ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ 2 ವರ್ಷ ಪೂರ್ಣವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರ ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಸಮರ್ಥವಾಗಿ ಆಡಳಿತವನ್ನು ನಡೆಸಿದೆ.
ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿನ ಕಪ್ಪುಹಣದ ಬಗ್ಗೆ ತನಿಖೆಗೆ ಸಮಿತಿ ರಚನೆ ಮಾಡಿ ಎಲ್ಲರ ಮನ್ನಣೆಗೆ ಪಾತ್ರವಾದ ಮೋದಿ ಸರ್ಕಾರ, ಬಳಿಕ ಒಂದರ ಮೇಲೋಂದರಂತೆ ಜನಪರ ಯೋಜನೆಗಳನ್ನು ರೂಪಿಸಿ ಅದನ್ನು ಯಶಸ್ವಿಗೊಳಿಸಿದೆ. ಗಾಂಧಿ ಜಯಂತಿಗೆ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿ ಸ್ವಚ್ಛತೆಯ ಬಗ್ಗೆ ಅಸಡ್ಡೆ ಹೊಂದಿದ್ದ ದೇಶದ ಮೂಲೆ ಮೂಲೆಯ ಜನರಿಗೂ ಸ್ವಚ್ಛತೆಯ ಅರಿವು ಮೂಡಿಸಿರುವುದು ಅದರ ಹೆಗ್ಗಳಿಕೆ. ಈ ಯೋಜನೆಯ ಫಲವಾಗಿ ಇನ್ನು ಕೆಲವೇ ವರ್ಷದಲ್ಲಿ ಭಾರತ ಬಯಲು ಶೌಚ ಮುಕ್ತ ದೇಶವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ. ಭಾರತದ ಪ್ರತಿ ಶಾಲೆಯೂ ಶೌಚಾಲಯ ಹೊಂದುವ ಹಾದಿಯಲ್ಲಿ ಮೋದಿ ಸರ್ಕಾರ ಬಂದ ಮೇಲೆ ಮಹತ್ವದ ಸಾಧನೆಯನ್ನು ಮಾಡಿದೆ.
ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಬಂಡವಾಳದಾರರನ್ನು ಆಕರ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಯೋಜನೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದು ಮಾಡಿದೆ. ಮೋದಿ ಆರಂಭಿಸಿರುವ ಡಿಜಿಟಲ್ ಇಂಡಿಯಾ ಯೋಜನೆ ಭಾರತವನ್ನು ಡಿಜಟಲೀಕರಣಗೊಳಿಸುತ್ತಿದೆ. ಸ್ಮಾರ್ಟ್ ಸಿಟಿಯಾಗುವತ್ತ ಭಾರತದ ಹಲವಾರು ನಗರಗಳು ಹೆಜ್ಜೆ ಹಾಕುತ್ತಿರುವುದು ವಿಶೇಷ. ಇದರಿಂದ ಜನರು ಕೂಡ ತಂತ್ರಜ್ಞಾನದತ್ತ ಹೆಚ್ಚು ಹೆಚ್ಚು ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಮೂಲಕ ಮೋದಿ ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಜನ್ಧನ್ ಯೋಜನೆಯ ಮೂಲಕ ಅತೀ ಸಾಮಾನ್ಯ ವ್ಯಕ್ತಿಯನ್ನೂ ಬ್ಯಾಂಕ್ ಮೆಟ್ಟಿಲೇರುವಂತೆ ಮಾಡಿರುವುದು ಸರ್ಕಾರ ಮಹತ್ವದ ಕಾರ್ಯ. ಇದರಿಂದ ಬ್ಯಾಂಕಿಂಗ್ ವಲಯದ ಪ್ರಗತಿಯೊಂದಿಗೆ ಉಳಿತಾಯ ಮತ್ತು ಭವಿಷ್ಯದ ಸುರಕ್ಷತೆಯ ಬಗ್ಗೆಯೂ ಸಾಮಾನ್ಯರು ಅರಿತುಕೊಳ್ಳುವಂತಾಗಿದೆ.
ಮೋದಿ ಆರಂಭಿಸಿದ ಮತ್ತೊಂದು ಮಹತ್ವದ ಅಭಿಯಾನ ಎಂದರೆ ’ಗಿವ್ ಇಟ್ ಅಪ್’. ಈ ಅಭಿಯಾನದಿಂದ ಕೋಟ್ಯಾಂತರ ಜನ ತಮ್ಮ ಸಬ್ಸಿಡಿ ಎಲ್ಪಿಜಿ ಗ್ಯಾಸನ್ನು ತೊರೆದಿದ್ದಾರೆ. ಇದರಿಂದ ಎಷ್ಟೋ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ನೀಡಲು ಸಾಧ್ಯವಾಗಿದೆ.
ಸಿರಿಯಾ, ಇರಾಕ್ ಮುಂತಾದ ಭಯೋತ್ಪಾದನ ಪೀಡಿತ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಯಶಸ್ವಿಯಾಗಿ ಭಾರತಕ್ಕೆ ಕರೆ ತಂದಿದ್ದು ಕೂಡ ಮೋದಿ ಸರ್ಕಾರ ಸಾಧನೆಗಳಲ್ಲೊಂದು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಇನ್ನು ರೈಲ್ವೇ ಎಂದರೆ ಸಮಸ್ಯೆಗಳ ಆಗರ ಎಂದೇ ಪರಿಗಣಿತವಾಗಿತ್ತು, ರೈಲ್ವೇ ಇಲಾಖೆ ಸದಾ ಋಣಾತ್ಮಕ ವಿಷಯಗಳಿಗಾಗಿಯೇ ಸುದ್ದಿಯಾಗುತ್ತಿತ್ತು, ಆದರೀಗ ಅಲ್ಲಿ ಧನಾತ್ಮಕ ಪರಿವರ್ತನೆಗಳಾಗುತ್ತಿದೆ. ತಂತ್ರಜ್ಞಾನಕ್ಕೆ ಅದು ತೆರೆದುಕೊಳ್ಳುತ್ತಿದೆ. ರೈಲ್ವೇ ಸಚಿವರು ಸಾಮಾಜಿಕ ಜಾಲತಾಣದ ಮೂಲಕ ಸಾಮಾನ್ಯ ವ್ಯಕ್ತಿಯ ಸಂಪರ್ಕಕ್ಕೂ ಸಿಗುತ್ತಿದ್ದಾರೆ. ಸಹಾಯ ಹಸ್ತ ಚಾಚುತ್ತಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೋಮುವಾದದ ಆರೋಪಕ್ಕೆ ಗುರಿಯಾಗಬೇಕಾಯಿತು. ಆದರೆ ಈ ಆರೋಪವನ್ನು, ಟೀಕೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಸರ್ಕಾರ ಅಲ್ಪಸಂಖ್ಯಾತರ ವಿಶ್ವಾಸವನ್ನೂ ಗಳಿಸಿದೆ. ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ತಮ್ಮ ಧ್ಯೇಯ ವಾಕ್ಯವನ್ನು ಅದು ಪಾಲಿಸಿಕೊಂಡು ಮುಂದುವರೆಯುತ್ತಿದೆ.
ಸಾಮಾಜಿಕ ಜಾಲತಾಣದ ಮೂಲಕ ಮೋದಿ ಸರ್ಕಾರದ ಎಲ್ಲಾ ಸಚಿವರುಗಳು ಕೂಡ ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ. ಕೇಂದ್ರ ಸಚಿವರು ಗಗನಕುಸುಮ ಎನ್ನುವ ಮಾತು ಈಗ ಅಳಿಸಿ ಹೋಗಿದೆ. ಆವರ ಪ್ರಶ್ನೆಗಳಿಗೆ ಮನ್ ಕೀ ಬಾತ್, ಟ್ವಿಟರ್, ಫೇಸ್ಬುಕ್ ಮೂಲಕ ಸ್ವತಃ ಮೋದಿಯೇ ಉತ್ತರ ನೀಡುತ್ತಿದ್ದಾರೆ. ವಿದೇಶಿ ಪ್ರಯಾಣದ ಮೂಲಕ ಅಂತಾರಾಷ್ಟ್ರೀಯ ಸಂಬಂಧವನ್ನೂ ಮೋದಿ ಉತ್ತಮಗೊಳಿಸಿದ್ದಾರೆ. ಹಲವಾರು ಪ್ರಯೋಜನಕಾರಿ ಒಪ್ಪಂದಗಳಿಗೆ ಮೋದಿ ಬಂದ ಮೇಲೆ ಸಹಿ ಬಿದ್ದಿದೆ.
ಒಟ್ಟಿನಲ್ಲಿ ಈ ಎರಡು ವರ್ಷದಲ್ಲಿ ಮೋದಿ ಸರ್ಕಾರ ನೀಡಿರುವ ಆಡಳಿತದ ಬಗ್ಗೆ ಹೆಚ್ಚಿನವರಿಗೆ ಸಂತೋಷವಿದೆ. ಇದು ಹಲವಾರು ಸಮೀಕ್ಷೆಗಳಿಂದಲೂ ಸಾಬೀತಾಗಿದೆ. ಆದರೂ ಈ ಸರ್ಕಾರ ಮಾಡಬೇಕಾದ ಸಾಧನೆ ಇನ್ನೂ ಹಲವಾರು ಇದೆ. ಯೋಜನೆಗಳನ್ನು ದೇಶದ ಮೂಲೆ ಮೂಲೆಯ ಜನರಿಗೂ ತಲುಪಿಸುವ ಮಹತ್ವದ ಜವಾಬ್ದಾರಿ ಅದರ ಮೇಲಿದೆ. ಸಚಿವರುಗಳು ಸೃಷ್ಟಿಸುವ ಅನವಶ್ಯಕ ವಿವಾದಗಳಿಗೆ ಪ್ರಧಾನಿ ಮೋದಿ ಕಡಿವಾಣ ಹಾಕಲೇ ಬೇಕು. ಇಲ್ಲವಾದರೆ ಇದು ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇನ್ನು 3 ವರ್ಷದಲ್ಲಿ ಮೋದಿ ಮತ್ತು ಅವರ ಸಚಿವರುಗಳು ಜಗದ್ಗುರು ಆಗುವ ಭಾರತದ ಕನಸನ್ನು ನನಸು ಮಾಡುವತ್ತ ಮುಂದುವರೆಯಲಿ ಎಂಬುದೇ ಎಲ್ಲರ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.