ಭಾರತೀಯರ ಪವಿತ್ರ ನದಿ ಗಂಗೆಯ ಪರಿಶುದ್ಧತೆಯನ್ನು ಕಾಪಾಡುವ ಸಲುವಾಗಿ ಹೆಣಗಳ ಅಂತ್ಯಸಂಸ್ಕಾರ ಮಾಡುವುದರಿಂದ ಹಿಡಿದು ಸುತ್ತಮುತ್ತಲ ಕೊಳಚೆಯನ್ನು ಶುದ್ಧಮಾಡುವವರೆಗೆ ಎಲ್ಲಾ ಕಾರ್ಯವನ್ನು ಮಾಡುತ್ತಾರೆ ಗುಡ್ಡು ಬಾಬಾ. ಅವರ ಇಡೀ ಜೀವನವೇ ಗಂಗೆಯ ಪರವಾದ ಹೋರಾಟಕ್ಕೆ ಮುಡಿಪಾಗಿದೆ.
ವಿಕಾಸ್ ಚಂದ್ರ ಅಲಿಯಾಸ್ ಗುಡ್ಡು ಬಾಬಾ ಓರ್ವ ಪರಿಸರ ಹೋರಾಟಗಾರ. ಗಂಗೆಯನ್ನು ಸಂರಕ್ಷಿಸುವುದೇ ಇವರ ಜೀವನದ ಪರಮೋಚ್ಛ ಗುರಿ. ಗಂಗೆ ಶುದ್ಧೀಕರಣದ ಇವರ ಕಾರ್ಯ ಶುರುವಾಗಿದ್ದು 1998ರಲ್ಲಿ. ಪಾಟ್ನಾದಲ್ಲಿ ಹರಿಯುವ ಗಂಗೆಯ ಕೊಳಚೆ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯೋರ್ವರು ನಾನು ನನ್ನ ಹೆಂಡತಿಯ ಅಂತಿಮ ಸಂಸ್ಕಾರ ಮಾಡಲು ಇಲ್ಲಿಗೆ ಬಂದಿದ್ದೇನೆ, ಹಣವಿಲ್ಲದ ಕಾರಣ ಶುದ್ಧ ಗಂಗಾ ನೀರು ಇರುವ ಜಾಗಕ್ಕೆ ಹೋಗಲು ನನಗೆ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಇಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಇವರ ಬಳಿ ಹೇಳಿದಾಗ ಒಂದು ಕ್ಷಣ ಆಘಾತಕ್ಕೊಳಗಾದ ಗುಡ್ಡು ಬಾಬ ಬಳಿಕ ಗಂಗೆಯನ್ನು ಶುದ್ಧ ಮಾಡುವತ್ತ ಕಾರ್ಯೋನ್ಮುಖರಾದರು. ಅಲ್ಲಿಂದ ಆರಂಭವಾದ ಅವರ ಕಾರ್ಯ ಇಂದಿಗೂ ನಿಂತಿಲ್ಲ.
ನಾಲ್ಕನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡ ನಾನು ಭೂಮಿಯನ್ನೇ ತಾಯಿ ಎಂದು ಭಾವಿಸಿದ್ದೇನೆ. ಹಾಗೆಯೇ ನಾನು ಗಂಗೆಯ ಕರ್ತವ್ಯನಿರತ ಮಗ. ನದಿಯನ್ನು ಅಷ್ಟೊಂದು ಕಲುಷಿತವಾಗಿ, ಅಪವಿತ್ರವಾಗಿ ನೋಡುವ ಶಕ್ತಿ ನನಗಿಲ್ಲ, ಹಾಗಾಗಿಯೇ ಪವಿತ್ರ ನದಿಯ ಶುದ್ಧೀಕರಣಕ್ಕೆ ಮುಂದಾದೆ ಎನ್ನುತ್ತಾರೆ ಇವರು.
ಗಂಗೆಯ ಪರ ಅವರ ಹೋರಾಟಕ್ಕೆ ಧುಮುಕಿದ್ದು 2000ರ ಗಂಗಾ ಬಚಾವ್ ಆಂದೋಲನದ ಮೂಲಕ. ನದಿಯ ದುಸ್ಥಿಯ ಬಗ್ಗೆ, ಅದರಲ್ಲಿ ತೇಲುವ ಹೆಣ, ಕಸಕಡ್ಡಿ, ಕೊಳಚೆಗಳ ಬಗ್ಗೆ ಅಧಿಕಾರಿಗಳ ಗಮನ ಹರಿಸಲು ಈ ಆಂದೋಲನವನ್ನು ರೂಪಿಸಲಾಯಿತು. ಈ ವೇಳೆ ಅವರು 48 ಗಂಟೆಗಳ ಉಪವಾಸ ನಡೆಸಿದ್ದರು, ಜನರ ಬೆಂಬಲ ಪಡೆಯಲು ಹಲವಾರು ಪ್ರಚಾರ ಮತ್ತು ಸಮಾವೇಶಗಳನ್ನು ಆಯೋಜಿಸಿದ್ದರು. ಅಷ್ಟೇ ಅಲ್ಲದೇ ಜುಲೈ 2000ರಲ್ಲಿ ಪಾಟ್ನಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಗಂಗೆಯ ಸ್ಥಿತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ ಎಂದು ದೂರಿದರು.
ಒಂದು ದಿನ ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ಸಮೀಪ ಗಂಗಾ ನದಿಯಲ್ಲಿ ನೂರಾರು ಹೆಣಗಳು ತೇಲಾಡುತ್ತಿದ್ದುದ್ದನ್ನು ಕಂಡು ಇವರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದರು. ಆ ಹೆಣಗಳು ವಾಸನೆ ಬರುತ್ತಿದ್ದವು, ಅವುಗಳನ್ನು ನಾಯಿಗಳು ಎಳೆದಾಡುತ್ತಿದ್ದವು. ಈ ಹೆಣಗಳ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡಬೇಕೆಂದು ಗುಡ್ಡು ಬಾಬಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರು. ಎಲ್ಲರಿಗೂ ಗೌರವಯುತವಾಗಿ ಇಹಲೋಕ ತ್ಯಜಿಸುವ ಹಕ್ಕಿದೆ ಎಂಬುದು ಅವರ ಭಾವನೆ.
ಸರ್ಕಾರ ಇದಕ್ಕೆ ಒಪ್ಪದಾಗ ಗುಡ್ಡುಬಾಬಾ ಕೋರ್ಟ್ ಮೆಟ್ಟಿಲೇರಿದರು. ಬೀದಿ ಬೀದಿಯಲ್ಲಿ ಹೆಣಗಳ ಫೋಟೋ ಹಾಕಿ ಹೋರಾಟ ನಡೆಸಿದರು. ಸುಧೀರ್ಘ ಹೋರಾಟದ ಬಳಿಕ ಹೆಣಗಳ ಅಂತ್ಯಸಂಸ್ಕಾರ ಮಾಡಲೇ ಬೇಕು ಎಂದು ಕೋರ್ಟ್ ಆದೇಶಿಸಿತು. ಅದರಂತೆ ತಲಾ 300 ರೂಪಾಯಿ ಶವಸಂಸ್ಕಾರಕ್ಕೆ ಸರ್ಕಾರ ನಿಗದಿ ಮಾಡಿತು. ಪೋಸ್ಟ್ ಮಾರ್ಟಮ್ ಕೂಡ ಮಾಡಲು ಒಪ್ಪಿಕೊಂಡಿತು. ಬಳಿಕ ಗಂಗೆಯಲ್ಲಿನ ಪ್ರತಿ ಹೆಣಗಳ ಅಂತ್ಯಸಂಸ್ಕಾರದ ಜವಾಬ್ದಾರಿ ಸರ್ಕಾರದ್ದಾಯಿತು. 2007ರಲ್ಲಿ ಅಂತ್ಯಸಂಸ್ಕಾರದ ಧನವನ್ನು 1 ಸಾವಿರಕ್ಕೆ ಏರಿಸಿತು.
ಗಂಗೆಗೆ ಸಂಬಂಧಪಟ್ಟಂತೆ ಗುಡ್ಡು ಬಾಬಾ ಒಟ್ಟು 38 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿಯೇ ಈಗ ಗಂಗೆಯಲ್ಲಿ ತೇಲುತ್ತಿರುವ ಹೆಣಗಳ ಸಂಖ್ಯೆ ಕಡಿಮೆಯಾಗಿದೆ. ಇವರ ಕಾರ್ಯ ಇಷ್ಟಕ್ಕೆ ಮುಗಿಯುವುದಿಲ್ಲ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಗಂಗಾ ಆಕ್ಷನ್ ಪ್ಲ್ಯಾನ್ ಅನ್ವಯ 1986 ರಲ್ಲಿ ಸ್ಥಾಪಿಸಲಾದ ನಿಷ್ಕ್ರಿಯ ಕೊಳಚೆ ನೀರು ಘಟಕಗಳು ಮತ್ತೆ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಶ್ರಮಿಸಿದರು.
ಇದೀಗ ಬಾಬಾ ಒಬ್ಬರೇ ಅಲ್ಲ ಅವರಿಗೆ ಬೆನ್ನೆಲುಬಾಗಿ ಸಮಾನ ಮನಸ್ಕರ ಒಂದು ಸೇನೆಯೇ ಸೃಷ್ಟಿಯಾಗಿದೆ. ನೂರಾರು ಸ್ವಯಂಸೇವಕರು ಗಂಗೆಯ ಶುದ್ಧೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೆಯಲ್ಲಿ ಬಿದ್ದ ಪ್ಲಾಸ್ಟಿಕ್, ಕಸಗಳನ್ನು ಹೆಕ್ಕುವ ಕಾರ್ಯಗಳನ್ನು ಇವರು ನಿರಂತರವಾಗಿ ಮಾಡುತ್ತಿದ್ದಾರೆ.
ಕೋರ್ಟ್ ಹೋರಾಟ ನಡೆಸಲೂ ಅವರ ಹಿತೈಷಿಗಳು ಅವರಿಗೆ ಹಣಕಾಸು ನೆರವು ನೀಡಿದ್ದಾರೆ. ಎನ್ಜಿಓ, ಚಾರಿಟಿ ಸಂಸ್ಕೃತಿಯಲ್ಲಿ ನನಗೆ ನಂಬಿಕೆಯಿಲ್ಲ ಎನ್ನುವ ಅವರು, ಅರ್ಚಕರಾಗಿ, ಶಿಕ್ಷಕರಾಗಿ ಒಂದಿಷ್ಟು ಹಣ ಸಂಪಾದನೆ ಮಾಡುತ್ತಾರೆ.
ಗುಡ್ಡು ಬಾಬಾ ಅವರಿಗೆ ಗಂಗೆಯ ಸ್ವಚ್ಛತೆ ಮಾಡುವಲ್ಲಿ ಹಲವಾರು ಸವಾಲುಗಳು ಎದುರಾಗಿವೆ, ಬೆದರಿಕೆಗಳನ್ನು ಅವರು ಎದುರಿಸಿದ್ದಾರೆ. ಆದರೆ ನನ್ನ ಗುರಿ ಸ್ಪಷ್ಟವಾಗಿದ್ದು ಯಾರೊಬ್ಬರಿಗೂ ನನ್ನನ್ನು ತಡೆಯುವ ಶಕ್ತಿಯಿಲ್ಲ ಎಂದು ಕಟುವಾಗಿ ಅವರು ಹೇಳುತ್ತಾರೆ.
ಗಂಗೆ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾಳೆ, ಒಂದಲ್ಲ ಒಂದು ದಿನ ಶುದ್ಧ ನದಿ ಎಂಬ ಹೆಸರನ್ನು ಆಕೆ ಪಡೆದೇ ಪಡೆಯುತ್ತಾಳೆ. ಆದರೆ ನಾನು ವಿಶ್ರಾಂತಿ ಪಡೆಯುವುದಿಲ್ಲ. ನನಗೆ ನನ್ನ ಗುರಿ ಮುಟ್ಟಲು ಇನ್ನೂ ಮೈಲುಗಟ್ಟಲೆ ನಡೆಯಬೇಕಾಗಿದೆ ಎಂದು ಗುಡ್ಡು ಬಾಬಾ ಉತ್ಸಾಹದಿಂದ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.