1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ ಇತ್ತು – ಹಣ , ಸುಖ, ಶಾಂತಿ, ನೆಮ್ಮದಿ. ಆದರೆ ದೇಶದಲ್ಲಿ ಇವ್ಯಾವುದೂ ಇಲ್ಲ ಎಂಬ ಕಾರಣಕ್ಕೆ ಎಂಬ ಕಾರಣಕ್ಕೆ ಆತ ಕ್ರಾಂತಿಗಿಳಿದ.
ಚಿಕ್ಕಂದಿನಿಂದಲೇ ಅಜ್ಜ ಹಾಗೂ ತಂದೆಯಿಂದ ದೇಶಭಕ್ತಿಯ ಕಥೆಗಳನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯಮುಕ್ತಗೊಳಿಸಬೇಕು ಎಂಬ ಹಂಬಲವಿತ್ತು. 1859 ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಆತ ಪುಣೆಯ ಮಿಲಿಟರಿ ಫೈನಾನ್ಸ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬ್ರಿಟಿಷ್ ಸರ್ಕಾರದ ಕೆಲಸವಾದರೂ ಒಳಗೊಳಗೇ ಆತನ ಸ್ವಾತಂತ್ರ್ಯದ ಆಸೆ ಬಲಗೊಳ್ಳುತ್ತಲೇ ಇತ್ತು. ಅದೇ ಸಮಯಕ್ಕೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದಾಗ ಆತ ಕೆಲಸಕ್ಕೆ ರಜೆ ಕೇಳಿದ, ಬ್ರಿಟೀಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡದ ಬ್ರಿಟಿಷರ ವಿರುದ್ಧ ಸಿಡಿದೆದ್ದ ವಾಸುದೇವ ‘ಇವರು ನನ್ನ ತಾಯಷ್ಟೇ ಅಲ್ಲ, ಭಾರತಮಾತೆಯಿಂದಲೂ ನಮ್ಮನ್ನು ದೂರಮಾಡುತ್ತಿದ್ದಾರೆ’ ಎಂಬ ಭಾವದಿಂದ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯರ ಎಲ್ಲ ಕಷ್ಟಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮಗಿರಿಯ ಜೊತೆಗೆ ಶಿಕ್ಷಣದ ಕೊರತೆ ಎಂಬುದನ್ನು ಗುರುತಿಸಿ “ಪೂಣಾ ನೇಟಿವ್ ಇನಿಸ್ಟಿಟ್ಯೂಷನ್ ” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ ‘ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ’ ಎಂಬ ಹೆಸರಿನಿಂದ ಭವ್ಯ ಸ್ವರೂಪ ತಾಳಿತು.
ಕಾನೂನಿನ ಮೂಲಕ ಬ್ರಿಟಿಷರನ್ನು ಓಡಿಸುವುದು ಅಸಾಧ್ಯವೆಂದು ಭಾವಿಸಿದ ವಾಸುದೇವ ಸಶಸ್ತ್ರ ಕ್ರಾಂತಿಯೇ ದಾರಿ ಎಂದು ನಂಬಿದ. ಬಡವರೂ ಅನಕ್ಷರಸ್ಥರೂ ಆದ ರಾಮೋಶಿ ಎಂಬ ಗುಡ್ಡಗಾಡು ಜನರನ್ನು ಸಂಘಟಿಸಿ ಕ್ರಾಂತಿಗೆ ಪ್ರೇರೇಪಿಸಿದ. ಸಿಕ್ಕಸಿಕ್ಕಲ್ಲಿ ಬ್ರಿಟಿಷರಿಗೆ ಬ್ರಿಟಿಷ್ ಸೈನ್ಯಕ್ಕೆ ಮಾರಣಾಂತಿಕ ಹೊಡೆತ ನೀಡಿದ. ವಾಸುದೇವನ ಬಂಡಾಯದಿಂದ ಬ್ರಿಟಿಷ್ ಸರಕಾರವು ಬೇಸತ್ತು ಹೋಯಿತು. ಸರಕಾರವು ಅವನನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಿತು. ವಾಸುದೇವ ಅದಕ್ಕಿಂತಲೂ ದೊಡ್ಡ ಮೊತ್ತದ ಬಹುಮಾನವನ್ನು ಗವರ್ನರ್ ಮತ್ತು ಜಿಲ್ಲಾಧಿಕಾರಿಗಳ ತಲೆಗೆ ಘೋಷಿಸಿದ. ವಾಸುದೇವ ಬಲವಂತ ಫಡಕೆಯ ಹೆಸರು ಇಂಗ್ಲೀಷ ಸಾಮ್ರಾಜ್ಯದ ಮೂಲೆ ಮೂಲೆಗೆ ಹರಡಿತ್ತು. ಹಲವು ವರ್ತಮಾನ ಪತ್ರಿಕೆಗಳಲ್ಲಿ ಈ ಕ್ರಾಂತಿಯ ಕಥೆ ಪ್ರಕಟವಾಯಿತು.
ಆಗಿನ ಅಮೃತ ಬಜಾರ್ ಪತ್ರಿಕೆಯು ಈತನನ್ನು ‘ಹಿಮಾಲಯದಷ್ಟು ಉತ್ತುಂಗ ಪುರುಷ’ ಎಂದು ಗೌರವಿಸಿತು. ಇಂಗ್ಲೆಂಡಿನಲ್ಲಿ ಬಹು ಪ್ರಸಿದ್ಧವಾದ ವೃತ್ತಪತ್ರಿಕೆ ಲಂಡನ್ ಟೈಮ್ಸ್ನಲ್ಲಿಯೂ ಫಡಕೆಯ ಪ್ರತಾಪದ ವರ್ಣನೆಯಾಯಿತು. ಇಂಗ್ಲೀಷ್ ಪಾರ್ಲಿಮೆಂಟಿನಲ್ಲಿ ಈತನ ಚಟುವಟಿಕೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಹೇಗಾದರೂ ಮಾಡಿ ಇವನನ್ನು ಹಿಡಿದು ಶಿಕ್ಷಿಸಬೇಕೆಂದು ಬ್ರಿಟಿಷ್ ಸರಕಾರದ ಕಟ್ಟಪ್ಪಣೆಯಾಯಿತು. ಸಾವಿರದ ಎಂಟುನೂರು ಪಳಗಿದ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷ್ ಅಧಿಕಾರಿ ಡೇನಿಯಲ್ ಈತನ ಬೇಟೆಗೆ ಹೊರಟಿದ್ದ. ಡೇನಿಯಲ್ನ ಸೇನೆಗೂ ವಾಸುದೇವ ಮಣ್ಣು ಮುಕ್ಕಿಸಿದ. ಕೆಲವು ವಿಶ್ವಾಸ ದ್ರೋಹಿಗಳು ಹಣದ ಆಸೆಗೆ ವಾಸುದೇವರ ಗುಪ್ತ ಸ್ಥಳದ ಮಾಹಿತಿಯನ್ನು ನೀಡಿದ್ದರಿಂದ ವಾಸುದೇವನನ್ನು ಡೇನಿಯಲ್ ಸೆರೆ ಹಿಡಿದ. ಬ್ರಿಟಿಷರು ವಾಸುದೇವನನ್ನು ಪೂನಾಗೆ ಕರೆತಂದರು. ಬ್ರಿಟಿಷರ ವಿರುದ್ದ ಯುದ್ದ ಸಾರಿದ ಮಹಾನ್ ಪುರುಷರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಈ ಕ್ರಾಂತಿಕಾರಿ ವೀರನ ಮೇಲೆ ಹಲವು ಮೊಕದ್ದಮೆ ಹೂಡಿ ಜೀವಾವಧಿ ಶಿಕ್ಷೆ ವಿಧಿಸಿ ದೂರದ ಏಡನ್ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿ ಬ್ರಿಟಿಷರು ಅವರಿಗೆ ಮತ್ತಷ್ಟು ಚಿತ್ರ ಹಿಂಸೆ ನೀಡಿದರು. ಕಾಲಕ್ರಮೇಣ ವಾಸುದೇವರ ಶರೀರ ಜರ್ಜರವಾಯಿತು. ಕಾಯಿಲೆ ತುತ್ತಾದ ಅವರ ದೇಹ ಅಸ್ಥಿಪಂಜರವಾಯಿತು. ದಿನದಿನವೂ ಸ್ವಾತಂತ್ರ್ಯ ದಾಹದಿಂದ ಕೊರಗುತ್ತಾ 1883 ಫೆಬ್ರವರಿ 17 ರಂದು ವಾಸುದೇವ ಬಲವಂತ ಫಡಕೆ ಅಸುನೀಗಿದರು.
ಕೇವಲ 38 ವರ್ಷಕ್ಕೆ ದೇಶದ ಸ್ವಾತಂತ್ರ್ಯದ ಕನಸಿನಲ್ಲಿ ಬಲಿದಾನ ಮಾಡಿದ ಈ ಕ್ರಾಂತಿಪುರುಷನ ಸ್ಮರಣೆ ದೇಶಭಕ್ತರಿಗೆ ಸ್ಫೂರ್ತಿದಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.