ಹುಬ್ಬಳ್ಳಿ: ನೂರಕ್ಕೂ ಹೆಚ್ಚು ದೇವಾಲಯಗಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಹೊಂದಿದೆ.
ಕಾಶಿ ವಿಶ್ವೇಶ್ವರ, ಸೋಮೇಶ್ವರ, ಕುಂಬಾರೇಶ್ವರ, ಮಾಣಿಕೇಶ್ವರ, ಚಂದ್ರಮೌಳೇಶ್ವರ, ವಿರೂಪಾಕ್ಷೇಶ್ವರ, ನೀಲಕಂಠೇಶ್ವರ, ಸೂರ್ಯದೇವಾಲಯ ಹೀಗೇ ಅಸಂಖ್ಯ ದೇವಾಲಯಗಳು ಲಕ್ಕುಂಡಿಯ ಮುಕುಟವನ್ನು ಶೃಂಗರಿಸಿವೆ.
ಶಿಲ್ಪಕಲೆಯ ತವರು
ಲಕ್ಕುಂಡಿ ಶಿಲ್ಪಕಲೆಯ ತವರು. ಇಲ್ಲಿನ ದೇವಾಲಯಗಳು, ಬಾವಿಗಳು, ಶಾಸನಗಳು ಬರೀ ಕಲ್ಲುಗಳಾಗಿಲ್ಲ, ಅಲ್ಲಿ ಅಪೂರ್ವ ಕಲೆ ಇದೆ. ಐತಿಹಾಸಿಕ ಹಾಗೂ ಪೌರಾಣಿಕ ದರ್ಶನವಿದೆ. ಕಲ್ಯಾಣ ಚಾಲುಕ್ಯರು, ಹೊಯ್ಸಳ ಶೈಲಿಯ ಸಮ್ಮಿಲನ ಇಲ್ಲಿನ ಶಿಲ್ಪಕಲೆಯ ವೈಶಿಷ್ಟ್ಯ.
ಪೊನ್ನನಿಂದ ಶಾಂತಿನಾಥ ಪುರಾಣ, ಕವಿಚಕ್ರವರ್ತಿ ರನ್ನನಿಂದ ಅಜಿತನಾಥ ಪುರಾಣ ಬರೆಸಿದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯೂ ಇದೇ ಲಕ್ಕುಂಡಿ.
ಇಲ್ಲಿನ ಬ್ರಹ್ಮ ಜಿನಾಲಯವನ್ನು ಕಟ್ಟಿಸಿದಾಕೆ ಅತ್ತಿಮಬ್ಬೆ ಎನ್ನುತ್ತಾರೆ. ಈ ಬಸದಿಯು ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶಿಲ್ಪವನ್ನೊಳಗೊಂಡಿದ್ದು ಆಕರ್ಷಕವಾಗಿದೆ.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಟಂಕಸಾಲೆ ಆಗಿತ್ತು. ಇಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸುತ್ತಿದ್ದರು. ಇಲ್ಲಿನ ಬಹುತೇಕ ಶಾಸನಗಳಲ್ಲಿ ಲೊಕ್ಕಿಯಂ ಪೊಗಂದ್ಯಾಣ(ಲಕ್ಕುಂಡಿಯ ಬಂಗಾರದ ನಾಣ್ಯ) ಬಗ್ಗೆ ಪ್ರಸ್ತಾಪವಿದೆ. ಲಕ್ಕುಂಡಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಉಪರಾಜಧಾನಿ ಆಗಿತ್ತು ಎಂಬುದು ಐತಿಹಾಸಿಕ ಮಹತ್ವ ಸಾರುತ್ತದೆ.
ಆಕರ್ಷಕ ಬಾವಿಗಳು
ಎಂಟು ಶತಮಾನಗಳಷ್ಟು ಹಿಂದಿನ ಸೋಪಾನ ಬಾವಿಗಳು ಲಕ್ಕುಂಡಿಯ ಪ್ರಮುಖ ಆಕರ್ಷಣೆ. ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಈ ಬಾವಿಗಳು ಪ್ರಸಿದ್ಧವಾಗಿವೆ. ಛಟೀರ ಬಾವಿ, ಮುಸುಕಿನ ಬಾವಿ ಮೊದಲಾದವು ಚಿತ್ತಾಕರ್ಷಕವಾಗಿವೆ.
ಚೌಕಾಕಾರ ಇಲ್ಲವೇ ಆಯತಾಕಾರವಾಗಿರುವ ಈ ಬಾವಿಗಳ ತಳಭಾಗದಿಂದ ಮೇಲ್ಭಾಗದ ವರೆಗೆ ಬಂದತೆಲ್ಲಾ ವಿನ್ಯಾಸ ಬದಲಾಗುತ್ತಾ ಹೋಗುತ್ತದೆ. ಬಾವಿಯ ಗೋಡೆಗಳಲ್ಲಿ ಪುಟ್ಟ ಗೋಡೆಗಳನ್ನು ಹೊಂದಿರುವ ದೇವ ಕೋಷ್ಠಕಗಳಿದ್ದು, ಅವುಗಳಲ್ಲಿ ಈಗ ಯಾವುದೇ ಮೂರ್ತಿಗಳು ಕಂಡು ಬರುವುದಿಲ್ಲ. ಬಾವಿಗೆ ಸುಂದರವಾದ ಮೆಟ್ಟಿಲುಗಳಿದ್ದು, ಬಾವಿಯ ಒಳಗೆ ಇಳಿದರೆ ಉರಿಯುವ ಬಿಸಿಲಿನಲ್ಲೂ ಮೈ ತಂಪಾಗುವುದು ಅಲ್ಲಿನ ವೈಶಿಷ್ಟ್ಯ.
ಲಕ್ಕುಂಡಿ ವೈಷ್ಣವ, ಶೈವ, ಜೈನರ ನೆಲೆವೀಡಾಗಿದ್ದು, ವಿವಿಧ ಧರ್ಮ ಸಮನ್ವಯ ಕೇಂದ್ರವೂ ಆಗಿತ್ತು. ಇಲ್ಲಿ ಪ್ರತಿವರ್ಷ ಹಂಪಿ, ಕದಂಬೋತ್ಸವಗಳಂತೆ ಲಕ್ಕುಂಡಿ ಉತ್ಸವ ವಿಜೃಂಭಣೆಯಿಂದ ಜರಗುತ್ತದೆ.
ಇಂದಿನಿಂದ ಎರಡು ದಿನಗಳ ಕಾಲ ಲಕ್ಕುಂಡಿ ಉತ್ಸವ ಜರುಗಲಿದೆ. ವೈವಿಧ್ಯಮಯ ಜಾನಪದ ರಂಗು, ಮೆರವಣಿಗೆ, ಕವಿಗೋಷ್ಠಿ, ವಿಚಾರಗೋಷ್ಠಿ, ಛಾಯಾಚಿತ್ರ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು ಉತ್ಸವಕ್ಕೆ ಮೆರಗು ನೀಡಲಿವೆ.
ಚಿತ್ರ ಕೃಪೆ : ಕರ್ನಾಟಕ ಹಿಸ್ಟಾರಿಕಲ್ ಪ್ಲೇಸಿಸ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.