ಭಾರತೀಯ ನೌಕಾಪಡೆಯ ಹೊಸ ಹೆಮ್ಮೆ ಐಎನ್ಎಸ್ ನಿಸ್ತಾರ್. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತೀಯ ನೌಕಾಪಡೆಯ ಮೊತ್ತ ಮೊದಲ ಸ್ಥಳೀಯ ಡೈವಿಂಗ್ ಬೆಂಬಲ ಹಡಗು. ಐಎನ್ಎಸ್ ನಿಸ್ತಾರ್ ಎಂದು ಹೆಸರಿಸಲಾಗಿರುವ ಇದನ್ನು, ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ. ವಿಶ್ವದ ಕೆಲವೇ ನೌಕಾಪಡೆಗಳು ಮಾಡಲು ಸಾಧ್ಯವಾಗುವ ಆಳ ಸಮುದ್ರಗಳಲ್ಲಿನ ಡೈವಿಂಗ್ ಮತ್ತು ರಕ್ಷಣೆಯಂತಹ ಕಷ್ಟಕರವಾದ ಕೆಲಸಗಳನ್ನು ಮಾಡುವುದು ಇದರ ಕೆಲಸ.
ಐಎನ್ಎಸ್ ನಿಸ್ತಾರ್ ಕೇವಲ ಒಂದು ಹಡಗು ಅಲ್ಲ, ಅದು ಒಂದು ದೊಡ್ಡ ಶಕ್ತಿ. ಈ ಹಡಗು ನಮ್ಮ ನೌಕಾಪಡೆಗೆ ಮಾತ್ರವಲ್ಲದೆ ನಮ್ಮ ನೆರೆಯ ರಾಷ್ಟ್ರಗಳಿಗೂ ಜಲಾಂತರ್ಗಾಮಿ ನೌಕೆಗಳ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಇದು ಭಾರತವನ್ನು, ಈ ವಿಚಾರದಲ್ಲಿ ವಿಶ್ವಾಸಾರ್ಹ ಪಾಲುದಾರನನ್ನಾಗಿ ಮಾಡುತ್ತದೆ.
ಈ ಹಡಗು 120 ಮೀಟರ್ ಉದ್ದವಿದೆ. ಇದರ ತೂಕ ಸುಮಾ ರು 10,000 ಟನ್ಗಳು. ಇದು ರಿಮೋಟ್ ಕಂಟ್ರೋಲ್ಡ್ ವಾಹನಗಳು, ವಿಶೇಷವಾಗಿ ಲೈಫ್ ಬೋಟ್ಗಳು ಮತ್ತು ಡೈವಿಂಗ್ ಚೇಂಬರ್ಗಳಂತಹ ಆಧುನಿಕ ಉಪಕರಣಗಳನ್ನು ಹೊಂದಿದೆ. ಇದು 300 ಮೀಟರ್ ಆಳ ಸಮುದ್ರದಲ್ಲಿ ಚಾಲನೆ ಮತ್ತು ರಕ್ಷಣಾ ಕಾರ್ಯಗಳನ್ನು ಮಾಡಬಹುದು.
ಇದರ ವಿಶಾಲವಾದ ಡೆಕ್ ಒಂದು ಜೋಡಿ – DSRV ಅಂದರೆ Deep Submergence Rescue Vehicle ಅನ್ನು ಹೊಂದಿದೆ.
ಯಾವುದೇ ಜಲಾಂತರ್ಗಾಮಿ ತೊಂದರೆಯಲ್ಲಿ ಸಿಲುಕಿಕೊಂಡರೆ, ರಕ್ಷಣೆಗೆ ಇದನ್ನು ಬಳಸಬಹುದು.
ಸೋನಾರ್ಗಳು, ಕ್ಯಾಮೆರಾಗಳು ಮತ್ತು ಮ್ಯಾನಿಪ್ಯುಲೇಟರ್ಗಳನ್ನು ಹೊಂದಿದ ರಿಮೋಟ್ ಚಾಲಿತ ವಾಹನಗಳು – ROV ಗಳನ್ನೂ ಇದು ಹೊಂದಿದೆ. ಇವು ನೀರೊಳಗಿನ ಹಾನಿಯನ್ನು ನಿರ್ಣಯಿಸಲು, ಅವಶೇಷಗಳನ್ನು ತೆರವುಗೊಳಿಸಲು ಅಥವಾ DSRV ಗೆ ಮಾರ್ಗದರ್ಶನ ಮಾಡಲು ಪೂರ್ಣ ಒಂದು ಕಿಲೋಮೀಟರ್ ಗಳಷ್ಟು ಕೆಳಗೆ ಇಳಿಯಬಹುದು.
ಶಸ್ತ್ರಾಸ್ತ್ರರಹಿತ ಹಡಗುಗಳಲ್ಲಿ ಹೂಡಿಕೆ ಮಾಡುತ್ತಿರುವುದು ಏಕೆ?
ಆಗಸ್ಟ್ 2013 ರಲ್ಲಿ, ಕಿಲೋಕ್ಲಾಸ್ ಜಲಾಂತರ್ಗಾಮಿ ಐಎನ್ಎಸ್ ಸಿಂಧುರಕ್ಷಕ್ ವಿನಾಶಕಾರಿ ಸ್ಫೋಟಕ್ಕೆ ಒಳಗಾಯಿತು ಮತ್ತು ಅದರ ಮುಂಬೈ ಬರ್ತ್ನಲ್ಲಿ ಮುಳುಗಿತು, ಎಲ್ಲಾ 18 ಸಿಬ್ಬಂದಿ ಸಾವನ್ನಪ್ಪಿದರು. ಘಟನೆಯ ತೀವ್ರತೆಯಿಂದಾಗಿ ಯಾವುದೇ ರಕ್ಷಣೆ ಸಾಧ್ಯವಾಗಲಿಲ್ಲ.
ಇನ್ನೂ ಹಿಂದಕ್ಕೆ ಹೋದರೆ, ನಿಸ್ತಾರ್ ಎಂಬ ಹೆಸರು, ಭಾರತೀಯ ಜಲ ಭಾಗದಲ್ಲಿ ಮತ್ತೊಂದು ನೆನಪನ್ನು ಹೊಂದಿದೆ. 1971 ರ ಇಂಡೋ-ಪಾಕ್ ಯುದ್ಧದ ಆರಂಭಿಕ ದಿನಗಳಲ್ಲಿ ಒಂದು ರಾತ್ರಿ, ಪಾಕಿಸ್ತಾನಿ ಜಲಾಂತರ್ಗಾಮಿ ಪಿಎನ್ಎಸ್ ಘಾಜಿ ವಿಶಾಖಪಟ್ಟಣಂ ಬಳಿ ಮುಳುಗಿತು, ಇದು ಬಹುಶಃ ಆಂತರಿಕ ಸ್ಫೋಟಕ್ಕೆ ಬಲಿಯಾಗಿರಬಹುದು ಎಂದು ಭಾರತೀಯ ನೌಕಾಪಡೆಯ ತನಿಖೆಗಳು ದೃಢಪಡಿಸಿವೆ.
1971 ರಲ್ಲಿ ಕಾರ್ಯಾರಂಭ ಮಾಡಿದ ಸೋವಿಯತ್ ನಿರ್ಮಿತ ಆಗಿನ ಐಎನ್ಎಸ್ ನಿಸ್ತಾರ್ ನಿಂದ ಕಾರ್ಯನಿರ್ವಹಿಸುತ್ತಿದ್ದ ಡೈವರ್ಗಳು, ಆ ಜಲಾಂತರ್ಗಾಮಿ ಧ್ವಂಸದ ಪ್ರದೇಶವನ್ನು ಶೋಧಿಸಿ, ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ, ಜನನಿಬಿಡ ಬಂದರಿನ ಸುತ್ತಲೂ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಂಡರು. ಆ ಮೊದಲ ನಿಸ್ತಾರ್ ಯಾವುದೇ ಗುಂಡು ಹಾರಿಸಲಿಲ್ಲ, ಆದರೆ ಅದರ ಉಪಸ್ಥಿತಿಯು ಬಂಗಾಳಕೊಲ್ಲಿಯಲ್ಲಿ ಕಾರ್ಯಾಚರಣೆಯ ತಂತ್ರವನ್ನು ರೂಪಿಸಿತು.
2025 ರ ಈ ಹಡಗು ಕೂಡ, ಅದೇ ಹೆಸರನ್ನು ಹೊಂದಿದೆ. ಇದು ಯುದ್ಧಗಳ ನಡುವೆ ಸೇವೆ ಸಲ್ಲಿಸಿದ ಶಾಂತ ರಕ್ಷಕರಿಗೆ ನೀಡುತ್ತಿರುವ ಗೌರವ. ಆದಾಗ್ಯೂ, ಇದು ಸಂಪೂರ್ಣವಾಗಿ ಹೊಸ ನಿರ್ಮಾಣವಾಗಿದ್ದು, ಹಳೆಯ ಹಡಗಿನ ಮುಂದುವರಿಕೆಯಲ್ಲ. ಹೊಸ ನಿಸ್ತಾರ್ ಕೇವಲ ಗೌರವ ಮಾತ್ರವಲ್ಲ. ಇದು ಉಕ್ಕು ಮತ್ತು ಸರ್ಕ್ಯೂಟ್ರಿಯಲ್ಲಿ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಸಾಕಾರಗೊಳಿಸಿದೆ. ದೇಶೀಯವಾಗಿ ಉತ್ಪಾದಿಸಲಾದ ಹೈ-ಟೆನ್ಸೈಲ್ ಹಲ್ ವಿಭಾಗಗಳು, ಸ್ಥಳೀಯವಾಗಿ-ಅಭಿವೃದ್ಧಿಪಡಿಸಿದ ಉಡಾವಣಾ ಮತ್ತು ಚೇತರಿಕೆ ವ್ಯವಸ್ಥೆಗಳು, ಸ್ಥಳೀಯವಾಗಿ ತಯಾರಿಸಿದ ಸ್ಯಾಚುರೇಶನ್ ಡೈವಿಂಗ್ ಕಿಟ್ಗಳು ಮತ್ತು ಸಂಪೂರ್ಣ ರಕ್ಷಣಾ ತಂತ್ರಜ್ಞಾನವನ್ನು ಒಟ್ಟಿಗೆ ಹೆಣೆಯಲು ಸ್ವದೇಶಿ ಸಂಸ್ಥೆಗಳೇ ಬರೆದ ಸಾಫ್ಟ್ವೇರ್ ಬಳಸಲ್ಪಟ್ಟಿವೆ.
ಇದೀಗ, ಯಾವುದೇ ರಾಜತಾಂತ್ರಿಕ ಅನುಮತಿಗಳು ಅಥವಾ ಸಾಗರದಾಚೆಯ ಅಪ್ಪಣೆಗಳು ಬೇಕಿಲ್ಲದೆ ಸಮರ್ಪಿತ ರಕ್ಷಕ ನಮ್ಮಲ್ಲೇ ಲಭ್ಯವಿದೆ.
ಸಮುದ್ರದಲ್ಲಿನ ಶಕ್ತಿಯನ್ನು ಹಡಗು ಹೊತ್ತೊಯ್ಯುವ ಶಸ್ತ್ರಾಸ್ತ್ರಗಳಿಂದ ಮಾತ್ರ ಅಳೆಯಲಾಗುವುದಿಲ್ಲ, ಬದಲಿಗೆ ಅದು ಪಡೆಗೆ ನೀಡುವ ಸ್ಥಿತಿಸ್ಥಾಪಕತ್ವದ ಮೂಲಕ ಅಳೆಯಲಾಗುತ್ತದೆ. ಇಂಥ ಹಡಗುಗಳು ಹೋರಾಟದಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಪೂರಕ ಬೆಂಬಲವಾಗಿ ನಿಲ್ಲುತ್ತವೆ.
ಇದರ 80% ಕ್ಕಿಂತ ಹೆಚ್ಚು ವಸ್ತುಗಳು ಭಾರತದಲ್ಲಿ ತಯಾರಾಗುತ್ತವೆ ಮತ್ತು 120 ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಸಹ ಇದರಲ್ಲಿ ತಮ್ಮ ಕೊಡುಗೆಯನ್ನು ತೋರಿಸಿವೆ. ಭಾರತವು ಈಗ ಜಗತ್ತಿಗೆ ಸಮಾನವಾದ ಸಂಕೀರ್ಣ ಹಡಗುಗಳನ್ನು ನಿರ್ಮಿಸಬಹುದು ಎಂಬುದನ್ನು ಇದು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.