
2001 ಡಿಸೆಂಬರ್ 13 ಭಾರತದ ಇತಿಹಾಸದ ಅತ್ಯಂತ ಕಪ್ಪು ದಿನಗಳಲ್ಲಿ ಒಂದು. ಅಂದು ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯ ಬಗ್ಗೆ ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದಾಗಲೇ 2006ರಲ್ಲಿ ಅರುಂಧತಿ ರಾಯ್ ಒಂದು ಪುಸ್ತಕ ಬಿಡುಗಡೆ ಮಾಡಿದರು: “13 ಡಿಸೆಂಬರ್: ಎ ರೀಡರ್ — ದಿ ಸ್ಟ್ರೇಂಜ್ ಕೇಸ್ ಆಫ್ ದಿ ಅಟ್ಯಾಕ್ ಆನ್ ದಿ ಇಂಡಿಯನ್ ಪಾರ್ಲಿಮೆಂಟ್” ಎಂಬುದು ಆ ಪುಸ್ತಕದ ಹೆಸರು. ಈ ಪುಸ್ತಕದಲ್ಲಿ ಅವರು ತನಿಖೆಯ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ಸಂಸತ್ ದಾಳಿಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೊಹಮ್ಮದ್ ಅಫ್ಜಲ್ ಗುರುಗೆ ಬೆಂಬಲವನ್ನೂ ಸೂಚಿಸಿದ್ದರು
ಅರುಂಧತಿ ಸುಜಾನ್ನಾ ರಾಯ್ ಒಂದು ಕಾಲದಲ್ಲಿ ಭಾರತದ ಸಾಹಿತ್ಯ ತಾರೆಯಾಗಿದ್ದವರು. 1977ರಲ್ಲಿ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕಾದಂಬರಿಗೆ ಬುಕರ್ ಪ್ರಶಸ್ತಿ ಬಂದಾಗ ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆದಿದ್ದರು. ಆದರೆ ಕೇವಲ ಒಂಬತ್ತೇ ವರ್ಷದೊಳಗೆ ಅವರು ತೀರಾ ಭಿನ್ನ ದಾರಿ ಹಿಡಿದಿದ್ದರು – ಭಾರತಕ್ಕೆಯೇ ಸವಾಲು ಹಾಕುವ, ಅನೇಕರ ಪ್ರಕಾರ ಭಾರತ-ವಿರೋಧಿ ಕಥಾನಕಕ್ಕೆ ಕೊಡುಗೆ ನೀಡುವ ದಾರಿ ಅದಾಗಿತ್ತು. ಆಕೆಯ ಪಯಣ ಪ್ರಶಸ್ತಿ ವಿಜೇತ ಬರಹಗಾರ್ತಿ ಎಂಬ ಹೆಗ್ಗಳಿಕೆಯಿಂದ ವಿವಾದಾತ್ಮಕ ಸಾರ್ವಜನಿಕ ವ್ಯಕ್ತಿ ಎಂದು ಕರೆಸಿಕೊಳ್ಳುವಲ್ಲಿಗೆ ಅವರನ್ನು ಕರೆತಂದಿತು.
ಕಾದಂಬರಿಗಳಿಗಿಂತ ರಾಜಕೀಯ ಹೇಳಿಕೆಗಳಿಂದಲೇ ಹೆಚ್ಚು ಪ್ರಚಾರ ಪಡೆದರು
ಕಾಲಕ್ರಮೇಣ ಅರುಂಧತಿಯವರ ಧ್ವನಿ ಬದಲಾಯಿತು. ಒಂದು ಕಾಲದಲ್ಲಿ ಕಲ್ಪನೆ ಮತ್ತು ಕಥೆಗಳಿಂದ ತುಂಬಿದ್ದ ಅವರ ಧ್ವನಿ ಚೂಪಾದ ಕೋಪದಿಂದ ಕೂಡಿದ ವಿವಾದಾತ್ಮಕ ಧ್ವನಿಯಾಯಿತು. ಭಾರತವನ್ನು ಕೇವಲ ತಾವೊಬ್ಬರೇ ಕಾಣುವ ಕತ್ತಲೆಯ ತಾಣವನ್ನಾಗಿ ವಿಮರ್ಶಿಸಲು ಅವರು ಆರಂಭಿಸಿದರು.
2013ರಲ್ಲಿ ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಅಫ್ಜಲ್ ಗುರು ಗಲ್ಲು ಶಿಕ್ಷೆಯನ್ನು ಅವರು “ಭಾರತದ ಪ್ರಜಾಪ್ರಭುತ್ವದ ಮೇಲಿನ ಕಲಂಕ” ಎಂದು ಕರೆದರು. ಯಾವ ವ್ಯಕ್ತಿ ಸಂಸತ್ ದಾಳಿಗೆ ಕಾರಣಕರ್ತನಾಗಿದ್ದನೋ ಅವನ ಬೆಂಬಲಕ್ಕೆ ಆಕೆ ಮುಂದಾದರು! ಸಂದರ್ಶನದ ಮೇಲೆ ಸಂದರ್ಶನಗಳನ್ನು ನೀಡಿ ಅವರು ಭಾರತವನ್ನು “ಹಿಂದೂ ಫ್ಯಾಸಿಸ್ಟ್ ಉದ್ಯಮ”, “ದೇವಮಾನವರ ವೇಷದಲ್ಲಿರುವ ಗ್ಯಾಂಗ್ಸ್ಟರ್ಗಳಿಂದ ಆಳಲ್ಪಡುವ ದೇಶ” ಎಂದು ಚಿತ್ರಿಸಿದರು. ಸೆಪ್ಟೆಂಬರ್ 2022ರಲ್ಲಿ “ಪ್ರತಿದಿನ ಎಚ್ಚರವಾದರೆ ಏನೋ ಭಯಾನಕ ಸಂಗತಿ…” ಎಂದರು. ಇಂತಹ ಹೇಳಿಕೆಗಳಲ್ಲಿ ಅವರು ತಮ್ಮ ಜಗತ್ತನ್ನು ವರ್ಣಿಸುತ್ತಿದ್ದರೋ ಅಥವಾ ಭಾರತವನ್ನೋ? ಆಕೆ ಸಂಸ್ಥೆಗಳು, ಪೊಲೀಸರು, ಸರ್ಕಾರ, ಸಾಮಾನ್ಯ ಜನರು ಹೀಗೆ ಎಲ್ಲೆಡೆಯೂ ಶತ್ರುಗಳನ್ನು ಕಾಣತೊಡಗಿದರು.
2022 ಸೆಪ್ಟೆಂಬರ್ನಲ್ಲಿ ಅಮೆರಿಕದ ಸೇಂಟ್ ಲೂಯಿಸ್ನಲ್ಲಿ ಭಾರತವನ್ನು “ಒಡೆದುಹೋಗುತ್ತಿರುವ ರಾಷ್ಟ್ರ” ಎಂದು ಬಣ್ಣಿಸಿದರು. ಗುಂಪು ಹತ್ಯೆಗಳು, ಗಲ್ಲು ಶಿಕ್ಷೆಗಳು ಭಾರತದಲ್ಲಿ ದೈನಂದಿನ ಸಂಗತಿ ಎಂಬ ಚಿತ್ರಣವನ್ನು ಮುಂದಿಟ್ಟರು. ಅವರ ದೃಷ್ಟಿಯಲ್ಲಿ ಭಾರತ ಪ್ರಜಾಪ್ರಭುತ್ವವಲ್ಲ, ಅದು ಬುಲ್ಡೋಜರ್ಗಳು, ಸಾಮುದಾಯಿಕ ದ್ವೇಷ, ನಿರಂತರ ಹಿಂಸೆಯ ಸ್ಥಳ. ಒಂದು ಕಾಲದಲ್ಲಿ ಕಲ್ಪನೆಯಿಂದ ಕೂಡಿದ್ದ ಕಥೆಗಾರ್ತಿಯ ಧ್ವನಿ ಇಂದು ಕೇವಲ ಕೆಳಮಟ್ಟಕ್ಕಿಳಿದ ಭಾಷೆಯಾಗಿ ಮಾರ್ಪಟ್ಟಿತು. ದೇಶ ನಿರಂತರ ಅಂತರ್ಯುದ್ಧದ ಅಂಚಿನಲ್ಲಿದೆಯೆಂಬಂತೆ ಮಾತನಾಡಿ ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ಅವರು ವಿವಾದಾತ್ಮಕವಾಗಿ ರೂಪಿಸಿಕೊಂಡರು.
2023 ಆಗಸ್ಟ್ 11ರಂದು ದೆಹಲಿಯ ಬಗ್ಗೆ ಅವರು ತಮ್ಮ ಭಯ ಹಂಚಿಕೊಂಡು ದೊಡ್ಡ ಸುದ್ದಿಯನ್ನೇ ಮಾಡಿದ್ದರು. “ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ರಸ್ತೆಯಲ್ಲಿ ನಡೆದಾಡಲು ತುಂಬಾ ಹೆದರುತ್ತೇನೆ. ಸಣ್ಣ ವಿಷಯಕ್ಕೆ 50 ಜನ ಕೇಸರಿ ಶಾಲು ಹಾಕಿಕೊಂಡು ಬಂದುಬಿಡುತ್ತಾರೆ. ದೆಹಲಿಯಿಂದ ಅಲೀಗಢಕ್ಕೆ ತಂದೆ-ತಾಯಿಯನ್ನು ಭೇಟಿಯಾಗಲು ಹೋಗುತ್ತಿರುವಾಗ ಹಿಂತಿರುಗಿ ಬಾರದೆ ಸತ್ತೂ ಹೋಗಬಹುದು. ಈಗ ನಾವು ವಾಸಿಸುತ್ತಿರುವ ದೇಶ ಇದು” ಎಂದು ಅವರು ಹೇಳಿದ್ದರು.
ಕೊನೆಗೆ ಭಾರತದ ವಿರುದ್ಧ ಕೆಲಸ ಮಾಡುವವರಿಗೆ ಬೆಂಬಲ ನೀಡತೊಡಗಿದರು. ಮಾವೋವಾದಿಗಳು, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಅವರ ಲೇಖನಗಳಲ್ಲಿ ನಾಯಕರಾದರು. ದಂಗೆಗಳು “ಪ್ರತಿರೋಧ”ವಾದವು. 2024ರಲ್ಲಿ ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಅನ್ನು ತಮ್ಮ ಸ್ನೇಹಿತ ಎಂದು ಕರೆದು ಅವನ ಕಾರಾಗೃಹವಾಸಕ್ಕೆ ವಿರೋಧ ವ್ಯಕ್ತಪಡಿಸಿದರು. “ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ” ಎಂಬ ಹೇಳಿಕೆಗಳು ಅವರಿಂದ ಆಗಾಗ ಬರುತ್ತವೆ. ಭಾರತೀಯ ಸೇನೆಯ ಮೇಲೆಯೂ ಅವರ ಅಸಹನೆ ಆಗಾಗ ಮುನ್ನಲೆಗೆ ಬರುತ್ತದೆ. ಅತ್ಯಾಚಾರವನ್ನು ಶಸ್ತ್ರಾಸ್ತ್ರವನ್ನಾಗಿ ಸೇನೆ ಬಳಸುತ್ತಿದೆ ಎಂಬ ಆರೋಪವನ್ನೂ ಕೂಡ ಅವರು ಮಾಡಿದ್ದಾರೆ.
ಆಕೆಯ ಪ್ರಕಾರ ಆಡಳಿತ ಯಾವಾಗಲೂ ತಪ್ಪು, ರಾಷ್ಟ್ರ ಸದಾ ದಬ್ಬಾಳಿಕೆ ಮಾಡುತ್ತದೆ, ಭಾರತ ವಿರೋಧಿಗಳು ಸದಾ ನೀತಿವಂತರು. ತೀವ್ರ ರಾಷ್ಟ್ರವಿರೋಧಿ ಮನಸ್ಥಿಯೇ ಅವರ ವ್ಯಕ್ತಿತ್ವದ ಗುರುತಾಯಿತು. ಅರುಂಧತಿ ರಾಯ್ ಎಷ್ಟು ಪ್ರಖರವಾಗಿ ಭಾರತದ ವಿರುದ್ಧ ಮಾತನಾಡಿದರೋ ಅಷ್ಟೂ ಪ್ರಬಲವಾಗಿ ಸೃಜನಶೀಲ ಬರಹಗಾರ್ತಿಯಿಂದ “ದೇಶವಿರೋಧಿ” ಗುರುತಿನ ವ್ಯಾಪಾರಿಯಾಗಿ ಮಾರ್ಪಡುತ್ತಾ ಬಂದರು. ದೇಶ-ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ತಪ್ಪಾಗಿ ಚಿತ್ರಿಸುವುದೇ ಅವರ ಜೀವನ ಕಥೆಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



