ವಿದ್ಯಾಭ್ಯಾಸ ಪಡೆದ ಬಳಿಕ ಉದ್ಯೋಗ ಅರಸಿ ಸಿಟಿಗಳಿಗೆ ತೆರಳುವ ಗ್ರಾಮೀಣ ಯುವಕ-ಯುವತಿಯರು ಬಳಿಕ ಅಲ್ಲೇ ಸೆಟ್ಲ್ ಆಗಿ ಬಿಡುತ್ತಾರೆ. ತಮ್ಮ ಊರು, ಅಲ್ಲಿನ ಕೃಷಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅಪರೂಪಕ್ಕೊಮ್ಮೆ ಅತಿಥಿಗಳ ಥರಾ ಬಂದು ಹೋಗುವುದು ಬಿಟ್ಟರೆ, ತಮ್ಮ ಊರಿಗಾಗಿ ಹೆಚ್ಚಿನವರು ಏನನ್ನೂ ಮಾಡುವುದಿಲ್ಲ.
ಆದರೆ ಇಲ್ಲೊಬ್ಬ ಐಟಿ ಇಂಜಿನಿಯರ್ ಇದಕ್ಕೆ ವ್ಯತಿರಿಕ್ತವಾಗಿ ಕಾಣುತ್ತಾರೆ. ಬೆಂಗಳೂರಿನ ಕಾಗ್ನಿಝೆಂಟ್ ಟೆಕ್ನಾಲಜಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ್ ಪ್ರತಿ ವೀಕೆಂಡ್ನಲ್ಲಿ 600 ಕಿ.ಮೀ ದೂರದಲ್ಲಿನ ತನ್ನೂರು ಕಲಬುರ್ಗಿಯ ಕೌಲಗ ಗ್ರಾಮಕ್ಕೆ ತೆರಳಿ ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಇವರ ತಂದೆ, ತಾತ ಕೃಷಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ್ದ ಕಾರಣ ಮಹೇಶ್ ಅವರನ್ನು ಕೃಷಿಯ ಹತ್ತಿರಕ್ಕೂ ಬರಲು ಬಿಡದೆ ವಿದ್ಯಾಭ್ಯಾಸ ನೀಡಿ ದೊಡ್ಡ ಉದ್ಯೋಗಕ್ಕೆ ಸೇರಿಸುವ ಕಾರ್ಯ ಮಾಡಿದರು. ಆದರೆ ಮಹೇಶ್ ಮಾತ್ರ ಕೃಷಿಯತ್ತ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದಾರೆ. ಅದಕ್ಕಾಗಿಯೇ ಪ್ರತಿ ಶನಿವಾರ, ಭಾನುವಾರ ಗ್ರಾಮಕ್ಕೆ ಆಗಮಿಸಿ ಹೊಲದಲ್ಲಿ ದುಡಿಯುತ್ತಾರೆ. ಆದರೆ ಕೃಷಿಯ ಆಸಕ್ತಿಯನ್ನು ಕಳೆದುಕೊಂಡಿರುವ ಗ್ರಾಮಸ್ಥರ ಬಗ್ಗೆಯೂ ಅವರಿಗೆ ಬೇಸರವಿದೆ.
‘ಎಂಜಿನಿಯರ್ ಆಗಿರುವ ನನ್ನ ಬಗ್ಗೆ ಕುಟುಂಬದವರಿಗೆ, ಸ್ನೇಹಿತರಿಗೆ ಎಲ್ಲರಿಗೂ ಸಂತೋಷವಿದೆ. ನಾನು ಊರಿಗೆ ಹೋದಾಗ ಹೆಚ್ಚಿನ ಯುವಕರು ಬೆಂಗಳೂರಲ್ಲಿ ನಮಗೆ ಉದ್ಯೋಗ ದೊರಕಿಸಿ ಕೊಡುವಂತೆ ದುಂಬಾಲು ಬೀಳುತ್ತಾರೆ. 8, 9 ಸಾವಿರ ಸಂಬಳಕ್ಕೂ ಅವರು ಹಳ್ಳಿ ಬಿಡಲು ರೆಡಿಯಿದ್ದಾರೆ. ತಮ್ಮ ಹೀಗಿರುವ ಸನ್ನಿವೇಶದಿಂದ ಪಾರಾಗುವುದಷ್ಟೇ ಅವರಿಗೆ ಬೇಕಾಗಿರುವುದು’ ಎಂದು ಮಹೇಶ್ ಬೇಸರಪಡುತ್ತಾರೆ.
‘ಬೆಂಗಳೂರುಗಳಂತಹ ಸಿಟಿಯಲ್ಲಿ ಮನುಷ್ಯ ಐಸಿಯುನಲ್ಲೇ ಹುಟ್ಟುತ್ತಾನೆ ಮತ್ತು ಐಸಿಯುನಲ್ಲೇ ಸಾಯುತ್ತಾನೆ. ನಾವು ಹೆಚ್ಚು ಆಸ್ಪತ್ರೆಗಳನ್ನು ಕಟ್ಟುವುದಕ್ಕೆಯೇ ಗಮನ ನೀಡುತ್ತಿದ್ದೇವೆ. ಆದರೆ ನಮ್ಮ ಆರೋಗ್ಯ ಹಾಳಾಗಲು ಮುಖ್ಯ ಕಾರಣವೇ ವಿಷಪೂರಿತ ಮಣ್ಣು. ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡಿ ಮಣ್ಣು ಮತ್ತು ಆಹಾರ ಎರಡನ್ನೂ ವಿಷಮಯಗೊಳಿಸಿದ್ದೇವೆ. ಮೊದಲು ಈ ಸಮಸ್ಯೆಯನ್ನು ನಾವು ಹೋಗಲಾಡಿಸಬೇಕಿದೆ’ ಎನ್ನುತ್ತಾರೆ ಮಹೇಶ್.
ಈಗಾಗಲೇ ಮಹೇಶ್ ತನ್ನ ಗ್ರಾಮದಲ್ಲಿ ಸಾವಯವ ಕೃಷಿ ಆರಂಭಿಸಿದ್ದಾರೆ, 30 ವಿವಿಧ ದೇಶಿ ತಳಿಯ ಧಾನ್ಯಗಳನ್ನು, ಮಸೂರಗಳನ್ನು ಬೆಳೆದಿದ್ದಾರೆ. 2016ರ ಯುಗಾದಿಯ ದಿನ ಕೃಷಿ ಆರಂಭಿಸಿರುವ ಅವರು ಕೃಷಿಯ ಜೊತೆಜೊತೆಗೆ ಉದ್ಯೋಗವನ್ನೂ ಮುಂದುವರೆಸಿದ್ದಾರೆ. ಏನಾದರು ಹೆಚ್ಚು ಕಮ್ಮಿಯಾದರೆ ಹಣದ ಅಗತ್ಯ ಬೀಳುತ್ತದೆ ಮತ್ತು ಗೋದಾಮು, ಕೊಟ್ಟಿಗೆ, ಕೊಳಗಳ ನಿರ್ಮಾಣಕ್ಕೆ ಹಣ ಹೊಂದಿಸುವ ಉದ್ದೇಶವೂ ಅವರಲ್ಲಿದೆ.
ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸಬೇಕು, ಉದ್ಯೋಗವಕಾಶವನ್ನು ಹೆಚ್ಚಿಸಬೇಕು ಈ ಮೂಲಕ ಗ್ರಾಮೀಣ ಜನರ ವಲಸೆಯನ್ನು ತಡೆಯಬೇಕು ಎಂಬ ಮಹದಾಸೆ ಹೊತ್ತಿರುವ ಮಹೇಶ್, ಅದಕ್ಕಾಗಿ ಸಂಪನ್ಮೂಲ ಕ್ರೋಢಿಕರಿಸಲು ಮುಂದಾಗಿದ್ದಾರೆ. ಸಂಪನ್ಮೂಲ ಹೊಂದಿಕೆಯಾಗುವವರೆಗೂ ಉದ್ಯೋಗದಲ್ಲಿ ಮುಂದುವರೆದು ಬಳಿಕ ಗ್ರಾಮಕ್ಕೆ ಖಾಯಂ ಆಗಿ ವಾಪಾಸ್ಸಾಗುವ ನಿರ್ಧಾರ ಮಾಡಿದ್ದಾರೆ.
ಈ ಮೂಲಕ ಗ್ರಾಮಗಳಿಂದ ನಗರಗಳಿಗೆ ವಲಸೆ ಬಂದು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿ ತಮ್ಮ ಊರುಗಳನ್ನು ಸಂಪೂರ್ಣ ಮರೆಯುವ ಹಾಗೂ ವೀಕೆಂಡ್ಗಳಲ್ಲಿ ಮಸ್ತಿ, ಮೋಜು ಮಾಡುವ ಜನರ ಸಾಲಿನಲ್ಲಿ ಮಹೇಶ್ ನಿಜಕ್ಕೂ ವಿಭಿನ್ನವಾಗಿ ನಿಲ್ಲುತ್ತಾರೆ. ಅವರ ಪ್ರಯತ್ನ ಮತ್ತು ಕನಸಿಗೆ ಆಲ್ ದಿ ಬೆಸ್ಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.