ಹುಬ್ಬಳ್ಳಿ : ಜೀವನ ಸಾಗಿಸುವುದೇ ಸವಾಲು, ಇನ್ನು ಅದನ್ನು ಪ್ರೀತಿಸುವುದು? ಬಾನುಲಿ ಕವಿ ಖ್ಯಾತಿಯ ವಿ.ಸಿ ಐರಸಂಗ ಅವರನ್ನು ಕೇಳಬೇಕು. ಜೀವನ ಪ್ರೀತಿಗೊಂದು ಜ್ವಲಂತ ನಿದರ್ಶನ ಆ ಕವಿ ಹೃದಯ.
ಹಳೆಯದೊಂದು ಅಟ್ಲಾಸ್ ಸೈಕಲ್, ಹೆಗಲಿಗೊಂದು ಜೋಳಿಗೆ, ಅದರಲ್ಲಿ, ಅವರೇ ಬರೆದು ಪ್ರಕಟಿಸಿದ ಕವನ ಸಂಕಲನಗಳು. ಧಾರವಾಡದ ಉಬ್ಬು ತಗ್ಗುಗಳ ರಸ್ತೆಗಳಿಗೆ ಬಗ್ಗದೇ, ಸೈಕಲ್ ತುಳಿಯುತ್ತ ಸಾಗುವ ಸರಳ ವ್ಯಕ್ತಿಯ ’ಜೀವನ ಪ್ರೀತಿ’ ಅನನ್ಯ.
ಧಾರವಾಡ ಏಲಕ್ಕಿ ಶೆಟ್ಟರ ಕಾಲನಿಯಲ್ಲಿರುವ ಮಗಳ ಮನೆಯಲ್ಲಿ ವಾಸ. ಐರಸಂಗ ಕಾಕಾ ಎಂದೇ ಅವರು ಪರಿಚಿತ. ಬರೋಬ್ಬರಿ 2500ಕ್ಕಿಂತಲೂ ಹೆಚ್ಚು ಕವನಗಳನ್ನು ಬರೆದಿರುವ ಅವರೊಬ್ಬ ’ಕಾವ್ಯಸಂತ’. ಮಾರುತಿ ಪ್ರಕಾಶನವೆಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಹಿರಿಮೆ ಅವರದು.
35ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಹೊರ ತಂದಿರುವ ಅವರು, ಕಳೆದ 6 ದಶಕಗಳಿಂದ ಕಾವ್ಯಕೃಷಿಯಲ್ಲೇ ಬದುಕು ಸವೆಸಿದ ಅಪರೂಪದ ಜೀವಿ. ಆಕಾಶವಾಣಿಯ ಭಾವ ಸಂಗಮದ ಹಾಡುಗಳಿಂದ ಎಲ್ಲರ ಮನೆ ಮಾತಾದವರು.
1947 ರಲ್ಲಿ ಬರೆದ ’ಸುಪ್ರಭಾತ’ ಅವರ ಮೊದಲ ಕವನ ಸಂಕಲನ. ಅವರ ಮನೆಯಲ್ಲಿ ನಡೆಯುತ್ತಿದ್ದ ಪೂಜೆ, ಭಜನೆಗಳೇ ಅವರ ಕಾವ್ಯಕ್ಕೆ ಸ್ಫೂರ್ತಿಯಂತೆ. ರಾಗ, ಲಯ, ತಾಳಗಳ ಅರಿವಿದ್ದವನು ನೈಜ ಕವಿ. ಕಾವ್ಯ ವ್ಯಾಕರಣವನ್ನು ಒಳಗೊಂಡಿರಬೇಕು. ಕಾವ್ಯಕ್ಕೆ ಸಂಗೀತ ಬೆಸೆದಾಗ ಭಾವ ಸ್ಫುರಣ ಇಮ್ಮಡಿಯಾಗುತ್ತದೆ. ಷಟ್ಪದಿ, ಛಂದಸ್ಸುಗಳ ಪರಿಚಯವಿಲ್ಲದವನು ಉತ್ಕೃಷ್ಟ ಕಾವ್ಯ ರಚಿಸಲಾರ ಎಂಬುದು ಅವರ ಅಭಿಪ್ರಾಯ.
ಕಾವ್ಯ ಅನುಭವದ ರಸಪಾಕವಾಗಿರಬೇಕು. ಬರೆಯಬೇಕೆಂದೇ ಬರೆಯಬಾರದು. ಭಾವಗಳು ಜೀವತಳೆದಾಗ ರೂಪುಗೊಳ್ಳುವ ಕಾವ್ಯ ಸತ್ವಯುತವಾಗಿರಲು ಸಾಧ್ಯ. ಒಂದೆರಡು ಸಂಕಲನ ಹೊರತಂದು ಕವಿ ಎಂದು ಬೀಗುವವರಿಗೆ ಕಡಿಮೆ ಏನಿಲ್ಲ. ಆದರೆ ಹೇಳಿಕೊಳ್ಳುವವರೆಲ್ಲ ಕವಿಗಳಲ್ಲ ಎನ್ನುತ್ತಾರೆ ಐರಸಂಗ.
ದೇಶಭಕ್ತಿ, ನಾಡಗೀತೆ, ಪೌರಾಣಿಕ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ, ಮಕ್ಕಳ ಸಾಹಿತ್ಯ ಹೀಗೇ ವೈವಿಧ್ಯಮಯ ವಿಷಯಗಳ ಕುರಿತು ಕಾವ್ಯ ಸೃಷ್ಟಿಸಿದ್ದು ಐರಸಂಗರ ವೈಶಿಷ್ಟ್ಯ. ಬಾನುಲಿಯಲ್ಲಿ ಇವರ ಕಾವ್ಯಧಾರೆ ಕೇಳದ ಕಿವಿಯಿಲ್ಲ ಎನ್ನಬಹುದು.
ನಾಡಿನ ಖ್ಯಾತ ಸಂಗೀತ ರತ್ನಗಳ ಸಿರಿಕಂಠಕ್ಕೆ ಮೆರಗು ನೀಡಿದ ಇವರ ಕವನಗಳು ಸಾವಿರಾರು. ಪಂ.ಮಾಧವ ಗುಡಿ, ಬಾಲಚಂದ್ರ ನಾಕೋಡ, ಸಂಗೀತಾ ಕಟ್ಟಿ, ಪರಮೇಶ್ವರ ಹೆಗಡೆ ಮುಂತಾದವರು ಐರಸಂಗರ ಕಾವ್ಯಕ್ಕೆ ದನಿಯಾಗಿದ್ದಾರೆ.
ಕಾವ್ಯಬದಿಯ ಹವ್ಯಾಸಗಳು
ಮಕ್ಕಳಿಗೆ ಉಚಿತ ಪಾಠವನ್ನೂ ಐರಸಂಗ ಹೇಳುತ್ತಾರೆ. ಸಂಗೀತ ಸಂಯೋಜನೆ, ತಬಲಾ ವಾದನ, ಸೈಕಲ್ ಹಾಗೂ ಗಡಿಯಾರ ರಿಪೇರಿ ಅವರ ಕಾವ್ಯಬದಿಯ ಹವ್ಯಾಸಗಳು. ಐಷಾರಾಮಿ ಜೀವನದ ಹಂಗಿಲ್ಲ. ಕಾವ್ಯ ಶ್ರೀಮಂತಿಕೆ, ಭಾವ ಶ್ರೀಮಂತಿಕೆ, ಹೃದಯ ಶ್ರೀಮಂತಿಕೆಯೇ ಅವರ ಅಮೂಲ್ಯ ಸಂಪತ್ತು. ಅಪ್ಪಟ ಸೀದಾ ಸಾದಾ ಮನುಷ್ಯ.
ಡಾ.ಪಾಟೀಲ ಪುಟ್ಟಪ್ಪ ಕಳಕಳಿ
ದುರಂತವೆಂದರೆ ಅಪರೂಪದ ಜೀವನ ಪ್ರೀತಿಯ ಕವಿ ಅಕ್ಷರಶಃ ಇಂದಿಗೂ ಅಜ್ಞಾತ ಕವಿ ಎಂದರೂ ತಪ್ಪಿಲ್ಲ ಬಿಡಿ. ಹಿರಿಯ ಪತ್ರಕರ್ತ ಡಾ.ಪಾಟೀಲ್ ಪುಟ್ಟಪ್ಪ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಐದಾರು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಯಾರ್ಯಾರಿಗೋ ಡಾಕ್ಟರೇಟ್ ಕೊಡ್ತೀರಿ. ನೈಜ ಕವಿ ಐರಸಂಗ ಅವರಿಗೆ ಯಾಕೆ ಕೊಡುವುದಿಲ್ಲ? ಕಾವ್ಯದ ಜೀವಾಳವಾದ ಬದ್ಧತೆ ಅವರ ಕಾವ್ಯದಲ್ಲಿ ತುಂಬಿಕೊಂಡಿದೆ. ಅವರನ್ನು ನಿರ್ಲಕ್ಷಿಸುವುದು ತರವಲ್ಲ ಎಂದು ಪರೋಕ್ಷವಾಗಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅದಕ್ಕೆ ಫಲ ಸಿಕ್ಕಿದೆ ಎನ್ನಬಹುದು.
ಒಲಿದು ಬಂದ ಡಾಕ್ಟರೇಟ್
ಹೌದು. ಲೇಟ್ ಆಗಿಯಾದರೂ ಡಾಕ್ಟರೇಟ್ ಒಲಿದು ಬಂದಿದೆ. ವಿ.ಸಿ. ಐರಸಂಗ ಅವರು ಈ ಬಾರಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೆ ಆಯ್ಕೆಯಾಗಿದ್ದಾರೆ. ವಿಶಿಷ್ಟ ಎಂದರೆ ಈ ಬಾರಿ ಆಯ್ಕೆಯಾಗಿರುವುದು ಐರಸಂಗ ಮಾತ್ರ. ವಿಶ್ವ ವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪರಿಣಾಮ, ನೇಮಕಾತಿ ಹಾಗೂ ಗೌರವ ಡಾಕ್ಟರೇಟ್ಗೂ ರಾಜ್ಯಪಾಲರು ನಿರ್ಬಂಧ ವಿಧಿಸಿದ್ದಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪ್ರಮೋದ ಗಾಯಿ ತಿಳಿಸಿದ್ದಾರೆ.
’ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ’ ಎಂಬ ಕವಿ ನುಡಿಗೆ ಪೂರಕ ಐರಸಂಗರ ಜೀವನ. ಪ್ರಶಸ್ತಿ, ಬಹುಮಾನ, ವೇದಿಕೆಗಳಲ್ಲಿ ವಿಜೃಂಭಿಸುವ ಜಾಯಮಾನ ಅವರದಲ್ಲ. ಐರಸಂಗ ಅವರು ಸಾಹಿತ್ಯಿಕ, ಸಂಶೋಧನೆ, ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ಅಷ್ಟಾಗಿ ನೀಡಿಲ್ಲ ಎಂದು ವಿಮರ್ಶಿಸುವವರು ಅನೇಕ. ಆದರೆ, ಡಾಕ್ಟರೇಟ್ ಒಲಿದು ಬಂದಿದ್ದು ಅವರ ’ಜೀವನ ಪ್ರೀತಿ’ಗೆ ಸಂದ ಗೌರವ ಎನ್ನಬಹುದಲ್ಲ?
ಯಾರು ಏನಂತಾರೆ ?
ಭಾಳ ಖುಷಿ ಆಗಿದೆ
ಐರಸಂಗ ಅವರಿಗೆ ಡಾಕ್ಟರೇಟ್ ಬಂದಿದ್ದು ಭಾಳ ಖುಷಿ ನೀಡಿದೆ. ಜನಪ್ರಿಯ ಗೀತೆ ಬರೆದ ಅವರು ಆಕಾಶವಾಣಿಯಿಂದ ಸಾಕಷ್ಟು ಪರಿಚಿತವಾದವರು. ಸೂಕ್ತ ವ್ಯಕ್ತಿಯನ್ನು ಹುಡುಕಿ ಗೌರವಿಸುತ್ತಿರುವುದು ಸಂತಸದ ಸಂಗತಿ.
ಡಾ.ಚೆನ್ನವೀರ ಕಣವಿ, ಚೆಂಬೆಳಕಿನ ಕವಿ
ಮಾನದಂಡದ ಪ್ರಶ್ನೆ
ಐರಸಂಗ ಅವರಿಗೆ ಡಾಕ್ಟರೇಟ್ ನೀಡಿದ್ದು ನನಗಷ್ಟು ಸಮಂಜಸ ಅನಿಸಿಲ್ಲ. ಜನಪ್ರಿಯ ಗೀತೆಗಳನ್ನು ಅವರು ಬರೆದಿದ್ದಾರೆ. ಆಕಾಶವಾಣಿಯಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಅವರು ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದವರು ಎಲ್ಲವೂ ನಿಜ. ಆದರೆ ಅವರಲ್ಲಿ ನವೋದಯ ಪ್ರಜ್ಞೆ ಇತ್ತೇ ಹೊರತು, ನವೋದಯ ಸಾಹಿತ್ಯಕ್ಕೆ ಅವರ ಕೊಡುಗೆ ಗಣನೀಯವಾಗೇನೂ ಇಲ್ಲ. ಯಾವ ಮಾನದಂಡದ ಮೇಲೆ ಅವರಿಗೆ ಈ ಪದವಿ ದೊರಕಿತೊ ಗೊತ್ತಿಲ್ಲ.
ಡಾ.ಬಾಳಣ್ಣ ಶೀಗಿಹಳ್ಳಿ, ಲೇಖಕರು
ಅರ್ಹ ಗೌರವ
ಮೃದು ಮನಸಿನ, ಶಾಂತ ಸ್ವಭಾವದ ಕವಿ ವಿ.ಸಿ.ಐರಸಂಗ. ಅವರು ಪ್ರಕಟಿಸಿರುವ ಕವಿತೆಗಳಲ್ಲೂ ಅವರ ಸ್ವಭಾವವನ್ನು ನಾವು ಕಾಣಬಹುದು. ಧಾರವಾಡದ ಅನೇಕ ಗಣ್ಯರಂತೆ ಇವರೂ ಉಪೇಕ್ಷೆಗೆ ಒಳಗಾಗಿದ್ದ ಕವಿ. ಪ್ರಶಸ್ತಿ, ಸಮ್ಮಾನಗಳಿಗೆ ಎಂದೂ ಹಂಬಲಿಸಿದವರಲ್ಲ. ಡಾಕ್ಟರೇಟ್ ನೀಡುವ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಸತ್ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎನ್ನಬಹುದು.
ಡಾ.ಹ.ವೆಂ.ಕಾಖಂಡಕಿ, ಲೇಖಕರು
ಎಲ್ಲರಿಗೂ ಧನ್ಯವಾದ
ನನ್ನ ಮೊದಲ ಕವನ ಸಂಕಲನ ಮೆಚ್ಚಿ ಪ್ರೋತ್ಸಾಹಿಸಿದವರು ಆರ್.ಜಿ.ಚಿಲಕವಾಡರು. ಪಾಕಿಸ್ಥಾನ ಭಾರತ ಯುದ್ಧದ ಸಂದರ್ಭದಲ್ಲಿ ದೇಶಭಕ್ತಿ ಗೀತೆ ಬರೆದಿರುವೆ. ಆಕಾಶವಾಣಿಯು ಸಾಕಷ್ಟು ಪ್ರೋತ್ಸಾಹಿಸಿದೆ. ನನ್ನ ಕಾವ್ಯ ಮೆಚ್ಚಿ ಈ ಗೌರವ ನೀಡಲು ನಿರ್ಧರಿಸಿದ ಕುಲಪತಿ, ಕುಲಾಧಿಪತಿ ಹಾಗೂ ಎಲ್ಲರಿಗೂ ಧನ್ಯವಾದ.
ವಿ.ಸಿ.ಐರಸಂಗ, ಕವಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.