ಬೆಳ್ತಂಗಡಿ : ನಾವು ಮಾಡಿದ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿದಲ್ಲಿ ಅದು ಮತ್ತೆ ನಮಗೆ ಮುಮ್ಮಡಿಯಾಗಿ ಮರಳಿ ಬರುತ್ತದೆ. ಪಾಪ ಕರ್ಮಗಳು ಪರಮಾತ್ಮನಿಗೆ ಪ್ರೀತಿ ಉಂಟುಮಾಡುವುದಿಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಆದಿತ್ಯವಾರ ಉಜಿರೆಯ ಶಾರದಾ ಮಂಟಪದಲ್ಲಿ ತುಳು ಶಿವಳ್ಳಿ ಸಭಾದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಸಪ್ತತಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಲಿಯುಗದ ಮಹಾಗುರು ರಾಘವೇಂದ್ರ ಸ್ವಾಮಿಗಳು. ವೈದ್ಯರಲ್ಲಿಗೆ ನಾವು ಹೋದಾಗ ಹೇಗೆ ನಾವು ರೋಗದ ಬಗ್ಗೆ ಹೇಳುತ್ತೇವೆಯೇ ಹೊರತು ಇಂತಹುದ್ದೇ ಔಷಧಿಗಳನ್ನು ನೀಡಿ ಎಂದು ಕೇಳುವುದಿಲ್ಲ. ಅದೇ ರೀತಿ ಭವರೋಗ ವೈದ್ಯರಾಘವೇಂದ್ರ ಸ್ವಾಮಿ ಬಳಿ ಈ ಭಾವದಿಂದಲೇ ಹೋಗಬೇಕು. ರಾಯರು ನಮ್ಮಲ್ಲಿ ಅದು ಬೇಕು ಇದು ಬೇಕು ಎಂದು ಕೇಳುವುದಿಲ್ಲ. ಮಾತೃ ಹೃದಯದಂತೆ ಇರುವ ಮಹಾನುಭಾವರು ಎಂದ ಅವರು ಸಭಾದವರು ಪ್ರಕಟಿಸುತ್ತಿರುವ ಶ್ರೀ ತುಳಸೀ ಪತ್ರಿಕೆಯನ್ನು ತಾಲೂಕಿನಾದ್ಯಂತ ವಿಸ್ತರಿಸುವುದಕ್ಕೆ ಚಾಲನೆ ನೀಡಿದರಲ್ಲದೆ ಡಾ| ರಾಮಚಂದ್ರಾಚಾರ್ಯ ಪುರೋಹಿತ ಅವರು ಬರೆದ ಸಮರ್ಪಣೆಯ ಸೊಬಗು ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಅಧ್ಯಕ್ಷತೆಯನ್ನು ಸಭಾದ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರು ವಿವಿಯ ಕುಲಸಚಿವ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ರಾಜಾ ಎಸ್. ಗಿರಿಅಚಾರ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಉಜಿರೆ ಜನರ್ದಾನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೆಸರ ಯು. ವಿಜಯರಾಘವ ಪಡ್ವೆಟ್ನಾಯ, ಕುಸುಮಾ ಆರ್.ಪಡ್ವೆಟ್ನಾಯ, ಸಭಾದ 8 ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಯು.ವಿಜಯರಾಘವ ಪಡ್ವೆಟ್ನಾಯ ಅವರಿಗೆ ಎಪತ್ತು ತುಂಬಿದ ಸಂದರ್ಭ ಅವರಿಗೆ ಸಪ್ತತಿಗೌರವಾರ್ಪನೆಯ ಅಂಗವಾಗಿ ಭಗೀರಥ ಪ್ರಶಸ್ತಿಯನ್ನು ಶ್ರೀಗಳು ಅನುಗ್ರಹಿಸಿದರು. ರಾಜಪ್ರಸಾದ್ ಪೊಳ್ನಾಯ ಅವರಿಗೆ ಕೃಷಿಕ ಶ್ರೀ ಪ್ರಶಸ್ತಿ, ರಾಮಕೃಷ್ಣ ಕಲ್ಲೂರಾಯ ಅವರಿಗೆ ಪುರಹೋತಿ ಸ್ನೇಹಿ ಪ್ರಶಸ್ತಿ, ಯೋಗೀಶ್ರಾವ್ ನಿಡ್ಲೆ, ಅರವಿಂದ ಭಾಗವತ ಅವರಿಗೆ ತೀರ್ಥಯಾತ್ರಾ ಗುರುಗಳು ಪ್ರಶಸ್ತಿ, ವಿಜಯ ಹೆಚ್ ಪ್ರಸಾದ್ ರಾಜಕೀಯ ಸಾಧಕಿ ಪ್ರಶಸ್ತಿ, ಗಂಗಾಧರ ಕೆವುಡೇಲು ಅವರಿಗೆ ಸಹಕಾರಿ ನಾಯಕ ಪ್ರಶಸ್ತಿಗಳನ್ನು ಶ್ರೀಗಳು ನೀಡಿ ಪುರಸ್ಕರಿಸಿದರು.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ವಿಭಾಗದಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಪಡೆದ ತುಳು ಶಿವಳ್ಳಿ ವಿದ್ಯಾರ್ಥಿಗಳನ್ನು ಅತಿಥಿಗಳು ಪುರಸ್ಕರಿಸಿದರು. ವಿದ್ಯಾರ್ಥಿ ವೇತನ, ಗಾಲಿ ಕುರ್ಚಿ, ಅಜೀವ ಸದಸ್ಯತನ ಪ್ರಮಾಣ ಪತ್ರ ಹಸ್ತಾಂತರ ಮಾಡಲಾಯಿತು.ಸಭಾದ ಉಜಿರೆ ವಲಯ ಅಧ್ಯಕ್ಷ ಡಾ|ಎಂ.ಎಂ.ದಯಾಕರ್ ಸ್ವಾಗತಿಸಿದರು. ತುಳಸಿ ಪತ್ರಿಕೆ ಸಂಪಾದಕ ಶರತ್ ಕೃಷ್ಣ ಪಡ್ವೆಟ್ನಾಯ ಶ್ರೀಗಳ ಪರಿಚಯ ನೀಡಿದರು. ಶಿಕ್ಷಕರಾದ ಮುರಳಿ ಕೃಷ್ಣ ಆಚಾರ್ಯ ಹಾಗೂ ಸುವರ್ಣ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಸಭಾದ ಕಾರ್ಯದರ್ಶಿ ರಾಜ್ಪ್ರಸಾದ್ ಪೊಳ್ನಾಯ ವಂದಿಸಿದರು. ಇದಕ್ಕೂ ಮೊದಲು ಶ್ರೀ ಜನಾರ್ದನ ಸ್ವಾಮಿದೇವಸ್ಥಾನದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಲಕ್ಷಾರ್ಚನೆ ನೆರವೇರಿತು.
ರಾಘವೇಂದ್ರ ಯತಿಗಳು ಮೊತ್ತ ಮೊದಲ ಬಾರಿಗೆ ಸಂಚಾರ ಮಾಡಿದ್ದು ಈ ಪ್ರಾಂತ್ಯದಲ್ಲಿ . ಸುಂಸ್ಕೃತ, ಸಹೃದಯ, ಜೀವಕ್ಕೆ ಜೀವಕೊಡುವ ಜನಾಂಗ ಇಲ್ಲಿಯದು. ಯಾವುದೇ ಡಂಭಾಚಾರ ಮಾಡುವವರಲ್ಲ ಎಂದು ತಿಳಿದಿದ್ದೇನೆ. ಉತ್ತಮ ಗುಣಗಳನ್ನು ಸ್ವೀಕರಿಸಿ ಅದನ್ನು ಅಳವಡಿಸಿಕೊಳ್ಳುವ ನಿಮ್ಮ ಸ್ವಭಾವ ಪ್ರಿಯವಾಗಿದೆ. ಇಲ್ಲಿನ ಶಿಸ್ತು ಸದಾಚಾರಗಳನ್ನು ನೋಡಿದ ನನಗೆ ನಾನೇಕೆ ತುಳುನಾಡಿನಲ್ಲಿ ಹುಟ್ಟಲಿಲ್ಲ ಎಂದು ಅನಿಸುತ್ತಿದೆ- ಮಂತ್ರಾಲಯ ಶ್ರೀ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.