ಉಪ್ಪಿನಂಗಡಿ : ಹುಣ್ಣಿಮೆಯ ಮುನ್ನ ದಿನದ ಬೆಳದಿಂಗಲು . . . . ಮೂವತ್ತು ಮನೆಗಳ ಮಾತೆಯರು ತಂದ ಅಡುಗೆಗಳು. . . . . ಅಲ್ಲಿ ಜಾತಿಯ ಅಡೆತಡೆಗಳಿರಲಿಲ್ಲ.. . . ಮೇಲು ಕೀಳೆಂಬ ಭಾವದ ಸುಳಿವಿಲ್ಲ.. . . ಬಡವ ಬಲ್ಲಿದನೆಂಬ ಬಿಂಕ ಬಿಗುಮಾನಗಳಿಲ್ಲ. . . . ಎಲ್ಲರೂ ಒಂದೇ ತಾಯ ಮಕ್ಕಳೆಂಬ ಭಾವದಿ ಉಂಡು ನಕ್ಕು ನಲಿದ ವಿಶಿಷ್ಠ ಕಾರ್ಯಕ್ರಮ ಕುಟುಂಬ ಮಿಲನೊಳದೊಳಗಿನ ಮಾತೃ ಭೋಜನ.
ಹಿಂದೂ ಸಮಾಜದಲ್ಲಿ ಜಾತೀಯ ವರ್ಗೀಕರಣದ ಅನಿಷ್ಠತೆಯನ್ನು ನಿವಾರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಪನೆಯಾಗಿರುವ ಮಾತೃ ಭೋಜನ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ಶನಿವಾರ ರಾತ್ರಿ ಭಾವ ಸ್ಪರ್ಶಿಯಾಗಿ ಮೂಡಿ ಬಂದಿದೆ.ಪ್ರತಿ ಮನೆಯ ಮಾತೆಯರು ತಯಾರಿಸಿ ತಂದ ಭೋಜನ ವನ್ನು ಶಿಶು ಮಂದಿರ ವಠಾರದಲ್ಲಿ ಕಾರ್ಯಕರ್ತರು ಕಳಿಸಿಕೊಟ್ಟ ಅತಿಥಿಗಳಿಗೆ ಉಣಬಡಿಸುವ ಕಾರ್ಯ ಮಾತೆಯರದ್ದಾಗಿತ್ತು. ಕನಿಷ್ಠ 5 ಮಂದಿಗೆ ಬೇಕಾಗುವಷ್ಟು ಆಹಾರವನ್ನು ತರಬೇಕೆಂಬ ಸೂಚನೆಗೆ ಹೆಚ್ಚಿನ ಸ್ಪಂದನೆ ನೀಡಿ ಹತ್ತಕ್ಕೂ ಹೆಚ್ಚಿನ ಮಂದಿಗೆ ಬೇಕಾಗುವಷ್ಟು ಆಹಾರವನ್ನು ತಂದಿರುವುದರಿಂದ ಮುನ್ನೂರಕ್ಕೂ ಮಿಕ್ಕಿದ ಜನರಿಗೆ ಮಾತೃ ಭೋಜನದ ಸವಿಯನ್ನು ಸವಿಯುವ ಅವಕಾಶ ಲಭಿಸಿತು.
ಇಲ್ಲಿ ಒಟ್ಟು 30 ಮನೆಯಿಂದ ತರಿಸಲಾದ ಭೋಜನವನ್ನು ಪ್ರತಿ ಮನೆಯನ್ನು ಕೇಂದ್ರೀಕರಿಸಿ ಸಿದ್ದಪಡಿಸಿದ ವೃತ್ತಗಳಲ್ಲಿ ಹತ್ತತ್ತು ಮಂದಿಯಂತೆ ಕುಳಿತು ಊಟವನ್ನು ಮಾಡಿದ. ತನ್ಮೂಲಕ ನಾವೆಲ್ಲರೂ ಸಮಾಜದಲ್ಲಿ ಸಮಾನರೆಂಬ ಭಾವವನ್ನು ಬಿತ್ತರಿಸಿದ ಈ ಕಾರ್ಯಕ್ರಮದಲ್ಲಿ ಸಂತೃಪ್ತ ಭಾವ ಪ್ರಕಟೀಕರಣವಾಗಿತ್ತು.ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯಕಾರಿಣಿ ಸದಸ್ಯ ಹಾಗೂ ಕುಟುಂಬ ಪ್ರಬೋಧನ್ ಸಹ ಪ್ರಮುಖ್ ಆಗಿರುವ ಪುಂಡರೀಕಾಕ್ಷ , ಮನೆಯಲ್ಲಿ ಪಿತೃ ಧರ್ಮ, ಮಾತೃ ಧರ್ಮ, ಪತಿ ಧರ್ಮ, ಪತ್ನಿ ಧರ್ಮ, ಪುತ್ರ ಧರ್ಮ, ಪುತ್ರಿ ಧರ್ಮವೆಂಬ ಆರು ಧರ್ಮಗಳ ಪಾಲನೆ ಮಾಡುವುದರಿಂದ ಮನೆಯನ್ನು ನಂದನವನವನ್ನಾಗಿಸಬಹುದೆಂದು ತಿಳಿಸಿದರು.
ಸನಾತನ ಧರ್ಮವನ್ನು ಮೈಗೂಡಿಸಿಕೊಂಡು ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಭಾರತವು ಚಿನ್ನದ ಕೊಡವಿದ್ದ ಹಾಗೆ. ಇದರಲ್ಲಿ ಸಾಕಷ್ಟು ಮುತ್ತು, ರತ್ನ, ವಜ್ರ ವೈಢೂರ್ಯಗಳಿದ್ದು, ಅದನ್ನು ಹುಡುಕಿ ತೆಗೆಯುವ ಕೆಲಸ ಭಾರತೀಯರಿಂದಾಗಬೇಕು. ಇಲ್ಲದಿದ್ದಲ್ಲಿ ಸಂಸ್ಕಾರವಿಲ್ಲದ ಶೂನ್ಯ ಬದುಕು ನಮ್ಮದಾಗಲಿದೆ.
ಸಭಾಧ್ಯಕ್ಷತೆ ವಹಿಸಿದ್ದ ಮಾತೃ ಮಂಡಳಿ ಅಧ್ಯಕ್ಷೆ ಸುಮನ್ ಪಿ. ಲದ್ವಾ ಮಾತನಾಡಿ ಇಡೀ ವಿಶ್ವವೇ ನಮ್ಮ ಕುಟುಂಬ ಎಂಬ ಶ್ರೀಮಂತ ಮನೋಭಾವವನ್ನು ಹೊಂದಿರುವ ನಾವು, ಜಾತಿ ವಿಜಾತಿ ಎನ್ನುತ್ತಾ ಸ್ಪರ್ಶ ಅಸ್ಪರ್ಶ್ಯ ಎನ್ನುತಾ ಸಮಾಜದಲ್ಲಿ ಅನಾರೋಗ್ಯಕರ ಸ್ಥಿತಿಗೆ ಕಾರಣವಾಗಿರುವುದು ಖೇದಕರ ವಿದ್ಯಾಮಾನ. ಇಂತಹ ವಿಷಮ ಸ್ಥಿತಿಯಲ್ಲಿ ಸಮಾಜವನ್ನು ಏಕ ಬಾವದಿಂದ ನೋಡುತ್ತಾ ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳೆಂಬ ಭಾವದೊಂದಿಗೆ ಸಮಾಜದ ಎಲ್ಲರನ್ನೂ ಸ್ವೀಕರಿಸುವ ಮತ್ತು ಗೌರವಿಸುವ ದ್ಯೋತಕವಾಗಿ ಎಲ್ಲರ ಮನೆಯಲ್ಲಿ ತಯಾರಿಸಿದ ಊಟವನ್ನು ಸ್ವೀಕರಿಸುವ ತನ್ಮೂಲಕ ಸಾಮರಸ್ಯ ಸಮಾಜವನ್ನು ನಿರ್ಮಿಸುವ ಮಾತೃ ಭೋಜನ ಕಾರ್ಯಕ್ರಮ ಅನುಕರಣೀಯವಾಗಿದೆ ಎಂದರು.
ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ದೀಕ್ಷಿತ್ ಪುಲಮುಗೇರು ನೇತೃತ್ವದಲ್ಲಿಶಿಶು ಮಂದಿರದ ಯೋಗಮಂಡಲದ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಹಾಗೂ ಶಿಶು ಮಂದಿರದ ಪುಟಾಣಿಗಳಿಂದ ಹಾಗೂ ಮಾತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಪ್ರಕೃತಿಯ ಮಡಿಲಲ್ಲಿ, ಬೆಳದಿಂಗಳ ಮಡಿಲಲ್ಲಿ ಪ್ರತಿ ಕುಟುಂಬದವರು ತಂದಿದ್ದ ಊಟ, ತಿಂಡಿ-ತಿನಿಸುಗಳನ್ನು ಎಲ್ಲರೂ ಒಟ್ಟಾಗಿ ಕುಳಿತು ಪರಸ್ಪರ ಹಂಚಿ ತಿನ್ನಲಾಯಿತು.
ಕಾರ್ಯಕ್ರಮ ವ್ಯವಸ್ಥಾಪಕ ಅನೂಪ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಸುದೃಢ ರಾಷ್ಟ್ರ ನಿರ್ಮಾಣದ ಹಿಂದೆ ಸಮಾಜದಲ್ಲಿನ ಸಾಮರಸ್ಯ ಅಡಗಿದೆ ಎಂದರು. ಶಿಶು ಮಂದಿರದ ಸಹಾಯಕ ಮಾತಾಜಿ ಚಂದ್ರಾವತಿ ಪ್ರಾರ್ಥಿಸಿದರು. ಮಾತಾಜಿ ರಾಜೇಶ್ವರಿ ಸ್ವಾಗತಿಸಿದರು. ಶ್ರೀಮತಿ ಸುನಿತಾ ವಂದಿಸಿದರು. ಕಾರ್ಯದರ್ಶಿ ಯು.ಎಲ್. ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾಲಯದ ಕಾರ್ಯದರ್ಶಿ ಶಿವಪ್ರಸಾದ್, ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ಭಟ್, ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ ಸಂಚಾಲಕ ಯು ಜಿ ರಾಧ, ಸಮಾಜದ ಅನ್ಯಾನ್ಯ ಕ್ಷೇತ್ರದ ಗಣ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಉಷಾ ಮುಳಿಯ, ಎನ್ ಉಮೇಶ್ ಶೆಣೈ, ಕರಾಯ ರಾಘವೇಂದ್ರ ನಾಯಕ್, ಅಶೋಕ್ ರೈ, ಶ್ರೀಮತಿ ಯು ರಾಧಾ, ಕೈಲಾರ್ ರಾಜ್ ಗೋಪಾಲ್ ಭಟ್, ಸುಬ್ರಹ್ಮಣ್ಯ ಶೆಣೈ, ಶ್ರೀಮತಿ ಪ್ರಭಾ ಜಿ ನಾಯಕ್, ಯು ರಾಜೇಶ್ ಪೈ, ಯತೀಶ್ ಶೆಟ್ಟಿ, ಹರೀಶ್ ಭಂಡಾರಿ , ವಿನೋದ್ ಕುಮಾರ್ , ಆದರ್ಶ ಶೆಟ್ಟಿ, ದೇವರಾಜ್, ಶಿವಾನಂದ್ ಮೊದಲಾದವರು ಭಾಗಿಗಳಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.