ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ.
ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ ಹೆಸರು. ಕೊಪ್ಪಳ ಜಿಲ್ಲೆ ಹನುಮಸಾಗರ ಅವರ ತವರು. ಇದೀಗ ಕೊಪ್ಪಳದಲ್ಲಿಯೇ ವಾಸ. ಹುಬ್ಬಳ್ಳಿಯ ವಿಜಯ ಮಹಾಂತೇಶ ಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪದವಿ ಹಾಗೂ ಇಳಕಲ್ನಲ್ಲಿ ಬಿಎಫ್ಎ (ಬ್ಯಾಚುಲರ್ ಆಫ್ ವಿಸುವಲ್ ಆರ್ಟ್) ಪದವಿ ಪಡೆದಿರುವ ಅವರು, ಮೊನಚಾದ ತಮ್ಮ ವ್ಯಂಗ್ಯಚಿತ್ರಗಳಿಂದಲೇ ಗುರುತಿಸಿಕೊಂಡವರು.
ಕಲಾ ಕ್ಷೇತ್ರದಲ್ಲಿ 15 ವರ್ಷಗಳಿಂದ ಇರುವ ಅವರು, ಮೊದಲು ಸಿನಿಮಾ ಕ್ಷೇತ್ರದ ಬ್ಯಾನರ್ ಚಿತ್ರಿಸುವಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ. ಬದುಕಿನ ಭದ್ರತೆಗಾಗಿ ಚಿತ್ರಕಲೆಯನ್ನು ಅವರು ನಂಬಲಿಲ್ಲ. ಸಮಾಜಮುಖಿ ಜೀವನವೇ ಅವರ ಹಂಬಲವಾಗಿತ್ತು. ಅದಕ್ಕಾಗಿ ಅವರು ಆಯ್ದುಕೊಂಡದ್ದೇ ವ್ಯಂಗಚಿತ್ರವನ್ನು.
ರಾಜಕೀಯ ದೊಂಬರಾಟ, ಸಿನಿಮಾ, ಕ್ರಿಕೆಟ್ ಲೋಕದ ಅನಾವರಣ, ಸಾಹಿತ್ಯ, ಕಲೆ, ಸಂಗೀತ ಹೀಗೇ ಪ್ರಸ್ತುತ ಬದುಕಿನ ವಿವಿಧ ಮಗ್ಗಲುಗಳನ್ನು ತಮ್ಮ ಚೂಪಾದ ಗೆರೆಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಕರಗತವಾಗಿದೆ.
ವೈಯಕ್ತಿಕವಾಗಿ ಯಾರ ತೇಜೋವಧೆ ಇಲ್ಲ, ಯಾರೂ ನಮಗೆ ಟಾರ್ಗೆಟ್ ಇಲ್ಲ, ನಾವು ಪಕ್ಷಾತೀತ, ಜಾತ್ಯತೀತ ಎನ್ನುವ ಬದರಿ ಪುರೋಹಿತ ಅವರು, ಸಮಾಜದ ಒಳಿತು ಕೆಡಕುಗಳನ್ನು ಚಿತ್ರಿಸುವ ಮೂಲಕ ಚುರುಕು ಮುಟ್ಟಿಸುವ ಕೆಲಸವಷ್ಟೇ ತಮ್ಮದು ಎನ್ನುತ್ತಾರೆ.
ಗೋವಾ, ಮಂತ್ರಾಲಯ, ಬೆಂಗಳೂರಿನಲ್ಲಿ (10 ಬಾರಿ) ಹಾಗೂ ಕೊಪ್ಪಳದಲ್ಲಿ ಅನೇಕ ವ್ಯಂಗಚಿತ್ರ ಪ್ರದರ್ಶನ ಕೈಗೊಳ್ಳಲಾಗಿದ್ದು, ಇಷ್ಟರಲ್ಲೇ ದೆಹಲಿಯಲ್ಲೂ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಆಹ್ವಾನವಿದೆ ಎಂದರು.
ಮಕ್ಕಳಲ್ಲಿ ವ್ಯಂಗ್ಯಚಿತ್ರದ ಬಗ್ಗೆ ಆಸಕ್ತಿ ಹಾಗೂ ತಿಳಿವಳಿಕೆ ಮೂಡಿಸುವ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಕಾರ್ಯಾಗಾರ, ಬೇಸಿಗೆ ಶಿಬಿರ ಆಯೋಜಿಸಿರುತ್ತೇವೆ ಎನ್ನುವ ಅವರು, ವಾರ್ತಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅನೇಕ ಅಭಿಯಾನ ಮಾಡಿದ್ದಾಗಿಯೂ ಹೇಳುತ್ತಾರೆ.
ಕ್ಯಾರಿಕೇಚರ್
ಖ್ಯಾತ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ, ಗಾಯಕಿ ಸಂಗೀತಾ ಕಟ್ಟಿ, ಚಲನಚಿತ್ರ ನಿರ್ದೇಶಕ ನಾಗಾಭರಣ, ಕಿರುತೆರೆ ಕಲಾವಿದೆ ಮಾಳವಿಕಾ, ಚಿ.ಸು.ಕೃಷ್ಣಮೂರ್ತಿ ಹೀಗೇ ಅನೇಕರ ಕ್ಯಾರಿಕೇಚರ್ಗಳನ್ನು (ವ್ಯಕ್ತಿ ವಿಶೇಷಣ ಚಿತ್ರ) ಬಿಡಿಸಿ, ಅವರಿಗೇ ಉಡುಗೊರೆಯಾಗಿ ಕೊಟ್ಟಿರುವ ಹಿರಿಮೆ ಅವರದು.
ಅಹೋರಾತ್ರಿ ಸಂಗೀತೋತ್ಸವ ಇದ್ದಾಗ, ಸಂಗೀತದ ಪರಿಕರಗಳನ್ನೇ ತಮ್ಮ ಗೆರೆಗಳಲ್ಲಿ ಒಡಮೂಡಿಸಿ, ಅನೇಕರ ಮನಗೆದ್ದ ಅಪರೂಪದ ವ್ಯಂಗಚಿತ್ರಕಾರ. ನಾಡಿನ ಬಹುಪರಿಚಿತ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು, ತಮ್ಮದೊಂದು ಕ್ಯಾರಿಕೇಚರ್ ಬಿಡಿಸಿ ಕೊಡಲು ಇವರಿಗೆ ಬೇಡಿಕೆ ಇಟ್ಟಿದ್ದು ಕಲಾ ಪ್ರತಿಭೆಗೆ ಸಾಕ್ಷಿ.
ನಗೆಮುಗುಳು ಪತ್ರಿಕೆ ಹಾಗೂ ರಮ್ಯ ಕಲ್ಚರಲ್ ಅಕಾಡೆಮಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡಿದಿದ್ದಾರೆ. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ವತಿಯಿಂದ ಕರ್ನಾಟಕ ಚಿತ್ರಕಲಾ ರಾಜ್ಯ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಜಾಗೃತಿ ವೇದಿಕೆ ವತಿಯಿಂದ ಕರುನಾಡ ಪದ್ಮಶ್ರೀ, ಕರ್ನೂಲ್ ಕನ್ನಡ ಸಂಘದ ವತಿಯಿಂದ ಶ್ರೀರಾಘವೇಂದ್ರ ಸದ್ಭಾವನಾ ಪುರಸ್ಕಾರ ಇತ್ಯಾದಿಗಳು ಅವರನ್ನು ಅರಸಿ ಬಂದಿವೆ.
ಸಾಮಾಜಿಕ ಜಾಲತಾಣದಲ್ಲಿಯೂ ಬದರಿ ಅವರ ವ್ಯಂಗ್ಯಚಿತ್ರಗಳು ಪ್ರಭಾವ ಬೀರಿದ್ದು ಅನೇಕರ ಮೆಚ್ಚುಗೆ ಗಳಿಸಿವೆ. ನಾಡಿನ ಹಿರಿಯ ವ್ಯಂಗ್ಯಚಿತ್ರಕಾರರಾದ ಪಿ.ಮಹಮ್ಮದ್, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ್ಯ ಮುಂತಾದವರೇ ಮಾದರಿ ಎನ್ನುವ ಸಹೃದಯಿ ಅವರು.
ಪತ್ನಿ ಹಾಗೂ ಪುತ್ರನಿರುವ ಪುಟ್ಟ ಸಂಸಾರ ಅವರದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗರಾಯ ಈಗಾಗಲೇ ಗೆರೆಯ ಸಹವಾಸಕ್ಕೆ ಬಿದ್ದಿದ್ದಾನೆ. ಗೆರೆಗಳೇ ಅವರ ಬದುಕಿನ ಉಸಿರು ಹಾಗೂ ಆಸರೆ. ಸಾಮಾಜಿಕ ಬದಲಾವಣೆಯ ಕನಸು ಹೊತ್ತ ಗೆರೆ ಬರಹಗಾರನಿಗೆ ಸಮಾಜದ ಪ್ರೋತ್ಸಾಹ, ಬೆಂಬಲ ಸದಾ ಶ್ರೀರಕ್ಷೆಯಾಗಿರಲಿ ಎಂಬುದೇ ನ್ಯೂಸ್-13 ಆಶಯ.
ಪ್ರಧಾನಿ ಮೋದಿ, ಅಮೆರಿಕೆಯ ಟ್ರಂಪ್, ಜಯಲಲಿತಾ, ಸಿಎಂ ಸಿದ್ದರಾಮಯ್ಯ, ಸಚಿವ ಜಿ.ಪರಮೇಶ್ವರ, ಮಹದಾಯಿ, ಕಾವೇರಿ, ಎತ್ತಿನ ಹೊಳೆ ವಿವಾದ, ನೋಟ್ ಬ್ಯಾನ್, ಬ್ಯಾಂಕ್ ಚಿತ್ರಣ , ಪಾಕ್, ಚೀನಾ, ಅಮೆರಿಕೆಯ ನಡೆಗಳು ಹೀಗೇ ಅನೇಕ ಪ್ರಸ್ತುತ ವಿಷಯಗಳತ್ತ ಚಿತ್ತ ಹರಿಸುವ ಬದರಿ ಅವರ ವ್ಯಂಗ್ಯಚಿತ್ರದಲ್ಲಿ ಸಾಮಾಜಿಕ ಕಾಳಜಿ ಹಾಗೂ ರಾಷ್ಟ್ರೀಯತೆಯ ಪ್ರಜ್ಞೆಗೆ ಹೆಚ್ಚು ಆದ್ಯತೆ ಇರುವುದನ್ನು ಗಮನಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.