ಬೆಳ್ತಂಗಡಿ : ಸೇವೆ ಎಂಬುದು ಯಜ್ಞಕ್ಕೆ ಸಮಾನ. ಸುತ್ತಲಿನ ಸಮಾಜದ ಅಗತ್ಯತೆಗಳನ್ನು ಗುರುತಿಸಿ ಅದನ್ನು ಪೂರೈಸುವ ಕೆಲಸವನ್ನು ಸೇವಾಭಾರತಿ ಮಾಡಿಕೊಂಡು ಬಂದಿರುವುದ ಅನುಕರಣೀಯ ಎಂದು ರಾಷ್ಟ್ರೀಯ ಸೇವಾಭಾರತಿ ದೆಹಲಿ ಇದರ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ಉಡುಪಿ ಪ್ರಶಂಶಿಸಿದರು. ಅವರು ಮಂಗಳವಾರ ಕನ್ಯಾಡಿ ಜ್ಞಾನಗಂಗಾ ಸಭಾಮಂಟಪದಲ್ಲಿ ನಡೆದ ಸೇವಾಭಾರತಿ ಕನ್ಯಾಡಿ ಇದರ 13 ನೇ ವರ್ಷದ ಸಂಭ್ರಮಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸೇವಾಕಾರ್ಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೀಡಿದರು.
ನಾವು ಗೌರವಯುತವಾಗಿ ಬಾಳಲು ಸಮಾಜ ಮತ್ತು ತಾಯಿ ಭಾರತಿ ಕಾರಣ. ಹೀಗಾಗಿ ಸಾಮಾಜಿಕ ಋಣ ನಮ್ಮಮೇಲಿರುತ್ತದೆ ಎಂಬುದನ್ನು ನಾವು ಮರೆಯಬಾರದು. ಸೇವೆಯನ್ನು ಪುಣ್ಯ ಸಂಪಾದನೆಗಾಗಲಿ, ಹಿರಿಯರು ಹೇಳಿದ್ದಕ್ಕಾಗಲಿ ಅಥವಾ ಯಾರದೇ ಒತ್ತಾಯಕ್ಕಾಗಲಿ ಮಾಡುವುದಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡಬೇಕು ಇದರಿಂದ ಸಮಾಜದಲ್ಲಿ ಪರಿವರ್ತನೆಯಾಗಬೇಕು ಎಂದ ಅವರು ಪಾರದರ್ಶಕತೆಯಿಂದ, ಸಮಾಜಕ್ಕೆ ಉತ್ತರದಾಯಿಯಾಗಿ ಸೇವಾ ಭಾರತಿ ಕನ್ಯಾಡಿ ಘಟಕ ತನ್ನ ಕಾರ್ಯವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಭಾಷಣಕಾರರಾಗಿದ್ದ ವಾಗ್ಮಿ, ಉಪನ್ಯಾಸಕ ಶಿವಮೊಗ್ಗದ ಎನ್. ನಟೇಶ್ ಅವರು, ಸಮಾಜದಲ್ಲಿ ಔನತ್ಯ ಸಾಧಿಸಬೇಕಾಗಿದ್ದರೆ ಓದು ಮುಖ್ಯ. ಶ್ರವಣ, ಮನನ, ಅಧ್ಯಯನ ಇವು ಮಕ್ಕಳಲ್ಲಿ ಇರಬೇಕಾದ ಗುಣಗಳು ಎಂದ ಅವರು ಸೇವೆ ಏನೆಂಬುದನ್ನು ಸರಿಯಾಗಿ ತಿಳಿದುಕೊಂಡಿರುತ್ತಾರೋ ಅವರು ಭೂಮಿಯಿಂದ ಸುವರ್ಣ ಪಡಿಯುತ್ತಾರೆ ಎಂಬುದನ್ನು ವಿವರಿಸಿದ ಅವರು, ಬಾಳೆ ಬಾಗಿ ಗೊನೆ ನೀಡುತ್ತದೆ, ತೆನೆ ಬಳುಕಿ ಭತ್ತ ನೀಡುತ್ತದೆ, ಮರದ ಗೆಲ್ಲು ಬಾಗಿ ಫಲ ನೀಡುತ್ತದೆ, ಆದರೆ ಏನೂ ಕೊಡದ ಮಾನವ ಸೆಟೆದುನಿಲ್ಲುತ್ತಾನೆ ಇದು ವಿಪರ್ಯಾಸ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಂತಾಜೆ ಈಶ್ವರ ಭಟ್ ಅವರು ಸೇವಾ ಚಟುವಟಿಕೆಗಳು ರಾಷ್ಟ್ರದ ಮುನ್ನಡೆಗೆ ಅಗತ್ಯ ಎಂದರು. ನೂತನ ಅಧ್ಯಕ್ಷ ಬಿ. ಕೃಷ್ಣಪ್ಪ ಗುಡಿಗಾರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹರೀಶ್ ರಾವ್ ಪ್ರಸ್ತಾವಿಸಿದರು. ಸದಸ್ಯ ರಾಜಪ್ರಸಾದ ಪೋಳ್ನಾಯ ವಂದಿಸಿದರು. ಶ್ರೀನಿವಾಸ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭ ತಾಲೂಕಿನ ಅರ್ಹ 25 ಮನೆಗಳಿಗೆ ತಲಾ ರೂ. 10,000 ವೆಚ್ಚದ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಧರ್ಮಸ್ಥಳ ಮತ್ತು ಉಜಿರೆ ಜಿ.ಪಂ. ವ್ಯಾಪ್ತಿಗೊಳಪಟ್ಟಿರುವ 21 ಗ್ರಾಮಗಳ ತಲಾ ಒಂದು ಶಾಲೆಯ ವಾಚನಾಲಯಕ್ಕೆ ರೂ. 5,000 ಮೌಲ್ಯದ ಪುಸ್ತಕಗಳನ್ನು ಹಾಗೂ ತಾಲೂಕಿನ 6 ಶಾಲೆಗಳ ವಾಚನಾಲಯಕ್ಕೆ ರೂ. 20,000 ಮೌಲ್ಯ ಕಪಾಟು ಮತ್ತು ಪುಸ್ತಕಗಳನ್ನು ಶಾಲಾ ಮುಖ್ಯೋಪಾಧ್ಯಾಯರುಗಳಿಗೆ ಹಸ್ತಾಂತರಿಸಲಾಯಿತು. ಇಬ್ಬರು ದಿವ್ಯಾಂಗರಿಗೆ ಗಾಲಿ ಕುರ್ಚಿಗಳನ್ನು ನೀಡಲಾಯಿತು. ದೇಹದಾನಕ್ಕೆ ನೋಂದಾಯಿಸಲ್ಪಟ್ಟ ಉಜಿರೆಯ ನಿವೃತ್ತ ಅಧ್ಯಾಪಕ ಶಂಕರ ಹೆಗ್ಡೆ, ಎಲ್ಐಸಿ ಉದ್ಯೋಗಿ ವೀವೇಕ್ ರಾವ್, ಪ್ರಗತಿಪರ ಕೃಷಿಕ ಶಿವಾನಂದ ಹೆಗ್ಡೆ ಕರಂಬಾರು, ಸೇವಾಭಾರತಿ ಕಾರ್ಯದರ್ಶಿ ವಿನಾಯಕ ರಾವ್ ಇವರನ್ನು ಸಮ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.