ಮೇಲಿಂದ ಮೇಲೆ ಫೋನು ರಿಂಗಣಿಸುತ್ತದೆ. ತಪ್ಪಿದರೆ ಮೆಸೇಜ್ ಬರುತ್ತವೆ. ದಾರಿತಪ್ಪಿದ ಕಮಿಟ್ಮೆಂಟ್ಗಳು. ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ತಾನೇ ಸಿಕ್ಕಿಕೊಂಡ ಸುಳಿಯಿಂದ ಹೊರಬರಲು ಅವನು ಒದ್ದಾಡುತ್ತಾನೆ. ಅವನ ಬದುಕನ್ನೇ ಆಪೋಷನ ಮಾಡುವ ಹಂತಕ್ಕೆ ಸುಳಿ ಕರೆದೊಯ್ಯುತ್ತದೆ. ಮುಂದಿನದು ಕ್ಲೈಮಾಕ್ಸ್.
ಮರಿಜುವಾನಾ; ದಿ ಲೈಫ್ ಬಿಹೈಂಡ್ ಮಿಸರಿಸ್ ಎಂಬ ಕಿರುಚಿತ್ರದ ಕೆಲ ಸನ್ನಿವೇಶಗಳು ಇವು.
ಡ್ರಗ್ಸ್ ಮಾಫಿಯಾ ಲೋಕ ಅನಾವರಣಗೊಳಿಸುವ, ಅದರ ಅಪಾಯಕಾರಿ ಪರಿಣಾಮವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದು ಪೇಢಾ ನಗರಿ ಧಾರವಾಡದ ಒಂದು ಗೆಳೆಯರ ಬಳಗ.
ಉತ್ತುಂಗದ ಕನಸುಗಳಿಗೆ ಅದು ತೊಡರುಗಾಲು ಹಾಕುತ್ತದೆ. ಬೆಳೆಯುವ ಸಿರಿಯನ್ನು ದಿಕ್ಕು ತಪ್ಪಿಸುವ ದುಷ್ಟ ತಾಕತ್ತಿದೆ ಅದಕ್ಕೆ. ಸ್ವಲ್ಪ ವಾಲಿದರೂ ಸಾಕು, ಓಲೈಸಿಕೊಂಡು ಬಿಡುತ್ತದೆ. ಬದುಕಿನ ಸಂತಸಗಳನ್ನು ಕಿತ್ತುಕೊಂಡು, ಭ್ರಮಾ ಲೋಕದಲ್ಲಿ ತೇಲುವಂತೆ ಮಾಡುತ್ತದೆ ಮರಿಜುವಾನಾ. ಅದೊಂದು ದುರ್ವ್ಯಸನವಷ್ಟೇ ಅಲ್ಲ, ಮಾಫಿಯಾ.
ಯುವಶಕ್ತಿಯ ಬದುಕಿಗೇ ಕೊಳ್ಳಿ ಇಡುವ, ಮೆದುಳಿಗೇ ಕೈ ಹಾಕುವ, ಬಾಲಿವುಡ್, ಭೂಗತ ಲೋಕವನ್ನೇ ಆಳುತ್ತಿರುವ ಡ್ರಗ್ಸ್ ಮಾಫಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಡಂಭೂತವಾಗಿ ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ಅರಿವು ಮೂಡಿಸುವಲ್ಲಿ ಯತ್ನಿಸಿದ ಅಪರೂಪದ ಕಿರುಚಿತ್ರವಿದು.
ಓರ್ವ ಯುವಕ ಡ್ರಗ್ಸ್ ಮಾರಾಟ ಜಾಲಕ್ಕೆ ಸಿಲುಕಿರುತ್ತಾನೆ. ಅದರ ಹಿಂದೆ ದೊಡ್ಡ ಕುಳಗಳೇ ಇರುತ್ತಾರೆ. ಕೇಳಿದಷ್ಟು ದುಡ್ಡು ಆತನಿಗೆ ಸಿಗುತ್ತಿರುತ್ತದೆ. ಆದರೆ ನೆಮ್ಮದಿ ಎಂಬುದು ಅವನ ಹತ್ತಿರಕ್ಕೇ ಸುಳಿಯುವುದಿಲ್ಲ. ಅಕ್ಷರಶಃ ಅದೊಂದು ಬಿಡಿಸಿಕೊಳ್ಳಲಾಗದ ಸುಳಿ. ಮಾದಕ ವಸ್ತುಗಳ ವ್ಯಾಪಾರದ ನಂಟಿನಿಂದ ಹಿಂದೆ ಬರಲು ಆತ ಪ್ರಯತ್ನಿಸುತ್ತಾನೆ. ಸೂತ್ರಧಾರರಿಗೆ ಈ ವಿಷಯವನ್ನೂ ತಿಳಿಸುತ್ತಾನೆ. ಹಣ ಹೆಚ್ಚು ಬೇಕಿದ್ದರೆ ಕೇಳು, ಕೆಲಸ ಬಿಡುವ ಮಾತು ಬೇಡ ಎಂದು ಎಚ್ಚರಿಸುತ್ತಾರೆ ಅವರು. ಕೊನೆಗೆ ಅವನ ಬದುಕಿಗೆ ಅಂತ್ಯ ಹಾಡಲು ರಿವಾಲ್ವರ್ ಕೈಗೆತ್ತಿಕೊಳ್ಳುತ್ತಾರೆ. ಅವನ ಗೆಳೆಯನೊಬ್ಬ ಬರುತ್ತಾನೆ. ನಂತರ ನಡೆಯುತ್ತದೆ ಒಂದು ದೊಡ್ಡ ಫೈಟಿಂಗ್.
ಮಾತು ಕಡಿಮೆ. ಹೊಡೆದಾಟ ಹೆಚ್ಚು. ಅದು ಹೊಡೆದಾಟ ಎನ್ನುವುದಕ್ಕಿಂತ ಕಾನೂನು ಬಾಹಿರ, ಬದುಕನ್ನೇ ನುಂಗುವ ಅಪಾಯಕಾರಿ ಜಾಲದ ವಿರುದ್ಧದ ಹೋರಾಟ ಎನ್ನಬಹುದು. ಉತ್ತಮ ಛಾಯಾಗ್ರಹಣವಿದೆ. ಯಾವುದೇ ನಕಲು ಇಲ್ಲದೇ ನೈಜವಾಗಿ ಫೈಟಿಂಗ್ ದೃಶ್ಯ ಚಿತ್ರೀಕರಿಸಿದ್ದು ಈ ಕಿರುಚಿತ್ರ ಇನ್ನೊಂದು ಹಿರಿಮೆ.
ಧಾರವಾಡದ ಸಮೀರ್ ಕುಲಕರ್ಣಿ, ಧನಂಜಯ್ ಕಲಕೋಟಿ ಕ್ರಮವಾಗಿ ಕ್ಯಾಮೆರಾ ಹಾಗೂ ಎಡಿಟಿಂಗ್ ಕೆಲಸ ಮಾಡಿದ್ದಾರೆ. ಗೆಳೆಯರಾದ ಜಯತೀರ್ಥ, ವೇಣುಗೋಪಾಲ್ ಹಿಟ್ನಾಳ್, ಭಾಸ್ವಾನ್ ಹೆಗಡೆ, ರೋಹಿತ್, ಚೇತನ್ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ.
ಚಿತ್ರೀಕರಣಕ್ಕೆ ಒಂದು ತಿಂಗಳು ಕಾಲಾವಧಿ ಬೇಕಾಯಿತಂತೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೈದಾನ ಹಾಗೂ ಇತರೆಡೆ ಚಿತ್ರೀಕರಿಸಲಾಗಿದೆ.
ಹಲವು ಪ್ರಯತ್ನಗಳನ್ನು ಮಾಡಿ ಇದೇ ಮೊದಲ ಬಾರಿಗೆ ಯಶಸ್ಸು ಕಂಡ ತಂಡ, ಇನ್ನಷ್ಟು ಪರಿಣಿತಿ ಪಡೆದು ವಿಷಯವನ್ನು ಗಟ್ಟಿಯಾಗಿ ಹೇಳುವ ಆಶಾಭಾವನೆ ವ್ಯಕ್ತಪಡಿಸಿದೆ. ದಾರಿ ತಪ್ಪುತ್ತಿರುವ ಯುವ ಜನತೆಯ ಒಳಿತಿನ ಉದ್ದೇಶವಿಟ್ಟುಕೊಂಡು ನಿರ್ಮಿಸಿದ ಕಿರುಚಿತ್ರ ಉತ್ತಮ ಪ್ರಯತ್ನ ಎನ್ನಬಹುದು. ನೋಡಿ, ಬೆನ್ನು ತಟ್ಟಿ.
ಮೊದಲ ಪ್ರಯತ್ನ
ಇದಕ್ಕೂ ಮೊದಲು ಅಂದಾಜು 15 ಕಿರುಚಿತ್ರಗಳ ನಿರ್ಮಾಣಕ್ಕೆ ಪ್ರಯತ್ನಿಸಿದ್ದೆವು. ಆದರೆ ಯಾವುದೂ ಪೂರ್ಣಗೊಂಡಿರಲಿಲ್ಲ. ಪೂರ್ಣಗೊಂಡ ಕಿರುಚಿತ್ರ ಇದೇ ಮೊದಲು. ಯುವಶಕ್ತಿಯನ್ನು ಕೇಂದ್ರವನ್ನಾಗಿಟ್ಟು ರಚಿಸಿದ ಕಿರುಚಿತ್ರವಿದು. ಇದರ 2 ನೇ ಭಾಗವೂ ಇಷ್ಟರಲ್ಲೇ ಮೂಡಿಬರಲಿದೆ. ಗುಣಮಟ್ಟಕ್ಕೆ ಇನ್ನಷ್ಟು ಆದ್ಯತೆ ನೀಡಲಾಗುವುದು. ಸಾಮಾಜಿಕ ಪರಿವರ್ತನೆಯ ಕನಸಿನ ಗೆಳೆಯರ ತಂಡಕ್ಕೆ ಪ್ರೋತ್ಸಾಹವಿರಲಿ. ಅದೇ ನಮ್ಮ ಉತ್ಸಾಹ ಇಮ್ಮಡಿಗೊಳ್ಳಲು ಸಹಕಾರಿ.
-ಸಮೀರ್ ಕುಲಕರ್ಣಿ,
ಕಿರುಚಿತ್ರ ತಂಡದ ರೂವಾರಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.