ನಮ್ಮದು ಜಾತ್ಯತೀತ ಸಂವಿಧಾನವೆಂದು ಜಾತ್ಯತೀತ ಪಕ್ಷಗಳು ಢಂಗುರ ಸಾರುತ್ತವೆ. ಅಧಿಕಾರಕ್ಕೆ ಬಂದ ತಕ್ಷಣ ಅದೇ ಜಾತ್ಯತೀತ ಸರ್ಕಾರಗಳು ಜಾತಿ-ಮತಗಳನ್ನೇ ಕೇಂದ್ರೀಕರಿಸಿಕೊಂಡು ಯೋಜನೆಗಳನ್ನು ಘೋಷಿಸುತ್ತವೆ…!! ನಿರ್ದಿಷ್ಟ ಸಮುದಾಯ,ಪಂಗಡ,ಜಾತಿಗಳಿಗೆ ಅನುದಾನವನ್ನು ನೀಡಿದರೆ ಆ ಜಾತಿಯ ಜನರ ವಿಶ್ವಾಸಗಳಿಸಬಹುದೆಂಬ ಲೆಕ್ಕಾಚಾರ. ಈ ಜಾತಿ ಲೆಕ್ಕಾಚಾರದಲ್ಲಿ ಬಲಿಷ್ಟ ಹಾಗೂ ಸಂಘಟಿತ ಸಮುದಾಯದವರಿಗೆ ಅನುಕೂಲವಾಗುತ್ತದೆ. ಸಂಘಟಿತವಲ್ಲದ ಸಮುದಾಯದ ಗೋಳು ಅರಣ್ಯರೋದನವಾಗುತ್ತದೆ. ಪ್ರಜಾಪ್ರಭುತ್ವವ್ಯವಸ್ಥೆಯಲ್ಲಿ ಇನ್ನೂ ಜಾತಿರಾಜಕಾರಣ ಅಂತ್ಯವಾಗದಿರುವುದು ಅತ್ಯಂತ ವಿಷಾದದ ವಿಷಯ. ಜಾತಿ ಆಧಾರಿತ ರಾಜಕಾರಣ ಹಾಗೂ ಜಾತಿ ಆಧಾರಿತ ರಾಜಕಾರಣಿ ಇವೆರಡೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕಗಳು..!!
ಬಡತನ ಹಾಗೂ ಮೂಲಭೂತ ಸಮಸ್ಯೆಗಳು ಜಾತಿಯನ್ನು ನೋಡಿಕೊಂಡು ಬರುವುದಿಲ್ಲ. ಆದರೆ ಜಾತಿರಾಜಕಾರಣಿಗಳಿಗೆ ಮೇಲ್ಜಾತಿಯಲ್ಲಿರುವ ಬಡವರು ಕಣ್ಣಿಗೆ ಕಾಣುವುದಿಲ್ಲ. ಅವರಿಗಾಗಿ ಯಾವ ಯೋಜನೆಗಳೂ ಅನುಷ್ಠಾನಗೊಳ್ಳುವುದಿಲ್ಲ. ಸರ್ಕಾರದ ಹಲವು ಯೋಜನೆಗಳಿಗೆ “ಜಾತಿ ಪ್ರಮಾಣಪತ್ರ” ಅನಿವಾರ್ಯ. ಕ್ಯಾಟಗರಿಯಲ್ಲಿದ್ದರೇನೇ ಸವಲತ್ತುಗಳು. ಕ್ಯಾಟಗರಿಯಲ್ಲಿರದ ಬಡವರಿಗೆ ಏನೇನೂ ದೊರಕದು. ಇದೆಂಥಾ ಸಾಮಾಜಿಕ ನ್ಯಾಯ..? ಮೇಲ್ಜಾತಿಯ ಬಡವರಿಗೆ ರಕ್ಷಣೆಯನ್ನು ನೀಡುವುದಾದರೂ ಯಾರು..? ಓದಬೇಕೆಂದರೆ ಶಿಕ್ಷಣದಲ್ಲಿ ಮೀಸಲಾತಿ, ಓದಿದರೆ ಉದ್ಯೋಗದಲ್ಲಿ ಮೀಸಲಾತಿ, ಉದ್ಯೋಗದಲ್ಲಿ ಬಡ್ತಿಗೆ ಮೀಸಲಾತಿ ಆ ಮೀಸಲಾತಿ ಈ ಮೀಸಲಾತಿ ಮೇಲ್ಜಾತಿಯ ಬಡವರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವ ಪರಿಸ್ಥಿತಿ ಬಂದೊದಗಿದೆ.
ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ಅಭಿವೃದ್ಧಿಯೋಜನೆಗಳನ್ನು ಘೋಷಿಸಬೇಕೇ ಹೊರತು ನಿರ್ದಿಷ್ಟ ಸಮುದಾಯಗಳನ್ನು ಕೇಂದ್ರೀಕರಿಸಿಕೊಂಡಲ್ಲ. ಆದರೆ ರಾಜಕಾರಣದಲ್ಲಿ ಜಾತಿಯೇ ಕೇಂದ್ರಸ್ಥಾನವಾಗಿರುವುದು ನಿಜಕ್ಕೂ ದುರದೃಷ್ಠಕರ. ಜಾತಿಗೊಬ್ಬ ನಾಯಕ, ಆತನಿಗೆ ಸ್ವಜಾತಿ ಬೆಂಬಲಿಗರು, ಜಾತಿಗನುಗುಣವಾಗಿ ಚುನಾವಣಾ ಪ್ರಚಾರ, ಜಾತಿಗನುಗುಣವಾಗಿ ಸಚಿವಸ್ಥಾನ, ಜಾತಿಗನುಗುಣವಾಗಿ ಅಭಿವೃದ್ಧಿಕಾರ್ಯ. ತಮ್ಮ ನಾಯಕನ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದರೂ ಜನರು ಆತನ ಸಹಾಯಕ್ಕೆ ನಿಲ್ಲುತ್ತಾರೆ. ಏಕೆಂದರೆ ಜಾತಿಪ್ರೇಮ..!! ಏನೋ ಒಂದಿಷ್ಟು ಯೋಜನೆಗಳನ್ನು ಘೋಷಿಸುವುದು, ಮೂಗಿಗೆ ತುಪ್ಪ ಸವರುವುದು, ಜಾತಿಭಾವನೆಯ ಜೊತೆ ಚೆಲ್ಲಾಡುವುದು. ಮುಗ್ಧಜನರು ಇದ್ದಲ್ಲಿಯೇ ಇರುತ್ತಾರೆ, ಜಾತಿನಾಯಕ ಬೆಳೆಯುತ್ತಲೇ ಹೋಗುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಿಂತ ಆತನ ಜಾತಿಗೇ ಪ್ರಾಮುಖ್ಯತೆ..!! ಕೊನೆಗೆ ಸಮಾಜವನ್ನು ಕಾಡುತ್ತಿರುವ ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಘೋಷಿಸಲಾಗುತ್ತದೆ…!! ಜಾತಿ ಪದ್ಧತಿಗೆ ಬ್ರಾಹ್ಮಣರೆ ಕಾರಣರೆಂದು ದೂರಲಾಗುತ್ತದೆ..!! ಇದಲ್ಲವೇ ಜಾತ್ಯತೀತರ ಸೋಗಲಾಡಿತನ..?
ಅಭಿವೃದ್ಧಿಯ ಬಗ್ಗೆ ನಿಜವಾಗಲೂ ಕಾಳಜಿಯಿದ್ದರೆ ಜಾತಿಯನ್ನು ಪಕ್ಕಕ್ಕಿಟ್ಟು ಸಾಮಾಜಿಕ ನ್ಯಾಯದತ್ತ ಒಲವನ್ನು ತೋರಬಹುದಲ್ಲ. ಯಾವುದೇ ಜಾತಿಯಿರಲಿ, ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ನೀಡಬಹುದಲ್ಲ. ಮೀಸಲಾತಿಯನ್ನು ಬಡೆದು ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಯ ಮಕ್ಕಳೂ ಮೀಸಲಾತಿಗಾಗಿ ಅರ್ಜಿ ಸಲ್ಲಿಸಿದರೆ ಸಾಮಾನ್ಯ ಬಡವರ ಗತಿಯೇನು..? ಸಾಮಾಜಿಕ ನ್ಯಾಯವೆಂದು ಬಡಬಡಿಸುವ ಜಾತ್ಯತೀತರ ಮೆದುಳಲ್ಲಿ ಇಂತಹ ವಿಚಾರಗಳೇಕೆ ಹೊಳೆಯುವುದಿಲ್ಲ…?
ಭಾರತ ವಿಕಾಸವಾಗಬೇಕೆಂದರೆ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂಬ ಈ ತತ್ವ ಅನುಷ್ಠಾನಗೊಳ್ಳಲೇಬೇಕು. ಸಮಾಜದಲ್ಲಿರುವ ನೈಜ ಅವಕಾಶವಂಚಿತರನ್ನು, ಬಡವರನ್ನು ಗುರುತಿಸಬೇಕು. ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಗಳಿಗಿಂತ ಉದ್ಯೋಗವನ್ನು ಸೃಷ್ಟಿಸುವ ಯೋಜನೆಗಳು ಅನುಷ್ಠಾನಗೊಳಿಸಬೇಕು. ನಿರ್ದಿಷ್ಟ ಸಮುದಾಯಗಳ ಓಲೈಕೆ ಹಾಗೂ ಮೀಸಲಾತಿಯ ಹೆಚ್ಚಳದಿಂದ ಸಾಮಾಜಿಕ ನ್ಯಾಯ ಮರೀಚಿಕೆಯೆಂಬ ಅಂಶವನ್ನು ಅರಿಯಬೇಕಿದೆ. ಸರ್ಕಾರಗಳು ಸಮಾಜದ ಎಲ್ಲಾ ಜಾತಿ,ಪಂಗಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಕಾರ್ಯದತ್ತ ಮುನ್ನುಗ್ಗಬೇಕು.
ಈ ಸಮಯದಲ್ಲಿ ಪ್ರಧಾನಮಂತ್ರಿಯವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂಬ ಘೋಷಣೆ ನೆನಪಾಗುತ್ತದೆ. ಇದೊಂದು ಉತ್ತಮ ಹಾಗೂ ದೂರದೃಷ್ಟಿಯುಳ್ಳ ಚಿಂತನೆಯಾಗಿದೆ. ಪ್ರಧಾನಿಯವರ ಹಲವು ಯೋಜನೆಗಳಲ್ಲಿ ಈ ಅಂಶ ಕಾಣಸಿಗುತ್ತದೆ. ಉದಾಹರಣೆಗೆ “ಪ್ರಧಾನಮಂತ್ರಿ ಜನಧನ ಯೋಜನೆ” “ಡಿಜಿಟಲ್ ಇಂಡಿಯಾ” “ಸ್ವಚ್ಛಭಾರತ” “ಮುದ್ರಾ ಬ್ಯಾಂಕ್ ಯೋಜನಾ” “ಗರೀಬ್ ಕಲ್ಯಾಣ ಯೋಜನಾ” ಹೀಗೆ ಮುಂತಾದ ಯೋಜನೆಗಳು ವಿಶಾಲವಾದ ದೂರದೃಷ್ಟಿಯನ್ನು ಹೊಂದಿವೆ. ಇಂತಹ ಯೋಜನೆಗಳನ್ನು ರಾಜ್ಯಸರ್ಕಾರಗಳೂ ಅನುಷ್ಠಾನಗೊಳಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.