ಪಂಡಿತ್ ದೀನದಯಾಳ್ ಉಪಾಧ್ಯಾಯ ಭಾರತದ ರಾಜಕೀಯದಲ್ಲಿ ಅಚ್ಚಳಿಯದ ಹೆಸರು. ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆಯೊಂದಿಗೆ ಉಪಾಧ್ಯಾಯರು ಹೊಸ ರಾಜಕಾರಣದ ದಿಕ್ಕು ದೆಸೆ ಮತ್ತು ಶಖೆಯನ್ನು ಪ್ರಾರಂಭಿಸಿದರು. ಜನಸಂಘದಲ್ಲಿ ಹಲವು ಜವಾಬ್ಧಾರಿ ವಹಿಸಿಕೊಂಡವರು ಅಲ್ಲದೇ ಬಿಜೆಪಿಯ ಸಂಸ್ಥಾಪಕರೂ ಕೂಡಾ.
ದೀನದಯಾಳ್ ಉಪಾಧ್ಯಾಯರು ಹುಟ್ಟಿದ್ದು ಉತ್ತರ ಪ್ರದೇಶ ಮಥುರಾ ಜಿಲ್ಲೆಯ ಫರಾಹ್ ಬಳಿಯ ನಗ್ಲಾ ಚಂದ್ರಭಾನ್ ಗ್ರಾಮದಲ್ಲಿ, 1916, ಸೆ.25ರಂದು. ಭಗವತಿ ಪ್ರಸಾದ ಉಪಾಧ್ಯಾಯ, ಮತ್ತು ರಾಮಪ್ಯಾರಿಯವರ ಮಗನಾಗಿ ಜನಿಸಿದರು. ಪ್ರಸಕ್ತ ಅವರು ಜನಿಸಿದ ಗ್ರಾಮವನ್ನು ದೀನದಯಾಳ್ ಧಾಮ ಎಂದು ಕರೆಯಲಾಗುತ್ತದೆ.
ಅವರು ಸಿಕರ್ನಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣ ಪಡೆದರು. ಬೋರ್ಡ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದರು. ಅದಕ್ಕಾಗಿ ಅವರು 10 ರೂಪಾಯಿ ಮಾಸಿಕ ವಿದ್ಯಾರ್ಥಿವೇತನ ತಮ್ಮ ಪುಸ್ತಕಗಳಿಗೆ ಹೆಚ್ಚುವರಿ 250 ರೂಪಾಯಿ ಜೊತೆಗೆ, ಸಿಕರ್ ಮಹಾರಾಜ ಕಲ್ಯಾಣ್ ಸಿಂಗ್ ಅವರಿಂದ ಚಿನ್ನದ ಪದಕ ಪಡೆದರು. ಅವರು ಇಂಟರ್ಮಿಡಿಯೇಟ್ ಅನ್ನು ಪಿಲಾನಿಯಲ್ಲಿ ಬಿರ್ಲಾ ಕಾಲೇಜ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಪ್ರಸ್ತುತ ಬಿರ್ಲಾ ಇನ್ಸ್ಟಿಟ್ಯೂಟ್ನಲ್ಲಿ ಮುಗಿಸಿದರು. ಅವರು 1939 ರಲ್ಲಿ ಕಾನ್ಪುರದ ಸನಾತನ ಧರ್ಮ ಕಾಲೇಜ್ನಲ್ಲಿ ಬಿ.ಎ ಮಾಡಿದರಲ್ಲದೆ, ಸ್ನಾತಕೋತರ ವಿದ್ಯಾಭ್ಯಾಸ ಇಂಗ್ಲೀಷ್ನಲ್ಲಿ ಪೂರೈಸಲು ಸೇರಿದ್ದರು. ಆದರೆ ಕೆಲ ಕೌಟುಂಬಿಕ ಕಾರಣಗಳಿಂದ ಪೂರ್ಣಗೊಳಿಸಲಾಗಲಿಲ್ಲ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಸನಾತನ ಧರ್ಮ ಕಾಲೇಜ್ನಲ್ಲಿ ಬಿ.ಎ ಒದುತ್ತಿರುವಾಗ ತನ್ನ ಗೆಳೆಯ ಬಾಬುಜಿ ಮಾಹಾಶಬ್ಧೆ ಮೂಲಕ ಆರ್.ಎಸ್. ಎಸ್ ಜೊತೆ ಅವರ ಒಡನಾಟ ಬೆಳೆಯಿತು. ಬಳಿಕ ಆರ್ ಎಸ್.ಎಸ್. ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಸಂಪರ್ಕಕ್ಕೆ ಬಂದರು. ಅವರು ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಜೊತೆ ಹಲವು ಬಾರಿ ಶಾಖೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು . 1940 ರಲ್ಲಿ ಪಾಂಚಜನ್ಯ ಮತ್ತು ಸ್ವದೇಶಿ ಪ್ರತಿಕೆಗಳನ್ನು ಹೊರ ತಂದು ತನ್ನ ಸೈದ್ಧಾಂತಿಕ ಲೇಖನಗಳನ್ನು ಬರೆದು ಪಸರಿಸಿದರು. ಆರ್.ಎಸ್.ಎಸ್.ನ ದ್ವೀತಿಯ ವರ್ಷದ ಶಿಕ್ಷಣ ಪೂರೈಸಿ 1942 ಪೂರ್ಣಾವಧಿ ಕಾರ್ಯಕರ್ತ ಮತ್ತು ಪ್ರಚಾರಕರಾಗಿ ತನ್ನ ಸಾಮಾಜಿಕ ಜೀವನ ಆರಂಭಿಸಿದರು. 1955ರಲ್ಲಿ ಉತ್ತರ ಪ್ರದೇಶದ ಸಹಪ್ರಾಂತ ಪ್ರಚಾರಕರಾಗಿ ಸೇವೆ ಸಲ್ಲಿಸಿದರು.
1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಮುಂದಾಳತ್ವದಲ್ಲಿ ಭಾರತೀಯ ಜನಸಂಘವನ್ನು ಪ್ರಾರಂಭಿಸಲಾಯಿತು. ಅದರ ಇನ್ನೋರ್ವ ಸದಸ್ಯನಾಗಿ ದೀನದಯಾಳ್ ಉಪಾಧ್ಯಾಯ ಅವರನ್ನು ಸೇರಿಸಲಾಯಿತು. ಅಲ್ಲದೇ ಅವರಿಗೆ ಉತ್ತರ ಪ್ರದೇಶ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ನೀಡಲಾಯಿತು. ತದ ನಂತರ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿ ಗೊಳಿಸಲಾಯಿತು. ದೀನದಯಾಳ್ ಉಪಾಧ್ಯಾಯ ಕಾರ್ಯವೈಖರಿಯಿಂದ ಪ್ರಭಾವಿತರಾದ ಶ್ಯಾಮ್ ಪ್ರಸಾದ್ ಮುಖರ್ಜೀ “ಒಂದು ವೇಳೆ ನನ್ನ ಬಳಿ ಇಬ್ಬರು ದೀನದಯಾಳ್ ಇದ್ದಿದ್ದರೆ ನಾನು ಭಾರತದ ರಾಜಕೀಯದಲ್ಲಿ ಪರಿವರ್ತನೆ ತರುತ್ತಿದೆ” ಎಂದಿದ್ದರಂತೆ.
ಜನಸಂಘದ ಸಂದರ್ಭದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯರವರು ಭೂಸುಧಾರಣೆ ಕಾಯ್ದೆಗೆ ವಿರೋಧ ವ್ಯಕ್ತ ಪಡಿಸಿದ ಶಾಸಕರನ್ನು ಪಕ್ಷದಿಂದ ಹೊರಹಾಕಲಾಯಿತು ಎಂಬ ಮಾತೂ ಇದೆ.
1952 ಶ್ಯಾಮ್ ಪ್ರಸಾದ್ ಮುಖರ್ಜಿ ಮರಣಾನಂತರ 15 ವರ್ಷಗಳ ಕಾಲ ಪಕ್ಷವನ್ನು ಬೆಳಸುವ ಜವಾಬ್ಧಾರಿ ವಹಿಸಿಕೊಂಡರು. ಆ ಸಂದರ್ಭ ಪಕ್ಷಕ್ಕೂ ಜನಪ್ರಿಯ ವ್ಯಕ್ತಿಯ ನಾಯಕತ್ವದ ಅಗತ್ಯವಿತ್ತು. ಅದು ದೀನದಯಾಳ್ ಉಪಾಧ್ಯಾಯರವರಲ್ಲಿತ್ತು ಆದುದರಿಂದ ಅವರು ಪಕ್ಷ ಸಂಘಟಿಸುವ ಕೆಲಸದಲ್ಲಿ ತೊಡಗಿದರು.
ಅವರು ವಿದೇಶಿ ಚಿಂತನೆಗಳ ವಿರೋಧಿಯಾಗಿರಲಿಲ್ಲ ಆದರೆ ಅದನ್ನು ಸ್ವದೇಶಿ ರೂಪದಲ್ಲಿ ಬಳಸುವಲ್ಲಿ ಮತ್ತು ಸ್ವದೇಶಿ ಸ್ವರೂಪದಲ್ಲಿ ಚಿಂತಿಸುವ ಚಿಂತನೆ ನೀಡಿದರು. ಅವರು ಸ್ವದೇಶಿ ಚಿಂತನೆಯ ಪ್ರತಿಪಾದಿಸಿದರು.
ಉಪಾಧ್ಯಾಯವರ ರಾಜಕೀಯ ಸಿದ್ಧಾಂತ ಮಾದರಿ. ಅವರು ಬಿಜೆಪಿಯ ರಾಜಕೀಯ ಸಿದ್ಧಾಂತ ರಚಿಸುವಲ್ಲಿ ಪ್ರಮುಖರು. ಬಿಜೆಪಿ ಪ್ರತಿಪಾದಿಸುವ ಸ್ವರಾಜ್, ಆಂತರಿಕ ಪ್ರಜಾಪ್ರಭುತ್ವ, ಮಾನವತಾವಾದ ಇವೆಲ್ಲ ಆವರ ಚಿಂತನೆಯ ಫಲ. ರಾಜಕೀಯ ಮತ್ತು ಆರ್ಥಿಕತೆಯ ಕ್ಷೇತ್ರದಲ್ಲಿ ಬೆಳವಣಿಗೆಗೆ ಭಾರತದ ಹಳ್ಳಿ ಹಳ್ಳಿಗೆ ವಿಕೇಂದ್ರೀಕೃತ ರಾಜಕೀಯ ಮತ್ತು ಸ್ವಾವಲಂಬನೆಯನ್ನು ಮತ್ತು ಆರ್ಥಿಕ ರೂಪದ ಚಿಂತನೆಯನ್ನು ನೀಡಿದವರು.
ಫೆ.11, 1968ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮುಘಲ್ಸರಾಯ್ ಬಳಿ ಹತ್ಯೆಗೀಡಾದರು. ಆದರೆ ಸಾವು ಹೇಗಾಯಿತೆಂಬ ಬಗ್ಗೆ ತಿಳಿದು ಬರದಿರುವುದು ದುರದೃಷ್ಟಕರ.
ಕೇಂದ್ರ ಸರಕಾರ ದೀನದಯಾಳ್ ಉಪಾದ್ಯಾಯರವರ ಹೆಸರಲ್ಲಿ ಹಲವು ಯೋಜನೆ ಪ್ರಾರಂಭಿಸಿದೆ. ಅಂತ್ಯೋದಯ ಅನ್ನಯೋಜನೆ ಇದಕ್ಕೊಂದು ಉತ್ತಮ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.