ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವೆವು ಎಂದು ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು, ಇದೀಗ ಮರೆತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಕಣ್ಣೀರು ಹಾಕಿದ್ದಾರೆ.
ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಪತಿ ಮಹದೇವ್ ಪ್ರಸಾದ್ ತೀರಿಕೊಂಡಾಗ ಮನೆಗೆ ಬಂದಿದ್ದ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ ಈಗ ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ರಾಜ್ಯ ರಾಜಕೀಯದಲ್ಲಿ ಬಹು ಕುತೂಹಲ ಕೆರಳಿಸಿವೆ. ಸಿ.ಎಂ.ಸಿದ್ದರಾಮಯ್ಯ, ಬಿಎಸ್ವೈ, ವಿ.ಶ್ರೀನಿವಾಸ್ ಪ್ರಸಾದ್ ಮುಂತಾದವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿಯೂ ಈ ಚುನಾವಣೆ ಮಹತ್ವ ಪಡೆದಿದೆ.
ರಾಜಕೀಯ ಎಂಬುದೇ ಚದುರಂಗದಾಟ. ಸಿಕ್ಕ ಅವಕಾಶಗಳನ್ನು ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಳ್ಳುವಲ್ಲಿ ರಾಜಕಾರಣಿಗಳು ನಿಸ್ಸೀಮರೇ ಬಿಡಿ. ಇದಕ್ಕೆ ಪೂರಕವಾಗಿ ಇದೀಗ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ಸಹಜವಾಗಿಯೇ ಮೂಡುತ್ತಿದೆ.
ಸೂತಕದ ಮನೆಯಲ್ಲಿ ರಾಜಕೀಯ ಮಾಡುವಷ್ಟು ಹಿರಿಯ ನಾಯಕ ಬಿಎಸ್ವೈ ಕೀಳುಮಟ್ಟಕ್ಕಿಳಿಯಲು ಸಾಧ್ಯವೇ? ಅಷ್ಟಕ್ಕೂ ಬಿಎಸ್ವೈ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ. ಈ ಉಪ ಚುನಾವಣೆ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಪ್ರತಿಬಿಂಬಿತವಾಗುತ್ತಿವೆ ಈ ಉಪ ಚುನಾವಣೆ. ತಮ್ಮ ಸಾಮರ್ಥ್ಯ ಹಾಗೂ ಮತದಾರರ ಮನಸನ್ನು ಒರೆಗಲ್ಲಿಗೆ ಹಚ್ಚಲು ಸಿಕ್ಕ ಸದವಕಾಶವನ್ನು ಕೈಚೆಲ್ಲಿ ಕೂಡುವಷ್ಟು ಅನನುಭವಿ ರಾಜಕಾರಣಿಯೇ ಯಡಿಯೂರಪ್ಪ?
ಪತಿಯ ವಿಯೋಗದಿಂದ ಅನುಕಂಪದ ಅಲೇ ಸೃಷ್ಟಿಸಲು ಗೀತಾ ಮಹದೇವ್ ಪ್ರಸಾದ್ ಉಪಾಯ ಹೂಡಿದ್ದಾರೆಯೇ ? ಮೊದಲೇ ಕಾಂಗ್ರೆಸ್ ವಿರೋಧಿ ಅಲೆ ದೇಶದೆಲ್ಲೆಡೆ ಬೀಸುತ್ತಿದೆ. ಪಂಚರಾಜ್ಯಗಳಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ನ ಅನೇಕರು ಕಮಲಕ್ಕೆ ಕೈ ಜೋಡಿಸಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ನ ಹಿರಿಯ ನಾಯಕ ಎಸ್.ಎಂ.ಕೃಷ್ಣ ಕೂಡಾ ಬಿಜೆಪಿಗೆ ಬಂದದ್ದು, ಉಪ ಚುನಾವಣೆಯ ದೃಷ್ಟಿಯಿಂದಲೂ ಕಾಂಗ್ರೆಸ್ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಸುಳ್ಳು ಆರೋಪಗಳು, ಪರಸ್ಪರ ಆರೋಪ, ಪ್ರತ್ಯಾರೋಪಗಳು, ವಿಶೇಷವಾಗಿ ಅನುಕಂಪವೆಂಬ ಬಿಸಿಲು ಕುದುರೆಯನೇರಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ತಂತ್ರ ಹೂಡಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ನೇರ ಸ್ಪರ್ಧೆ ಎದುರಿಸಲಾರದೇ ಕಾಂಗ್ರೆಸ್, ಮಹಿಳೆಯ ಸ್ಥಿತಿಯನ್ನು ತನ್ನ ಹಿತಕ್ಕಾಗಿ ಬಳಸಿಕೊಳ್ಳುತ್ತಿದೆಯೇ? ಗೊತ್ತಿಲ್ಲ.
ಗೀತಾ ಮಹದೇವ್ ಪ್ರಸಾದ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಕಣ್ಣೀರಿಟ್ಟು ತಮ್ಮ ಅವಿರೋಧ ಆಯ್ಕೆಯ ಕನಸನ್ನೂ ಹೊರಹಾಕಿದ್ದಾರೆ. ಅಣ್ಣ ತಮ್ಮಂದಿರು ಎನ್ನುತ್ತಲೇ ಮಾಧ್ಯಮದವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಳೆ ಹೇಗೆ ವರದಿ ಮಾಡ್ತೀರಾ ನೋಡುವೆ ಎಂದೂ ಹೇಳಿರುವ ಅವರ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ. ಮಾಧ್ಯಮದವರ ಮನಸ್ಸನ್ನು ತಿರುಚುವ ಪ್ರಯತ್ನ ಎನಿಸಿದೇ ಇದು?
ಅವಿರೋಧ ಆಯ್ಕೆ ಮತ್ತು ಪ್ರಜಾಪ್ರಭುತ್ವ
ವಿಶೇಷವಾಗಿ ಕರ್ನಾಟಕದಲ್ಲಿ ಮತದಾರರು ಪ್ರಜ್ಞಾವಂತರಿದ್ದಾರೆ. ಇದು ಪ್ರಜಾಪ್ರಭುತ್ವ ದೇಶ. ಅವಿರೋಧ ಆಯ್ಕೆ ’ಜನರ ಆಯ್ಕೆ’ಯಾಗಿರಲು ಹೇಗೆ ಸಾಧ್ಯ? ಅನುಕಂಪ ಎಂಬುದು ಮಾನವೀಯತೆಯ ಮೇರು ಎನ್ನಬಹುದು. ಆದರೆ ಆಡಳಿತ ನಡೆಸುವ, ಅಭಿವೃದ್ಧಿಯತ್ತ ಕೊಂಡೊಯ್ಯುವ ಅರ್ಹತೆಗೆ ಸಮಾನ ಎನ್ನಲಾದೀತೆ ?
ಬಹುಶಃ ಕಾಂಗ್ರೆಸ್ ಹತಾಶಗೊಂಡಿದೆ. ಮಹದೇವ್ ಪ್ರಸಾದ್ ಅವರ ನಿಧನ ಹಿನ್ನೆಲೆಯಲ್ಲಿ ಅನುಕಂಪದ ಅಸ್ತ್ರ ಅನಾಯಾಸವಾಗಿ ಸಿಕ್ಕಿದೆ. ಸಿಕ್ಕ ಅಸ್ತ್ರವೊಂದನ್ನು ದಾಳವನ್ನಾಗಿ ಬಳಸಿಕೊಳ್ಳುವುದು ಪ್ರಸ್ತುತ ರಾಜಕಾರಣದಲ್ಲಿ ಮಾನ್ಯವಾಗಿರಬಹುದು. ಆದರೆ ಮತದಾರ ಪ್ರಭುವಿನ ನಿರ್ಣಯವೇ ಅಂತಿಮ ಅಲ್ಲವೇ?
ಇತ್ತೀಚೆಗಿನ ಅನ್ಯ ರಾಜ್ಯಗಳ ಚುನಾವಣೆಗಳನ್ನು ಗಮನಿಸಿದಾಗ ಜಾತಿ, ಮತ, ಪಂಥಗಳ ಎಲ್ಲೆ ಮೀರಿ, ಅಭಿವೃದ್ಧಿಗೆ ಮತ ನೀಡುವ ಸಂಸ್ಕೃತಿ ವೃದ್ಧಿಸಿದೆ ಎನ್ನಬಹುದು. ಯುವಜನತೆಯ ಮನಸುಗಳು ಸಕಾರಾತ್ಮಕ ಹಾಗೂ ರಚನಾತ್ಮಕ ಚಿಂತನೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕಂಡು ಬರುತ್ತಿದೆ. ಕೆಲವು ಸಮುದಾಯಗಳನ್ನು ಗುತ್ತಿಗೆ ಪಡೆದುಕೊಂಡಂತೆ ಆಡುತ್ತಿದ್ದ ಪಕ್ಷಗಳೂ ಸಾಕಷ್ಟು ಮುಖಭಂಗ ಅನುಭವಿಸುತ್ತಿವೆ. ಇಂಥ ಸಂದರ್ಭದಲ್ಲಿ ಅನುಕಂಪದ ಬೀಜ ಬಿತ್ತಿ ವಿಜಯದ ಫಲ ತೆಗೆಯುತ್ತೇವೆ ಎಂಬುದು ಬರೀ ಭ್ರಮೆಯೇ ? ಯಾರೇ ಗೆಲ್ಲಲಿ. ಅದು ಮತದಾರನ ಸ್ಪಷ್ಟ ನಿರ್ಣಯವಾಗಿರಬೇಕು ಅಷ್ಟೇ.
ವಿರೋಧ ಪಕ್ಷದವರು ಸತ್ತಾಗ ಸಂತೈಸುವುದೇ ತಪ್ಪಾ ?
ಸುಳ್ಳು ಆರೋಪ ಎನ್ನಲು ವಾಹಿನಿಗೆ ಸಿಕ್ಕ ವಿಡಿಯೋ ಸಾಕ್ಷಿ
ನ್ಯಾಯ ನೀಡಿದಳೇ ಬಿಎಸ್ವೈ ನಂಬಿದ ಚಾಮುಂಡೇಶ್ವರಿ ?
ಅವಿರೋಧ ಆಯ್ಕೆ, ಜನರ ಆಯ್ಕೆ ಆದೀತೇ ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.