ತುಂಡುಡುಗೆಯ ರಾಜಬೀದಿಯಲ್ಲಿ ಲಂಡ ಪಂಜೆಯ ಫಕೀರನ ಕಂಡು ಒಂದು ಕ್ಷಣ ದಂಗಾದೆ. ಕೈಯಲ್ಲಿದ್ದ ಅದ್ಯಾವುದೋ ಒಂದು ಗಂಟನ್ನು ರಸ್ತೆ ಬದಿಯಲ್ಲೇ ಇಟ್ಟ ಅಜ್ಜ, ನಿಟ್ಟುಸಿರು ಬಿಟ್ಟು ಹೆಜ್ಜೆ ಹಾಕಿದ. ಅಜ್ಜಾ ನೀನಿಲ್ಲಿ ಎಂದು ತುಸು ಆಶ್ಚರ್ಯದಿಂದಲೇ ಪ್ರಶ್ನಿಸಿದೆ. ಮುಗುಳ್ನಕ್ಕ ಅಜ್ಜ ಸುಮ್ಮನೆ ಎಂದು ಕೋಲಿಗೆ ಬುದ್ಧಿ ಹೇಳಿದ. ಇಟ್ಟ ಗಂಟಿನ ಗುಟ್ಟೂ ಗೊತ್ತಾಗಲಿಲ್ಲ.
ಅಯ್ಯೋ.. ಆ ರೋಡ್ ಇರೋದೆ ಅವನದಲ್ವಾ..? ಅದೇ ಮಹಾತ್ಮ ಗಾಂಧಿ ರಸ್ತೆ. ತನ್ನ ದಾರಿಗುಂಟ ಹೊರಟವರ ಜಾಡು ಹಿಡಿದು ನಡೆದ. ಅವನಿಗ್ಯಾಕೆ ಇಲ್ಲಿ ಬರುವ ಹುಚ್ಚು ಹೊಕ್ಕಿತೊ ಗೊತ್ತಿಲ್ಲ, ಬಹು ಸಂಸ್ಕೃತಿಗೆ ತೆರೆದುಕೊಂಡ ಬೆಂದಕಾಳೂರಿನ ಸ್ವಾಗತಕ್ಕೆ ಅಜ್ಜ ತುಸು ದಂಗಾದ.
ಫುಟ್ಪಾತ್ಗುಂಟ ಹೊರಟ ಅಜ್ಜ ಬಳಲಿದಂತೆ ಕಂಡ. ಕುಳಿತುಕೊಳ್ಳಬೇಕೆಂದರೆ ಪುಟ್ಟ ಕಟ್ಟಿಯೂ ಆತನಿಗೆ ಸಿಗಲಿಲ್ಲ. ಅದು ಅವನದೇ ರಸ್ತೆ. ಆದರೆ ಅದೇನು ಅಜ್ಜನ ಪ್ರೀತಿಯ ಗ್ರಾಮ ಅಲ್ಲವಲ್ಲ. ಸಿಲಿಕಾನ್ ಸಿಟಿ ಅದು. ಸಾವರಿಸಿಕೊಂಡ ಅಜ್ಜ ಮುಂದೆ ಹೋದ. ತನ್ನ ರಸ್ತೆಗೆ ಹೊಂದಿಕೊಂಡಿರುವ ಬ್ರಿಗೇಡ್ ರೋಡ್ ಬಳಿ ಬಂದ. ಕನ್ನಡಕ ಸರಿಪಡಿಸಿಕೊಂಡ ಅಜ್ಜ ಮತ್ತೆ ಹೊರಟ.
ಹೇಳಿ ಕೇಳಿ ಅಂದು ನ್ಯೂ ಇಯರ್ ಸೆಲೆಬ್ರೇಶನ್. ಭಲೆ ರಂಗು ರಂಗಾದ ರಸ್ತೆಯಲ್ಲಿ ಅರೆಬೆತ್ತಲೆ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ಅರೆಬರೆ ಬಟ್ಟೆ ತೊಟ್ಟ ಯುವತಿಯರ ಸುತ್ತ ಪಡ್ಡೆ ಹುಡುಗರ ಗ್ಯಾಂಗ್ ಬೇರೆ. ಝಗಮಗಿಸುವ ವಿದ್ಯುದ್ದೀಪ, ಎದೆ ನಡುಗಿಸುವ ಧ್ವನಿ ವರ್ಧಕ, ತಾರಕ್ಕೇರುತ್ತಿರುವ ಯುವ ಜನತೆಯ ಲೋಲಾಟ. ಆದರೂ, ಜನಸಾಗರದ ಮಧ್ಯೆ ತೂರಿ ಹೋಗುತ್ತಿರುವ ಅಜ್ಜನ ನಡೆ ಮಾತ್ರ ನಿಗೂಢವಾಗಿತ್ತು. ನಾನು ಹಿಂಬಾಲಿಸಿದೆ.
ಅರೆಬೆತ್ತಲೆ ಫಕೀರನನ್ನು ಕಂಡ ತುಂಡುಡುಗೆಯ ರಾಜಬೀದಿ ತುಸು ನಕ್ಕಿತು. ಮೊಣಕಾಲು ಕಾಣಿಸುವ ಸೊಣಕಲು ದೇಹದ ಅಜ್ಜನ ಅರೆಬೆತ್ತಲಿಗೂ, ಭೋಗದ ದಾಸ್ಯಕ್ಕೆ ಶರಣಾದವರ ನಳ ನಳಿಸುವ ತೊಡೆಯ ತುಂಡುಡುಗೆಗೂ ಇರುವ ವ್ಯತ್ಯಾಸ ಅರಿವಿಗೆ ಬಂದಿರಬೇಕು. ತಲೆ ತಗ್ಗಿಸಿ ಅಜ್ಜನ ಹೆಜ್ಜೆಗೆ ಅರ್ಥ ಹುಡುಕುತ್ತ ಬೀದಿ ಗಂಭೀರವಾಯಿತು.
ಎಂ.ಜಿ.ರೋಡ್, ಬ್ರಿಗೇಡ್ ರೋಡ್ ತುಂಬ ಜಮಾಯಿಸಿದ ಜನ, ಉಸಿರು ಬಿಗಿ ಹಿಡಿದು 12 ಗಂಟೆ ಆಗುವುದನ್ನೇ ಕಾಯುತ್ತ ನಿಂತವರು ಅವರೆಲ್ಲ. ಪಾಪ, ಆಂಗ್ಲರ ಕಪಿಮುಷ್ಟಿಯಿಂದ ರಾತ್ರಿ 12 ಗಂಟೆಗೆ ಸ್ವಾತಂತ್ರ್ಯ ಪಡೆದ ನೆನಪು ಮರುಕಳಿಸಿರಬೇಕು ಅಜ್ಜನಿಗೆ. ಅಂತರ್ಧ್ಯಾನಿಯಾದಂತೆ ಕಂಡ ಅಜ್ಜ. ಹೊಸ ವರ್ಷ ಬಂದಿತಂತೆ. ಕಣ್ಣು ತೆರೆವ ಕ್ಷಣ ಎಲ್ಲೆಲ್ಲೂ ಕತ್ತಲು. ಈ ಕತ್ತಲು ಬೆಳಕಿನಾಟ ಅಜ್ಜನನ್ನು ಅಣಕಿಸಿದ ಭಾವ ಅಲ್ಲಿತ್ತು.
ತೋಳ ತೆಕ್ಕೆಯಲಿ ಸಿಕ್ಕು ನ(ನು)ಲಿವ ಗಂಡು ಹೆಣ್ಣುಗಳ, ನಿಂತಲ್ಲೇ ನಿಂತು ಕುಣಿವ ಸಂಭ್ರಮಿಗಳ, ಕೇಕೆ ಹಾಕುವವರ, ಸಿಳ್ಳೆ ಹೊಡೆಯುವವರ, ತಬ್ಬಿಕೊಂಡು ಮು(ಮ) ತ್ತಿನ ಮಳೆಗರೆಯುವವರ ಕಂಡ ಅಜ್ಜ ಕೋಲು ಎತ್ತೇ ಬಿಟ್ಟ. ಇನ್ನೇನು ಲಾಠಿ ಪ್ರಹಾರವಾಯಿತೆಂದೇ ಭಾವಿಸಿದ್ದೆ. ಆದರೆ, ನೆಲಕ್ಕೆರಡು ಬಾರಿ ಕುಕ್ಕಿ ಮುನ್ನಡೆದ. ಅಜ್ಜ ನಿರ್ಭಾವುಕನಾಗಿದ್ದ.
ಅಜ್ಜನ ಪಯಣ ಸಾಗಿದ್ದು ಪಬ್ನ ಕಡೆಗೆ. ಒಂದು ಕ್ಷಣ ದಂಗಾದೆ. ಪಬ್ನಲ್ಲಿ ಇವನಿಗೇನು ಕೆಲಸ ? ನಾನೂ ಬಿಡಲಿಲ್ಲ, ಅಜ್ಜನನ್ನೇ ಹಿಂಬಾಲಿಸಿದೆ. ಅಬ್ಬಾ ಭೋಗದ ಜಗತ್ತು, ಥಳಕು ಬಳಕಿನ ಪ್ರಪಂಚದಲ್ಲಿ, ಪಾತರಗಿತ್ತಿಗಳನ್ನೂ ನಾಚಿಸುವ ಪುಟ್ಟ ಹೈಟಿನ ಹುಡುಗಿಯರು. ಎದೆ ಝಲ್ಲೆನ್ನುವ ಸಾಂಗ್ಗೆ ಮೈಮಾಟ ಪ್ರದರ್ಶಿಸುವ ಮಾದಕ ಲಲನೆಯರು, ಅದೊಂದು ಉನ್ಮಾದದ ಲೋಕ. ಸದ್ದಿಲ್ಲದೇ ಹೊರಬಂದ ಅಜ್ಜ ಮತ್ತೆ ನಕ್ಕ. ವಿಷಾದದ ಛಾಯೆ ಗಾಢವಾಗಿತ್ತು.
ಜಾನ್ ರಸ್ಕಿನ್ರ ಅನ್ ಟುದಿ ಲಾಸ್ಟ್ ಕೃತಿ ಓದಿದ ನಂತರ ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದ ಅಜ್ಜ, ದಕ್ಷಿಣ ಆಫ್ರಿಕಾದಿಂದ ಬಂದ ಮೇಲಂತೂ ವಿದೇಶಿ ಉಡುಪುಗಳಿಗೆ ತಿಲಾಂಜಲಿಯನ್ನೇ ಇಟ್ಟಿದ್ದನಂತೆ. ಗುಂಡು ತುಂಡುಗಳ ಸಹವಾಸ ಒಳಿತಲ್ಲ ಎಂದು ಸಾರಿದ್ದ ಅಜ್ಜನಿಗೆ ಏನನ್ನಿಸಿತೋ ಗೊತ್ತಿಲ್ಲ, ಬಂದ ದಾರಿ ಅರಸಿ ಹೊರಟ.
ಹೊಸ ವರುಷ ಬಂದಾಗಿತ್ತು. ಚುಮು ಚುಮು ಬೆಳಕು, ಸುಳಿವ ತಂಗಾಳಿ, ನಿದ್ದೆಗೆಟ್ಟ ಅಜ್ಜನಿಗೆ ಮಬ್ಬು ಆವರಿಸಿತ್ತು. ತನ್ನ ರಸ್ತೆ ಅಂಚಿಗೆ ಬಂದು, ಇಟ್ಟ ಗಂಟಿನ ಬಳಿ ಒರಗಿ ತುಸು ನಿದ್ದೆಗೆ ಜಾರಿದ. ಅಜ್ಜನ ಹಿಂಬಾಲಿಸಿ ಸಾಧಿಸಿದ್ದೇನೋ ಗೊತ್ತಾಗಲಿಲ್ಲ, ನಿದ್ದೆಗೆಟ್ಟದ್ದು ಮಾತ್ರ ಸತ್ಯ. ಅಜ್ಜನ ಸಹವಾಸ ಸಾಕಿನ್ನು ಎಂದು ಹೊರಡಲನುವಾದೆ. ಅಜ್ಜನೂ ಎದ್ದ, ಪಾಪ, ಮತ್ತೊಮ್ಮೆ ತನ್ನ ರಸ್ತೆಯನ್ನು ದಿಟ್ಟಿಸಿ ನೋಡಿದ.
ಗಂಟಿನ ಗುಟ್ಟೇ ತಿಳಿಯಲಿಲ್ಲ. ಅಜ್ಜನನ್ನು ಪ್ರಶ್ನಿಸಿಯೇ ಬಿಟ್ಟೆ. ನಿನ್ನ ಹೆಸರಿನ ರಸ್ತೆಗೊಮ್ಮೆ ಹೋಗಿ ಬಾ, ಆದರೆ, ನಿನ್ನೆಲ್ಲ ಆದರ್ಶಗಳ ಒಂದು ಗಂಟು ಕಟ್ಟಿಟ್ಟೇ ಅಲ್ಲಿಗೆ ಹೋಗು ಎಂದು ಯಾರೋ ಹೇಳಿದ್ದರಂತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.