ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ ಖಾಯಿಲೆಯಿಂದಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದರೂ ತನ್ನ ಸ್ಥಿತಿಯನ್ನು ತನಗಿರುವ ವಿಶೇಷ ಸಾಮರ್ಥ್ಯ ಎಂದೇ ಪರಿಗಣಿಸಿದ ಅಜಿತ್ ಇದೀಗ ಎರಡು ಯಶಸ್ವಿ ಕಂಪನಿಯ ಮಾಲೀಕನಾಗಿ ತನ್ನ ಸಾಮರ್ಥ್ಯವನ್ನು ದೃಢಪಡಿಸಿದ್ದಾನೆ.
ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ ಖಾಯಿಲೆಯಿಂದಾಗಿ ಬಾಲ್ಯದಿಂದಲೇ ಅನೇಕ ಕಷ್ಟಗಳನ್ನು ಅನುಭವಿಸಿದ್ದ ಅಜಿತ್ ಬಾಬು ವಯಸ್ಸು ಕೇವಲ 26. ಈ ಸಣ್ಣ ವಯಸ್ಸಲ್ಲಿ ಆತ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ 1989ರಲ್ಲಿ ಪ್ರಿಮೆಚ್ಯೂರ್ ಮಗುವಾಗಿ ಖಾಯಿಲೆ ಪೀಡಿತನಾಗಿ ಜನಿಸಿದ ಈತ ತನ್ನ ಅಸಮಾರ್ಥ್ಯತೆ ತನ್ನ ಹಾದಿಗೆ ಮುಳ್ಳಾಗದಂತೆ ಎಚ್ಚರಿಕೆ ವಹಿಸುತ್ತಾ ಬೆಳೆದ.
ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಎಂಬ ಎನ್ಜಿಓ ಈತನ ಖಾಯಿಲೆಗೆ ಚಿಕಿತ್ಸೆ ನೀಡಿತ್ತು. ಅಷ್ಟೇ ಅಲ್ಲದೇ ಆತನ ತಂದೆ ತಾಯಿಗೆ ಆತನನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಅರಿವನ್ನೂ ನೀಡಿತು. ಅದರಂತೆ ಆತನ ಪೋಷಕರು ಆತನನ್ನು ಬೆಳೆಸಿದರು. ಆತನಿಗೆ ತಾನು ಈ ರೀತಿಯ ಖಾಯಿಲೆಯಿಂದ ಬಳಲುತ್ತಿದ್ದೇನೆ ಎಂಬ ನೋವು ಕಾಡದಂತೆ ನೋಡಿಕೊಂಡರು.
ಬೆಳೆಯುತ್ತಾ ಬೆಳೆಯುತ್ತಾ ಬರವಣಿಗೆ, ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ತಳೆದ ಅಜಿತ್, ಕ್ರಿಶ್ಟು ಜಯಂತಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ. ಕಾಲೇಜು ದಿನಗಳಲ್ಲೇ ಕಾಲ್ ಸೆಂಟರ್ ಸೇರಿ ವಿವಿಧೆಡೆ ಉದ್ಯೋಗಗಳನ್ನು ಮಾಡಿದ, ವಿದ್ಯಾಭ್ಯಾಸದ ಬಳಿಕವೂ ಒಂದು ಕಡೆ ನಿಂತು ಉದ್ಯೋಗ ಮಾಡುವುದರಿಂದ ಬೋರ್ ಎನಿಸಿ ಒಂದು ಕಡೆಯಿಂದ ಒಂದು ಕಡೆಗೆ ಪಲಾಯನ ಮಾಡುತ್ತಿದ್ದ. ಬಳಿಕ ಇದೆಲ್ಲವುಗಳಿಂದ ಬೇಸತ್ತು ತಾನೇ ಒಂದು ಸ್ವ-ಉದ್ಯೋಗ ಮಾಡಲು ಮುಂದಾದ.
ಬರವಣಿಗೆ, ನಿರ್ದೇಶನದಲ್ಲಿ ಮೊದಲೇ ಆಸಕ್ತಿ ಹೊಂದಿದ್ದ ಅಜಿತ್ ಸ್ನೇಹಿತನೊಂದಿಗೆ ಸೇರಿ ಡ್ರೀಮ್ ಕ್ಲಿಕ್ ಕಾನ್ಸೆಪ್ಟ್ ಎಂಬ ಒಂದು ಜಾಹೀರಾತು ಕಂಪನಿ ಆರಂಭಿಸಿದ. ಇದು ಯಶಸ್ವಿಯಾಯಿತು. ಅಷ್ಟೇ ಅಲ್ಲದೇ ಶಾಲಾ ಕಾಲೇಜುಗಳಿಗೆ ತೆರಳಿ ಆತ ಸ್ಪೂರ್ತಿ ತುಂಬುವ ಭಾಷಣಗಳನ್ನು ಮಾಡುತ್ತಿದ್ದ, ಉದ್ಯೋಗ ಆರಂಭ, ಮಾರ್ಕೆಟಿಂಗ್ ಬಗ್ಗೆ ಮಾಹಿತಿ ನೀಡುವ ಕಾಯಕ ಮಾಡಿದ.
ಮಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಂಪ್ ಆಗುತ್ತಿರುವುದು ಅಜಿತ್ ಪೋಷಕರಿಗೆ ಸರಿ ಬರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಆತನ ತಂದೆ ವಿಕಲಚೇತನ ಖೋಟಾದಡಿ ರೈಲ್ವೇಯಲ್ಲಿ ಉದ್ಯೋಗ ಮಾಡುವಂತೆ ಸಲಹೆ ನೀಡಿದರು, ಆದರೆ ಕರುಣೆಯಿಂದ ಕೆಲಸ ಗಿಟ್ಟಿಸಿಕೊಳ್ಳುವ ಇಚ್ಛೆ ಇಲ್ಲದ ಆತ ಅದಕ್ಕೆ ಸುತಾರಾಂ ಒಪ್ಪಲಿಲ್ಲ.
ನೇಪಾಳ ಭೂಕಂಪದ ಬಳಿಕ ಅಜಿತ್ ತಲೆಯಲ್ಲಿ ಮತ್ತೊಂದು ಐಡಿಯಾ ಹೊಳೆಯಿತು. ಅದೇನೆಂದರೆ ರಿನೆವೇಬಲ್ ಎನರ್ಜಿಯನ್ನು ಜನರ ನಿತ್ಯ ಜೀವನದ ಭಾಗವಾಗಿಸುವುದು. ಅದಕ್ಕಾಗಿ ಆತ ಲೈಫ್ಹ್ಯಾಕ್ ಎಂಬ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿದ. ಗೆಳೆಯರ ಸಹಾಯದಿಂದ 7 ರಿಂದ 8 ಲಕ್ಷ ರೂಪಾಯಿ ಸಂಗ್ರಹಿಸಿ ಅದನ್ನು ಸಂಸ್ಥೆಗೆ ಬಳಸಿ, ಐದು ಜನರ ತಂಡ ಮಾಡಿದ. ಸೋಲಾರ್ ಎನರ್ಜಿ, ವಿಂಡ್ ಎನರ್ಜಿ, ಎಲೆಕ್ಟ್ರಿಸಿಟಿ ಚಾರ್ಜರ್ ಹೀಗೆ ಪುನಶ್ಚೇತನಗೊಳಿಸಬಲ್ಲ ಇಂಧನದ ಮೂಲವನ್ನು ಬಳಸಿ ಗ್ಯಾಡ್ಜೆಟ್ ತಯಾರಿಸುವ ಸಂಸ್ಥೆ ಇದಾಗಿದೆ. ಈ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಬೇಕು ಎಂಬ ಗುರಿ ಆತನದ್ದು.
ನೀವು ಏನಾದರೂ ಮಾಡಿ ಬದುಕುವುದೋ ಅಥವಾ ಸಾಯುವುದೋ ಎಂಬ ಆಯ್ಕೆಯನ್ನು ಮುಂದಿಟ್ಟುಕೊಂಡಾಗ, ಅದು ಸಾಯುವ ಆಯ್ಕೆಯೇ ಸುಲಭ ಎಂದೆನಿಸುತ್ತದೆ. ಆದರೆ ನೀವು ಬೆಳಿಗ್ಗೆ ಎದ್ದಾಗ ನಿಮ್ಮೆದುರಿಗಿರುವ ಆಯ್ಕೆ ಕೇವಲ ‘ಏನಾದರೂ ಮಾಡಿ ಬದುಕಬೇಕೆಂದು’, ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಬಲ್ಲವನೇ ಏನನ್ನಾದರೂ ಸಾಧಿಸಬಲ್ಲ, ಸಾಧಕನಾಗಬಲ್ಲ. ಸಾಧನೆಗಿಂತ ಮೇಲಾದದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ ಎಂದೆನ್ನುತ್ತಾನೆ ಅಜಿತ್.
ಇದೀಗ ಲೈಫ್ಹ್ಯಾಕ್, ಡ್ರೀಮ್ ಕ್ಲಿಕ್ ಕಾನ್ಸೆಪ್ಟ್ ಕಂಪನಿಗಳ ಸ್ಥಾಪಕನಾಗಿರುವ ಅಜಿತ್ ಭವಿಷ್ಯದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದಾನೆ. ಅಲ್ಪ ಅಂಗವೈಕಲ್ಯವನ್ನು, ಜಾತಿಯನ್ನು ಮುಂದಿಟ್ಟುಕೊಂಡು ಮೀಸಲಾತಿ ಕೊಡಿ ಎಂದು ಬೊಬ್ಬಿಡುವವರ ಮುಂದೆ ಅಜಿತ್ ಬಾಬು ವಿಭಿನ್ನವಾಗಿ ನಿಲ್ಲುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.