಪೋಳ್ನಾಯ, ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.