ಧಾರವಾಡ: ನಮ್ಮ ಸ್ವಾತಂತ್ರ್ಯದ ಸೌಧ ನೆಲೆ ನಿಂತಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅಸಂಖ್ಯ ರಾಷ್ಟ್ರಪ್ರೇಮಿಗಳ ರಕ್ತದ ಮಡುವಿನಲ್ಲಿ. ಅಂದರೆ ಸ್ವಾತಂತ್ರ್ಯ ಶಾಂತಿಯ ಫಲವಲ್ಲ ಕ್ರಾಂತಿಯ ಫಲ ಎಂದು ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು.
ನಗರದ ಶ್ರೀನಗರ ಕ್ರಾಸ್ನಲ್ಲಿ ಸೋಮವಾರ ಸಂಜೆ ಕರ್ನಾಟಕ ವಿಶ್ವವಿದ್ಯಾಲಯದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಹುತಾತ್ಮ ದಿನದ ಅಂಗವಾಗಿ ಆಯೋಜಿಸಿದ್ದ ವೀರ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಚಿತ್ರಣವನ್ನು ಕಂಡ 12 ವರ್ಷದ ಬಾಲಕನ ರಕ್ತ ಕುದಿಯಿತು. ಆಗಲೇ ಅವನು ಶಪಥ ಮಾಡಿದ. ಇನ್ನು ಕೈಯಲ್ಲಿ ಪೆನ್ನು ಹಿಡಿಯುವುದಿಲ್ಲ, ಗನ್ ಹಿಡಿಯುವೆ ಎಂದು. ಆ ಧೀರಸಂಕಲ್ಪ ಮಾಡಿದ ಮಹಾತ್ಮನೇ ಭಗತ್ ಸಿಂಗ್ ಎಂದು ಮಲ್ಪೆ ಹೇಳಿದರು.
ಶಪಥ ಮಾಡಿದಂತೆ ಅವನು ನಡೆದುಕೊಂಡ. ಅದಕ್ಕೇ ಅವನು ನಮಗೆ ಇಂದಿಗೂ ಸ್ಮರಣೀಯ ಎಂದ ಅವರು, ಸುಖದೇವ್, ರಾಜ್ಗುರು ಮೆರೆದ ರಾಷ್ಟ್ರಪ್ರೇಮದ ಕುರಿತು ಮನಮುಟ್ಟುವಂತೆ ಹೇಳಿದರು.
ಸ್ವಾತಂತ್ರ್ಯವೀರ ಸಾವರ್ಕರ್ ಹಾಗೂ ನೇತಾಜಿ ಸುಭಾಷ್ಚಂದ್ರ ಭೋಸ್ ಅವರೇ ಸ್ವಾತಂತ್ರ್ಯದ ಮೂಲ ರೂವಾರಿಗಳು. ಜಪಾನ್ನಲ್ಲಿ ಸೈನ್ಯ ಕಟ್ಟುವಂತೆ ನೇತಾಜಿಯನ್ನು ಹುರಿದುಂಬಿಸಿ ಯಶಸ್ವಿಯಾಗುವಂತೆ ನೋಡಿಕೊಂಡಿದ್ದೇ ಸಾವರ್ಕರ್. ಅವರ ಅಪ್ರತಿಮ ಚತುರತೆ, ಅವರಲ್ಲಿದ್ದ ದೃಢತೆ, ದೇಶವನ್ನು ಬ್ರಿಟಿಷರ ದಾಸ್ಯ ಶೃಂಖಲೆಯಿಂದ ತಾಯಿ ಭಾರತಮಾತೆಯನ್ನು ಬಿಡುಗಡೆಗೊಳಿಸುವಲ್ಲಿ ಪ್ರಧಾನ ಕಾರಣವಾಗಿವೆ ಎಂದರು.
ಯಾಕೂಬ್ ಮೆನನ್, ಅಫ್ಜಲ್ ಗುರು, ಕಸಬ್ ಮುಂತಾದವರು ಎಷ್ಟೇ ಉರಿದರೂ, ನೇಣುಗಂಬ ಏರಲೇ ಬೇಕಾಯಿತು. ಆದರೆ ಅನೇಕ ಬುದ್ಧಿ ಜೀವಿಗಳು ಮರುಗಿದ್ದು ನಿಜಕ್ಕೂ ವಿಪರ್ಯಾಸ. ಅಲ್ಲದೇ ಜೆಎನ್ಯುದಲ್ಲಿ ಅಫ್ಜಲ್ ಗುರುವಿನ ಸ್ಮರಿಸುವುದೇ ಆದಲ್ಲಿ, ಅಲ್ಲಿ ದೇಶವಿರೋಧಿ ಘೋಷಣೆ ಕೂಗಲೇ ಬೇಕೆಂದಿಲ್ಲ, ಆ ಕಾರ್ಯಕ್ರಮವೇ ಮೂಲತಃ ದೇಶದ್ರೋಹಿಯಾಗಿದೆ ಎಂದು ಅವರು ಹೇಳಿದರು.
ಬಾಂಗ್ಲಾ ವಲಸಿಗರು, ದೇಶ ವಿಭಜನೆ, ಚೈನಾ ಭಾರತದ ಸಂಬಂಧಗಳ ಕುರಿತು ವಾಸ್ತವಿಕ ಅಂಶಗಳನ್ನು ವಿವರಿಸಿದ ಅವರು, ಭಾರತ ವಿಶ್ವಗುರು ಆಗಲು ಎಲ್ಲರೂ ಬದ್ಧರಾಗಬೇಕಿದೆ ಎಂದರು.
ಕೇವಲ ಕಾರ್ಯಕ್ರಮಗಳಿಗೆ ಕ್ರಾಂತಿ ಚಿರಾಯು ಆದರೆ ಪ್ರಯೋಜನವಿಲ್ಲ. ಅವರ ಆದರ್ಶಗಳು ನಮ್ಮ ಬದುಕನ್ನು ಬೆಳಗಬೇಕು, ರೂಪಿಸಬೇಕು, ನಾವು ಅವರಂತೆ ಆಗಬೇಕು ಎಂದ ಅವರು, 24 ವರ್ಷದಲ್ಲೇ ಅಗಾಧವಾದ ಸಾಧನೆಗೈದ ಭಗತ್ರಂತಹ ಬದುಕು ನೆನೆದು, ನಾವು ದೇಶಕ್ಕೆ ಏನು ನೀಡಬೇಕು ಎಂಬುದನ್ನು ಚಿಂತಿಸಬೇಕು ಎಂದರು.
ಕ್ಯಾ. ನಾಗಪ್ಪ ಅವರು ಕಾರ್ಗಿಲ್ ಯುದ್ಧದ ವೀರ ನೆನಪುಗಳನ್ನು ಹಂಚಿಕೊಂಡರು. ಜನ್ನತಬಿ ಕುದಾವಂದ, ಮಹಾದೇವಿ ಕುಂಬಾರ ಅವರೂ ಮಾತನಾಡಿದರು. ಎಬಿವಿಪಿ ವತಿಯಿಂದ ಇವರನ್ನು ಗೌರವಿಸಲಾಯಿತು.
ದೇಶಪ್ರೇಮವೇ ಅಮೂಲ್ಯವಾದದ್ದು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರಮೋದ ಗಾಯಿ ಹೇಳಿದರು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು, ಅಂದರೆ ಬದುಕು ಸುಂದರವಾಗಿ ಕಾಣಲು ಸಾಧ್ಯ ಎಂದು ಕ್ಲಾಸಿಕ್ ಸಂಸ್ಥೆಯ ಲಕ್ಷ್ಮಣ ಉಪ್ಪಾರ ಹೇಳಿದರು.
ಎಬಿವಿಪಿಯ ಜಗದೀಶ ಮಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಗುಡ್ಡದ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಮುತಾಲಿಕ್ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.