ಅಸ್ಸಾಂನ ಬರಕ್ ವ್ಯಾಲಿಯಲ್ಲಿನ ಪುಟ್ಟ ಕ್ಯಾನ್ಸರ್ ಕೇಂದ್ರವೊಂದು ಕ್ರಾಂತಿಕಾರಿ ವೈದ್ಯರೊಬ್ಬರ ದೂರದೃಷ್ಟಿಯ ಫಲವಾಗಿ ಈಗ ಪೂರ್ಣ ಪ್ರಮಾಣದ ವಿಶ್ವದರ್ಜೆಯ ಕ್ಯಾನ್ಸರ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ.
ಅಸ್ಸಾಂನಲ್ಲಿನ ಭಾರತ-ಬಾಂಗ್ಲಾ ಗಡಿಯಲ್ಲಿರುವ ಕುಗ್ರಾಮ ಬರಕ್ ವ್ಯಾಲಿ. ಹಲವಾರು ವರ್ಷಗಳಿಂದ ಇಲ್ಲಿನ ಜನತೆ ಸಮರ್ಪಕ ವೈದ್ಯಕೀಯ ಸೌಲಭ್ಯವಿಲ್ಲದೆ ಪರದಾಡುತ್ತಿದ್ದರು. ಇವರಿಗೆ ಆಸ್ಪತ್ರೆಗೆ ತೆರಳಬೇಕಾದರೆ 350 ಕಿಮೀ ದೂರದಲ್ಲಿರುವ ಗುವಾಹಟಿಗೆ ತೆರಳಬೇಕಿತ್ತು. ಇದಕ್ಕೆ ಕನಿಷ್ಠ ಎಂದರೆ 24 ಗಂಟೆ ತಗಲುತ್ತಿತ್ತು.
ಈ ಪ್ರದೇಶದಲ್ಲಿ ತಂಬಾಕು ಪದಾರ್ಥಗಳ ಹೆಚ್ಚಿನ ಬಳಕೆಯಿರುವುದರಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದಾಗಿ ಅಲ್ಲಿನ ಜನರು 1996 ರಲ್ಲಿ ಒಟ್ಟು ಸೇರಿ ಕ್ಯಾನ್ಸರ್ ಕೇಂದ್ರವೊಂದನ್ನು ಸ್ಥಾಪಿಸಿದರು. ಇದರ ಹೆಸರು ಕಚಾರ್ ಕ್ಯಾನ್ಸರ್ ಹಾಸ್ಪಿಟಲ್ ಸೊಸೈಟಿ. ಆದರೆ ಹಣಕಾಸು ಕೊರತೆಯಿಂದ ತೀವ್ರವಾಗಿ ಬಳಲುತ್ತಿದ್ದ ಈ ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ವಿಚಿತ್ರವೆಂದರೆ 2006 ರಲ್ಲಿ ಮೊದಲ ರೇಡಿಯೇಶನ್ ಯುನಿಟ್ ಇಲ್ಲಿ ಸ್ಥಾಪನೆಗೊಂಡಿತ್ತು.
ಅರ್ಹ ನರ್ಸ್ ಈ ಆಸ್ಪತ್ರೆಗೆ ನಿಯೋಜನೆಗೊಂಡದ್ದು 2008 ರಲ್ಲಿ. ಈ ಪ್ರದೇಶದಲ್ಲಿ ತರಬೇತಿ ಹೊಂದಿದ ಜನರು ಇದ್ದರೂ ಅವರು ಉತ್ತಮ ಉದ್ಯೋಗ ಪಡೆಯುವ ಆಸೆಯಿಂದ ವಲಸೆ ಹೋಗುತ್ತಿದ್ದರು.
ಆದರೆ ಈ ಆಸ್ಪತ್ರೆಯ ಎಲ್ಲಾ ಸಮಸ್ಯೆಗೆ ಪರಿಹಾರ ದೊರಕಲಾರಂಭಿಸಿದ್ದು 2007 ರ ಬಳಿಕ, ಅದು ಡಾ.ರವಿ ಕಣ್ಣನ್ ಅವರ ಕಣ್ಣಿಗೆ ಈ ಆಸ್ಪತ್ರೆ ಬಿದ್ದ ಬಳಿಕ.
ಅಸ್ಸಾಂನಲ್ಲಿ ಉದ್ಯೋಗದ ಆಫರ್ ಸಿಕ್ಕಾಗ ಇವರ ಕುಟುಂಬ ಹಿಂದೇಟು ಹಾಕಿತ್ತು, ಆದರೆ ಚೆನ್ನೈನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಆಂಕಾಲಜಿಸ್ಟ್ ಆಗಿದ್ದ ಕಣ್ಣನ್ ಮಾತ್ರ ಅವರನ್ನು ಒಲಿಸಿ ಇಲ್ಲಿಗೆ ಬಂದೇ ಬಿಟ್ಟರು. ಇಲ್ಲಿನ ಜನರೊಂದಿಗೆ, ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅವರ ಈ ಕಾರ್ಯದಲ್ಲಿ ಮಗಳು ಮತ್ತು ಪತ್ನಿಯೂ ಸಹಕಾರ ನೀಡಿದರು. ಈ ಆಸ್ಪತ್ರೆಯಲ್ಲಿ ಮಾಡಬೇಕಾದ ಕಾರ್ಯ ಬಹಳಷ್ಟಿದೆ ಎಂಬುದು ಆಗಲೇ ಇವರ ಗಮನಕ್ಕೆ ಬಂತು.
ತಮಿಳಿಗರಾದ ಕಣ್ಣನ್ ಅವರಿಗೆ ಅಲ್ಲಿನ ಜನರೊಂದಿಗೆ ಬೆರೆಯಲು ಭಾಷೆ ಅಡ್ಡಿಯಾಗಿತ್ತು, ಆದರೂ ಅವರ ಸಂಕಷ್ಟಗಳನ್ನು ಅರ್ಥೈಸಿಕೊಂಡು ಕಣ್ಣನ್ ಅವರು ನಿಧಾನವಾಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡರು.
ಈ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಮಾಸಿಕ ಆದಾಯ 3 ಸಾವಿರ ಅಥವಾ 6 ಸಾವಿರ ಅಷ್ಟೇ ಆಗಿತ್ತು, ಒಂದು ಸಲ ಚೆಕ್ ಅಪ್ ಮಾಡಿ ಹೋದವರು ಮತ್ತೆ ಇಲ್ಲಿಗೆ ಬರುವುದೇ ಕಷ್ಟವಾಗಿತ್ತು. ಕಣ್ಣನ್ ಅವರು ಇಲ್ಲಿಗೆ ರೋಗಿಗಳ ಜೊತೆ ಆಗಮಿಸುವವರ ಮನವೊಲಿಸಿ ಅವರನ್ನು ಇಲ್ಲೇ ಕೆಲಸಕ್ಕೆ ನೇಮಕಗೊಳಿಸಿದರು. ಇವರಿಗೆ ಮೊದಲು ದಿನಕ್ಕೆ ರೂ. 30 ನೀಡಿದರು. ಈಗ ಅವರಿಗೆ ರೂ.100 ನೀಡಲಾಗುತ್ತದೆ. ನಿಧಾನಕ್ಕೆ ಆಸ್ಪತ್ರೆಯ ಕಾರ್ಯಕ್ಕೆ ಜನರನ್ನು ಒಟ್ಟುಗೂಡಿಸಿದರು. ಕ್ಯಾನ್ಸರ್ ರೋಗಿಗಳಿಗೆ ಫಂಡ್ ಕಲೆಕ್ಟ್ ಮಾಡಿದರು.
ನೋಡು ನೋಡುತ್ತಿದ್ದಂತೆ ಕಚಾರ್ ಆಸ್ಪತ್ರೆ ಅಭಿವೃದ್ಧಿಯನ್ನು ಕಂಡಿತು. ಈಗ ಅದು ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವಾಗಿದೆ. ಎಲ್ಲರ ಸಹಕಾರ, ಕಣ್ಣನ್ ಅವರ ಪರಿಶ್ರಮದ ಫಲವಾಗಿ ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.