ಮುಗುಳುನಗೆ…
ಮುಸ್ಕಾನ್ ಎಂಬ ಶಬ್ದಕ್ಕಿರುವ ಅರ್ಥ ಇದು. ಇನ್ನೊಬ್ಬನ ಮೊಗದಲ್ಲಿ ಮಂದಹಾಸ ಮೂಡಿಸಬೇಕು ಎಂಬ ಅಭಿಲಾಷೆ ಎಲ್ಲರಲ್ಲೂ ಮೂಡಿದರೆ ದ್ವೇಷಮಯ ಜಗತ್ತಿನಲ್ಲೆಲ್ಲ ನಗುವಿನ ಹೂದೋಟವೇ ಕಾಣಿಸಬಹುದು. ಆದರೆ ವಾಸ್ತವವೇ ಬೇರೆ. ಯಾವುದೂ ಒಂದೇ ರೀತಿ ಇರುವುದಿಲ್ಲ. ಎಲ್ಲ ಬೆರಳುಗಳೂ ಒಂದೇ ರೀತಿ ಇಲ್ಲ ಎಂಬ ಸಾಮಾನ್ಯ ಹೇಳಿಕೆಯ ಹಾಗೆ.
ಹಾಗೊಂದು ಜಗತ್ತಿನಲ್ಲೇ ಈ ಪುಟ್ಟ ಪೋರಿ ದೇಶವೇ ತನ್ನೆಡೆಗೆ ನೋಡುವಂತೆ ಮಾಡಿದ್ದಾಳೆ. ಈಕೆಯ ಹೆಸರು ಮುಸ್ಕಾನ್.
ಮುಸ್ಕಾನ್ ಅಹಿರ್ವಾರ್ ಎಂಬುದು ಪೂರ್ತಿ ಹೆಸರು. ಈಕೆ ಮಾಡಿರೋ ಕೆಲಸ ಎಲ್ಲರೂ ಮಂದಹಾಸ ಬೀರುವಂಥಾದ್ದೇ. ದೊಡ್ಡವರ ಜಾಣತನಕ್ಕೆ ಸವಾಲು ಹಾಕುವಂತೆ, ಸರಕಾರದ ನೀತಿ ನಿಯಮಗಳಿಗೆ ಹೊಸ ಹೊಳಹು ನೀಡುವಂತೆ ಈಕೆ ಸದ್ದಿಲ್ಲದೆ ಅಕ್ಷರಸೇವೆ ಮಾಡುತ್ತಿದ್ದಾಳೆ. ಮಾಡೋ ಕೆಲಸ ಅಂಥಿಂಥದ್ದಲ್ಲ. ಕೊಳೆಗೇರಿ ಮಕ್ಕಳಿಗೆ ಅಕ್ಷರ ಹೇಳಿಕೊಡೋದು.
ಶಿಕ್ಷಣ ಎಂಬುದು ಜಗತ್ತನ್ನೇ ಬದಲಾಯಿಸಬಲ್ಲ ಸರ್ವಶ್ರೇಷ್ಠ ಅಸ್ತ್ರ ಎಂದು ನೆಲ್ಸನ್ ಮಂಡೇಲಾ ಹೇಳಿದ್ದರು. ಆದರೆ ಈ ಮಾತನ್ನು ಸುಳ್ಳುಮಾಡಲು ಅನೇಕರು ಯತ್ನಿಸುತ್ತಿದ್ದಾರೆ. ಭಯೋತ್ಪಾದನಾ ಚಟುವಟಿಕೆ ಮೂಲಕ ಜಗತ್ತನ್ನೇ ಬದಲಾಯಿಸಲು ಕೆಲ ಮೂರ್ಖರು ಹೊರಟರು. ಇಂಥ ಸನ್ನಿವೇಶದಲ್ಲೇ ಸ್ಲಂಗಳಲ್ಲಿ ಬೆಳೆಯುವ ಮಕ್ಕಳು ಅರಳುವ ಮುನ್ನವೇ ಭೂಗತ ಜಗತ್ತು ಸಹಿತ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಕಾಳಜಿಯನ್ನು ಈ ಒಂಭತ್ತು ವರ್ಷದ ಬಾಲಕಿಯೇ ಮಾಡುತ್ತಿದ್ದಾಳೆ. ಭೋಪಾಲ್ ಶಾಲೆಯೊಂದರಲ್ಲಿ ಮೂರನೇ ತರಗತಿ ಕಲಿಯುತ್ತಿರುವ ಮುಸ್ಕಾನ್ ಎಲ್ಲರಂತಲ್ಲ. ಈಕೆಯನ್ನು ಪುಟ್ಟ ಲೈಬ್ರರಿಯನ್ ಎಂದೇ ಜನ ಪ್ರೀತಿಯಿಂದ ಕರೆಯುತ್ತಿದ್ದಾರೆ.
ಮುಸ್ಕಾನ್ ಬಾಲ ಪುಸ್ತಕಾಲಯ (ಆಕೆ ತನ್ನ ಲೈಬ್ರರಿಯನ್ನು ಕರೆಯುವುದು ಹೀಗೆ) ಆರಂಭಿಸಿದಾಗ ಎಲ್ಲರೂ ಮೂಗಿನ ಮೇಲೆ ಬೆರಳನ್ನಿಟ್ಟಿದ್ದರು. ಇದು ಸಾಧ್ಯವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ತಂದೆ ಮನೋಹರ ಮರದ ಕೆಲಸ ಮಾಡುತ್ತಾರೆ. ತಾಯಿ ಮಾಯಾ ಮನೆವಾರ್ತೆ ನೋಡಿಕೊಳ್ಳುತ್ತಾಳೆ.
ಆಕೆ ಮಾಡಿದ್ದಿಷ್ಟೇ…
ತನ್ನ ಸುತ್ತಮುತ್ತಲಿನ ಸ್ಲಂ ಮಕ್ಕಳಲ್ಲಿ ಓದುವ ಆಸಕ್ತಿ ಇರುವುದನ್ನು ಗಮನಿಸಿ, ಕೊಳೆಗೇರಿ ಪಕ್ಕದಲ್ಲೇ ಗೋಡೆ ಬದಿ ತನ್ನ ಬಳಿ ಇದ್ದ ಪುಸ್ತಕಗಳನ್ನು ಪೇರಿಸಿಟ್ಟಳು. ಓಡಾಡುತ್ತಿದ್ದ ಮಕ್ಕಳನ್ನು ಬನ್ನಿ ಪುಸ್ತಕ ಓದೋಣ ಎಂದು ಕೂಗಿ ಕರೆದಳು. ಮೊದಮೊದಲು ಹಿಂದೆಮುಂದೆ ನೋಡುತ್ತಿದ್ದ ಮಕ್ಕಳು ಮುಸ್ಕಾನ್ ಪುಸ್ತಕಗಳಲ್ಲೇನಿವೆ ಎಂದು ನೋಡಲು ಬಂದರು. ಬರಿಗಾಲಲ್ಲೇ ಹೆಜ್ಜೆ ಹಾಕುತ್ತಾ ಬೆರಗಿನ ನೋಟದೊಂದಿಗೆ ಸ್ಲಂ ಮಕ್ಕಳು ಹಾಳೆಗಳನ್ನು ತಿರುವತೊಡಗಿದರು.
ಬರಬರುತ್ತಾ ಪುಸ್ತಕಗಳ ಸಂಖ್ಯೆಯೂ ಜಾಸ್ತಿಯಾಗತೊಡಗಿತು. ಸಹಾಯಗಳೂ ದೊರಕತೊಡಗಿದವು. ಕೇವಲ ಓದೋದಷ್ಟೇ ಅಲ್ಲ, ಅಲ್ಲಿ ಗುಂಪು ಚರ್ಚೆಯೂ ನಡೆಯಲು ತೊಡಗಿತು. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಮುಸ್ಕಾನ್ ಮಾಡಿದ್ದಳು…!
ಹಾಗೆಯೇ ಸಂಜೆ ನಾಲ್ಕು ಗಂಟೆ ಆಗುತ್ತಿದ್ದಂತೆ ಭೋಪಾಲದ ಅರವೇರ ಬೆಟ್ಟದ ಬಳಿ ಇರುವ ಪುಟ್ಟ ಸ್ಲಂನಲ್ಲಿ ಬಾಲ ಪುಸ್ತಕಾಲಯ ಒಂದಷ್ಟು ಪುಸ್ತಕಗಳೊಂದಿಗೆ ಆರಂಭವಾಯಿತು.
ಪುಟ್ಟ ಬಾಲಕಿ ಪುಸ್ತಕಾಲಯ ಮಾಡುತ್ತೇನೆ ಎಂದಾಗ ತಂದೆ ಅಚ್ಚರಿಪಟ್ಟರೂ ಪ್ರೋತ್ಸಾಹ ನೀಡಿದರು. ವಿವಿಧೆಡೆಗಳಿಂದ ಸಂಗ್ರಹಿತ ನೂರ ಹತ್ತೊಂಭತ್ತು ಪುಸ್ತಕಗಳು ಈಗ ಮುಸ್ಕಾನ್ ಲೈಬ್ರರಿಯಲ್ಲಿವೆ. ಇದನ್ನು ಓದುತ್ತಾ ಸ್ಲಂ ಮಕ್ಕಳು ಬೌದ್ಧಿಕವಾಗಿ ಬೆಳೆಯತೊಡಗಿದ್ದಾರೆ. 9 ವರ್ಷವಿರುವಾಗಲೇ ಈ ಪುಟ್ಟ ಪೋರಿಯ ಸಾಹಸ ಭೋಪಾಲವಷ್ಟೇ ಅಲ್ಲ ದೂರದ ದೆಹಲಿಗೂ ತಲುಪಿತು.
ದೆಹಲಿಯ ನೀತಿ ಆಯೋಗ ಈಕೆಯ ಸಾಧನೆ ಗಮನಿಸಿ ಥಾಟ್ ಲೀಡರ್ ಪ್ರಶಸ್ತಿ ನೀಡಿ ಗೌರವಿಸಿತು. ಇದು ಮುಸ್ಕಾನ್ ಸಾಧನೆಗೆ ಪ್ರೋತ್ಸಾಹವೂ ಹೌದು. ನಾಡಿನೆಲ್ಲೆಡೆ ಇನ್ನಷ್ಟು ಮುಸ್ಕಾನ್ ಗಳು ಮೂಡಿಬರಲಿ. ಓದುವ, ಓದಿಸುವ ಪ್ರವೃತ್ತಿ ಬೆಳೆಸುವ ಸುಂದರ, ಒಳ್ಳೆಯ ದಿನಗಳು ಮೂಡಲಿ.
ಇಂಥ ಹಾರೈಕೆಗಳು ನಮ್ಮಲ್ಲಿದ್ದರಷ್ಟೇ ಸಾಲದು. ನಮ್ಮೊಡನಿರುವ ಮಕ್ಕಳಲ್ಲೂ ಇಂಥ ಜಾಗೃತಿಗಳು ಮೂಡುವಂತೆ ಮಾಡಬೇಕು. ಶಿಕ್ಷಕರಿಗೂ ಇಂಥ ಅರಿವು ಆಗಬೇಕು. ಹಾಗಾದಾಗಲಷ್ಟೇ ಮುಸ್ಕಾನ್ಳಂಥ ಮುಗ್ಧ ಬಾಲಕಿಯ ಪ್ರಯತ್ನಕ್ಕೆ ಬೆಂಬಲ ಕೊಟ್ಟಂತಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.