
ಮಾರ್ಚ್ 20, 2000ದ ಸಂಜೆ, ಆಗಿನ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಭಾರತ ಭೇಟಿಗೆ ಕೆಲವು ಗಂಟೆಗಳ ಮೊದಲು, ಮಿಲಿಟರಿ ಶೈಲಿಯ ಸಮವಸ್ತ್ರ ಧರಿಸಿದ 15-20 ಮುಸುಕುಧಾರಿ ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿರುವ ಸಿಖ್ ಪ್ರಾಬಲ್ಯದ ಚಿಟ್ಟಿಸಿಂಗ್ಪೋರಾ ಗ್ರಾಮಕ್ಕೆ ನುಗ್ಗಿ, ಅಲ್ಪಸಂಖ್ಯಾತ ಸಿಖ್ ಸಮುದಾಯದ ಮೇಲೆ ಗುರಿಯಾಗಿಟ್ಟುಕೊಂಡು ಹತ್ಯಾಕಾಂಡ ನಡೆಸಿದರು. ಎರಡು ಗುಂಪು ಮಾಡಿಕೊಂಡಿದ್ದ ಉಗ್ರರು, ಶೌಕೀನ್ ಮೊಹಲ್ಲಾ ಗುರುದ್ವಾರ ಮತ್ತು ಸಿಂಗ್ ಸಭಾ ಸುಮಂದ್ರಿ ಹಾಲ್ ಗುರುದ್ವಾರದ ಹೊರಗೆ ಕೇವಲ 150 ಮೀಟರ್ ಅಂತರದಲ್ಲಿ ಸಿಖ್ ಪುರುಷರನ್ನು ಸುತ್ತುವರೆದು, ಪಾಯಿಂಟ್-ಬ್ಲಾಂಕ್ ರೇಂಜ್ನಲ್ಲಿ ಗುಂಡು ಹಾರಿಸಿ, 36 ಪುರುಷರನ್ನು ಕೊಂದರು. ಈ ದಾಳಿಯು ಸುಮಾರು 30 ಮಹಿಳೆಯರು ವಿಧವೆಯರನ್ನಾಗಿಸಿತು, ಅನೇಕ ಮಕ್ಕಳನ್ನು ಅನಾಥರನ್ನಾಗಿ ಮಾಡಿತು ಮತ್ತು ಸಿಖ್ ಸಮುದಾಯದಲ್ಲಿ ಭಯವನ್ನು ಹರಡಿತು, ಈ ಘಟನೆ ಹಲವಾರು ಕುಟುಂಬಗಳು ಕಣಿವೆಯನ್ನು ತೊರೆಯಲು ಪ್ರೇರೇಪಿಸಿತು. ಇದರ ಪರಿಣಾಮವಾಗಿ, ಹಲವಾರು ಸಿಖ್ ಕುಟುಂಬಗಳು ತಮ್ಮ ಸುರಕ್ಷತೆಗಾಗಿ ಮತ್ತು ಕಣಿವೆಯಲ್ಲಿ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಿಂದ ಪ್ರದೇಶವನ್ನು ತೊರೆದು ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಿಗೆ ಅಥವಾ ರಾಜ್ಯದ ಹೊರಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದರು.
ನಾನಕ್ ಸಿಂಗ್ ಎಂಬ ಒಬ್ಬ ವ್ಯಕ್ತಿ ಮಾತ್ರ ಈ ಘಟನೆಯಲ್ಲಿ ಬದುಕುಳಿದರು; ಅವರ ಕಥೆಯೇ ಬಲು ರೋಚಕ.
ಬೂದು ಗಡ್ಡ ಮತ್ತು ಸೌಮ್ಯ ಧ್ವನಿಯನ್ನು ಹೊಂದಿದ್ದ ವಯಸ್ಸಾದ ನಾನಕ್ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದರು. ಆ ರಾತ್ರಿ, ನಾನಕ್ ತನ್ನ ಮಗ ಗುರ್ಮೀತ್ ಸಿಂಗ್, ಸಹೋದರ ದರ್ಬಾರಿ ಸಿಂಗ್ ಮತ್ತು ಮೂವರು ಸೋದರಸಂಬಂಧಿಗಳಾದ ಸರ್ತಾಜ್ ಸಿಂಗ್, ಕುಲ್ಬೀರ್ ಸಿಂಗ್ ಮತ್ತು ಉಜ್ಜಲ್ ಸಿಂಗ್ ಅವರನ್ನು ಕಳೆದುಕೊಂಡು ಅನಾಥರಾದರು. ಅಂದು ನಾನಕ್ ತಮ್ಮ ಫೆರಾನ್, ಸಾಂಪ್ರದಾಯಿಕ ಕಾಶ್ಮೀರಿ ನಿಲುವಂಗಿಯನ್ನು ಧರಿಸಿ ಪ್ರತಿದಿನದಂತೆ ಇತರರ ಜೊತೆ ದೇವಾಲಯದಿಂದ ಮನೆಗೆ ನಡೆದುಕೊಂಡು ಹರಟೆ ಹೊಡೆಯುತ್ತಾ ಸಾಗುತ್ತಿದ್ದರು. ಬಂದೂಕುಧಾರಿಗಳು ಹಿಂದಿನಿಂದ ಕಿರಿದಾದ ಹಾದಿಯ ಮೂಲಕ ಅವರ ಹಳ್ಳಿಗೆ ಬಂದರು. ಮೊದಲಿಗೆ, ಉಗ್ರರ ಆಗಮನ ಹೆಚ್ಚು ಆತಂಕಕಾರಿಯಾಗಿ ಕಾಣಲಿಲ್ಲ, ಯಾಕೆಂದರೆ ಆ ದಿನಗಳಲ್ಲಿ ಶಸ್ತ್ರಸಜ್ಜಿತ ಜನರನ್ನು ನೋಡುವುದು ಸಾಮಾನ್ಯವೇ ಆಗಿತ್ತು. ಅವರು ಸೈನಿಕರು ಎಂದು ಜನ ಭಾವಿಸಿದ್ದರು. ಆದರೆ ಶೀಘ್ರದಲ್ಲೇ, ಏನೋ ತುಂಬಾ ತಪ್ಪು ಸಂಭವಿಸಲಿದೆ ಎಂದು ಅರಿವಾಯಿತು. ಒಬ್ಬ ವ್ಯಕ್ತಿ ಶಸ್ತ್ರಧಾರಿಗಳಿಗೆ ಆದೇಶಗಳನ್ನು ನೀಡುತ್ತಿರುವಂತೆ ತೋರುತ್ತಿತ್ತು. ಆದೇಶದ ಬಳಿಕ ಶಸ್ತ್ರಧಾರಿಗಳು ಎರಡು ಗುಂಪುಗಳಾಗಿ ಬೇರ್ಪಟ್ಟರು. ಒಂದು ಗುಂಪು ರಸ್ತೆಯ ಕೆಳಗೆ ಒಂದು ಧಾರ್ಮಿಕ ಕಟ್ಟಡದ ಕಡೆಗೆ ಹೋಯಿತು.
ನಾನಕ್ ಮತ್ತು ಇತರರು ಬಂದೂಕುಧಾರಿಗಳನ್ನು ಏನು ನಡೆಯುತ್ತಿದೆ ಎಂದು ಕೇಳಿದರು. “ಎಲ್ಲವೂ ಸರಿಯಾಗಿದೆ, ಗುರುತಿನ ಚೀಟಿಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದೇವೆ. ಕೇವಲ 10 ನಿಮಿಷಗಳು ಮಾತ್ರ ತೆಗೆದುಕೊಳ್ಳುತ್ತದೆ” ಎಂದು ಬಂದೂಕುಧಾರಿಗಳು ಉತ್ತರಿಸಿದರು. ನಂತರ ಕೆಲವು ಬಂದೂಕುಧಾರಿಗಳು ಹತ್ತಿರದ ಮನೆಗಳಿಗೆ ಹೋಗಿ ಪುರುಷರನ್ನು ಹೊರತಂದರು. ಹೊರಗೆ ಕರೆತಂದವರಲ್ಲಿ ನಾನಕ್ ಅವರ ಮಗ ಗುರ್ಮೀತ್ ಸಿಂಗ್ ಕೂಡ ಇದ್ದರು,, ಅವರು ಆಗಷ್ಟೇ ಶಾಲೆ ಮುಗಿಸಿದ್ದರು, ನಾನಕ್ ಅವರ 28 ವರ್ಷದ ಸಹೋದರ ದರ್ಬಾರಿ ಸಿಂಗ್, ಇಬ್ಬರು ಚಿಕ್ಕ ಮಕ್ಕಳೊಂದಿಗೆ ಇದ್ದರು, ಮತ್ತು ನಾನಕ್ ಅವರ ಮೂವರು ಸೋದರಸಂಬಂಧಿಗಳು: 22 ವರ್ಷದ ಸರ್ತಾಜ್ ಸಿಂಗ್, 20 ವರ್ಷದ ಕುಲ್ಬೀರ್ ಸಿಂಗ್ ಮತ್ತು 25 ವರ್ಷದ ಉಜ್ಜಲ್ ಸಿಂಗ್ ಕೂಡ ಅಲ್ಲಿ ಸೇರಿದ್ದರು. ಸರ್ತಾಜ್ ಸಿಂಗ್ ಮದುವೆಯಾಗಿ ಕೇವಲ 10 ತಿಂಗಳುಗಳಾಗಿತ್ತು. ಬಂದೂಕುಧಾರಿಗಳು ಗ್ರಾಮದ ಜನರಲ್ಲಿ ಉಗ್ರರ ಬಗ್ಗೆ ಕೇಳಿದರು, ಕೆಲವರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ತಮಗೆ ಇದೆ ಅದಕ್ಕಾಗಿ ಕೇಳುತ್ತಿದ್ದೇವೆ ಎಂದರು. ಅಲ್ಲಿಯವರೆಗೂ ಅವರುಗಳು ತಾವು ಉಗ್ರರು ಎಂಬ ಸತ್ಯವನ್ನು ತೋರ್ಪಡಿಸಿರಲಿಲ್ಲ. ನಾನಕ್ ಮತ್ತು ಇತರರು ತಾವು ಯಾವುದೇ ಉಗ್ರರನ್ನು ನೋಡಿಲ್ಲ ಮತ್ತು ಬಂದೂಕುಧಾರಿಗಳು ತಪ್ಪು ಮಾಹಿತಿಯನ್ನು ಹೊಂದಿರಬಹುದು ಎಂದು ಉತ್ತರಿಸಿದರು. ನಾನಕ್ ಅವರ ಮನಸ್ಸಿನಲ್ಲಿ ಆತಂಕ ನಡೆಯಲಿರುವ ಆಲೋಚನೆಗಳು ಬರಲಾರಂಭಿಸಿದವು. ಅವರು ಹತ್ತಿರದಲ್ಲಿ ನಿಂತಿದ್ದ ತಮ್ಮ ನೆರೆಯ ಚರಣ್ ಸಿಂಗ್ಗೆ ಸದ್ದಿಲ್ಲದೆ ಪಿಸುಗುಟ್ಟಿದರು, ಆ ದಿನ ನಾವೆಲ್ಲರೂ ಸಾಯುತ್ತೇವೆ ಎಂಬ ಭಯವನ್ನು ವ್ಯಕ್ತಪಡಿಸಿದರು. ಅವರ ಆತಂಕ ನಿಜವಾಗಿತ್ತು, ಬಂದೂಕುಧಾರಿಗಳು ನರಭಕ್ಷಣೆಗಾಗಿ ಅಲ್ಲಿಗೆ ಬಂದಿದ್ದರು.
ಒಂದು ಧಾರ್ಮಿಕ ಕಟ್ಟಡದ ಹೊರಗೆ ಜನರನ್ನು ಸಾಲುಗಟ್ಟಿ ನಿಲ್ಲಿಸಿದರು.. ಈ ಗುಂಪಿನಲ್ಲಿ 19 ವ್ಯಕ್ತಿಗಳಿದ್ದರು. ನಾನಕ್ ಅವರ ಮಗ ಗುರ್ಮೀತ್ ಸಿಂಗ್ ಅವರ ಪಕ್ಕದಲ್ಲಿಯೇ ನಿಂತಿದ್ದರು. ಅದೇ ಸಮಯದಲ್ಲಿ, ಇನ್ನೊಂದು ಗುಂಪಿನ ಬಂದೂಕುಧಾರಿಗಳು ಸುಮಾರು 150 ಮೀಟರ್ ದೂರದಲ್ಲಿರುವ ಮತ್ತೊಂದು ಧಾರ್ಮಿಕ ಕಟ್ಟಡದ ಹೊರಗೆ 17 ಜನರನ್ನು ಸಾಲಾಗಿ ನಿಲ್ಲಿಸಿದರು. ಸಂಜೆ 7:45 ಆಗಿತ್ತು. ನಾನಕ್ ಅವರ ಗುಂಪಿನ ಮುಂದೆ ಸುಮಾರು ಎಂಟರಿಂದ ಹತ್ತು ಬಂದೂಕುಧಾರಿಗಳು ಇದ್ದರು. ಆದರೂ, ಜನರಿಗೆ ಬಂದೂಕುಧಾರಿಗಳ ನಿಜವಾದ ಯೋಜನೆಯ ಬಗ್ಗೆ ಖಚಿತವಿರಲಿಲ್ಲ.
ನಂತರ, ಬಂದೂಕುಧಾರಿಗಳಲ್ಲಿ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ, ಅದು ಇನ್ನೊಂದು ಗುಂಪಿಗೆ ಸಂಕೇತ. ಅದರ ನಂತರ, ಅವರು ನಿಲ್ಲದೆ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡು ಹಾರಾಟ ಹಲವಾರು ನಿಮಿಷಗಳ ಕಾಲ ನಡೆಯಿತು. ಎಲ್ಲರೂ ನೆಲಕ್ಕೆ ಬಿದ್ದರು. ನಾನಕ್ಗೆ ಮೊದಲಿಗೆ ಗುಂಡು ತಗುಲಿಲ್ಲ ಆದರೆ ನೆಲಕ್ಕೆ ಬಿದ್ದು ಸತ್ತಂತೆ ನಟಿಸಿ, “ವಾಹೇಗುರು ಜಿ, ವಾಹೇಗುರು ಜಿ” ಎಂದು ಸದ್ದಿಲ್ಲದೆ ಪ್ರಾರ್ಥಿಸಿದರು. ಗುಂಡು ಹಾರಾಟ ನಿಂತಿತು, ಮತ್ತು ಬಂದೂಕುಧಾರಿಗಳು ಬಿದ್ದವರ ಮೇಲೆ ಟಾರ್ಚ್ಗಳನ್ನು ಬೆಳಗಿಸಿದರು. ಅವರಲ್ಲಿ ಒಬ್ಬರು ಆದೇಶ ನೀಡಿದರು: “ಈ ಜನರನ್ನು ಮತ್ತೆ ಗುಂಡು ಹಾರಿಸಿ. ಯಾರೂ ಜೀವಂತವಾಗಿರದಂತೆ ನೋಡಿಕೊಳ್ಳಿ.” ಆ ಕ್ಷಣದಲ್ಲಿ, ನಾನಕ್ ಸಾಯಲು ಸಿದ್ಧನಾಗಿದ್ದ.
ಅವರು ಮತ್ತೆ ಗುಂಡು ಹಾರಿಸಿದರು. ನಾನಕ್ ಅವರ ಎಡಗಾಲಿಗೆ ಗುಂಡು ತಗುಲಿ ಬಲತೊಡೆಯ ಕೀಲು ಮುರಿದುಹೋಯಿತು. ಅವರು ಕಿರುಚಲಿಲ್ಲ. ಬಂದೂಕುಧಾರಿಗಳು ಹೊರಟುಹೋದಾಗ, ಅವರು ಬಂದ ದಾರಿಯಲ್ಲಿಯೇ ಕಣ್ಮರೆಯಾದರು. ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಕಣ್ಣು ತೆರೆದಾಗ, ಯಾರೋ ತನ್ನ ತೋಳಿನಿಂದ ತನ್ನನ್ನು ಹಿಡಿದುಕೊಂಡಿರುವುದನ್ನು ಅವನು ನೋಡಿದರು. ತೋಳನ್ನು ಎತ್ತಿದಾಗ, ಅದು ತನ್ನ ಮಗ ಗುರ್ಮೀತ್ ಎಂದು ಅವನಿಗೆ ಅರಿವಾಯಿತು. ನಾನಕ್ ತನ್ನ ಮಗನ ದೇಹವನ್ನು ಅಲ್ಲಾಡಿಸಿ, ಅವನನ್ನು ಕರೆದು ಎಬ್ಬಿಸಲು ಪ್ರಯತ್ನಿಸಿದರು. ನಂತರ, ತನ್ನ ಮಗನ ತಲೆಯನ್ನು ಮುಟ್ಟಿದಾಗ, ಅದು ರಕ್ತದಲ್ಲಿ ತೊಯ್ದಿರುವುದು ಕಂಡುಬಂದಿತು. ನಾನಕ್ ಅವರ ಮುಖದಲ್ಲಿ ಕಣ್ಣೀರು ಹರಿಯಿತು. ಅವರಿಗೆ ನಿಲ್ಲಲು ಸಾಧ್ಯವಾಗಲಿಲ್ಲ. ಕುಡಿಯಲು ನೀರು ಬೇಕಿತ್ತು.
ರಕ್ತದ ಮಡುವಿನಲ್ಲಿ ನಾನಕ್ ಅವರ ಮುಂದೆ ಶವಗಳ ರಾಶಿ ಬಿದ್ದಿತ್ತು. ಕೆಲವರು ಇನ್ನೂ ಸ್ವಲ್ಪ ಉಸಿರಾಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಅನೇಕ ಗುಂಡುಗಳು ತಗುಲಿದ್ದವು, ಬಹುಶಃ 10 ರಿಂದ 12 ಗುಂಡುಗಳು ಬಿದ್ದಿದ್ದವು. ಆ ಭಯಾನಕ ದೃಶ್ಯ ಇನ್ನೂ ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿ ಉಳಿದಿದೆ. ಬಲಿಷ್ಠ ವ್ಯಕ್ತಿಯಾಗಿದ್ದ ಅವರ ಸೋದರಸಂಬಂಧಿ ಸರ್ತಾಜ್ ಸಿಂಗ್, ಅನೇಕ ಗುಂಡುಗಳಿಂದ ಹೊಡೆದಿದ್ದರೂ ಸಹ ಒಂದು ಮನೆಗೆ ನಡೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು. ನಂತರ, ಗ್ರಾಮಸ್ಥರು ಅಳುತ್ತಾ ದುಃಖಿಸುತ್ತಾ ಬಂದರು. ನಾನಕ್ ಅವರನ್ನು ಅಲ್ಲಿಂದ ಕರೆದೊಯ್ಯಲಾಯಿತು. ಬಂದೂಕುಧಾರಿಗಳು ಗ್ರಾಮವನ್ನು ಹತ್ಯೆಯ ಸ್ಥಳವನ್ನಾಗಿ ಮಾಡಿದ್ದರು. ರಸ್ತೆ ರಕ್ತದಿಂದ ಕೆಂಪಾಗಿತ್ತು ಮತ್ತು ರಕ್ತವು ಪಾದಗಳ ಕೆಳಗೆ ಹರಿಯುತ್ತಿತ್ತು.
ನಾನಕ್ ಮತ್ತು ಅವರ ಗಾಯಗೊಂಡ ಸೋದರಸಂಬಂಧಿ ಸರ್ತಾಜ್ ಸಿಂಗ್ ಅವರನ್ನು ಒಂದು ಕೋಣೆಯಲ್ಲಿ ಇರಿಸಲಾಯಿತು. ಗ್ರಾಮದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ಅಳುತ್ತಾ ಸಹಾಯಕ್ಕಾಗಿ ಕಿರುಚುತ್ತಿದ್ದರು. ಹಳ್ಳಿಯ ಕೆಲವು ಯುವಕರು ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ ಓಡಿಹೋದರು. ನಾನಕ್ ಕೂಡ ಅಳುತ್ತಾ ಕಿರುಚುತ್ತಿದ್ದರು. ಅವರು ತಮ್ಮ ಪ್ರೀತಿಯ ಮಗನ ಕ್ರೂರ ಸಾವನ್ನು ಕಣ್ಣಾರೆ ಕಂಡಿದ್ದರು.
ಸರ್ತಾಜ್ ಸಿಂಗ್ ದುರ್ಬಲ ಧ್ವನಿಯಲ್ಲಿ ನಾನಕ್ ಅವರನ್ನು ಅಳು ನಿಲ್ಲಿಸುವಂತೆ ಹೇಳಿದರು. ಪೊಲೀಸರು ಗ್ರಾಮವನ್ನು ತಲುಪುವ ಹೊತ್ತಿಗೆ ಸರ್ತಾಜ್ ಸಿಂಗ್ ನಿಧನರಾದರು. ತಕ್ಷಣದ ವೈದ್ಯಕೀಯ ಸಹಾಯದಿಂದ ಸರ್ತಾಜ್ ಸಿಂಗ್ ಬದುಕುಳಿಯುತ್ತಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.ಹ. ಪೊಲೀಸರು ನಾನಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಮತ್ತು ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ, ಮತ್ತು ನಂತರ ಸೇನಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು 25 ದಿನಗಳ ಕಾಲ ಇದ್ದರು ಮತ್ತು ಒಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಇನ್ನೂ ನಡೆಯಲು ಸಾಧ್ಯವಾಗದೆ, ಅವರು ಅಮೃತಸರಕ್ಕೆ ಹೋದರು, ಅಲ್ಲಿ ಸಿಖ್ ಸಮಿತಿಯು ಹಿರಿಯ ವೈದ್ಯರನ್ನು ಹುಡುಕಲು ಸಹಾಯ ಮಾಡಿತು.
ಸೊಂಟ ಬದಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಅವರು, ಚೇತರಿಸಿಕೊಳ್ಳಲು ತಿಂಗಳುಗಟ್ಟಲೆ ಸಮಯ ಕಳೆದರು, ಮಗನ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಸಹ ಸಾಧ್ಯವಾಗಲಿಲ್ಲ. ಆಘಾತದಿಂದ ಜರ್ಜರಿತರಾದ ಅವರು ನಂತರ ಸಂಬಂಧಿಕರೊಂದಿಗೆ ಇದ್ದರು, ಏಕೆಂದರೆ ಪ್ರೀತಿಪಾತ್ರರನ್ನು ಕ್ರೂರವಾಗಿ ಕೊಲ್ಲುವುದನ್ನು ನೋಡುವುದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ.
ಬದುಕುಳಿದ ಏಕೈಕ ವ್ಯಕ್ತಿಯಾಗಿ, ನಾನಕ್ ಸಂದರ್ಶನಗಳನ್ನು ನೀಡಿದರು ಮತ್ತು ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಕ್ಷ್ಯ ನೀಡಿದರು, ಆದರೆ ಯಾವುದೇ ನ್ಯಾಯ ದೊರೆಯಲಿಲ್ಲ. ಹತ್ಯಾಕಾಂಡವು ಯೋಜಿತವಾಗಿ ಕಂಡುಬಂದಿತು, ಆದರೆ ತನಿಖೆಗಳು ದೋಷಪೂರಿತವಾಗಿದ್ದವು ಮತ್ತು ಭರವಸೆಗಳು ಈಡೇರಲಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಭೇಟಿಯ ಸಮಯದಲ್ಲಿ ಕಾಶ್ಮೀರದ ಬಗ್ಗೆ ತಪ್ಪು ಸಂದೇಶವನ್ನು ಕಳುಹಿಸಲು ಈ ಹತ್ಯೆಗಳನ್ನು ಉದ್ದೇಶಿಸಲಾಗಿದೆ ಎಂದು ನಂತರ ಸೂಚಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷಗಳಿಂದ ನಡೆಯುತ್ತಿರುವ ಇತರ ಹತ್ಯಾಕಾಂಡಗಳಂತೆ, ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಈ ಹತ್ಯೆಯನ್ನು ನಡೆಸಿವೆ ಎಂದು ಸರ್ಕಾರ ಪ್ರತಿಪಾದಿಸಿತು.
ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸುಹೇಲ್ ಮಲಿಕ್ ಅನ್ನು ಬಂಧಿಸಲಾಯಿತು ಮತ್ತು ಅವರು ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ.
ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಭಾರತ ಭೇಟಿಗೆ ಹೊಂದಿಕೆಯಾಗುವಂತೆಯೇ ಈ ದಾಳಿಯನ್ನು ಯೋಜಿಸಲಾಗಿತ್ತು. ನಂತರ ಅವನನ್ನು ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿತು. ಮಲಿಕ್ ಎಲ್ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಸೋದರಳಿಯ.
ಹತ್ಯಾಕಾಂಡದ ನಂತರ, ನಾನಕ್ ಕಾಶ್ಮೀರವನ್ನು ತೊರೆಯಲು ನಿರಾಕರಿಸಿದರು, ಆಘಾತದ ಹೊರತಾಗಿಯೂ ತಮ್ಮ ಹಳ್ಳಿಯಲ್ಲಿಯೇ ಉಳಿಯಲು ಆಯ್ಕೆ ಮಾಡಿಕೊಂಡರು. ಪ್ರತಿ ವರ್ಷ, ನಿವಾಸಿಗಳು ಮೂರು ದಿನಗಳ ಕಾಲ ಬಲಿಪಶುಗಳಿಗೆ ಶೋಕ ವ್ಯಕ್ತಪಡಿಸುತ್ತಾರೆ, ಆದರೂ ನ್ಯಾಯದ ಭರವಸೆ ಮಸುಕಾಗಿದೆ ಮತ್ತು ಹತ್ಯೆಗಳು ಬಗೆಹರಿಯದೆ ಉಳಿದಿವೆ. ಬಲಿಪಶುಗಳ ಕುಟುಂಬಗಳಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗಗಳು ದೊರೆತವು.
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳಿಂದ ಅಮಾಯಕ, ನಿರಾಯುಧ ಗ್ರಾಮಸ್ಥರ, ವಿಶೇಷವಾಗಿ ಮುಸ್ಲಿಮೇತರರ ಹತ್ಯಾಕಾಂಡವು ನಿಯಮಿತ ಘಟನೆಯಾಗಿದೆ. ಕಣಿವೆಯಲ್ಲಿ ಪ್ರತ್ಯೇಕತಾವಾದಿ ಪಡೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇಸ್ಲಾಮಿಕ್ ಭಯೋತ್ಪಾದಕರು ಅನೇಕ ಸಂದರ್ಭಗಳಲ್ಲಿ ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಣಿವೆಯ ದೂರದ ಹಳ್ಳಿಗಳಲ್ಲಿರುವ ಬಡ, ಮುಗ್ಧ ಗ್ರಾಮಸ್ಥರನ್ನು ಹಲವಾರು ಸಂದರ್ಭಗಳಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


