ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ.ಗೆ ಸ್ಪಷ್ಟ ಬಹುಮತ ಸಿಗಬಹುದೆಂದು ಯಾವ ರಾಜಕೀಯ ಪಂಡಿತನೂ ಊಹಿಸಿರಲಿಲ್ಲ. ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಅತಂತ್ರ ಫಲಿತಾಂಶ ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ ಚುನಾವಣೆಯ ಫಲಿತಾಂಶ ಭಾರತೀಯ ರಾಜಕೀಯದಲ್ಲೇ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿತು. ಭಾರತೀಯ ಜನತಾ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗಾದಿಯನ್ನೇರುವುದು ನಿಶ್ಚಿತವಾಯಿತು. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿತ್ತು. ವರದಿಗಳಿಗೆ ಯಾವಾಗಲೂ ಬಣ್ಣವನ್ನು ಬಳಿಯುವ ಮಾಧ್ಯಮಗಳು ತಮ್ಮ ತಮ್ಮ ಊಹೆಗನುಸಾರವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿದರು. ಆದರೆ ಚುನಾವಣೆಯ ಫಲಿತಾಂಶದಂತೇ ಅಚ್ಚರಿಯ ವಿಷಯವಾಗಿದ್ದು ಮುಖ್ಯಮಂತ್ರಿಯ ಆಯ್ಕೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ಪ್ರಮಾಣವಚನ ಸ್ವೀಕರಿಸಿದ್ದು ಯೋಗಿ ಆದಿತ್ಯನಾಥ. ಪುನಃ ಮಾಧ್ಯಮಗಳದ್ದು, ರಾಜಕೀಯ ವಿಶ್ಲೇಷಕರದ್ದು ಮತ್ತದೇ ರಾಗ..!! ಸನ್ಯಾಸಿಯೊಬ್ಬ ಮುಖ್ಯಮಂತ್ರಿಯಾಗಬಹುದೇ ಎಂಬ ಕುತರ್ಕ. ರಾಷ್ಟ್ರವಾದ ಹಾಗೂ ಕೋಮುವಾದಗಳ ಅರಿವಿಲ್ಲದ ಅವಿವೇಕಿಗಳಿಂದ ಆದಿತ್ಯನಾಥನೊಬ್ಬ ಕೋಮುವಾದಿಯೆಂಬ ಅಪಪ್ರಚಾರ. ಅದರಲ್ಲೂ ಕರ್ನಾಟಕದ ಒಬ್ಬ ಅವಿವೇಕಿ ಮಹಿಳೆ ಅದ್ಯಾವುದೋ ಲಜ್ಜೆಗೆಟ್ಟ ವಿಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ತನ್ನ ವಿಕೃತಿಯನ್ನು ಜಗಜ್ಜಾಹೀರುಗೊಳಿಸಿದಳು.
ಅಷ್ಟೆಲ್ಲಾ ವಾದವಿವಾದಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿಯಾಗಿ ನೇಮಕಗೊಂಡ ಯೋಗಿ ಆಡಳಿತ ಯಂತ್ರಕ್ಕೆ ಚುರುಕುಗೊಳಿಸುವ ಪ್ರಯತ್ನವನ್ನು ಶುರುಮಾಡಿಯೇ ಬಿಟ್ಟರು. ಅಲ್ಪಸಮಯದಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡರು. ಪ್ರತಿನಿತ್ಯವೂ ಉತ್ತರಪ್ರದೇಶದಲ್ಲಿ ಅಭಿವೃದ್ಧಿಯ ರಣಕಹಳೆ ಮೊಳಗುತ್ತಿರುವುದನ್ನು ನೋಡುತ್ತಿದ್ದೇವೆ. ಒಬ್ಬ ಸನ್ಯಾಸಿ ಯಾವ ರೀತಿ ರಾಜ್ಯಭಾರ ಮಾಡಬಲ್ಲನೆಂಬುದು ಯೋಗಿ ಭಾರತೀಯರಿಗೆ ತೋರಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಅಭಿವೃದ್ಧಿಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಸಹಜವಾಗಿಯೇ ಎಲ್ಲರೂ ದೇಶದ ಅತಿದೊಡ್ದ ರಾಜ್ಯದ ಮುಖ್ಯಮಂತ್ರಿಯ ನಡೆಯನ್ನು ಗಮನಿಸುತ್ತಿದ್ದಾರೆ. ಇದನ್ನರಿತಿರುವ ಜಾಣ(?) ಮಾಧ್ಯಮಗಳು ಟಿ.ಆರ್.ಪಿಗಾಗಿ ಯೋಗಿಜಿಯ ಹಿಂದೆ ಬಿದ್ದಿವೆ..!! ಉತ್ತರಪ್ರದೇಶದ ಸುದ್ದಿಯನ್ನು ತಿಳಿದು ನಮಗೇನಾಗಬೇಕಿದೆ..? ನಮ್ಮ ರಾಜ್ಯದ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿ ಎಂದು ಮಾಧ್ಯಮಗಳಿಗೆ ಗೊಟರು ಹಾಕುವ ಬುದ್ಧಿಜೀವಿಗಳೂ ಜಾಸ್ತಿಯಾಗಿದ್ದಾರೆ..!!
ಮಾಧ್ಯಮಗಳು ಯೋಗಿಯವರ ಸುದ್ದಿಗಳನ್ನು ಹಾಕಲಿ ಬಿಡಿ. ಒಬ್ಬ ಸನ್ಯಾಸಿ ರಾಜ್ಯಭಾರವನ್ನು ಹೇಗೆ ನಡೇಸಬಲ್ಲ ಎಂಬುದನ್ನು ನಮ್ಮಲ್ಲಿನ ಮೈಗಳ್ಳ ರಾಜಕಾರಣಿಗಳು ತಿಳಿಯಬಹುದಲ್ಲ..!! ನಿದ್ರಿಸುತ್ತಿರುವವರ ನಿದ್ದೆ ಹಾಳು ಮಾಡಲು ಅಷ್ಟು ಸಾಕು..!! ಸಮರ್ಥವಾದ ಪಕ್ಷ ಹಾಗೂ ಸಮರ್ಥವಾದ ನಾಯಕನಿಗೆ ಆಡಳಿತದ ಚುಕ್ಕಾಣಿ ಸಿಕ್ಕರೆ ರಾಜ್ಯ ಹೇಗೆ ಅಭಿವೃದ್ಧಿಪಥದಲ್ಲಿ ಸಾಗುತ್ತದೆಂದು ಎಲ್ಲರಿಗೂ ಅರಿವಾಗಲಿ. ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿಮಂತ್ರವನ್ನು ಜಪಿಸಿ, ಜನರನ್ನು ಮೂರ್ಖರನ್ನಾಗಿಸುವ ಅದೆಷ್ಟೋ ರಾಜಕೀಯ ಪಕ್ಷಗಳು ಯೋಗಿಯವರ ಆಡಳಿತವನ್ನು ನೋಡಿ ಕಲಿಯಲಿ. ಆಷ್ಟಕ್ಕೂ ಉತ್ತರಪ್ರದೇಶವಿರುವುದು ಭಾರತದಲ್ಲಿ ತಾನೇ..? ಒಳ್ಳೆಯ ಕೆಲಸ ಎಲ್ಲಾದರೂ ಅಭಿನಂದಿಸುವುದು ಭಾರತೀಯರಾದ ನಮ್ಮ ಕರ್ತವ್ಯ.
ಕರ್ನಾಟಕದಲ್ಲೂ ಹಲವು ಸಮಸ್ಯೆಗಳಿವೆ. ನಮ್ಮ ರಾಜಕಾರಣಿಗಳಂತೂ ಇನ್ನೂ ಮತೀಯವಾದ,ಸ್ವಜನಪಕ್ಷಪಾತ ಹಾಗೂ ಓಲೈಕೆ ರಾಜಕಾರಣಗಳಲ್ಲೇ ಮಗ್ನರಾಗಿದ್ದಾರೆ. ಜಾತಿ,ಪಂಗಡಗಳನ್ನು ತುಷ್ಟೀಕರಿಸಿದರೆ ಚುನಾವಣೆಯಲ್ಲಿ ಮತ ಬೀಳಬಹುದೇ ವಿನಃ ರಾಜ್ಯದ ಅಭಿವೃದ್ಧಿಯಾಗಲಾರದು ಎಂಬ ಅಂಶವನ್ನು ಮರೆತಿದ್ದಾರೆ. ಸಮಗ್ರ ಕರ್ನಾಟಕದ ಅಭಿವೃದ್ಧಿಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಅದು ನನಸಾಗಬೇಕೆಂದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿರಬೇಕು. ಯೋಗಿಜಿಯ ಪ್ಲಸ್ ಪಾಯಿಂಟ್ ಅದೇ. ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಕೇಂದ್ರದ ನೆರವಿರುತ್ತದೆ. ಕೇಂದ್ರ ಹಾಗೂ ರಾಜ್ಯದ ನಡುವೆ ಸೌಹಾರ್ದತೆಯಿದೆ. ಉತ್ತರಪ್ರದೇಶಕ್ಕೆ ಹೆಚ್ಚಿನ ಅನುದಾನವೂ ಸಿಗಲಿದೆ.
ಆದರೆ ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಮನ್ವಯವಿಲ್ಲ. ವಿಷಮ ಪರಿಸ್ಥಿತಿಯಲ್ಲಿ ಪ್ರತಿಬಾರಿಯೂ ರಾಜ್ಯಸರ್ಕಾರ ಕೇಂದ್ರಸರ್ಕಾರವನ್ನು ದೂಷಿಸುತ್ತದೆ. ಕೇಂದ್ರ ರಾಜ್ಯಸರ್ಕಾರವನ್ನು ದೂಷಿಸುತ್ತದೆ. ಯೋಗಿಜಿಯ ಯೋಜನೆಗಳಲ್ಲಿ ನಿರ್ದಿಷ್ಟ ಸಮುದಾಯಗಳಿಗಷ್ಟೇ ಸೌಲಭ್ಯವಿಲ್ಲ, ಸ್ವಜನಪಕ್ಷಪಾತವಿಲ್ಲ, ಧೃತರಾಷ್ಟ್ರನಂತೇ ಪುತ್ರ ವ್ಯಾಮೋಹವಿಲ್ಲ..!! ಸಂಪೂರ್ಣ ಉತ್ತರಪ್ರದೇಶದ ಅಭಿವೃದ್ಧಿಯ ಧ್ಯೇಯವಿದೆ. ಅವರ ದೃಷ್ಟಿಯಲ್ಲಿ ರಾಜ್ಯದ ಜನರ ಕ್ಷೇಮಾಭಿವೃದ್ದಿಯೇ ಪ್ರಮುಖವಾಗಿದೆ. ಗೂಂಡಾರಾಜ್ಯವೆಂದು ಪ್ರಸಿದ್ಧಿ ಪಡೆದಿದ್ದ ಉತ್ತರಪ್ರದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಬೇಕೆಂಬ ಹಪಹಪಿಕೆಯಿದೆ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗಬೇಕೆಂದರೆ ರಾಜ್ಯ ಹಾಗೂ ಕೇಂದ್ರಸರ್ಕಾರಗಳ ನಡುವೆ ಸಮನ್ವಯ ಬೇಕಿದೆ. ರಾಜ್ಯಕ್ಕೆ ಯೋಗಿಜಿಯಂತಹ ಸಮರ್ಥ ನಾಯಕನ ಅಗತ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಕಾಯಕ ಯೋಗಿಯನ್ನು ಆಯ್ಕೆ ಮಾಡುವ ಗುರುತರದ ಜವಾಬ್ದಾರಿ ಕನ್ನಡಿಗರ ಮೇಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.