ಹುಬ್ಬಳ್ಳಿ: ತವಾಂಗ್ ಯಾತ್ರೆ, ಅದೊಂದು ಪಿಕ್ನಿಕ್ ಅಲ್ಲ, ತೀರ್ಥಯಾತ್ರೆ, ಅಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ವೈಶಿಷ್ಟ್ಯ ಹೊಂದಿರುವ ಅದು ನಿಜಕ್ಕೂ ರಾಷ್ಟ್ರೀಯತೆಯ ಸಾಕ್ಷಿ ಪ್ರಜ್ಞೆಯೇ ಸರಿ ಎಂದು ಮಂಗಳೂರಿನ ಅಕ್ಷರೋದ್ಯಾಮದ ಮುಖ್ಯಸ್ಥ ಹಾಗೂ ತವಾಂಗ್ ಯಾತ್ರಿಕ ಸುನೀಲ್ ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾ ಭವನದಲ್ಲಿ ಶುಕ್ರವಾರ ವೈಬ್ರಂಟ್ ಇಂಡಿಯಾ ಹಾಗೂ ಭಾರತ್ ಟಿಬೆಟ್ ಸಹಯೋಗ್ ಮಂಚ್, ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ’ತವಾಂಗ್ ಯಾತ್ರೆ-೨೦೧೬ ರ ನೆನಪುಗಳ ಮೆಲಕು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ತವಾಂಗ್ ಯಾತ್ರೆಯ ತಮ್ಮ ಅನುಭವ ಹಂಚಿಕೊಂಡ ಅವರು, ಮಾತಾ ಕಾಮಾಕ್ಯ ಮಂದಿರ, ಗುವಾಹಟಿ, ಅಗ್ನಿಘಡ್, ತೇಜ್ಪುರ್, ಭಾಲುಕ್ಪೊಂಗ್, ಅರುಣಾಚಲ್ ಗಡಿ, ಬೋಮ್ಡಿಲಾ, ಜಸ್ವಂತಘಡ್, ಶಹೀದ್ ಸ್ಮಾರಕ, ತವಾಂಗ್, ತವಾಂಗ್ ಬೌದ್ಧ ಮಂದಿರ, ವೀರ ಯೋಧರ ಹೆಸರಿನಲ್ಲಿನ ದೇವಸ್ಥಾನ ಇತ್ಯಾದಿಗಳ ಮಹತ್ವ ಕುರಿತು ವಿವರಿಸಿದರು.
ಮುಂಬರುವ ದಿನಗಳಲ್ಲಿ ಅಮರಾನಾಥ ಯಾತ್ರೆ, ಚಾರಧಾಮ ಯಾತ್ರೆ ಮುಂತಾದ ಯಾತ್ರೆಗಳಂತೆ ರಾಷ್ಟ್ರೀಯ ಮಹತ್ವದ ಯಾತ್ರೆಯಾಗಿ ಇಡೀ ಈಶಾನ್ಯ ಭಾರತವನ್ನು ಭಾರತದ ಬಾಕಿ ಭೂಪ್ರದೇಶ ಹಾಗೂ ಜನರೊಂದಿಗೆ ಭಾವನಾತ್ಮಕ ಬೆಸುಗೆಗೆ ನಾಂದಿ ಹಾಡಲಿದೆ ಎಂದೂ ಅವರು ಹೇಳಿದರು.
ಐತಿಹಾಸಿಕ ಪ್ರಜ್ಞೆಯ ಜಾಗೃತಿ
ತವಾಂಗ್ ಯಾತ್ರೆ ; ಐತಿಹಾಸಿಕ ಪ್ರಜ್ಞೆಯ ಜಾಗೃತಿ ಕುರಿತು ಮಾತನಾಡಿದ, ವೈಬ್ರಂಟ್ ಇಂಡಿಯಾದ ಸಂಸ್ಥಾಪಕ ಜಿತೇಂದ್ರ ನಾಯಕ್ ಅವರು, ತವಾಂಗ್ ಎಂದರೆ, ಎಲ್ಲಿದೆ ? ಅದೊಂದು ಪ್ರತ್ಯೇಕ ದೇಶವಾ? ಅದು ಭಾರತದಲ್ಲಿದೆಯಾ? ಎಂದು ಕೇಳುವವರೇ ಹೆಚ್ಚು ಎಂದು ಖೇದ ವ್ಯಕ್ತಪಡಿಸಿದರು.
ಚೀನಾ ತಮ್ಮದೆನ್ನುವ ಭಾರತದ ಅರುಣಾಚಲ ಪ್ರದೇಶದಲ್ಲಿ ತವಾಂಗ್ ಇದೆ. ತವಾಂಗ್ ಪ್ರದೇಶವನ್ನು ಆಳಿದ ರಾಜರುಗಳು, ಅಲ್ಲಿನ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ವೈಭವಗಳ ಕುರಿತು ಅನೇಕ ಐತಿಹಾಸಿಕ, ಪೌರಾಣಿಕ ಅಂಶಗಳ ಮೇಲೆ ಬೆಳಕು ಚೆಲ್ಲುವ ಮೂಲಕ, ಅದೊಂದು ಅಪ್ಪಟ ಹಿಂದೂ ಪ್ರದೇಶ ಎಂದು ಜಿತೇಂದ್ರ ನಾಯಕ್ ಹೇಳಿದರು.
ಅಲೆಕ್ಸಾಂಡರ್, ವಾಸ್ಕೊಡಿಗಾಮ ರಿಂದ ಆರಂಭವಾಗುವ ಇತಿಹಾಸ ಮಾತ್ರ ನಮಗೆ ಗೊತ್ತು, ಬಾಬರ್, ಹುಮಾಯೂನ್, ಶಹಜಹಾನ್, ಔರಂಗಜೇಬ್ ಮುಂತಾದ ಮೊಘಲರ ಆಳ್ವಿಕೆ ಬಗ್ಗೆ ನಮಗೆ ಇತಿಹಾಸ ಪಾಠ ಮಾಡಿದೆ. ಆದರೆ, ನಮ್ಮ ನೆಲದ ನೈಜ ವೀರ ಇತಿಹಾಸ ತಿಳಿಸುವ ಶಿಕ್ಷಣ ಪದ್ಧತಿ ನಮ್ಮಲ್ಲಿ ಇಲ್ಲದಿರುವುದು ದುರಂತ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ್ ಟಿಬೆಟ್ ಸಹಯೋಗ್ ಮಂಚ್ನ ರಾಷ್ಟ್ರೀಯ ಕಾರ್ಯದರ್ಶಿ ಅಮೃತ್ ಜೋಶಿ ಅವರು, ಚೀನಾ ದೇಶ ಕಬಳಿಸಿರುವ ಭಾರತದ ಭೂಪ್ರದೇಶ ಹಾಗೂ ಟಿಬೇಟ್ ದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಬಗ್ಗೆ ಭಾರತೀಯರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ ಟಿಬೇಟ್ ಸಹಯೋಗ ಮಂಚ್ 2012 ರಿಂದ ಆಯೋಜಿಸುತ್ತಿರುವ ವಾರ್ಷಿಕ ತವಾಂಗ್ ಯಾತ್ರೆ 18 ನವೆಂಬರ್ 2016 ಅಸ್ಸಾಂನ ಗುವಾಹತಿಯಿಂದ ಪ್ರಾರಂಭವಾಯಿತು ಎಂದರು.
1950 ರಲ್ಲಿ ಚೀನಾ ಟಿಬೇಟ್ ಮೇಲೆ ಸೈನಿಕ ಆಕ್ರಮಣ ಮಾಡಿ ಅದನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಪರಿಣಾಮವಾಗಿ ಟಿಬೇಟ್ ದೇಶದ ಸರ್ವೋಚ್ಚ ಧಾರ್ಮಿಕ ನಾಯಕ ದಲಾಯಿ ಲಾಮಾ ಸಹಿತವಾಗಿ ಲಕ್ಷಾಂತರ ಟಿಬೇಟಿಯನ್ನರು ದೇಶಭ್ರಷ್ಟರಾಗಿ ಭಾರತ ಸಹಿತ ವಿಶ್ವದ ಅನೇಕ ದೇಶಗಳಲ್ಲಿ ನಿರಾಶ್ರಿತರಾಗಿ ಜೀವನ ಕಳೆಯುತ್ತಿದ್ದಾರೆ ಎಂದರು.
1962ರಲ್ಲಿ ಚೀನಾ ಭಾರತದ ಮೇಲೂ ಆಕ್ರಮಣ ನಡೆಸಿ ಸಾವಿರಾರು ಕಿ.ಮಿ.ವಿಸ್ತೀರ್ಣದ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಭಾರತದ ಸಂಸತ್ತು ಈ ಭೂಪ್ರದೇಶವನ್ನು ಮರಳಿ ಪಡೆಯಬೇಕೆಂದು ನಿರ್ಣಯ ಸ್ವೀಕರಿಸಿದೆ. ದೇಶದ ಸಂಸತ್ತು ಸ್ವೀಕರಿಸಿರುವ ಈ ಸಂಕಲ್ಪವನ್ನು ಸ್ಮರಿಸಲು ಹಾಗೂ ಜನಜಾಗೃತಿ ಮೂಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ಹಾಗೂ ಭಾರತ್ ಟಿಬೇಟ್ ಸಹಯೋಗ ಮಂಚ್ ಇದರ ಸಂರಕ್ಷರು ಆಗಿರುವ ಇಂದ್ರೇಶ್ ಕುಮಾರ ಅವರ ಕಲ್ಪನೆಯ ಕೂಸಾಗಿ ವಾರ್ಷಿಕ ತವಾಂಗ್ ಯಾತ್ರೆ 2012 ರಿಂದ ನಿರಂತರವಾಗಿ ಪ್ರತಿವರ್ಷ ನಡೆಯುತ್ತ ಬಂದಿದೆ ಎಂದು ಜೋಶಿ ಅವರು ಹೇಳಿದರು.
ತವಾಂಗ್ ಯಾತ್ರೆಯ ನೆನಪುಗಳ ಮೆಲಕು- ಕುರಿತು ಸಾಕ್ಷ್ಯಚಿತ್ರವನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ಉತ್ತರ ಪ್ರಾಂತದ, ಪ್ರಾಂತ ಪ್ರಚಾರಕರಾದ ಶಂಕರಾನಂದಜಿ, ರಾ.ಸ್ವ.ಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತ, ಸಹ ಪ್ರಾಂತ ಪ್ರಚಾರಕರಾದ ಸುಧಾಕರಜಿ, ವಿಆರ್ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.
ಯಾತ್ರಾರ್ಥಿ ಹಾಗೂ ಭಾರತ್ ಟಿಬೇಟ್ ಸಹಯೋಗ್ ಮಂಚ್ನ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮಠ ವಂದಿಸಿದರು. ಅಪರ್ಣಾ ಪಟವರ್ಧನ್ ವಂದೇಮಾತರಂ ಪ್ರಸ್ತುತಪಡಿಸಿದರು. ಅಂಬರೀಷ ಹಾನಗಲ್ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.