ಬೆಳ್ತಂಗಡಿ: ಮಡಂತ್ಯಾರು ಶಾಲೆಯಲ್ಲಿ ನಡೆದ ಸಮಾರಂಭಕ್ಕೆ ಸ್ಥಳೀಯ ತಾ.ಪಂ. ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿದ ಪ್ರಕರಣ ಗುರುವಾರ ತಾ.ಪಂ. ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸದನದ ಸದಸ್ಯರು ಪಕ್ಷಭೇದ ಮರೆತು ಈ ಘಟನೆಯನ್ನು ಖಂಡಿಸಿದರಲ್ಲದೆ ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ಫೆ.2 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಹಾಗೂ ಗಾರ್ಡಿಯನ್ ಏಂಜೆಲ್ಸ್ನಲ್ಲಿ ಅಕ್ಷರ ದಾಸೋಹ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ತಾ.ಪಂ. ಸದಸ್ಯ ವಿನ್ಸೆಂಟ್ ಅವರನ್ನು ಆಹ್ವಾನಿಸದೆ ಕಡೆಗೆಣಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ ಎಂದು ಸದಸ್ಯರು ಹೇಳಿದಾಗ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು ತಾಲೂಕಿನಲ್ಲಿ ಈ ಹಿಂದಿನಿಂದಲೂ ಈ ರೀತಿಯ ಘಟನೆಗಳು ನಡೆದಿವೆ. ನನಗೂ ಇಂತಹ ಅನುಭವವಾಗಿದೆ. ಪದೇ ಪದೇ ಇಂತಹ ತಪ್ಪುಗಳಾಗಬಾರದು. ವಿನ್ಸೆಂಟ್ ಅವರಿಗೆ ಆದ ತೊಂದರೆ ಇನ್ನು ಮುಂದೆ ಯಾರಿಗೂ ಆಗಬಾರದು ಎಂದಾಗ ಸದಸ್ಯರು ಧ್ವನಿಗೂಡಿಸಿದರು.
ಮಡಂತ್ಯಾರು ಶಾಲೆಯವರು ತಮ್ಮಿಂದ ತಪ್ಪಾಗಿರುವ ತಪ್ಪೊಪ್ಪಿಗೆ ಪತ್ರ ನೀಡಿರುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಕೇಂದ್ರ ಸರಕಾರ ಜಾರಿಗೆ ತರಲುದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯ ಬಗ್ಗೆಯೂ ಸಭೆಯಲ್ಲಿ ತೀವ್ರ ಚರ್ಚೆ, ವಾಗ್ವಾದ ನಡೆಯಿತು. ವಿರೋಧ ಪಕ್ಷದ ಸದಸ್ಯ ಧರ್ಣಪ್ಪ ಪೂಜಾರಿ ಮಸೂದೆಯನ್ನುಖಂಡಿಸುವ ಮಾತನ್ನಾಡಿದರು. ಇದಕ್ಕೆ ಜಿ.ಪಂ.ಸದಸ್ಯ ಶೈಲೇಶ್ಕುಮಾರ್ ದನಿಗೂಡಿಸಿದರು.
ಈ ಮಸೂದೆ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಮಾರಕವಾಗಿರವ ಇದು ಜಾರಿಗೆ ಬರಬಾರದು. ಇದನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು ಮರಳು ಲಾರಿಗಳಿಂದಾಗಿ ಹಲವರ ಜೀವ ಹೋಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾಗಿದ್ದರೂ ರಸ್ತೆ ಸುರಕ್ಷತೆಯ ವಿಚಾರದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಈ ಕಾಯಿದೆಯನ್ನು ಸ್ವಾಗತಿಸುವ ಕುರಿತು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಯಂತಿ ಪಾಲೇದು ಸಹಮತಿ ಸೂಚಿಸಿದರು.
ಬಳಿಕ ಭೂ ಸ್ವಾಧೀನ ಕಾಯಿದೆ, ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ಚರ್ಚೆ ನಡೆಯಿತು. ಗ್ಯಾಸ್ ಪೈಪ್ಲೈನ್ ಹಾದುಹೋಗಲು ಸಾವಿರಾರು ಮರಗಳ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಇದೇ ಮಾನದಂಡವನ್ನು ಅನುಸರಿಸಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಮೂಲ ನಿವಾಸಿಗಳಿಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸಲು ಅವಕಾಶ ಕಲ್ಪಿಸಿಕೊಡಬೇಕು. ಅರಣ್ಯ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದ್ದು ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಜಿ.ಪಂ. ಶೈಲೇಶ್ ಒತ್ತಾಯಿಸಿದರು.
ಶಿಕ್ಷಣ ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಮಾತನಾಡಿದ ಸದಸ್ಯ ಮಂಜುನಾಥ ಸಾಲಿಯಾನ್ ಅವರು ಕರಾಯ ಶಾಲೆಯಲ್ಲಿ ಅಕ್ರಮವಾಗಿ ಶಾಲೆಯ ಜಮೀನಿನಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಪ್ರಕರಣದ ದಾಖಲಾಗಿದ್ದು, ಮುಖ್ಯ ಶಿಕ್ಷಕನ ವಿರುದ್ಧ ಕೂಡಲೇ ಕ್ರಮ ಕೈಗೋಳ್ಳಬೇಕು ಎಂದು ಆಗ್ರಹಸಿದರು.
ಸರಳೀಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಸರಿಯಾಗಿಕರ್ತವ್ಯ ನಿರ್ವಹಿಸುತ್ತಿಲ್ಲ. ಅಲ್ಲಿ ಮಕ್ಕಳು ಊಟ ಮಾಡದಿದ್ದರೂ ಊಟ ಮಾಡಿರುವ ಬಗ್ಗೆ ದಾಖಲೆಇದೆ. ಕಸದ ರಾಶಿ, ಶೌಚಾಲಯ ಅವ್ಯವಸ್ಥೆಯ ಬಗ್ಗೆ ಆರೋಪಿಸಿದರು.
ತಾಲೂಕು ಆಸ್ಪತ್ರೆಯ ಶವಾಗಾರದ ಅವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಿತು. ವಿದ್ಯುತ್ ಇಲ್ಲದಿದ್ದಲ್ಲಿ ಟಾರ್ಚ್ ಬೆಳಕಿನಲ್ಲಿ ಶವಪರೀಕ್ಷೆ ಮಾಡುವಂತ ಸ್ಥಿತಿ ಅಲ್ಲಿದೆ. ಜನರೇಟರ್ ಇದ್ದರೂ ಅಲ್ಲಿಗೆ ಸಂಪರ್ಕ ಇಲ್ಲ. ಕೋಣೆ ಇಕ್ಕಟ್ಟಾಗಿದ್ದು ಸ್ವಚ್ಛತೆ ಇಲ್ಲ ಎಂದು ಬಾಲಕೃಷ್ಣ ಶೆಟ್ಟಿ ಹೇಳಿ, ಅಲ್ಲಿಗೆ ತಾ.ಪಂ.ವತಿಯಿಂದ ಸೋಲಾರ್ ಲೈಟ್ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯ ಆರಂಭದಲ್ಲಿ ನೇಪಾಳದ ಭೂಕಂಪದಲ್ಲಿ ಮಡಿದ ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ವಿಷ್ಣು ಮರಾಠೆ, ಸ್ಥಾಯಿ ಸಮಿತಿ ಅಧ್ಯಕೆ ಚೇತನಾ ಚಂದ್ರಶೇಖರ್, ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಮಹಾಂತೇಶ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.