ಎದುರಿಗೆ ಕಂಡರೆ ಕುಳಿತಲ್ಲಿಂದ ಎದ್ದು ನಿಂತು ಗೌರವದಿಂದ ತಲೆಬಾಗಬೇಕು ಎನಿಸುವಂತಹ ವ್ಯಕ್ತಿತ್ವ.. ಅವರೂ ಪ್ರತಿಕ್ರಯಿಸುತ್ತಾ ತುಂಬು ಹೃದಯದಿಂದ ಎದೆ ಮುಟ್ಟಿ “ಎಲ್ಲಾ ಅರಾಮಾ?” ಎಂದು ತಿರುಗಿ ಕೇಳದೇ ಹೋದರೆ ನಮ್ಮಿಂದ ಏನೋ ಪ್ರಮಾದ ನಡೆದಿರಬಹುದು ಎನ್ನುವ ಸೂಕ್ಷ್ಮ ಸಂವೇದನೆ. ಯಾರೋ ಸಂಘಟನೆಗೆ ಹೊಸ ಯುವ ಮುಖಗಳ ಆಗಮನವಾಯಿತೆಂದರೆ ಅವರಿಗೆ ಎಲ್ಲಿಲ್ಲದ ಪ್ರೋತ್ಸಾಹವನ್ನೀಯುತ್ತಿದ್ದ ಜೀವಿ. ಆತ ಶೂನ್ಯದಲ್ಲೂ ಅಪಾರ ಸಾಧ್ಯತೆಗಳನ್ನು ಕಾಣುತ್ತಿದ್ದ ದೈವಾಂಶ ಸಂಭೂತ.
ಪ್ರತೀ ಬಾರಿ ನಮ್ಮ ನಾಟ್ಯಾಲಯದ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕೈಗೆ ಇತ್ತಾಗಲೂ ಮನಃತುಂಬಿ ಆಶೀರ್ವದಿಸಿ ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ಈ 15 ವರ್ಷಗಳಲ್ಲಿ ಅವರು ಬಾರದೇ ಇದ್ದದ್ದು ಅತ್ಯಂತ ವಿರಳ. ಕಾರ್ಯಕ್ರಮವನ್ನು ಆಸ್ವಾದಿಸಿದ ಬಳಿಕ ಮಾರನೆಯ ದಿನ ನಮ್ಮ ವ್ಯಾಟ್ಸಾಪ್ಗೆ ಅವರಿಗೆ ಅನ್ನಿಸಿದ ತೂಕವತ್ತಾದ 4 ಸಾಲುಗಳನ್ನು ಹಾಕಿ ಅಭಿನಂದಿಸುತ್ತಿದ್ದ ಬಗೆ ಅವರ ಕಲಾವಿದರ -ಕಲೆಯ ಬಗ್ಗೆ ಇದ್ದ ಅಪಾರ ಗೌರವವನ್ನು ಎತ್ತಿ ತೋರಿಸುತ್ತಿತ್ತು. ಪ್ರತೀ ಬಾರಿ ನೃತ್ಯ ಕಾರ್ಯಕ್ರಮದ ಬಗ್ಗೆ ಹೊಸ ಯೋಚನೆ ಬಂದಾಗ ನನ್ನನ್ನು ಅವರ ಮತ್ತೂರಿನ ಕಛೇರಿಗೆ ಕರೆಯಿಸಿ ಅದಕ್ಕೆ ಸಂಬಂಧಿಸಿದ ಒಂದಿ? ಮಂದಿಯನ್ನು ಜೊತೆಗೇ ಕುಳ್ಳಿರಿಸಿಕೊಂಡು ತಮ್ಮ ವಿಶಿಷ್ಟ ಯೋಚನೆಗಳನ್ನು – ಯೋಜನೆಯಾಗಿ ಪರಿವರ್ತಿಸುವ ಒಂದು ಸುದೀರ್ಘ ಸಭೆ ನಡೆಯುತ್ತಿತ್ತು. ಒಂದು ಕಾರ್ಯಕ್ರಮವನ್ನು ನಡೆಸಲು 3-4 ಬಗೆಯ ಆಯಾಮವನ್ನೂ ನೀಡುತ್ತಿದ್ದದ್ದು ಅವರ ಪರಿಪಕ್ವ ಯೋಚನೆಗಳಿಗೆ ಹಿಡಿದ ಕೈಗನ್ನಡಿ ಎನ್ನಿಸುತ್ತಿತ್ತು. ಸಾಂಸ್ಕೃತಿಕ ಸಂಘಟನೆಗೆ ಶಕ್ತಿ ತುಂಬುವ ಒತ್ತಾಸೆಯಿಂದ ನನ್ನನ್ನೂ ಅನೇಕ ಸಂಘಟನೆಯ ಕಾರ್ಯಗಳಿಗೆ ಜೋಡಿಸಿ ಅದನ್ನು ಯಶಸ್ವಿಗೊಳಿಸುವಲ್ಲಿ ಸಂಪೂರ್ಣ ಬೆಂಬಲವಿತ್ತಿದ್ದರು. ಪ್ರಕೋಷ್ಟಗಳ ರಾಜ್ಯ ಸಂಯೋಜಕರಾಗಿದ್ದಾಗ ಪ್ರಧಾನಿ ಮೋದಿಯವರು ಶಿವಮೊಗ್ಗೆಗೆ ಆಗಮಿಸುವ ಸಂದರ್ಭದಲ್ಲಿ ಹೊರ ಜಿಲ್ಲೆಯ ಕಲಾವಿದರ ಬದಲು ನಮ್ಮ ಸಾಂಸ್ಕೃತಿಕ ಪ್ರಕೋಷ್ಟದ ತಂಡದಿಂದಲೇ ಸಂಸ್ಕೃತಿ ಪ್ರಚಾರ ಮಾಡುವ ಘನ ಕಾರ್ಯವನ್ನು ಕೈಗೆತ್ತಿಕೊಂಡು ಅದರ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದರು. ಅದಕ್ಕೆ ಸಾಕ್ಷಿಯಾಗಿ ಯಶಸ್ಸನ್ನು “ಹೇಗೆ ನಮ್ಮ ಸಾಂಸ್ಕೃತಿಕ ಪ್ರಕೋಷ್ಟ. ಆಹ್ !!!” ಎಂದು ತಮ್ಮ ಆಪ್ತರ ಬಳಿ ಹೆಮ್ಮೆಯಿಂದ ಹೇಳಿ ಬೀಗಿದ್ದರು.
ಮನುಜನೆಂದರೆ ತಪ್ಪಾಗುವುದು ಸಹಜ. ಆ ತಪ್ಪನ್ನು ಕೆಲವೊಮ್ಮೆ ತುಂಬಿದ ಸಭೆಯಲ್ಲಿ ಎಲ್ಲರಿಗೂ ತಾಗುವಂತೆ, ಹಲವು ಬಾರಿ ವೈಯಕ್ತಿಕವಾಗಿ ಕರೆಸಿ ನೇರಾನೇರಾ ಮಾತಿನ ಚಾಟಿ ಬೀಸಿದ್ದೂ ಉಂಟು. ಭಾನುಜೀ ಕರೆದು ಬೈದರೆಂದರೆ ಅದೇನೋ ಹೆಮ್ಮೆ ನಮ್ಮಂತವರಿಗೆ. ಎಲ್ಲೋ ನಮ್ಮ ಬಳಿಯೂ ಆ ಕಾರ್ಯಕ್ಕೆ ಬೇಕಾದ ಸಾಮರ್ಥ್ಯವಿದೆ ಎಂದು ಭಾನುಜಿ ಅರಿತು ತಿದ್ದಿದ್ದಾರೆಂಬ ಘನತೆ. ಭಾನುಜಿ ಶಾಲಾ ಕಾಲೇಜು ಪ್ರಿನ್ಸಿಪಾಲ್ ತರಹ ನೇರ ನುಡಿಗಳಿಂದ ಚುಚ್ಚಿದ ಬಳಿಕ, ಸಮಾಧಾನಿಸಿ – ಮಾಡಿದ ತಪ್ಪಿಗೆ ಅದನ್ನು ಸರಿಪಡಿಸುವ ಯೋಜನೆಯನ್ನೂ ಕೊಟ್ಟು, ನಗುನಗುತ್ತಾ ಮಕ್ಕಳಿಗೆ ಚಾಕೋಲೇಟ್ ಕೊಟ್ಟು ಬೆನ್ನು ತಟ್ಟಿ ಕಳುಹಿಸಿದಂತೆ ಭಾಸವಾಗುತ್ತಿತ್ತು.
ಅದೊಂದು ದಿನ ಅವರಿಗೆ ಮತ್ತದೇ ಹೊಸ ಯೋಜನೆಯೊಂದು ಮನಸ್ಸಿನಲ್ಲಿ ಸಂಚಲನವಾಗುತ್ತಿದ್ದಂತೆ, ಬಿಜೆಪಿಯ ಕಛೇರಿಗೆ ಬರುವಂತೆ ನನಗೆ ಫೋನಾಯಿಸಿ ಆಹ್ವಾನಿಸಿದರು. ನನ್ನೊಡನೆ ಒಂದಿ? ಚಾಕಚಕ್ಯತೆಯುಳ್ಳ ಇತರ ಕಲಾವಿದರನ್ನೂ ಕರೆದುಕೊಂಡು ಬರುವ ಸೂಚನೆಯೂ ದೊರೆಯಿತು. ಸಭೆ ಮುಗಿದ ಬಳಿಕ ನಮ್ಮ ಮನೆಗೆ ಬರುತ್ತಿದ್ದ ಮಾಸಿಕ ಪತ್ರಿಕೆ ’ಧ್ಯೇಯ ಕಮಲ’ದಲ್ಲಿ ಅವರೇ ಬರೆದ ಒಂದು ಅಂಕಣದ ಕುರಿತು ಅವರೊಡನೆ ಚರ್ಚಿಸ ತೊಡಗಿದ್ದೆ. ಇದ್ದಕ್ಕಿದ್ದಂತೆ ಅವರ ಕೈಗೆ ಬೆಂಗಳೂರಿನಿಂದ ಬಂದ ಒಂದು ಪಾರ್ಸೆಲ್ ಕೈ ಸೇರಿತು. ಓಹ್ ಅಂತೂ ಬಂತಾ!! ಎಂದು ತ್ವರಿತವಾಗಿ ಅದನ್ನು ನನ್ನ ಕೈಗಿತ್ತು ಇದು ನಾನೇ ಬರೆದ ಸಂಪಾದಕೀಯ ಕೃತಿ. ಧ್ಯೇಯ ಕಮಲದಲ್ಲಿ ಬರೆಯುತ್ತಿದ್ದ ಅಂಕಣಗಳ ಸರಮಾಲೆ. ಇದು ನಿಮ್ಮ ಕೈಯಿಂದಲೇ ಅನಾವರಣವಾಗಲಿ. ಇದಕ್ಕೆ ಸೂಕ್ತ ವ್ಯಕ್ತಿ ನೀವಲ್ಲದೆ ಇನ್ಯಾರೂ ಆಗಲು ಸಾಧ್ಯವಿಲ್ಲ ಎಂದು ಹೇಳಿ ನನ್ನ ಕೈಯಾರೆ ತಮ್ಮ ಪುಸ್ತಕವನ್ನು ಅನಾವರಣಗೊಳಿಸಿದರು. ಅದೆಂಥ ಸಾರ್ಥಕ ಜೀವನವಪ್ಪಾ ತಂದೆ ಎಂದು, ಬಂದ ಆನಂದ ಭಾವವನ್ನು ಹಾಗೇ ಹೃದಯದೊಳಗೇ ಅದುಮಿ ಧನ್ಯತೆಯಿಂದ ಅವರ ಕಾಲಿಗೆರಗಿ ಬಂದಿದ್ದೆ.
ಪ್ರತೀ ಬಾರಿ ನಮ್ಮ ಕಾರ್ಯಕ್ರಮಕ್ಕೆ ಬರುವಾಗ ತಮ್ಮ ಧರ್ಮಪತ್ನಿಯನ್ನು ತಪ್ಪದೇ ಕರೆದುಕೊಂಡು ಬಂದು ಬಾಯ್ತುಂಬ ಒಳ್ಳೆಯ ಮಾತನ್ನಾಡಿ ಹರಸಿ ಹಾರೈಸಿ ಹೋಗುತ್ತಿದ್ದದು ಅವರ ಸಹಜ ಗುಣ. ಆದರೆ ಕಳೆದ ಬಾರಿ ತಾವು ತಮ್ಮ ಧರ್ಮಪತ್ನಿಯ ಜೊತೆಗೆ ತಮ್ಮ ಮೊಮ್ಮಕ್ಕಳ ಬಳಗವನ್ನೂ ಕರೆದುಕೊಂಡು ಬಂದು ಅವರಿಗೆ ವೇದಿಕೆಯ ಮೇಲಿರುವ ಪುಟಾಣಿಗಳನ್ನು ತೋರಿಸುತ್ತಾ, ನೀವೂ ಮುಂದಿನ ಬಾರಿ ಹೀಗೆ ನರ್ತಿಸಲು ಸಿದ್ದರಾಗಿ ಎಂದು ಮನನ ಮಾಡಿಸಿದ ಪರಿ ಈಗಲೂ ಕಣ್ಣೆದುರು ಅಲೆಅಲೆಯಾಗಿ ಸುಳಿಯುತ್ತದೆ.
ದೇಶ, ಸಂಸ್ಕೃತಿ, ಸಂಸ್ಕೃತ, ರಾಜಕೀಯ, ರಾಜಕೀಯೇತರ ವಿಷಯಗಳ ಜೊತೆಗೆ, ಒಮ್ಮೆ ಅವರ ಮತ್ತೂರಿನ ಕಛೇರಿಗೆ ಭೇಟಿಗೆಂದು ಅಪರಾಹ್ನ ಸುಮಾರು ಒಂದು ಗಂಟೆಯ ಸಮಯಕ್ಕೆ ಹೋದಾಗ “ಓಹ್!! ಬಂದ್ರಾ. ಬನ್ನಿ ಬನ್ನಿ. ಸರಿಯಾದ ಸಮಯಕ್ಕೆ ಬಂದ್ರಿ. ಒಮ್ಮೆ ಈ ಕಛೇರಿಯ ಹೊರಾವರಣಕ್ಕೆ ಹೋಗಿ ಹೊರಗಿರುವ ದಿವ್ಯ ಪ್ರಪಂಚವನ್ನ ಅನುಭವಿಸಿ ಬನ್ನಿ” ಎಂದು ಹೊರಕ್ಕೆ ಕಳಿಸಿದರು. ಏನಿರಬಹುದು ಎಂದು ಹೋದಾಗ ಕಂಡದ್ದು ನೈಜವಾಗಿಯೂ ದಿವ್ಯ ಪ್ರಪಂಚವೇ.
ಅಲ್ಲಿ ನೆರೆದಿದ್ದ ಅಂಗನವಾಡಿಯ ಮಕ್ಕಳ ಊಟ – ನೋಟ – ಆಟ ಒಮ್ಮೆ ನನ್ನ ಹೃದಯ ತುಂಬುವಂತೆ ಮಾಡಿತ್ತು. ಈ ವಿಚಾರವಾಗಿಯೇ ಇನ್ನೊಂದಿ? ಹೊತ್ತು ನಮ್ಮದೇ ಆದ ಆಪ್ತ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕಳೆದ ಆ ಕ್ಷಣ ಈಗಲೂ ಅವಿಸ್ಮರಣೀಯ. ಇಂತಹ ಸಹಜ ಸ್ನಿಗ್ಧ ಯೋಚನೆಗಳೇ ಅವರ ಚಿಂತನೆಯತ್ತ ನನ್ನನ್ನು ಸದಾ ಸೆಳೆಯುತ್ತಿತ್ತು.
ಈ ತರಹದ ಕ್ಷಣಗಳು ಒಂದೇ ಎರಡೇ. ನಮೂದಿಸಲು ಹೊರಟರೆ ಬಹುಶಃ ದಿನವೂ 10-20 ಘಟನೆಗಳು ಮನಸ್ಸಿನ ತುಂಬಾ ಹಾದುಹೋಗುತ್ತಾ ಪದಪುಂಜಗಳಾಗಿ ಪುಂಖಾನುಪುಂಖವಾಗಿ ಹೊರಹೊಮ್ಮಬಹುದು. ಕಡೆಗೊಂದು ದಿನ ಗ್ರಂಥವಾಗಿಯೇ ಲೋಕಾರ್ಪಣೆಗೊಳ್ಳಬಹುದು. ಶರಣರ ಗುಣವನ್ನು ಮರಣದಲ್ಲಿ ಕಾಣು ಎನ್ನುತ್ತಾರೆ. ನಿನ್ನೆ ಅಪರಾಹ್ನದವರೆಗೂ ಲವಲವಿಕೆಯಿಂದ ನಮ್ಮೆಲ್ಲರೊಂದಿಗೆ ಕಾಲ ಕಳೆದ ಭಾನು ಜೀ ಕ್ಷಣಾರ್ಧದಲ್ಲಿ ಇಲ್ಲವೆಂಬುದನ್ನು ಅರಗಿಸಿಕೊಳ್ಳಲು ಅವರ ಕುಟುಂಬಸ್ಥರಷ್ಟೇ ಸ್ಥೈರ್ಯ ನಮ್ಮಂತಹ ಸಾಮಾನ್ಯರಿಗೂ ಬೇಕಾಗಿದೆ. ಇಂತಹ ಭಾವದಲೆಯ ಸಾರ್ಥಕ ಬದುಕನ್ನು ರೂಪಿಸಿಕೊಂಡ ಭಾನುಜೀ; ಹಲವರಿಗೆ ಮಾರ್ಗದರ್ಶಕರಾಗಿ, ಸಹಜ ಗೆಳೆಯರಾಗಿ, ಅಜಾತಶತ್ರುವಾಗಿ ಬದುಕಿದ್ದವರು. ಇನ್ನು ಅವರು ನೆನಪು ಮಾತ್ರ ಎಂದು ಹೇಳಿಕೊಳ್ಳಲೂ ಕೂಡ ಈ ಕ್ಷಣ ಮನಸ್ಸು ಗದ್ಗದಿತವಾಗುತ್ತಿದೆ.
ತನ್ನವರನ್ನು ಬೆಳೆಸುತ್ತಾ ತಾನು ಅವರೊಂದಿಗೆ ಒಂದಾಗುವ ಗುಣ ಸರ್ವೇ ಸಾಮಾನ್ಯದ್ದಲ್ಲ. ಅದಕ್ಕೆ ತಾನು ತನ್ನದು ಎನ್ನುವ ಸ್ವಾರ್ಥತ್ಯಾಗದ ಜೊತೆಗೆ ಸರ್ವರೂ ತನ್ನವರು ಎನ್ನುವ ಉದಾತ್ತ ಮನೋಭಾವವೂ ಮುಖ್ಯ. ರಾಜಕೀಯೇತ್ತರವಾಗಿ ಸದಾ ದಾಳಕ್ಕೆ-ಪ್ರತಿದಾಳ ಹಾಕುವ ವ್ಯಕ್ತಿ; ಕಲೆ ಸಂಸ್ಕೃತಿ, ಸಿದ್ದಾಂತ ಎಂದಾಗ ಅಷ್ಟೇ ಸಹಜವಾಗಿ ನೈಜ ಮಾನವನಾಗುವ ಕಲೆ ಅವರಿಗೆ ಸಿದ್ದಿಸಿತ್ತು. ಅಂತವರ ಸಾಂಗತ್ಯ ಈ ಜೀವನದಲ್ಲಿ ನಮ್ಮಂತಹ ತೃಣಮಾತ್ರರಿಗೆ ದೊರಿಯಿತಲ್ಲ ಎಂಬುದೇ ಈ ಕ್ಷಣದ ಸಾರ್ಥಕತೆ.
✍️ಸಹನಾ ಚೇತನ್
ಶಿವಮೊಗ್ಗ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.