ಉತ್ತರ ಪ್ರದೇಶದ ಆಲಿಗಢದಲ್ಲಿ 1967 ನವೆಂಬರ್ 30 ರಂದು ಜನಿಸಿದ ರಾಜೀವ್ ದೀಕ್ಷಿತ್ ಅಲಹಾಬಾದ್ನಲ್ಲಿ ಶಿಕ್ಷಣ ಪಡೆದರು. ರಾಜೀವ್ ದೀಕ್ಷಿತ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದುದು ಭೋಪಾಲ್ ಅನಿಲ ದುರಂತ.
ಆಗಿನ್ನೂ ದೀಕ್ಷಿತರಿಗೆ ಕೇವಲ 17 ವರ್ಷ. ನ್ಯಾಯಾಲಯದಲ್ಲಿ ಹತ್ತಾರು ವರ್ಷ ನಡೆದ ಪ್ರಕರಣದ ವಿಚಾರಣೆಯನ್ನು ದೀಕ್ಷಿತ್ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಕೊನೆಗೊಂದು ದಿನ ತೀರ್ಪು ಪ್ರಕಟಿಸಿದ ನ್ಯಾಯಾಲಯ ಆರೋಪಿಗಳಿಗೆ ದಂಡ ವಿಧಿಸಿತ್ತಾದರೂ ಯಾರಿಗೂ ಶಿಕ್ಷೆ ನೀಡಿರಲಿಲ್ಲ. ಅಂದು ದೀಕ್ಷಿತರ ಮನಸ್ಸು ಅಕ್ಷರಶಃ ವ್ಯಗ್ರಗೊಂಡಿತ್ತು. ಇಷ್ಟೆಲ್ಲ ಜನರ ಕೊಲೆಯಾದ ನಂತರವೂ ಕೊಲೆಗಾರನಿಗೆ ಶಿಕ್ಷೆಯಾಗುವುದಿಲ್ಲ ಎಂದರೆ ಏನರ್ಥ? ಎಂದು ತಮ್ಮ ಗೆಳೆಯರ ಬಳಿ ದುಃಖ ತೋಡಿಕೊಂಡ್ದಿದರು.
ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ, ಎಲೆಕ್ಟ್ರಾನಿಕ್ ಮತ್ತು ಟೆಲಿ ಕಮ್ಯುನಿಕೇಶನ್ನಲ್ಲಿ ಬಿ.ಟೆಕ್. ಪದವಿ ಗಳಿಸಿದ ಇವರು ಪ್ರತಿಷ್ಠಿತ ಸಿಎಸ್ಆರ್ಐ ಸಂಸ್ಥೆಯಲ್ಲಿ ಎರಡು ವರ್ಷ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೂ ಸಹ ಅವರು ಕೆಲಕಾಲ ಕೆಲಸ ಮಾಡಿದ್ದರು. ಫ್ರಾನ್ಸ್ನಲ್ಲಿ ಟೆಲಿಕಮ್ಯುನಿಕೇಶನ್ ಎಂಜಿನಿಯರ್ ಆಗಿ ಉತ್ತಮ ಹುದ್ದೆಯಲ್ಲಿದ್ದ ಅವರಿಗೆ ಅಲ್ಲಿನ ಜನರ ಸ್ವಾಭಿಮಾನವೇ ಭಾರತೀಯತ್ವದ ಪುನರುತ್ಥಾನದ ಅಗತ್ಯತೆಯ ಪಾಠ ಕಲಿಸಿತ್ತು.
ಇದೇ ಸಮಯದಲ್ಲಿ ದೀಕ್ಷಿತರಿಗೆ ಗಾಂಧಿ ವಿಚಾರವಾದಿ ಧರ್ಮಪಾಲ್ ಅವರ ಪರಿಚಯವಾಯಿತು. ಭೋಪಾಲ್ ವಿಚಾರದಲ್ಲಿ ನಾನೂ ನೊಂದಿದ್ದೇನೆ. ಆದರೆ ಈ ದುರಂತ ಇಷ್ಟಕ್ಕೇ ನಿಲುವುದಿಲ್ಲ. ಯೂನಿಯನ್ ಕಾರ್ಬೈಡನಂಥ 300 ಕಂಪೆನಿಗಳು ನಮ್ಮ ದೇಶದಲ್ಲಿ ಇವೆ. ಇನ್ನೆಷ್ಟೋ ಸಾವಿರ ಕಂಪೆನಿಗಳು ಭಾರತಕ್ಕೆ ಬರಲು ಸಾಲುಗಟ್ಟಿ ನಿಂತಿವೆ ಎಂದ ಧರ್ಮಪಾಲ್ ಅವರ ಮಾತು ರಾಜೀವ್ ದೀಕ್ಷಿತರ ಬದುಕಿನಲ್ಲಿ ಮಹತ್ವದ ಪರಿವರ್ತನೆ ತಂದಿತು. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟ ದೀಕ್ಷಿತರು ಪ್ರೊ.ಧರ್ಮಪಾಲ್ ಮತ್ತು ಡಾ.ಭನ್ವರಲಾಲ್ ಅವರ ಮಾರ್ಗದರ್ಶನದಲ್ಲಿ ಅಜಾದಿ ಬಚಾವೋ ಆಂದೋಲನ (1992) ಆರಂಭಿಸಿದರು.
ಅವರ ಹರಿತ ಮಾತು, ಬಹುರಾಷ್ಟ್ರೀಯ ಕಂಪೆನಿಗಳು ಸಾಮಾನ್ಯ ಜನರಿಗೆ ಮಾಡುತ್ತಿರುವ ಮೋಸದ ವಿಶ್ಲೇಷಣೆಗಳು ಲಕ್ಷಾಂತರ ವಿಡಿಯೊ, ಆಡಿಯೊ ಧ್ವನಿಸುರುಳಿಗಳಾಗಿ, ಪುಸ್ತಕಗಳಾಗಿ ದೇಶವ್ಯಾಪಿ ಪ್ರಚಾರ ಪಡೆಯಿತು. ಆಜಾದಿ ಬಚಾವೋ ಆಂದೋಲನದ ಬಗ್ಗೆ ಕರ್ನಾಟಕದಲ್ಲಿ ಹೆಚ್ಚು ಒಲವು ವ್ಯಕ್ತವಾದ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಅವರು ಕರ್ನಾಟಕಕ್ಕೆ ಮೀಸಲಿಡುತ್ತಿದ್ದರು. ಕರ್ನಾಟಕದ ಹಲವು ಊರುಗಳಿಗೂ ಬಂದ ಅವರು ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಉದಾರೀಕರಣದ ವಿಷಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದರು. ಸ್ವದೇಶಿ ಸ್ವಾಭಿಮಾನದ ಕಿಚ್ಚನ್ನು ಜನಮಾನಸದಲ್ಲಿ ಹಚ್ಚಿದ ವಿಚಾರವಾದಿ ಜನನಾಯಕ ತನ್ನ ವಿಚಾರಗಳಿಂದ ಇಂದಿಗೂ ನಮ್ಮ ಮನದಲ್ಲಿ ಜೀವಂತನಾಗಿದ್ದಾನೆ. ಸ್ವದೇಶಿ ಬಳಸಿ- ದೇಶ ಉಳಿಸಿ ಎಂಬ ಘೋಷಣೆ ಎಲ್ಲಿ ಕೇಳಿ ಬಂದರೂ ಅಲಿ ರಾಜೀವ್ ದೀಕ್ಷಿತರ ನೆರಳು ಖಂಡಿತ ಕಾಣುತ್ತದೆ.
ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಭಾರತದ ವಿಜ್ಞಾನಿಗಳು, ಸಂಶೋಧನೆಗಳು, ಪ್ರತಿಭೆಗಳು ಎಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆ ದೇಶಗಳಿಗೆ ದುಡಿಯುವಂತಾಗಿರುವುದರ ಬಗ್ಗೆ ಎಚ್ಚರಿಸುತ್ತಿದ್ದರು. ಅವರು ಭಾರತದ ಇತಿಹಾಸದ ಸತ್ಯಾಸತ್ಯತೆಗಳನ್ನು ವಿವರಿಸುತ್ತಿದ್ದರೆ ರಕ್ತ ಬಿಸಿಯಾಗುತ್ತಿತ್ತು.
ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹವರಲ್ಲೂ ದೇಶಭಕ್ತಿ, ಪುಟಿಯುತ್ತಿತ್ತು. ಅವರ ಆ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಆ ಮೂಲಕ ಈ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು.
ನಮ್ಮದೇ ನೀರು ಹೀರಿ ಅದಕ್ಕೆ ಗ್ಯಾಸು, ಬಣ್ಣ, ಕೆಮಿಕಲ್ ಬೆರೆಸಿ ಮಾಡುವ ಆ ಕೆಟ್ಟ ಪೆಪ್ಸಿಯನ್ನು ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಎಳ್ನೀರು ಕುಡಿಯಿರಿ, ಹಣ್ಣಿನ ರಸ, ಮಜ್ಜಿಗೆ, ಪಾನಕ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು.
ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಪೇಸ್ಟು, ಕ್ರೀಮು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿವೆ ಈ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಉತ್ಪನ್ನಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲ್ಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು.
ಕೇವಲ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಅವರ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟ್ಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಾಗುತ್ತದೆ.
ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವಿಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ರಾಜೀವ ದೀಕ್ಷಿತರು ಪ್ರವಾಸಗಳನ್ನು, ಸಾರ್ವಜನಿಕ ಭಾಷಣಗಳನ್ನು ಕಡಿಮೆ ಮಾಡಿದರು.
ಕಾರಣ ಅವರು ಒಂದು ಹಂತದಲ್ಲಿ ಭ್ರಮನಿರಸನಗೊಂಡರು ಅಂತ ಕೆಲವರೆನ್ನುತ್ತಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಈ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ.
ಬಾಬಾರಾಮದೇವ್ ಗುರೂಜಿ ಅವರ ಭಾರತ್ ಸ್ವಾಭಿಮಾನ್ ಟ್ರಸ್ಟ್ನ ಬಹಿರಂಗ ಸಭೆ ಛತ್ತೀಸಗಡದ ಭಿಲಾಯಿ ನಗರದಲ್ಲಿ ನವೆಂಬರ್ 29, 2010 ರಂದು ನಡೆಯುತ್ತಿತ್ತು. ಟ್ರಸ್ಟ್ನ ಬೆನ್ನುಲುಬಾಗಿದ್ದ ಆಜಾದಿ ಬಚಾವೋ ಆಂದೋಲನದ ರಾಜೀವ್ ದೀಕ್ಷಿತ್ ಮಾತು ಪ್ರಾರಂಭಿಸಿದ್ದರು. ಮಾರನೇ ದಿನವೇ 43ನೇ ವಸಂತಕ್ಕೆ ಕಾಲಿಡಲಿದ್ದ ಸ್ವದೇಶಿ ಗುರುವಿನ ಹುಟ್ಟುಹಬ್ಬಕ್ಕಾಗಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ಹೃದಯಾಘಾತದಿಂದ ರಾಜೀವ್ ದೀಕ್ಷಿತ್ ಕುಸಿದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಸ್ವದೇಶಿ ಜಾಗೃತಿಯ ದೀಪ ಬೆಳಗಿ ದೀಕ್ಷೆ ನೀಡಿದ ರಾಜೀವ್ ದೀಕ್ಷಿತ್ ಭಾರತಮಾತೆಯ ಮಡಿಲಿಗೇ ಶಾಶ್ವತವಾಗಿ ಜಾರಿದರು.
ದೇಶ ಅಭಿವೃದ್ಧಿ ಹೊಂದಲು, ಸ್ವಾವಲಂಬನೆ ಕಾಯ್ದುಕೊಳ್ಳಲು ರಾಜೀವ ದೀಕ್ಷಿತರಂತಹ ಪ್ರಾಮಾಣಿಕ ಪ್ರಯತ್ನಗಳು ಅಗತ್ಯವಿದೆ. ನಮ್ಮ ಪ್ರತಿಯೊಂದು ಯೋಚನೆ, ಕೆಲಸಗಳು ಭಾರತವನ್ನು, ಭಾರತೀಯತೆಯನ್ನು ಕೇಂದ್ರವಾಗಿರಿಸಿಕೊಂಡು ನಡೆಯಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.