ಸ್ಲಮ್ನಲ್ಲಿ ಹಿಂದುಳಿದ ವರ್ಗದಲ್ಲಿ ಹುಟ್ಟಿದ ನಾನು ಹಣ್ಣು ತರಕಾರಿಗಳನ್ನು ಮಾರಿ ವೈದ್ಯಕೀಯ ಶಿಕ್ಷಣ ಪಡೆದೆ, ತಂದೆ ಬಾಬುರಾವ್ ಸ್ವಾತಂತ್ರ್ಯ ಚಳುವಳಿಯಿಂದ ಪ್ರಭಾವಿತರಾದವರು ಮತ್ತು ಎಲ್ಲರ ಸಬಲೀಕರಣದ ಪ್ರತಿಪಾದಕರಾಗಿದ್ದವರು. ಚಪ್ಪಲಿ ಹೊಲಿಯುವ ಜಾತಿಯವರು ಎಂದೇ ಜನ ನಮ್ಮನ್ನು ಗುರುತಿಸುತ್ತಿದ್ದರು, ಆದರೆ ಜಾತಿಯ ಎಲ್ಲಾ ನಿಯಮಗಳನ್ನು ಮೀರಿ ನನ್ನ ತಂದೆ ಶಿಕ್ಷಣ ಪಡೆಯಲು ಮುಂದಾಗಿ ಕನ್ನಡ, ಮರಾಠಿ, ಇಂಗ್ಲೀಷ್ ಕಲಿತವರು.
1955ರಲ್ಲಿ ಹುಟ್ಟಿದ ನನಗೆ ಒಬ್ಬ ಸಹೋದರ, ಆರು ಸಹೋದರಿಯರು. ನಮ್ಮ ತುಂಬಿದ ಮನೆಯಿದ್ದುದು ಸ್ಲಮ್ನಲ್ಲಿ. ಮರದ ಕೆಲಸ ಮಾಡುವುದು ನಮ್ಮ ಕುಟುಂಬದ ಕಾಯಕವಾಗಿತ್ತು, ತಂದೆ ಜನರಿಗೆ ಬಲು ಹತ್ತಿರವಾಗಿದ್ದ ಕಾರಣ ಅವರನ್ನು ಎಲ್ಲರೂ ದೇಶಮಾನ್ಯ ಎಂದೇ ಸಂಭೋಧಿಸುತ್ತಿದ್ದರು. ಹೀಗಾಗಿ ಜಾತಿಯನ್ನು ಮೀರಿ ನಮಗೆ ದೇಶ್ಮನೆ ಎಂಬ ಸರ್ನೇಮ್ ಸಿಕ್ಕಿತು.
ನಮಗೆ ದಿನಕ್ಕೆ ಒಂದು ಹೊತ್ತಿನ ಊಟವೇ ಗತಿಯಾಗಿತ್ತು, ಆದರೂ ನನ್ನ ತಂದೆಗೆ ಮಕ್ಕಳು ವೈದ್ಯರು, ವಕೀಲರು ಆಗಬೇಕೆಂಬ ಅದಮ್ಯ ಆಕಾಂಕ್ಷೆಯಿತ್ತು. ಆರ್ಥಿಕ ತೊಂದರೆಯನ್ನು ನಿಭಾಯಿಸುವುದಕ್ಕಾಗಿ ನಮ್ಮ ತಾಯಿ ತರಕಾರಿ ಅಂಗಡಿಯೊಂದನ್ನು ತೆರೆದರು. ನಾನು ಮತ್ತು ನನ್ನ ಸಹೋದರರು ತಲೆಯಲ್ಲಿ ಹೊತ್ತುಕೊಂಡು ತರಕಾರಿ ತಂದು ಹಾಕುತ್ತಿದ್ದೆವು. ಈ ಸ್ಥಿತಿಯಲ್ಲೂ ಕಷ್ಟಪಟ್ಟು ಶಿಕ್ಷಣ ಮುಂದುವರೆಸಿದೆವು.
12ನೇ ತರಗತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾದ ಬಳಿಕ ನನಗೆ ಕಾಲೇಜು ತೊರೆಯುವುದು ಅನಿವಾರ್ಯ ಎಂಬಂತಾಯಿತು. ಆದರೆ ನನ್ನ ತಾಯಿ ಆಕೆಯ ಬಳಿಯಿದ್ದ ಏಕೈಕ ಆಭರಣ ಮಂಗಳಸೂತ್ರವನ್ನೇ ತಂದೆಯ ಕೈಗಿತ್ತು ಇದನ್ನು ಮಾರಿ ಮಗಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿ ಎಂದರು. ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ನನ್ನ ಹೆತ್ತವರ, ಒಡಹುಟ್ಟಿದವರ ತ್ಯಾಗವೇ ಕಾರಣ. ಅದನ್ನು ನಾನು ಅವರಿಗೆ ವಾಪಾಸ್ ಕೊಡಲು ಸಾಧ್ಯವೇ? ಖಂಡಿತಾ ಇಲ್ಲ ಎನಿಸುತ್ತದೆ.
ಕನ್ನಡ ಮಾಧ್ಯಮದಲ್ಲಿ ಕಲಿತವಳಾದ್ದರಿಂದ ನನಗೆ ಇಂಗ್ಲೀಷ್ ಮುಖ್ಯವಾಗಿರುವ ಎಂಬಿಬಿಎಸ್ ಮಾಡುವುದು ಕ್ಲಿಷ್ಟವಾಗಿತ್ತು. ಆದರೂ ಉಪನ್ಯಾಸಗಳನ್ನು ಅರ್ಥ ಮಾಡಿಕೊಳ್ಳುತ್ತಿದೆ. ಮೊದಲ ವರ್ಷದಲ್ಲಿ ಇಂಗ್ಲೀಷ್ ಕಾರಣದಿಂದಾಗಿಯೇ ಅಣುತ್ತೀರ್ಣಳಾದೆ. ಆದರೂ ನನ್ನ ಪ್ರಾಧ್ಯಾಪಕರ ದಯೆಯಿಂದ ಎರಡನೇ ವರ್ಷವನ್ನು ಅತ್ಯುತ್ತಮವಾಗಿ ಮಾಡಿದೆ. ಬಳಿಕ ಎಂದಿಗೂ ನಾನು ಹಿಂದಿರುಗಿ ನೋಡಿಲ್ಲ. ವಿಶ್ವವಿದ್ಯಾನಿಲಯಕ್ಕೆಯೇ ಮೊದಲ ರ್ಯಾಂಕ್ ಪಡೆದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ನನ್ನ ಮನೆಯಲ್ಲಿ ಸಂಭ್ರಮವೋ ಸಂಭ್ರಮ.
ಬಳಿಕ ಸರ್ಜರಿಯಲ್ಲಿ ಎಂಎಸ್ ಮಾಡಿದೆ, ಕಿಡ್ವಾಯ್ ಇನ್ಸ್ಟಿಟ್ಯೂಟ್ ಆಫ್ ಆನ್ಕಾಲಜಿಯಲ್ಲಿ ಹಿರಿಯ ಸರ್ಜನ್ ಆಗಿ ಸೇವೆ ಸಲ್ಲಿಸಿದೆ, ಬ್ರೆಸ್ಟ್ ಕ್ಯಾನ್ಸರ್ನಲ್ಲಿ ತಜ್ಞೆ ಎನಿಸಿಕೊಂಡೆ. ವೃತ್ತಿಯುದ್ದಕ್ಕೂ ಸ್ನೇಹಿತರ, ರೋಗಿಗಳ ಸಲಹೆ, ಬೆಂಬಲ, ಪ್ರೀತಿಯನ್ನು ಪಡೆದ ನಾನೇ ಅದೃಷ್ಟವಂತೆ. ಇದೇ ವೇಳೆ ನನ್ನ ಸಹೋದರ ಕೂಡ ಎಲ್ಎಲ್ಬಿ ಪದವಿ ಗಳಿಸಿ, ಉದ್ಯೋಗ ಮಾಡಲಾರಂಭಿಸಿದ.
ನನ್ನ ಸೇವೆಯಲ್ಲಿ ನನಗೆ ನಂಬಿಕೆ ಇದೆ, ಜೀವನದುದ್ದಕ್ಕೂ ಹೊಸತನ್ನು ಕಲಿಯುವ ಆಶಯವಿದೆ. ನನ್ನ ಜ್ಞಾನದ ಅಂಕಿಅಂಶಗಳನ್ನು ಅಪ್ಡೇಟ್ ಮಾಡುವುದಕ್ಕಾಗಿಯೇ ಫೋಟೋಕಾಪಿ ಮೆಶಿನನ್ನು ಖರೀದಿಸಿದ್ದೇನೆ. ರೋಗಿಗಳೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತಾನೆ, ಅವರೊಂದಿಗೆ ಬಾಂಧವ್ಯ ಬೆಳೆಸುತ್ತೇನೆ. ಆಪರೇಶನ್ ಮಾಡುವ ವೇಳೆ ಎಲ್ಲಾ ಭಾರವನ್ನು ದೇವರ ಮೇಲೆ ಹಾಕುತ್ತೇನೆ, ನನ್ನ ಯಶಸ್ವಿಗಾಗಿ ಆತನ ಮಧ್ಯಪ್ರವೇಶವನ್ನು ನಾನು ಬಯಸುತ್ತೇನೆ, ನಾನಿಲ್ಲಿ ಕೇವಲ ನಿಮಿತ್ತ. ನಾನು ನನ್ನ ಗುರುಗಳಿಂದ ರಚಿಸಲ್ಪಟ್ಟಿದ್ದೇನೆ, ಗೆಳೆಯರಿಂದ ಬೆಳೆದಿದ್ದೇನೆ ಮತ್ತು ರೋಗಿಗಳಿಂದ ಪ್ರೀತಿಸಲ್ಪಟ್ಟಿದ್ದೇನೆ. ಜೀವ ಉಳಿಸುವ ಮತ್ತು ಸೇವೆ ಮಾಡುವ ವೃತ್ತಿಯಲ್ಲಿ ನಾನಿದ್ದೇನೆ ಎಂದರೆ ಅದಕ್ಕೆ ದೇವರೇ ಕಾರಣ.
ಸುಧೀರ್ಘ ಕಾಲದವರೆಗೆ ವೈದ್ಯ ವೃತ್ತಿ ಮಾಡಿದ ನಾನು ಕೊನೆಗೂ 2015ರಲ್ಲಿ ನಿವೃತ್ತಳಾದೆ. ಆದರೆ ನನಗೆ ನಾನು ಅರ್ಧ ಕೆಲಸ ಮಾತ್ರ ಮಾಡಿದ್ದೇನೆ ಎಂದೆನಿಸುತ್ತಿದೆ. ಹೀಗಾಗಿ ವಿವಿಧ ಸಮಾಜಿಕ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಜಾಗೃತಿ ಸಮಾವೇಶದಲ್ಲಿ, ಸಂಶೋಧನಾ ಕಾರ್ಯದಲ್ಲಿ, ಗ್ರಾಮಗಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ತಿಂಗಳಲ್ಲಿ 15 ದಿನವಾದರೂ ಸಮಾಜಕ್ಕಾಗಿ ಮೀಸಲಿಡಬೇಕೆಂಬ ಧ್ಯೇಯ ನನ್ನದು. ಪ್ರಸ್ತುತ ಕರ್ನಾಟಕ ಕ್ಯಾನ್ಸರ್ ಸೊಸೈಟಿಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ಅಲ್ಲಿ ನಾನು ಎಲ್ಲರಿಗೂ ಲಭ್ಯವಿದ್ದೇನೆ.
ಇದು ಬಡತನದಲ್ಲಿ ಹುಟ್ಟಿ ಆಗಸದೆತ್ತರಕ್ಕೆ ಬೆಳೆದು ಕರ್ನಾಟಕದ ಹೆಸರಾಂತ ವೈದ್ಯೆಯಾಗಿ ಸೇವೆ ಸಲ್ಲಿಸಿದ ಡಾ.ವಿಜಯಲಕ್ಷ್ಮೀ ದೇಶ್ಮನೆಯವರು ತಮ್ಮ ಯಶೋಗಾಥೆಯನ್ನು ವಿವರಿಸಿದ ಪರಿ.
ನಮ್ಮ ಸಂಸ್ಕೃತಿಯಲ್ಲಿ ’ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ಈ ಮಾತನ್ನ ಅಕ್ಷರಶಃ ಸಾಬೀತು ಮಾಡಿ ತೋರಿಸಿದವರು ಡಾ.ವಿಜಯಲಕ್ಷ್ಮೀ ದೇಶ್ಮನೆ. ಕೆಸರಲ್ಲಿ ಅರಳಿದ ಹೂವು ತನ್ನ ಸುತ್ತಲ ಪ್ರದೇಶಕ್ಕೂ ಸುಗಂಧವನ್ನು ಹರಡುವಂತೆ ಸ್ಲಮ್ನಲ್ಲಿ ಹುಟ್ಟಿದ ವಿಜಯಲಕ್ಷ್ಮೀ ತನ್ನ ಸುತ್ತಲಿನ ಸಮಾಜಕ್ಕೆ ಸಾಕಷ್ಟು ಸೇವೆಗಳನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.