
ಸಮವಸ್ತ್ರ ಧರಿಸಿರುವ ಬಿಎಸ್ಎಫ್ ಯೋಧರು ಭಾರತ-ಪಾಕ್ ಗಡಿಯಲ್ಲಿರುವ ತನೋಟ್ ಮಾತಾ ಮಂದಿರದಲ್ಲಿ ಶಕ್ತಿಶಾಲಿ ನಗಾರಿ ಬಾರಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ಪದ್ಧತಿ, ಆದರೆ ಅದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಅದೊಂದು ಕೃತಜ್ಞತೆ ಅರ್ಪಣೆ ಮಾಡುವ ಸಂಪ್ರದಾಯ. ಏಕೆಂದರೆ ನಗಾರಿಯ ಪ್ರತಿಯೊಂದು ಬಡಿತವು ದೇವಿ ಮಾತಾ ತನೋಟಳನ್ನು ಗೌರವಿಸುತ್ತದೆ, ಬಿಎಸ್ಎಫ್ ಸೈನಿಕರು ನಂಬುವಂತೆ ಭಾರತದ ಪಾಕಿಸ್ಥಾನದೊಂದಿಗಿನ ಎರಡು ಭೀಕರ ಯುದ್ಧಗಳಲ್ಲಿ ಅವರನ್ನು ರಕ್ಷಿಸಿದ್ದು ಆಕೆಯೇ. ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 20 ಕಿ.ಮೀ. ದೂರದಲ್ಲಿ ನಿಂತಿರುವ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ತನೋಟ್ ಮಾತಾ ಮಂದಿರವು ಕೇವಲ ಧಾರ್ಮಿಕ ಸ್ಥಳವಲ್ಲ, ಅದು ಬಿಎಸ್ಎಫ್ ಯೋಧರ ಮನೋಬಲವನ್ನು ವೃದ್ಧಿಸುವ ಶಕ್ತಿ ಕೇಂದ್ರ.
ಸಂಪೂರ್ಣವಾಗಿ ಬಿಎಸ್ಎಫ್ನಿಂದ ನಡೆಸಲ್ಪಡುವ ಮತ್ತು ನಿರ್ವಹಿಸಲ್ಪಡುವ ಈ ತನೋಟ್ ಮಾತಾ ಮಂದಿರವು ಭಾರತದ ಎರಡು ಅತ್ಯಂತ ನಿರ್ಣಾಯಕ ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ದೇಗುಲದ ಆವರಣದಲ್ಲಿ ಸ್ಫೋಟಗೊಳ್ಳದ ಪಾಕಿಸ್ಥಾನಿ ಬಾಂಬ್ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೇ ವಿಜಯ ಸ್ಮಾರಕವೂ ಇದೆ. 1965ರ ಭಾರತ-ಪಾಕ್ ಯುದ್ಧ ಮತ್ತು 1971ರ ಲಾಂಗೇವಾಲಾ ಕದನದ ಸಮಯದಲ್ಲಿ ದೇವಾಲಯದ ಸುತ್ತಲೂ 450 ಬಾಂಬ್ಗಳನ್ನು ಹಾಕಲಾಗಿದೆ, ಆದರೆ ಒಂದೇ ಒಂದು ಬಾಂಬ್ ಕೂಡ ಮಂದಿರ ಸಂಕೀರ್ಣದೊಳಗೆ ಸ್ಫೋಟಗೊಳ್ಳಲಿಲ್ಲ. ಆದ್ದರಿಂದ ತನೋಟ್ ಮಾತಾ ಮಂದಿರವು ರಕ್ಷಣೆ ಮತ್ತು ಭಾರತೀಯ ಸೈನಿಕರ ಮನೋಬಲದ ಸಂಕೇತವಾಗಿ ಹೊರಹೊಮ್ಮಿತು. ಅತ್ಯಧಿಕ ಪ್ರತಿಕೂಲತೆಗಳ ನಡುವೆಯೂ ಮಂದಿರ ದೃಢವಾಗಿ ನೆಲೆಯೂರಿದೆ ಎಂದರೆ ಬಿಎಸ್ಎಫ್ ಮತ್ತು ದೇವಾಲಯದ ನಡುವೆ ಇರುವ ಅಚಲ ಬಾಂಧವ್ಯವೇ ಕಾರಣ ಎಂದರೆ ತಪ್ಪಲ್ಲ.
ಡಿಸೆಂಬರ್ ಮಂದಿರ ಮತ್ತು ಬಿಎಸ್ಎಫ್ ಎರಡಕ್ಕೂ ಪವಿತ್ರವಾದ ಮಹತ್ವವನ್ನು ಹೊಂದಿರುವ ತಿಂಗಳು. 1965ರ ಡಿಸೆಂಬರ್ 1ರಂದು ಬಿಎಸ್ಎಫ್ ಅಧಿಕೃತವಾಗಿ ರಚನೆಯಾಗಿ ಭಾರತದ ಗಡಿಗಳನ್ನು ಕಾಯುವ ಜವಾಬ್ದಾರಿಯನ್ನು ತೆಗೆದುಕೊಂಡಿತು. ಕೇವಲ ಆರು ವರ್ಷಗಳ ನಂತರ, 1971ರ ಡಿಸೆಂಬರ್ 16ರಂದು—ಈಗ ವಿಜಯ ದಿವಸ್ ಎಂದು ನೆನಪಿಸಿಕೊಳ್ಳುವ ದಿನ ಭಾರತವು ಪಾಕಿಸ್ತಾನದ ಮೇಲೆ ಐತಿಹಾಸಿಕ ವಿಜಯ ಸಾಧಿಸಿತು ಮತ್ತು ತನೋಟ್ ಮಾತಾ ಮಂದಿರವು ಆ ವಿಜಯದ ಕಥೆಯ ಹೃದಯಭಾಗದಲ್ಲಿತ್ತು. ಇಂದು ನಾವು ಬಿಎಸ್ಎಫ್ ಮತ್ತು ತನೋಟ್ ಮಾತಾ ಮಂದಿರದ ನಡುವಿನ ಅದ್ಭುತ ಬಾಂಧವ್ಯದ ಕಥೆಯನ್ನು ಮತ್ತು ಮರುಭೂಮಿಯಲ್ಲಿರುವ ತನೋಟ್ ದೇವಾಲಯವು 1965 ಮತ್ತು 1971ರ ಭಾರತ-ಪಾಕ್ ಯುದ್ಧಗಳ ಸಮಯದಲ್ಲಿ ರಕ್ಷಣೆಯ ಸಂಕೇತವಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನು ಎಲ್ಲರು ತಿಳಿಯಬೇಕಾದುದು ಅವಶ್ಯಕ.
1965 ಮತ್ತು 1971ರ ಯುದ್ಧಗಳ ಸಂದರ್ಭದಲ್ಲಿ ಮಾತಾ ತನೋಟ್ ಬಿಎಸ್ಎಫ್ ಯೋಧರನ್ನು ರಕ್ಷಿಸಿದ್ದಾಳೆ. ಬಿಎಸ್ಎಫ್ನ ತನೋಟ್ ಮಾತಾ ಜೊತೆಗಿನ ಬಾಂಧವ್ಯ ಏಕೆ ಅಸಾಧಾರಣವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಮೊದಲು 1965ರ ಭಾರತ-ಪಾಕಿಸ್ತಾನ ಯುದ್ಧದತ್ತ ಹೊರಳಬೇಕು, ಥಾರ್ನ ನಿಶ್ಶಬ್ದವು ಫಿರಂಗಿ ಗುಂಡಿನ ಧ್ವನಿಯಿಂದ ಛಿದ್ರಗೊಂಡ ಸಂದರ್ಭವನ್ನು ಮೆಲುಕು ಹಾಕಬೇಕು. ಬಿಎಸ್ಎಫ್ ಯುದ್ಧ ಡೈರಿ ಮತ್ತು ತನೋಟ್ ಯುದ್ಧ ಮ್ಯೂಸಿಯಂನಲ್ಲಿರುವ ಪ್ರದರ್ಶನ ಫಲಕಗಳ ಪ್ರಕಾರ, ಮಂದಿರದ ಸುತ್ತಲೂ ಮತ್ತು ಒಳಗೆ 450ಕ್ಕೂ ಹೆಚ್ಚು ಶೆಲ್ಗಳನ್ನು ಪಾಕಿಸ್ಥಾನದ ಕಡೆಯಿಂದ ಹಾರಿಸಲಾಗಿತ್ತು, ಆದರೆ ಒಂದೂ ಶೆಲ್ ದೇವಾಲಯದೊಳಗೆ ಸ್ಫೋಟಗೊಳ್ಳಲಿಲ್ಲ. ಹಲವು ಶೆಲ್ಗಳು ಸಂಕೀರ್ಣದೊಳಗೆ ಬಿದ್ದವು ಮತ್ತು ಈಗಲೂ ಅವುಗಳನ್ನು ಸಂರಕ್ಷಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಯುದ್ಧದ ನಂತರ, ಭಾರತ ಸರ್ಕಾರವು ಮಂದಿರವನ್ನು ಬಿಎಸ್ಎಫ್ಗೆ ಒಪ್ಪಿಸಿತು. 1969ರಲ್ಲಿ ಬಿಎಸ್ಎಫ್ ಅಧಿಕೃತವಾಗಿ ತನೋಟ್ ಮಾತಾ ಮಂದಿರ ಟ್ರಸ್ಟ್ ಅನ್ನು ರಚಿಸಿ ದೈನಂದಿನ ಕಾರ್ಯಾಚರಣೆಗಳು, ನಿರ್ವಹಣೆ, ಆಚರಣೆಗಳು ಮತ್ತು ಯುದ್ಧ ಅವಶೇಷಗಳ ಸಂರಕ್ಷಣೆಯನ್ನು ನಡೆಸುತ್ತಿದೆ. ಬಿಎಸ್ಎಫ್ ಈಗಲೂ ಬೆಳಗಿನ ಮತ್ತು ಸಂಜೆಯ ಆರತಿಯನ್ನು ತನೋಟ್ ಮಂದಿರದಲ್ಲಿ ನಡೆಸುತ್ತದೆ, ಭಕ್ತರನ್ನು ನಿರ್ವಹಿಸುತ್ತದೆ ಮತ್ತು ಸ್ಮಾರಕಗಳನ್ನು ನಿರ್ವಹಿಸುತ್ತದೆ.
ಆರು ವರ್ಷಗಳ ನಂತರ 1971ರ ಭಾರತ-ಪಾಕ್ ಯುದ್ಧದಲ್ಲಿ, ತನೋಟ್ ಸುತ್ತಲಿನ ಪ್ರದೇಶ ಮತ್ತೊಮ್ಮೆ ನಿರ್ಣಾಯಕ ಸೈನಿಕ ಪ್ರದೇಶವಾಯಿತು. ಲಾಂಗೇವಾಲಾ ಪೋಸ್ಟ್ಗೆ ತೆರಳುತ್ತಿದ್ದ ಸೈನಿಕರು ಆಶೀರ್ವಾದಕ್ಕಾಗಿ ಮಂದಿರಕ್ಕೆ ಭೇಟಿ ನೀಡುತ್ತಿದ್ದರು. ಯುದ್ಧ ಮತ್ತು ಸೈನಿಕ ಇತಿಹಾಸಗಳಲ್ಲಿ ದಾಖಲಾದ ಅಂಶಗಳ ಪ್ರಕಾರ, ಲಾಂಗೇವಾಲಾ ಕದನದಲ್ಲಿ 120ಕ್ಕೂ ಕಡಿಮೆ ಸಂಖ್ಯೆಯ ಭಾರತೀಯ ಯೋಧರು ಬಹಳ ದೊಡ್ಡ ಪಾಕಿಸ್ತಾನಿ ಟ್ಯಾಂಕ್ ಪಡೆಯನ್ನು ತಡೆದು ನಿಲ್ಲಿಸಿದ್ದರು ಎಂಬ ಅಂಶ ಅಧಿಕೃತ ಯುದ್ಧ ಇತಿಹಾಸಗಳಲ್ಲಿ ದಾಖಲಾಗಿದೆ ಮತ್ತು ತನೋಟ್ ಮಾತೆ ಯೋಧರಿಗೆ ಕರುಣಿಸಿದ ಮನೋಬಲಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ, ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಬಾಂಬ್ ಸ್ಫೋಟಗಳು ನಡೆದರೂ ಮಂದಿರ ಅಸ್ಪೃಶ್ಯವಾಗಿ ಉಳಿದಿತ್ತು. ಈ ಪವಾಡ ರಾಜಸ್ಥಾನದಲ್ಲಿ ನಿಯೋಜಿತನಾದ ಪ್ರತಿಯೊಬ್ಬ ಸೈನಿಕನ ಆಧ್ಯಾತ್ಮಿಕ ಸ್ಮೃತಿಯಲ್ಲಿ ತನೋಟ್ ಮಾತೆಯ ಸ್ಥಾನವನ್ನು ಗಟ್ಟಿಗೊಳಿಸಿತು.
ಪ್ರತಿ ವರ್ಷ ಡಿಸೆಂಬರ್ 16ರಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ತನೋಟ್ ಮಾತಾ ಮಂದಿರದಲ್ಲಿ ಸೇರಿ ವಿಜಯ ದಿವಸ್ ಆಚರಿಸುತ್ತದೆ, 1971ರ ಯುದ್ಧದಲ್ಲಿ ಭಾರತದ ನಿರ್ಣಾಯಕ ವಿಜಯವನ್ನು ಸ್ಮರಿಸುತ್ತದೆ. ಬಿಎಸ್ಎಫ್ಗೆ ಈ ಆಚರಣೆಯು ಆಳವಾಗಿ ಭಾವನಾತ್ಮಕವಾಗಿದೆ. 1965 ರ ಡಿಸೆಂಬರ್ 1ರಂದು ಬಿಎಸ್ಎಫ್ ಜನ್ಮತಾಳಿರುವ ಕಾರಣ ತನೋಟ್ ಮಾತಾ ಮಂದಿರವು ಡಿಸೆಂಬರ್ನಲ್ಲಿ ಡಬಲ್ ಆಚರಣೆಗೆ ಸಾಕ್ಷಿಯಾಗುತ್ತದೆ. ಬಿಎಸ್ಎಫ್ನ ಉದಯ ಮತ್ತು ವಿಜಯ ದಿವಸ್ ಎರಡರ ಆಚರಣೆಯೂ ಇಲ್ಲಿ ನಡೆಯುತ್ತದೆ. ಪ್ರತಿ ವರ್ಷ ತನೋಟ್ ಮಾತಾ ಮಂದಿರವು ಪರೇಡ್ಗಳು, ಸ್ಮರಣಾರ್ಥ ಸೇವೆಗಳು ಮತ್ತು ಯುದ್ಧ ಗೌರವ ಕಾರ್ಯಕ್ರಮಗಳಿಗೆ ಪ್ರತಿವರ್ಷ ಸಾಕ್ಷಿಯಾಗುತ್ತದೆ. ಪ್ರತಿಯೊಬ್ಬ ಬಿಎಸ್ಎಫ್ ಯೋಧನಿಗೂ ಮಾರ್ಗದರ್ಶನ ಮಾಡುತ್ತಿರುವ ಮಾತೆ ತನೋಟ್ ದೇವಿಯ ದೈವಿಕ ರಕ್ಷಣೆಯನ್ನು ಈ ಕಾರ್ಯಕ್ರಮಗಳು ನೆನಪಿಸಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



