ಸುಳ್ಯ: ಸುಳ್ಯ ತಾಲೂಕಿನಲ್ಲಿರುವ ಡಿಸಿ ಮನ್ನಾ ಭೂಮಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ತಹಶೀಲ್ದಾರ್ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀವ್ರ ಚರ್ಚೆ ನಡೆಯಿತು. ಡಿಸಿ ಮನ್ನಾ ಭೂಮಿಯನ್ನು ಅತಿಕ್ರಮಣ ಮಾಡಿದವರಿಗೆ ನೋಟಿಸ್ ನೀಡಲಾಗುತ್ತಿದ್ದು ಅತಿಕ್ರಮಣ ಮಾಡಿದವರನ್ನು ತೆರವು ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಹಶೀಲ್ದಾರ್ ಸಭೆಗೆ ತಿಳಿಸಿದರು. ಡಿಸಿ ಮನ್ನಾ ಭೂಮಿಯ ಮೂಲ ದಾಖಲೆ ಪ್ರತಿ ಸೇರಿದಂತೆ ಸುಳ್ಯ ತಾಲೂಕಿನಲ್ಲಿರುವ ಡಿಸಿ ಮನ್ನಾ ಭೂಮಿಯ ಸಂಪೂರ್ಣ ವಿವರ ನೀಡಬೇಕು ಎಂದು ಸಭೆಯಲ್ಲಿ ಮಾತನಾಡಿದ ಕೆ.ಎಂ.ಬಾಬು ಜಾಲ್ಸೂರು ಮತ್ತಿತರರು ಆಗ್ರಹಿಸಿದರು. ಡಿಸಿ ಮನ್ನಾ ಭೂಮಿಯ ಎಲ್ಲಾ ವಿವರಗಳನ್ನೂ ನೀಡುವುದಾಗಿ ತಹಶೀಲ್ದಾರ್ ಹೇಳಿದರು.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗಾಂಧೀನಗರದ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಹೆಸರಿನಲ್ಲಿ ಪರವಾನಿಗೆ ಪಡೆದ ಮಳಿಗೆಗಳಲ್ಲಿ ಇತರರು ವ್ಯಾಪಾರ ನಡೆಸುತ್ತಿರುವ ಬಗ್ಗೆ ಚರ್ಚೆ ನಡೆದು ಯಾರ ಹೆಸರಿನಲ್ಲಿ ಮಳಿಗೆಯ ಪರವಾನಿಗೆ ನೀಡಲಾಗಿದೆಯೋ ಅವರೇ ವ್ಯಾಪಾರ ಮಾಡಬೇಕು. ಪ.ಜಾತಿ, ಪಂ.ಪಂಗಡದವರ ಹೆಸರಿನಲ್ಲಿ ಪರವಾನಿಗೆ ಪಡೆದು ಬೇರೆಯವರು ವ್ಯಾಪಾರ ನಡೆಸುತ್ತಿದ್ದರೆ ಅಂತಹವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ನಗರ ಪಂಚಾಯತ್ಗೆ ಸೂಚಿಸಲಾಯಿತು.
ನಗರ ಪಂಚಾಯತ್ನ ವಾಣೀಜ್ಯ ಸಂಕೀರ್ಣದಲ್ಲಿ ಸರ್ಕಾರಿ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆಂದು ಮೀಸಲಿರಿಸಿದ ಆರು ಕೋಣೆಗಳನ್ನು ವ್ಯಾಪಾರ ವಹಿವಾಟು ನಡೆಸಲು ಏಲಂ ಮಾಡಿ ನೀಡಲಾಗಿದೆ ಎಂದು ನಗರ ಪಂಚಾಯತ್ ಅಧಿಕಾರಿ ಮಾಹಿತಿ ನೀಡಿದರು.
ಸುಳ್ಯದ ಅಂಬೇಡ್ಕರ್ ಭವನದ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು, ಕೇರ್ಪಳದ ಹಿಂದೂ ರುದ್ರಭೂಮಿಯ ಸ್ಥಿತಿ ಶೋಚನೀಯವಾಗಿದೆ. ಅದನ್ನು ಸರಿಪಡಿಸಬೇಕು, ಸುಳ್ಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ಇತರ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಆಗ್ರಹಿಸಿದರು. ಅಕ್ರಮ ಕಲ್ಲುಕೋರೆಗಳಿಗೆ, ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರಗಳನ್ನು ವಿತರಿಸಬೇಕೆಂದು ನಾರಾಯಣ ಜಟ್ಟಿಪಳ್ಳ ಒತ್ತಾಯಿಸಿದರು. ಈ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅನುದಾನಿತ ಶಾಲೆಗಳಲ್ಲಿರುವ ಎಸ್ಸಿ, ಎಸ್ಟಿ ಖೋಟಾದಡಿಯಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕೆ.ಎಂ.ಬಾಬು ಜಾಲ್ಸೂರು, ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಶಿಕ್ಷಣಾಕ್ಕಾಗಿ ಬ್ಯಾಂಕ್ಗಳಿಂದ ದೊರೆಯುವ ಶಿಕ್ಷಣ ಸಾಲಕ್ಕೆ ವಿದ್ಯಾರ್ಥಿಗಳನ್ನು ಅಲೆದಾಡಿಸಬಾರದು ಎಂದು ಶಿಕ್ಷಣ ಇಲಾಖೆಯು ಬ್ಯಾಂಕ್ಗಳಿಗೆ ಆದೇಶ ನೀಡಬೇಕು ಎಂದು ಅಚ್ಚುತ ಮಲ್ಕಜೆ ಒತ್ತಾಯಿಸಿದರು.
ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಬಡವರನ್ನು ವಾಹನಗಳಲ್ಲಿ ಮಿತಿಗಿಂತ ಹೆಚ್ಚು ತುಂಬಿ ಕೆಲಸಕ್ಕೆ ಕರೆದೊಯ್ಯುತ್ತಾರೆ ಈ ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಂದರಾಜ್ ಸಂಕೇಶ್ ಆಗ್ರಹಿಸಿದರು. ಕೆಡಿಪಿಯ ನಾಮನಿರ್ದೇಶಿತ ಸದಸ್ಯರಾದ ಅಚ್ಚುತ ಮಲ್ಕಜೆಯವರಿಗೆ ತಾಲೂಕು ಕೆಡಿಪಿ ಸಭೆಯ ಮಾಹಿತಿ ನೀಡದೆ ಇರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು. ಎಣ್ಮೂರು ಮತ್ತು ಬಳ್ಪ ಗ್ರಾಮ ಪಂಚಾಯತ್ಗಳಲ್ಲಿ ಪರಿಶಿಷ್ಟ ಜಾತಿಯ ನೌಕರರಿಗೆ ಅನ್ಯಾಯ ಆಗಿದೆ ಎಂದು ಸಭೆಯಲ್ಲಿ ಆಕ್ಷೇಪ ಎತ್ತಲಾಯಿತು.
ಸೀತಾನಂದ ಬೇರ್ಪಡ್ಕ, ಸಂಜಯಕುಮಾರ್, ಶಂಕರ್ ಪೆರಾಜೆ, ಸರಸ್ವತಿ ಬೊಳಿಯಮಜಲು, ಲಕ್ಷ್ಮಿ ಸುಬ್ರಹ್ಮಣ್ಯ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ರಾಮಕೃಷ್ಣ ಭಟ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.