ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ಸುಮಾರು 500 ಮಂದಿ ನವಜೀವನ ಸದಸ್ಯರು ತಮ್ಮ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಶತದಿನೋತ್ಸವವನ್ನು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡುವುದರ ಮೂಲಕ ಆಚರಿಸಿದರು.
ಬಳಿಕ ಸದಸ್ಯರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ ಮಾಡಿ ಆಶೀರ್ವಾದ ಪಡೆದರು. ಪದ್ಮವಿಭೂಷಣ ಪುರಸ್ಕೃತರಾದ ಡಾ.ಹೆಗ್ಗಡೆಯವರನ್ನು ಈ ಸಂಧರ್ಭದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಹಾಗೂ ನವಜೀವನ ಸದಸ್ಯರ ವತಿಯಿಂದ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಅವರು ಈ ಪ್ರಶಸ್ತಿಗೆ ತಾವೊಂದು ನಿಮಿತ್ತ ಮಾತ್ರ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಈ ಗೌರವಕ್ಕೆ ಪಾತ್ರರಾಗಲು ಸಾಧ್ಯವಾಯಿತು ಎಂದರು.
ನವಜೀವನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಹೆಗ್ಗಡೆಯವರು ಮದ್ಯಪಾನ ಮಾಡುವಾಗಿನ ಜೀವನಕ್ಕೂ ಮತ್ತು ಈಗಿನ ಮದ್ಯ ಮುಕ್ತ ಜೀವನಕ್ಕೂ ಇರುವ ವ್ಯತ್ಯಾಸದ ಬಗ್ಗೆ ಸದಸ್ಯರೊಂದಿಗೆ ವಿಮರ್ಶೆ ಮಾಡಿದರು. ಮದ್ಯಪಾನ ಮನುಷ್ಯನನ್ನು ಸಾಮಾಜಿಕ, ಭೌತಿಕ, ಶಾರೀರಿಕ, ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡುತ್ತದೆ. ಮದ್ಯಪಾನವು ಪ್ರಸ್ತುತ ದಿನಗಳಲ್ಲಿ ಮಾರಕವಾಗಿ ಪರಿಣಮಿಸಿದ್ದು, ಇದರಿಂದ ಹೊರಬರಲು ಮನಸ್ಸನ್ನು ಹತೋಟಿಯಲ್ಲಿಟ್ಟು ಪರಿವರ್ತನೆಯಿಂದ ಮಾತ್ರ ಮದ್ಯಪಾನ ಮುಕ್ತರಾಗಲು ಸಾಧ್ಯ. ಇನ್ನು ಮುಂದೆ ನಿಮ್ಮ ಗ್ರಾಮಗಳಲ್ಲಿ ಮಾದರಿಯುತ ಜೀವನ ನಿಮ್ಮದಾಗಬೇಕು, ನಿಮ್ಮಿಂದ ಇನ್ನೂ ಸಹ ಸಮಾಜದಲ್ಲಿ ಮದ್ಯಪಾನದ ಪಿಡುಗು ದೂರವಾಗಬೇಕಿದೆ. ಯಾವುದೇ ಸಂದರ್ಭಕ್ಕೂ ಪುನಃ ಮದ್ಯದ ಕಡೆ ಮನಸ್ಸು ಹರಿಯಲು ಬಿಡಬೇಡಿ ಎಂದು ಮಾರ್ಗದರ್ಶನ ನೀಡಿದರು.
ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಸದಾನಂದ, ಮೋಹನ್ ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯೋಜನಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿ.ಪಾಸ್ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿ ನಾಗೇಶ್ ವೈ.ಎ., ರಾಘವೇಂದ್ರ, ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.