
ಕ್ರೀಡಾಕೂಟಗಳು ಜಾಗತಿಕ ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸಾಕಾರಗೊಳಿಸುತ್ತವೆ. ಆದರೆ ಇಂತಹ ಕ್ರೀಡಾಕೂಟಗಳೇ ಹಲವು ಬಾರಿ ಇಸ್ಲಾಮಿ ಭಯೋತ್ಪಾದಕರ ಕ್ರೂರತೆಗೆ ಬಲಿಯಾದ ಉದಾಹರಣೆಗಳೂ ಇವೆ. ಮಾರ್ಚ್ 3, 2009 ರಂದು ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಲಾಹೋರ್ನಲ್ಲಿ ನಡೆದ ದಾಳಿಯ ಬಗ್ಗೆ ನಾವೆಲ್ಲ ತಿಳಿದೇ ಇದ್ದೇವೆ. ಈ ದಾಳಿ ನಡೆದು 17 ವರ್ಷ ತುಂಬುತ್ತಿರುವ ಸಂದರ್ಭ ನಾವು 1972 ರ ಮುನಿಚ್ ಒಲಿಂಪಿಕ್ಸ್ ಹತ್ಯಾಕಾಂಡದ ಬಗ್ಗೆ ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ . ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಿನ ದಾಳಿ ಮತ್ತು ಮುನಿಚ್ ಒಲಿಂಪಿಕ್ ಮೇಲಿನ ದಾಳಿಗಳಲ್ಲಿ ಉಗ್ರಗಾಮಿಗಳು ಭಯವನ್ನು ಬಿತ್ತಲು ಮತ್ತು ಅಂತರರಾಷ್ಟ್ರೀಯ ಬಂಧಗಳನ್ನು ಮುರಿಯಲು ಕ್ರೀಡೆಯೆಂಬ ಸದ್ಭಾವನೆಯ ಸಂಕೇತಗಳನ್ನು ಹೇಗೆ ಛಿದ್ರಗೊಳಿಸಿದರು ಎಂಬುದನ್ನು ಅರಿಯುವುದು ಮುಖ್ಯವಾಗುತ್ತದೆ..
1972ರ ಮ್ಯೂನಿಚ್ ಒಲಿಂಪಿಕ್ಗಳಲ್ಲಿ ಇಸ್ರೇಲ್ ಆಟಗಾರರ ಮೇಲೆ ನಡೆದ ದಾಳಿಯು ಆಧುನಿಕ ಒಲಿಂಪಿಕ್ ಇತಿಹಾಸದ ಅತ್ಯಂತ ದುಃಖದಾಯಕ ಮತ್ತು ಆಘಾತಕಾರಿ ಘಟನೆಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 5, 1972ರ ಬೆಳಗ್ಗೆ 4:30ರ ಸುಮಾರಿಗೆ, ಪ್ಯಾಲೆಸ್ಟೈನ್ನ ಉಗ್ರ ಸಂಘಟನೆಯಾದ ಬ್ಲ್ಯಾಕ್ ಸೆಪ್ಟೆಂಬರ್ಗೆ ಸೇರಿದ ಎಂಟು ಭಯೋತ್ಪಾದಕರು ಒಲಿಂಪಿಕ್ ವಿಲೇಜ್ನ ಆರು ಅಡಿ ಎತ್ತರದ ಬೇಲಿಯನ್ನು ಏರಿ ಇಸ್ರೇಲ್ ತಂಡದ ವಸತಿ ಕಟ್ಟಡಗಳಿಗೆ ನುಗ್ಗಿದರು. ಆತಿಥೇಯರಂತೆ ವೇಷಭೂಷಣ ಧರಿಸಿ, ಕೀಲಿಗಳನ್ನು ಬಳಸಿ ಎರಡು ಅಪಾರ್ಟ್ಮೆಂಟ್ಗಳೊಳಗೆ ಪ್ರವೇಶಿಸಿದರು. ಆರಂಭದಲ್ಲಿ ರಸ್ಲಿಂಗ್ ಕೋಚ್ ಮೋಶೆ ವೈನ್ಬರ್ಗ್ ಮತ್ತು ಇನ್ನೊಬ್ಬ ಸದಸ್ಯನನ್ನು ಗುಂಡಿಟ್ಟು ಕೊಂದರು. ಉಳಿದ ಒಂಬತ್ತು ಇಸ್ರೇಲಿ ಆಟಗಾರರು, ಕೋಚ್ಗಳು ಮತ್ತು ಅಧಿಕಾರಿಗಳನ್ನು ಬಂಧಿಗಳನ್ನಾಗಿ ಮಾಡಿಕೊಂಡರು. ಭಯೋತ್ಪಾದಕರು ಇಸ್ರೇಲ್ ಸರ್ಕಾರಕ್ಕೆ ತಮ್ಮ 200ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಖೈದಿಗಳನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟರು. ಈ ಘಟನೆಯು ಒಲಿಂಪಿಕ್ ಆಟಗಳನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿತು ಮತ್ತು ವಿಶ್ವದಾದ್ಯಂತ ನೇರ ಪ್ರಸಾರದಲ್ಲಿ ಈ ಘಟನೆಗೆ ಜನರು ಸಾಕ್ಷಿಯಾದರು.
ಸಂಧಾನಗಳು ವಿಫಲವಾದ ನಂತರ, ಜರ್ಮನ್ ಪೊಲೀಸರು ರಾತ್ರಿ ಫರ್ಸ್ಟನ್ಫೆಲ್ಡ್ಬ್ರಕ್ ವಿಮಾನ ನಿಲ್ದಾಣದಲ್ಲಿ ಬಂಧಿಗಳನ್ನು ಮುಕ್ತಗೊಳಿಸುವ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಆದರೆ ಈ ಯೋಜನೆಯು ಸಂಪೂರ್ಣವಾಗಿ ವಿಫಲವಾಯಿತು—ಪೊಲೀಸ್ ತಂಡದ ಸಂಖ್ಯೆ ಕಡಿಮೆಯಾಗಿದ್ದು, ಸರಿಯಾದ ತರಬೇತಿ ಇರಲಿಲ್ಲ. ಗುಂಡಿನ ದಾಳಿ ಮತ್ತು ಗೊಂದಲದಲ್ಲಿ ಎಲ್ಲಾ ಒಂಬತ್ತು ಇಸ್ರೇಲಿ ಬಂಧಿಗಳು ಸಾವನ್ನಪ್ಪಿದರು, ಐದು ಭಯೋತ್ಪಾದಕರು ಮತ್ತು ಒಬ್ಬ ಜರ್ಮನ್ ಪೊಲೀಸ್ ಅಧಿಕಾರಿಯನ್ನು ಕೂಡ ಸಾಯಲಾಯಿತು. ಒಟ್ಟು 11 ಇಸ್ರೇಲಿ ಸದಸ್ಯರು (ಆಟಗಾರರು ಮತ್ತು ಕೋಚ್ಗಳು) ಮತ್ತು ಇತರರು ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು. ಈ ಘಟನೆಯು ಒಲಿಂಪಿಕ್ ಆಟಗಳ “ಶಾಂತಿ ಮತ್ತು ಸ್ನೇಹ”ದ ಆದರ್ಶವನ್ನು ಛಿದ್ರಗೊಳಿಸಿತು ಮತ್ತು ಇಸ್ರೇಲ್ ಸರ್ಕಾರವು ನಂತರ “ಆಪರೇಷನ್ ರೈಥ್ ಆಫ್ ಗಾಡ್” ಎಂಬ ರಹಸ್ಯ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರನ್ನು ಹಿಂಬಾಲಿಸಿತು. ಇದು ಆಧುನಿಕ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಂದು ಪ್ರಮುಖ ಘಟನೆಯಾಗಿ ಉಳಿದಿದೆ.
ಈ ಘಟನೆ ನಡೆದ ಸುಮಾರು ನಾಲ್ಕು ದಶಕಗಳ ನಂತರ, ಮಾರ್ಚ್ 3, 2009 ರಂದು ಪಾಕಿಸ್ಥಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದರು. ಬಸ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೂರನೇ ದಿನಕ್ಕಾಗಿ ಶ್ರೀಲಂಕಾ ಆಟಗಾರರನ್ನು ಹೊತ್ತು ಗಡಾಫಿ ಕ್ರೀಡಾಂಗಣವನ್ನು ಸಮೀಪಿಸುತ್ತಿದ್ದಂತೆ ಹೊಂಚುದಾಳಿಯೊಂದು ನಡೆದು ಬೆಳಗಿನ ಶಾಂತತೆಯನ್ನು ಕದಡಿತು. ಸುನ್ನಿ ಉಗ್ರವಾದ ಮತ್ತು ತೆಹ್ರಿಕ್-ಇ-ತಾಲಿಬಾನ್ಗೆ ಸಂಬಂಧಿಸಿದ ಹನ್ನೆರಡು ಲಷ್ಕರ್-ಎ-ಜಾಂಗ್ವಿ ಬಂದೂಕುಧಾರಿಗಳು, ಪಾಕಿಸ್ತಾನದ ವಿಐಪಿ ಭದ್ರತೆಯ ಹೊರತಾಗಿಯೂ ಕ್ರೀಡಾಪಟುಗಳ ಮೇಲೆ ದಾಳಿ ನಡೆಸಿದರು. ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ ಮತ್ತು ತಿಲನ್ ಸಮರವೀರರಂತಹ ಆಟಗಾರರ ಜೀವ ಅಕ್ಷರಶಃ ಅಪಾಯಕ್ಕೆ ಸಿಲುಕಿತ್ತು. ಘಟನೆಯಲ್ಲಿ ಆರು ಪೊಲೀಸರು ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದರು, ಬಸ್ ಚಾಲಕ 500 ಮೀಟರ್ ವೇಗವಾಗಿ ಸುರಕ್ಷಿತ ಸ್ಥಳಕ್ಕೆ ಬಸ್ ಕೊಂಡೊಯ್ದ ಪರಿಣಾಮ ಆಟಗಾರರ ಜೀವ ಉಳಿದಿತ್ತು.
ಈ ಘಟನೆ ಪಾಕಿಸ್ಥಾನದ ಭದ್ರತೆಯ ನೈಜಮುಖವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿತ್ತು. ವಿವಿಐಪಿ ಭದ್ರತೆಯ ಭರವಸೆ ನೀಡಿ ಅದು ಶ್ರೀಲಂಕಾ ಆಟಗಾರರನ್ನು ತನ್ನ ನೆಲಕ್ಕೆ ಕರೆಸಿತ್ತು. ಆದರೆ ಅದರ ಭರವಸೆ ನಂಬಿ ಬಂದಿದ್ದ ಆಟಗಾರರು ಎದುರಿಸಿದ್ದು ಜೀವನದ ಅತಿದೊಡ್ಡ ಭಯಾನಕತೆಯನ್ನು.
ಮ್ಯೂನಿಚ್ ಮತ್ತು ಪಾಕಿಸ್ಥಾನದ ಘಟನೆಗಳಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಭಯೋತ್ಪಾದಕರು ತಮ್ಮ ಗುರಿ ತಲುಪಲು ಕ್ರೀಡೆ ಮತ್ತು ಕ್ರೀಡಾಳುಗಳನ್ನು ಯಾವ ರೀತಿಯಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದನ್ನು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


