ಬೆಳ್ತಂಗಡಿ: ನಕ್ಸಲ್ ಸಂಪರ್ಕದ ಆರೋಪ ಹೊರಿಸಿ, ನಕ್ಸಲ್ ನಿಗ್ರಹ ದಳದ ಪೊಲೀಸರಿಂದ ಮೂರು ವರ್ಷಗಳ ಹಿಂದೆ ಬಂಧಿತನಾಗಿದ್ದ ವಿದ್ಯಾರ್ಥಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಅವರ ವಿರುದ್ದ ಇದೀಗ ರಾಜ್ಯ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ವಿಠಲ ಮಲೆಕುಡಿಯ ಅವರ ಬಂಧನ ಭಾರಿ ವಿವಾದಗಳಿಗೆ ಕಾರಣವಾಗಿತ್ತು. ಇದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದು ಲೋಕಸಭೆಯಲ್ಲಿಯೂ ಚರ್ಚೆಗೆ ಕಾರಣವಾಗಿತ್ತು. ಕಳೆದ ಮೂರು ವರ್ಷಗಳ ಕಾಲ ಮೌನವಾಗಿದ್ದ ಪೊಲೀಸರು ಇದೀಗ ಇಡೀ ಪ್ರಕರಣದ ದಿಕ್ಕೇ ಬದಲಿಸುವಂತೆ ಹೊಸ ಆರೋಪ ಪಟ್ಟಿ ಸಲ್ಲಿಸಿದ್ದು ಅದರಲ್ಲಿ ವಿಠಲ ಮಲೆಕುಡಿಯ ಅವರನ್ನು ಆರನೆಯ ಆರೋಪಿಯೆಂದು ಹೆಸರಿಸಲಾಗಿದೆ.
ಆತನ ತಂದೆ ಲಿಂಗಪ್ಪ ಮಲೆಕುಡಿಯ ಏಳನೆಯ ಆರೋಪಿಯಾಗಿದ್ದಾರೆ. ಕುತೂಹಲದ ವಿಚಾರವೆಂದರೆ ಪ್ರಕರಣದ ಒಂದನೆಯ ಆರೋಪಿಯೆಂದು ನಕ್ಸಲ್ ನಾಯಕ ವಿಕ್ರಂಗೌಡನ ಹೆಸರಿದ್ದು ಮೊದಲ ಐದು ಆರೋಪಿಗಳು ತಲೆಮರೆಸಿಕೊಂಡಿರುವ ನಕ್ಸಲ್ ನಾಯಕರುಗಳೇ ಆಗಿದ್ದಾರೆ. ಪ್ರದೀಪ್, ಜಾನ್, ಸುಂದರಿ, ಹಾಗೂ ಪ್ರಭಾ ಆರೋಪ ಪಟ್ಟಿಯಲ್ಲಿ ಹೆಸರಿರುವ ಶಂಕಿತ ನಕ್ಸಲೀಯರಾಗಿದ್ದಾರೆ. ಈ ಐವರ ಮೇಲೆ ಹಾಗೂ ವಿಠಲ ಮತ್ತು ಆತನ ತಂದೆಯ ಮೇಲೆ ಹಲವು ಆರೋಪಗಳನ್ನು ಹೊರಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ತಣ್ಣಗಿದ್ದ ಪ್ರಕರಣಕ್ಕೆ ಈಗ ಮರು ಜೀವ ಬಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಲು ರಾಜ್ಯ ಪೊಲೀಸರು 2015ರ ಜನವರಿ 12ಕ್ಕೆ ಸರಕಾರದ ಅನುಮತಿ ಕೇಳಿದ್ದರು. ಸರಕಾರ ಜನವರಿ 23ರಂದು ಇದಕ್ಕೆ ಬಂಟ್ವಾಳ ಎಎಸ್ಪಿ ಅವರಿಗೆ ಅನುಮತಿ ನೀಡಿತ್ತು. ಅದರಂತೆ ಅವರು ಇದೇ ಜನವರಿ 30ರಂದು ಆರೋಪ ಪಟ್ಟಿ ಸಲ್ಲಿಸಿದ್ದರು. ಇಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ವಾರಂಟ್ ಜಾರಿ ಮಾಡಿದೆ ಹಾಗೂ ವಿಠಲ ಮತ್ತು ಆತನ ತಂದೆಗೆ ಸಮನ್ಸ್ ಜಾರಿಮಾಡಿದೆ.
ಇದೀಗ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ನಲ್ಲಿ ವಿಠಲ ಮಲೆಕುಡಿಯ ನಕ್ಸಲ್ ನಾಯಕರೊಂದಿಗೆ ಸೇರಿ ಕುತ್ಲೂರು ಪರಿಸರದಲ್ಲಿ ಮತ್ತು ಆತನ ಮನೆಯಲ್ಲಿಯೂ ಈ ಸಭೆಗಳು ನಡೆಯುತ್ತಿತ್ತು ಎನ್ನಲಾಗಿದೆ.
ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡುವ ಕರಪತ್ರಗಳು, ಕುತ್ಲೂರಿನ ಸಮಸ್ಯೆಗಳ ಬಗ್ಗೆ ಬರೆದಿರುವ ಲೇಖನ ಹಾಗೂ ನಿಷೇಧಿತ ಸಿಪಿಐಎಂಎಲ್ ಪೀಪಲ್ಸ್ ವಾರ್ ಗ್ರೂಪ್ನೊಂದಿಗೆ ಆತ ಸಂಪರ್ಕ ಹೊಂದಿದ್ದಕ್ಕೆ ದಾಖಲೆಗಳು ಲಭ್ಯವಿವೆ. ಆತನ ತಂದೆಯು ಇದಕ್ಕೆ ಸಹಕಾರ ನೀಡುತ್ತಿದ್ದರು, ಪೊಲೀಸ್ ದಾಳಿಯ ವೇಳೆ ನಕ್ಸಲೀಯರು ತಪ್ಪಿಸಿಕೊಂಡಿದ್ದಾರೆ. ವಿಠಲ ಹಾಗೂ ಆತನ ತಂದೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿಗಳು ದೊರಕಿದೆ ಎಂಬಂತಹ ವಾದಗಳನ್ನು ಮುಂದಿಡಲಾಗಿದೆ.
ಘಟನೆಯ ಹಿನ್ನಲೆ: ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯ ಅವರನ್ನು ನಕ್ಸಲ್ ನಿಗ್ರಹ ದಳದ ಪೊಲೀಸರು 2012 ಮಾರ್ಚ್ 3ರಂದು ಮಂಗಳೂರಿನ ವಿದ್ಯಾರ್ಥಿ ನಿಲಯದಿಂದ ಮನೆಗೆ ಬಂದ ವೇಳೆ ಅವರ ಮನೆಯಿಂದ ಬಂಧಿಸಿದ್ದರು. ಆ ವೇಳೆ ಅವರ ಮನೆಯಿಂದ ಭಗತ್ ಸಿಂಗ್ ಜೀವನ ಚರಿತ್ರೆ ಪುಸ್ತಕ, ಅರ್ಧ ಕೆ.ಜಿ ಸಕ್ಕರೆ, 100 ಗ್ರಾಂ ಚಹಾ ಪುಡಿ, ಆಟಿಕೆಯ ಬೈನಾಕುಲರ್, ಸೇರಿದಂತೆ ಮನೆ ಬಳಕೆಯ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಈ ಸಂದರ್ಭ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದರು. ಡಿವೈಎಫ್ಐ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಕ್ರಿಯ ಕಾರ್ಯಕರ್ತನಾಗಿದ್ದ. ಈತನ ಬಂಧನ ರಾಜ್ಯದಾದ್ಯಂತ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಸಂಸದ ಎಂಪಿ ರಾಜೇಶ್, ಸಿಪಿಐಎಂ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ಸೇರಿದಂತೆ ಹಲವರು ಮುಖಂಡರುಗಳು, ಮಾನವ ಹಕ್ಕುಗಳ ಹೋರಾಟಗಾರರು ಈತನ ಬಂಧನದ ವಿರುದ್ಧ ಧ್ವನಿಯೆತ್ತಿದ್ದರು. ಸಂಸತ್ತಿನಲ್ಲಿಯೂ ಈ ವಿಚಾರ ಚರ್ಚೆಯಾಗಿತ್ತು.
ಪೊಲೀಸರಿಂದ ಬಂಧನಕ್ಕೆ ಒಳಗಾದ ವಿಠಲ ಮಲೆಕುಡಿಯ ಮೂರು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಬಳಿಕ 2012ರ ಜೂನ್ 6ರಂದು ಆತನಿಗೆ ಬೆಳ್ತಂಗಡಿ ನ್ಯಾಯಾಲಯವು ಜಾಮೀನು ನೀಡಿತ್ತು. ಬಳಿಕ ಶಿಕ್ಷಣ ಮುಂದುವರಿಸಿದ ವಿಠಲ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಇದೀಗ ಮನೆಯಲ್ಲಿಯೇ ಇದ್ದು ಕೂಲಿ ಕೆಲಸ ಮಾಡುತ್ತ ಉದ್ಯೋಗದ ಹುಡುಕಾಟದಲ್ಲಿದ್ದಾನೆ. ಕುತ್ಲೂರಿನ ದಟ್ಟ ಕಾಡಿನ ನಡುವೆ ಇರುವ ಮನೆಯಲ್ಲಿರುವ ವಿಠಲನನ್ನು ಸಂಪರ್ಕಿಸಲು ಪತ್ರಿಕೆ ನಡೆಸಿದ ಪ್ರಯತ್ನ ವಿಫಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.