ಬೆಳ್ತಂಗಡಿ : ಮನಸ್ಸೆಂಬ ಖಾಲಿ ನಿವೇಶನಕ್ಕೆ ಭಗವಂತನ ನಾಮ ಸಂಕೀರ್ತನೆಯ ಬೇಲಿ ಹಾಕಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿನ್ಯ ಉಂಟಾಗದು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ 108ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆದ 17 ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ ಸಮಾರಂಭ ಹಾಗೂ ಭಜನೋತ್ಸವದಲ್ಲಿ ಆಶೀರ್ವಚನ ನೀಡಿದರು.
ಭಗವಂತನ ಚಿಂತನೆ, ಮಹಿಮೆ ಮೂಡಿದಲ್ಲಿ ಆತನ ಅನುಗ್ರಹ ಇರುತ್ತದೆ. ನಾವು ತಿಳಿದೋತಿಳಿಯದೆಯೋ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಮೂಡಿ ಭಗವಂತನ ಸ್ಮರಣೆ ಮಾಡಿದಾಗಿ ಪಾಪ ಪರಿಹಾರವಾಗುತ್ತದೆ. ಆದರೆ ಇದು ಕ್ರೌರ್ಯಕ್ಕೆ ಅನ್ವಯಿಸುವುದಿಲ್ಲ. ಸಂಕೀರ್ತನೆ ಎಂಬುದು ಜೀವನದಲ್ಲಿ ಹಾಸು ಹೊಕ್ಕಾಗಿ ಇರಬೇಕು. ಪ್ರತಿಯೊಂದು ಕ್ಷಣದಲ್ಲೂ ನಾಮ ಸ್ಮರಣೆ ಇದ್ದರೆ ಮನಸ್ಸು ಪರಿಶುದ್ಧವಾಗುತ್ತದೆ. ದಿನ ನಿತ್ಯದ ಬದುಕಿನ ಪ್ರತಿಯೊಂದು ಕ್ರಿಯೆಗೂ ಒಂದೊಂದು ದೇವರ ನಾಮ ಸ್ಮರಣೆ ಮಾಡಬೇಕೆಂದು ಶಾಸ್ತ್ರ ಹೇಳಿದೆ ಎಂದರು.
ಜನರಲ್ಲಿ ಆಸ್ತಿಕತೆಯನ್ನು ಮೂಡಿಸಿ ಸನ್ಮಾರ್ಗಕ್ಕೆ ಕೊಂಡೊಯ್ಯುವ ಕಾರ್ಯ ಧರ್ಮಸ್ಥಳದಿಂದ ನಡೆಯುತ್ತಿದೆ. ಜನಕಲ್ಯಾಣದ ಕಾರ್ಯಗಳು ಪ್ರಸಿದ್ಧಿ ಪಡೆದಿವೆ. ತಿರುಪತಿ ತಿಮ್ಮಪ್ಪ, ಉಡುಪಿ ಶ್ರೀಕೃಷ್ಣ, ಧರ್ಮಸ್ಥಳ ಮಂಜುನಾಥ ಹಾಗೇಯೇ ಮಂತ್ರಾಯಲದ ರಾಘವೇಂದ್ರ ಸ್ವಾಮಿಗಳು ಪ್ರಸಿದ್ಧ ಎಂದರು.ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಗವಂತನ ಮೇಲೆ ಧೃಢವಾದ ನಂಬಿಕೆಯನ್ನು ಬೆಳೆಸಲು ಇಂತಹ ಕಮ್ಮಟವನ್ನು ಹಮ್ಮಿಕೊಂಡಿದ್ದೇವೆ. ಭಗವಂತ ಹಾಗು ಗುರುಗಳೊಂದಿಗೆ ಸಂಬಂಧ ಬೆಳೆಸಬೇಕಾದರೆ ಅನುಸಂಧಾನ ಮುಖ್ಯವಾಗುತ್ತದೆ. ಇದಕ್ಕೆ ನಂಬಿಕೆ, ವಿಶ್ವಾಸ, ಶ್ರದ್ಧೆ ಮುಖ್ಯಎಂದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಪರಿಷತ್ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದರು.ಅತಿಥಿಗಳಾಗಿ ಶ್ರೀಗಳ ಪೂರ್ವಾಶ್ರಮದ ತಂದೆ ರಾಜಾ ಎಸ್. ಗಿರಿಆಚಾರ್ಯ, ಶ್ರೀ ಶಂಕರ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಎಂ. ಹರಿಕೃಷ್ಣ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ ಉಪಾಧ್ಯಕ್ಷ ಡಿ. ಹರ್ಷೇಂದ್ರಕುಮಾರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಪರಿಷತ್ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ ಮತ್ತು ತರಬೇತುದಾರರು ಉಪಸ್ಥಿತರಿದ್ದರು.
ಭಜನಾ ಪರಿಷತ್ ಸಂಯೋಜಕ ಬಿ. ಸೀತಾರಾಮ ತೋಳ್ಪಡಿತ್ತಾಯ ಸ್ವಾಗತಿಸಿದರು. ಯೋಜನಾಧಿಕಾರಿ ಸತೀಶ್ ನಾಯ್ಕ್ ವಂದಿಸಿದರು. ಯೋಗ ನಿರ್ದೇಶಕ ಐ. ಶಶಿಕಾಂತ್ ಜೈನ್ ಹಾಗೂ ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.ಭಜನಾ ತಂಡಗಳ ನೃತ್ಯ ಭಜನೆ ಹಾಗೂ ತರಬೇತಿ ಪಡೆದ ಶಿಬಿರಾರ್ಥಿಗಳ ವಿಶೇಷ ನೃತ್ಯ ಭಜನೆ ಹಾಗೂ ಭಜನಾ ಪ್ರಾತ್ಯಕ್ಷಿಕೆಸಭಾಂಗಣದಲ್ಲಿ ಭಕ್ತಿಯ ವಾತಾವಣರವನ್ನು ಮೂಡಿಸಿತು. ಶ್ರೀಶಂಕರ್ ಟಿವಿಯವರು ಸಂಪೂರ್ಣಕಾರ್ಯಕ್ರಮನ್ನು ನೇರ ಪ್ರಸಾರ ಮಾಡಿತ್ತು
ಕಳೆದ 16 ವರ್ಷಗಳಲ್ಲಿ ರಾಜ್ಯದಆಯ್ದ 1401 ಭಜನಾ ಮಂಡಳಿಗಳ2690 ಸದಸ್ಯರಿಗೆತರಬೇತಿ ನೀಡಲಾಗಿದೆ. ಪ್ರಸ್ತುತರಾಜ್ಯದ೯ ಜಿಲ್ಲೆಗಳ 22 ತಾಲೂಕುಗಳ 102 ಭಜನಾ ಮಂಡಳಿಗಳಿಂದ 154 ಮಂದಿ ಪುರುಷರು, 55 ಮಂದಿ ಮಹಿಳೆಯರು ಸೇರಿದಂತೆ 209 ಶಿಬಿರಾರ್ಥಿಗಳು ತರಬೇತಿಯನ್ನು ಪಡೆದಿದ್ದಾರೆ. ಭಜನಾಕಮ್ಮಟತರಬೇತಿಯಲ್ಲಿ 17 ವರ್ಷಗಳಲ್ಲಿ ರಾಜ್ಯದ 1500 ಭಜನಾ ಮಂಡಳಿಗಳ 2899 ಸದಸ್ಯರುತರಬೇತಿ ಪಡೆದಿದ್ದಾರೆ.16 ವರ್ಷದಲ್ಲಿ ಭಜನೋತ್ಸವ ಹಾಗೂ ಶೋಭಾಯಾತ್ರೆಯಲ್ಲಿ4023 ಭಜನಾ ಮಂಡಳಿಗಳಿಂದ 52457 ಮಂದಿ ಪಾಲ್ಗೊಂಡಿದ್ದಾರೆ.
ನ.28 ಮತ್ತು 29 ರಂದು ಶ್ರೀ ಶಂಕರ್ ಟಿವಿಯ ಭಜನಾ ಸಾಮ್ರಾಟ್ ಸ್ಪರ್ಧೆಯ ನಿಮಿತ್ತ ಭಜನಾ ತಂಡಗಳ ಆಡಿಷನ್ ಧರ್ಮಸ್ಥಳದಲ್ಲಿ ನಡೆಯಲಿದೆ- ಹರಿಕೃಷ್ಣ
ಭಜನಾ ಪರಿಷತ್ ವತಿಯಿಂದ ರಾಜ್ಯದ ೨೫ ತಾಲೂಕುಗಳ ಪರಿಷತ್ ಕಾರ್ಯಕರ್ತರು ೫೦ ಮನೆ ಆಯ್ಕೆ ಮಾಡಿ ಸುಮಾರು ೧೦,೦೦೦ ಮಂದಿಗೆ ತರಬೇತಿ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ – ಡಾ|ಹೆಗ್ಗಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.