ಎಲೆಗಳಿಂದ ತಯಾರಿಸಿದ ಪ್ಲೇಟ್ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ. ಒಂದು ಬಾರಿ ನೀವು ನಿಮ್ಮ ಸುತ್ತ ನೋಡಿದಾಗ ಕಣ್ಣಿಗೆ ಕಾಣಿಸುವ ಕುರ್ಚಿಗಳು, ಟೇಬಲ್, ನೀರಿನ ಬಾಟಲ್, ಸ್ಟೇಷನರಿ ವಸ್ತುಗಳು- ಎಲ್ಲವೂ ಪ್ಲಾಸ್ಟಕ್. ಇವುಗಳಿಲ್ಲದೇ ಇರುವ ವಿಶ್ವವನ್ನು ಯೋಚಿಸುವುದೇ ಒಂದು ಬೃಹತ್ ಸವಾಲು ಎನಿಸಬಹುದು.
ಪರಿಸರದಲ್ಲಿ ಪ್ಲಾಸ್ಟಿಕ್ ಸೇರ್ಪಡೆ ಇತ್ತೀಚಿನ ವರ್ಷಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಹಾರ ಉದ್ಯಮಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್ಗೆ ಕಟ್ಟುನಿಟ್ಟಿನ ನೀತಿಯ ರಚನೆ ಮಾಡಲಾಗಿದೆ. ಪ್ರತಿ ವರ್ಷ ಸುಮಾರು 10-20 ಮಿಲಿಯನ್ ಟನ್ಗಳಷ್ಟು ಪ್ಲಾಸ್ಟಿಕ್ ಸಾಗರಗಳಿಗೆ ಸೇರುತ್ತಿವೆ. ಇತ್ತೀಚೆಗಿನ ಅಧ್ಯಯನವೊಂದರ ಪ್ರಕಾರ ಒಟ್ಟು 2,68,940 ಟನ್ ತೂಕದ ಅಂದಾಜು 5.25 ಟ್ರಿಲಿಯನ್ ಪ್ಲಾಸ್ಟಿಕ್ ಕಣಗಳು ವಿಶ್ವದಾದ್ಯಂತ ಸಾಗರಗಳಲ್ಲಿ ತೇಲಾಡುತ್ತಿವೆ ಎಂದು ವರ್ಲ್ಡ್ ವಾಚ್ ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.
ಆದರೆ ವಿಶೇಷವಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯ ವಿಚಾರದಲ್ಲಿ ನಾವು ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರಯತ್ನಿಸಿದಲ್ಲಿ ವಿಶ್ವವನ್ನು ಬದಲಿಸಲು ಸಾಧ್ಯವಿದೆ. ಜರ್ಮನ್ ಸ್ಟಾರ್ಟ್ ಅಪ್ ‘ಲೀಫ್ ರಿಪಬ್ಲಿಕ್’ ಈ ಕಲ್ಪನೆಗೆ ಉದಾಹರಣೆಯಾಗಿದೆ.
ಎಲೆಗಳಿಂದ ದೀರ್ಘ ಬಾಳ್ವಿಕೆಯ, ಜೈವಿಕ ವಿಘಟನೆ (bio-degradable) ಹೊಂದಬಲ್ಲ, ಪರಿಸರ ಸ್ನೇಹಿ ಪ್ಲೇಟ್ಗಳನ್ನು ತಯಾರಿಸುವುದು ಈ ಸಂಸ್ಥೆಯ ಉದ್ಯಮವಾಗಿದೆ. ತಾಳೆ ಜಾತಿಯ ಮರ, ಎಲೆ, ಎಲೆಯಿಂದ ತಯಾರಿಸಿದ ಪೇಪರ್ಗಳನ್ನು ಬಳಸಿ ಒಟ್ಟಾಗಿ ಹೊಲಿದ ೩ ಪದರಗಳ ಪ್ಲೇಟ್ ತಯಾರಿಸಲಾಗುತ್ತದೆ. ಇದಕ್ಕೆ ಯಾವುದೇ ಕೃತಕ ವಸ್ತುಗಳು, ರಾಸಾಯನಿಕಗಳು, ಪ್ಲಾಸ್ಟಿಕ್, ಮಿಶ್ರ ಉತ್ಪನ್ನಗಳನ್ನು ಬಳಸಲಾಗುವುದಿಲ್ಲ. ಈ ಎಲೆಗಳನ್ನು ದಕ್ಷಿಣ ಅಮೇರಿಕಾ ಮತ್ತು ಏಷ್ಯಾದ ಕಾಡುಗಳಿಂದ ಪಡೆಯಲಾಗುತ್ತಿವೆ.
ಲೀಫ್ ರಿಪಬ್ಲಿಕನ್ನ ಈ ಉತ್ಪನ್ನ ಒಂದು ವರ್ಷದ ವರೆಗೂ ಬಾಳ್ವಿಕೆ ಹೊಂದಿದೆ. ಇದು ಮೈಕ್ರೋವೇವ್ ಓವನ್ಗಳಿಗೆ ಬಳಸಲು ಸುರಕ್ಷಿತವಾಗಿವೆ. ಇವು ನೀರಿನಲ್ಲಿ ತೊಳೆಯಬಹುದಾದ ವಾಟರ್ ಪ್ರೂಫ್ ಜೊತೆ ಮರುಬಳಕೆ ಪ್ಲೇಟ್ಗಳಾಗಿವೆ. ಈ ಪ್ಲೇಟ್ಗಳು ಒಂದು ತಿಂಗಳ ಒಳಗೆ ಮಣ್ಣಿನಲ್ಲಿ ಸೇರಿಕೊಂಡು ನಾಶವಾಗುತ್ತವೆ.
ಇಂತಹ ಒಂದು ಸರಳ ಕಲ್ಪನೆ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಬಲ್ಲ ಪ್ಲಾಸ್ಟಿಕ್ನಂತಹ ವಸ್ತುಗಳ ವಿರುದ್ಧ ಹೋರಾಡಿ ವಿಶ್ವವನ್ನು ರೂಪಾಂತರಗೊಳಿಸುವ ಎಲ್ಲ ಸಾಮರ್ಥ್ಯವನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.