ಖಲಿಸ್ಥಾನ್ ಪ್ರತ್ಯೇಕವಾದಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹುಚ್ಚುತನಕ್ಕೆ ಮದ್ದನ್ನು ಅರೆಯುವ ಕೆಲಸವನ್ನು ಗೃಹ ಇಲಾಖೆ ಆದಷ್ಟೂ ಬೇಗ ಮಾಡಬೇಕಿದೆ. ಭಾರತದ ಪಂಜಾಬಿನಲ್ಲಿರುವ ಯುವ ಸಮೂಹ ಪಾಕಿಸ್ಥಾನದ ಪರೋಕ್ಷ ಕುಮ್ಮಕ್ಕಿನ ಕಾರಣ ಈ ಪ್ರತ್ಯೇಕವಾದ ಎಂಬ ಹಗಲು ಕನಸನ್ನು ಕಾಣುತ್ತಿದೆ ಮಾತ್ರವಲ್ಲ ದೇಶದ ಸಾರ್ವಭೌಮತ್ವಕ್ಕೆ ಇದು ಒಂದು ಮುಳ್ಳಾಗಿ ಪರಿಣಮಿಸುತ್ತಿದ್ದೆಯೇ ಎಂಬ ಶಂಕೆ ವ್ಯಕ್ತವಾಗತೊಡಗಿದೆ. ಬಿಂದ್ರನ್ ವಾಲೆಯನ್ನು ಇಲ್ಲವಾಗಿಸಿದ ನಂತರ ದಶಕಗಳೇ ಕಳೆದರೂ, ಆತ ನಡೆದ ಹಾದಿಯನ್ನೇ ಅನುಸರಿಸುತ್ತಿರುವ ಯುವ ಮಂದಿಗೆ ಸರಿಯಾದ ನೆಲೆಯನ್ನು ಕಾಣಿಸಬೇಕಾದ ಜವಾಬ್ದಾರಿಯು ಸಮಾಜ ಮತ್ತು ಪ್ರಸ್ತುತ ಆಡಳಿತಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಭಾರತೀಯ ಸಮುದಾಯದ ಶ್ರದ್ಧಾಕೇಂದ್ರಗಳು, ನಾಗರಿಕರನ್ನು ಗುರಿಯಾಗಿಸಿ ಆಕ್ರಮಣಗಳು ನಿರಂತರ ಎಂಬಂತೆ ನಡೆದಿವೆ. ಖಲಿಸ್ಥಾನಿ ಪ್ರತ್ಯೇಕವಾದ ಕಳೆದ ಎರಡು ವರ್ಷಗಳಿಂದ ಹಿಂದೂ ದೇಗುಲಗಳು, ಭಾರತೀಯ ರಾಯಭಾರ ಕಚೇರಿಗಳು, ಅನಿವಾಸಿ ನಾಗರಿಕರು ಸಹಿತ ಅವರ ಶ್ರದ್ಧಾಕೇಂದ್ರಗಳ ಮೇಲೆ ಅವಿವೇಕಿ, ಅತಿರೇಕಿ ಕೃತ್ಯಗಳನ್ನು ಎಸಗುತ್ತಿದೆ. ದೇಶ ವಿರೋಧಿ ಶಕ್ತಿ ನಡೆಸಿದ ಕೆಲ ಪುಂಡತನಕ್ಕೆ ಉದಾಹರಣೆ ಇಲ್ಲಿದೆ.. ಸೆಪ್ಟೆಂಬರ್ 2022 ರಲ್ಲಿ ಟೊರಾಂಟೊದ ಸ್ವಾಮೀ ನಾರಾಯಣ ದೇಗುಲದ ಮೇಲೆ ಖಲಿಸ್ಥಾನಿಗಳ ದಾಳಿ ನಡೆದಿತ್ತು. ಮಾರ್ಚ್ 19, 2023 ರಲ್ಲಿ ಅಮೇರಿಕದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ಇದರ ಹುಚ್ಚುತನದ ಪ್ರದರ್ಶನವಾಗಿತ್ತು.
ಡಿಸೆಂಬರ್ 13,2020 ರಲ್ಲಿ ಬ್ರಿಸ್ಬೇನ್ ನಲ್ಲಿರುವ ಲಕ್ಷ್ಮೀ ನಾರಾಯಣ ದೇಗುಲದ ಮೇಲೂ ದಾಳಿಯಾಗಿತ್ತು,
ಆಸ್ಟ್ರೇಲಿಯಾದ ಮೆಲ್ಬೋರ್ನ ನಲ್ಲಿರುವ ಇಸ್ಕಾನ್ ದೇಗುಲದ ಮೇಲೂ ದಾಳಿ ನಡೆದಿದೆ. ನಂತರ
ವಿಕ್ಟೋರಿಯಾದ ಶಿವ ಮತ್ತು ವಿಷ್ಣು ದೇಗುಲದ ಮೇಲೆ ದಾಳಿ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ದಕ್ಷಿಣದಲ್ಲಿರುವ ಅಡಿಲೈಡ್ ನ ಹಿಂದೂ ದೇಗುಲದಲ್ಲಿ ಖಲಿಸ್ಥಾನಿ ಪರ ಗೋಡೆ ಬರಹಗಳು ಅಚ್ಚೊತ್ತಿದ್ದವು.
ಫೆ. 12, 2022 ರಲ್ಲಿ ಮಿನಿಸೊಟಾದ ರಾಮ ದೇಗುಲ, ಮಾರ್ಚ್ 19, 2023 ರಂದು ಲಂಡನ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಯಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಸಿದ ಪ್ರಕರಣ, ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣ, ಒಂಟಾರಿಯೊದ ಗೌರಿ ಶಂಕರ್ ದೇಗುಲದ ಮೇಲೆ ದಾಳಿ, ಹೀಗೆ ವಿದೇಶಿ ನೆಲದಲ್ಲಿ ಭಾರತ ನಿರಂತರ ಸಂಕಷ್ಟಕ್ಕೆ ಒಳಗಾಗುತ್ತಿದೆ.
ಈ ಎಲ್ಲಾ ದಾಳಿಗಳಿಗೆ ಕಾರಣ ಖಲಿಸ್ಥಾನಿ ಪ್ರತ್ಯೇಕವಾದಿ ಶಕ್ತಿಗಳು. ಈ ಖಲಿಸ್ಥಾನಿ ಬೆಂಬಲಿಗರಿಗೆ ಪಾಕಿಸ್ಥಾನದ ಪಂಜಾಬ್ ಬೇಡ, ಬದಲಾಗಿ ಭಾರತದಿಂದ ಪಂಜಾಬ್ ಪ್ರತ್ಯೇಕವಾಗಬೇಕು. ಪಾಕಿಸ್ಥಾನದ ಪಂಜಾಬಿನ ಬಗ್ಗೆ ಈ ಶಕ್ತಿಗಳು ಎರಡಕ್ಷರ ಮಾತನಾಡುದಿಲ್ಲ ಮಾತ್ರವಲ್ಲ ಪ್ರಸ್ತುತ ಪಾಕಿನಲ್ಲಿರುವ ಲಾಹೋರ್ ಎಂಬ ಸಿಖ್ಖರೇ ಆಳುತ್ತಿದ್ದ ನೆಲವನ್ನು ಕೇಳುತ್ತಿಲ್ಲ. ಬದಲಾಗಿ ಭವ್ಯ ಮತ್ತು ಅಖಂಡ ಭಾರತದ ಕನಸು ಕಂಡ ವೀರ ಭಗತಸಿಂಗನ ಪಂಜಾಬ್ ಪ್ರತ್ಯೇಕವಾಗಬೇಕು. ಮೊಘಲರ ವಿರುದ್ಧ ಹೋರಾಡಿ ಮಡಿದ ಬಹದ್ದೂರ್ ಗುರು ಗೋವಿಂದ ಸಿಂಗರ ಪಂಜಾಬ್ ಪ್ರತ್ಯೇಕವಾಗಬೇಕು. ಹೀಗೆ ಖಲಿಸ್ಥಾನಿಗಳು ಮೂಲದಲ್ಲೇ ಭಾರತವನ್ನು ವಿರೋಧಿಸುವ ಧೋರಣೆಯನ್ನೇ ಹೊತ್ತು ಮೆರೆಯುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ, ಬ್ರಿಟನ್ ನಲ್ಲಿ ಭಾರತ ವಿರೋಧಿ ನಡವಳಿಕೆ ತೋರಿದ ಈ ಸಂಘಟನೆ ಇಂದು ಪ್ರತ್ಯೇಕವಾದವನ್ನು ದೇಶದ ಹೊರಗಿರುವ ಸಿಖ್ಖ ಸಮೂಹದಲ್ಲಿ ಬೆಳೆಸುತ್ತಿದೆ. ಇದರ ಹಿಂದೆ ಪಾಕಿಸ್ಥಾನದ ಆಡಳಿತ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಮಾತ್ರವಲ್ಲ ಈ ಅಂಶವೂ ಖಾತ್ರಿಯಾಗಿದೆ. ಬಹಳ ಹಿಂದೆ ಭಾರತ ದೇಶವು ತನ್ನ ಪ್ರಧಾನಿಯನ್ನೂ ಕೂಡಾ ಇದೇ ಪ್ರತ್ಯೇಕವಾದದ ಕಾರಣದಿಂದ ಕಳೆದುಕೊಂಡಿದೆ. ಈಗ ದೇಶ ಎಚ್ಚೆತ್ತುಕೊಳ್ಳಬೇಕಿದೆ ಮಾತ್ರವಲ್ಲ ದೇಶದ ಒಳಗಡೆ ಇರುವ ಇಂತಹ ಸಂಘಟನೆಯನ್ನು ಮಟ್ಟಹಾಕಬೇಕಿದೆ. ಮೊದಲನೆಯದಾಗಿ ಪಂಜಾಬ್ ಸರಕಾರ ಕಾನೂನು ರೀತ್ಯಾ ಈ ಸಂಘಟನೆಯ ಬೆಳವಣಿಗೆಯಲ್ಲಿ ಕಾರಣರಾದವರನ್ನು ಜೈಲಿಗೆ ತಳ್ಳುವ ಕೆಲಸವನ್ನು ಮಾಡಬೇಕಿದೆ. ಮತ್ತು ಅಮೃತಪಾಲ ಸಿಂಗನ ಸೋ ಕಾಲ್ಡ್ ಸಹಚರರನ್ನು ಮಟ್ಟ ಹಾಕಿ, ಸಂಬಂಧಿತ ಸಂಘಟನೆಯ ಮೇಲೆ ಹದ್ದಿನ ಕಣ್ಣಿಡಬೇಕಿದೆ. ದೇಶದ ಗಡಿಯಾಚೆಯಿಂದ ಈ ಪ್ರತ್ಯೇಕವಾದಿ ಸಂಘಟನೆಗಳನ್ನು ಬೆಳೆಸುವ ವಿಧ್ವಂಸಕ ಶಕ್ತಿಗಳನ್ನು ಕೇಂದ್ರ ಸರಕಾರ ಯಾವುದೇ ಮುಲಾಜಿಲ್ಲದೆ ಮಟ್ಟಹಾಕಬೇಕು.
ಕೆಲ ವರ್ಷಗಳಿಂದ ನೆರೆಯ ಪಾಕಿಸ್ಥಾನದ ಆಡಳಿತ ಮತ್ತು ಐ.ಎಸ್.ಐ ಮೂಲಕ ಸಿಖ್ಖ್ ಸಮೂಹದ ಯುವ ಮನಸ್ಸುಗಳನ್ನು ಅಡ್ಡದಾರಿಗೆಳೆಯುವ ಎಲ್ಲಾ ತರಹದ ಪ್ರಯತ್ನಗಳು ನಿರಂತರವಾಗಿ ಮುಂದುವರಿದಿವೆ. ಮಾದಕ ವಸ್ತುಗಳನ್ನು ಭಾರತದ ಗಡಿಯೊಳಗೆ ರವಾನಿಸುವುದು, ಗಾಂಜಾ, ಆಫೀಮು ಮೊದಲಾದ ಮತ್ತು ಬರಿಸುವ ಪದಾರ್ಥಗಳನ್ನು ಡ್ರೋನ್ ಗಳ ಮೂಲಕ ಪಂಜಾಬ್ ಪ್ರವೇಶಿಸುವಂತೆ ಮಾಡಿ, ಪಂಜಾಬ್ ಯುವ ಸಮೂಹವನ್ನು ಮಾದಕ ನಶೆಗೆ ತಳ್ಳಿ, ನಿರುದ್ಯೋಗಿಗಳನ್ನಾಗಿಸಿ ಭಾರತ ವಿರೋಧಿ ಕೃತ್ಯಗಳಲ್ಲಿ ಬಳಸಿಕೊಳ್ಳುವ ಯತ್ನವೂ ನಿರಂತರವಾಗಿ ಮುನ್ನಡೆಯುತ್ತಿರುವುದು ಹೆಚ್ಚು ಗಮನಿಸಬೇಕಾದ ಅಂಶವಾಗಿದೆ. ಇದರೊಂದಿಗೆ ಪಾಕಿಸ್ಥಾನದಿಂದಾಗುತ್ತಿರುವ ಶಸ್ತ್ರಗಳ ಪೂರೈಕೆಯೂ ಇಂದು ಗುಟ್ಟಾಗಿ ಉಳಿದಿಲ್ಲ!!
ಸಿಖ್ಖ ಸಮುದಾಯವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಓಟ್ ಬ್ಯಾಂಕ್ ಆಗಿ ಮಾರ್ಪಾಡಾಗಿರುವ ಹಿನ್ನೆಲೆಯಲ್ಲಿ ಅವರು ನಡೆಸುತ್ತಿರುವ ಭಾರತ ವಿರೋಧಿ ಕೃತ್ಯಗಳತ್ತ ಆ ದೇಶಗಳು ಮೌನವಾಗಿರುವುದು ಭವಿಷ್ಯತ್ತಿಗೆ ಅಪತ್ತಾಗಿ ಮಾರ್ಪಾಡಾಗುದರಲ್ಲಿ ಸಂಶಯವಿಲ್ಲ. ಬ್ರಿಟನ್ ನಲ್ಲಿ 5 ಲಕ್ಷದ 20 ಸಾವಿರ ಮಂದಿ ಸಿಖ್ಖರಿದ್ದರೆ, ಕೆನಡಾದಲ್ಲಿ ಒಟ್ಟು 8 ಲಕ್ಷ ಮಂದಿ ಸಿಖ್ಖರಿದ್ದಾರೆ. ಈ ಸಮೂಹವು ರಾಜಕೀಯವಾಗಿ ಶಕ್ತಿಯುತವಾಗಿ ಬೆಳೆದಿದ್ದು, ಏನು ಮಾಡಿದರೂ ನಡೆಯುತ್ತದೆ ಎಂಬ ಭಂಡತನದಲ್ಲಿದೆ. ಎಲ್ಲಾ ಸಿಖ್ಖರೂ ಭಾರತ ವಿರೋಧಿಗಳು ಎಂಬ ವಿಚಾರವನ್ನು ಮುಂದಿಡಲಾಗದಿದ್ದರೂ, ಈ ಸಮುದಾಯದ ಯುವ ಮಂದಿ ಪ್ರತ್ಯೇಕವಾದದತ್ತ ಸುಲಭವಾಗಿ ಸೆಳೆಯಲ್ಪಡುತ್ತಿದ್ದಾರೆ ಎಂಬುದೂ ಅಷ್ಟೇ ಸತ್ಯ.
ಖಲಿಸ್ಥಾನಿಗಳ ಇತಿಹಾಸ ಹೇಳುವ ಮುಂಚೆ.. ಖಲಿಸ್ಥಾನಿ ಎಂದರೆ ಹಿಂಸಾತ್ಮಕ, ಪ್ರತ್ಯೇಕವಾದಿ ದಂಗೇಕೋರರು ಎಂಬ ವ್ಯಾಖ್ಯಾನ ನೀಡಬಹುದು. ಭಾರತ ಸ್ವಾತಂತ್ರ್ಯದ ಬೆನ್ನಲ್ಲೇ ಗ್ರೇಟರ್ ಪಂಜಾಬಿನ ಬಹುಭಾಗ ಪಾಕಿಸ್ಥಾನದ ಪಾಲಾಯಿತು. ನಂಕಾನ ಸಾಹಿಬ್, ಕರ್ತಾರಪುರ ಸಾಹಿಬ್, ಲಾಹೋರ್ ಮೊದಲಾದ ಮಹತ್ವದ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರಗಳು ಪಾಕ್ ವಶವಾದವು. ಅಲ್ಲಿದ್ದ ಯುವ ಸಿಖ್ ಮನಸುಗಳ ಮೇಲೆ ಪಾಕಿಸ್ಥಾನದ ಪ್ರಭಾವ ದಟ್ಟವಾಯಿತು ಮಾತ್ರವಲ್ಲ ಭಾರತದ ಪಂಜಾಬ್ ಪ್ರಾಂತ್ಯವನ್ನು ಪ್ರತ್ಯೇಕಿಸುವ ಭಾಗವಾಗಿ ಐ.ಎಸ್.ಐ ನಿರಂತರ ಶ್ರಮಿಸಿತು ಮಾತ್ರವಲ್ಲ ಕುಮ್ಮಕ್ಕು ನೀಡಿತು. ಇದು ಮುಂದುವರಿದು 1980 ರ ಸುಮಾರಿಗೆ ಭಾರತದ ಪಂಜಾಬ್ ರಾಜ್ಯವನ್ನು ಪ್ರತ್ಯೇಕಿಸಿ ಬೇರೆಯೇ ಒಂದು ರಾಷ್ಟ್ರದ ಕೂಗನ್ನು ಆರಂಭಿಸಿದವರು ಇವರೇ. ಇವರು ಆರಂಭಿಸಿದ ಪ್ರತ್ಯೇಕವಾದಿ ಕೂಗಿಗೆ ಅಂದು ಪಂಜಾಬ್ ಪ್ರಾಂತ್ಯವೇ ರಕ್ತಮಯವಾಗಿತ್ತು, ಕಾನೂನು ಅವ್ಯವಸ್ಥೆಯ ಕೂಪವಾಗಿತ್ತು, ಪೋಲಿಸರು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದರು ಮಾತ್ರವಲ್ಲ ಸಾವಿರಾರು ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಅಂದು ಬಿಂದ್ರನ್ ವಾಲೇ ಎಂಬ ಸ್ವಯಂ ಘೋಷಿತ ದೇವಮಾನವ ಕಂ ದೇಶ ವಿರೋಧಿ ಹೋರಾಟಗಾರ ಖಲಿಸ್ಥಾನಿ ಪ್ರತ್ಯೇಕವಾದದ ಮುಖವಾಣಿಯಾಗಿದ್ದ, ಇಂದು ಅಮೃತಪಾಲನೆಂಬ 30 ರ ತರುಣ ಇದೇ ವಾದದ ಸರಣಿ ಮುಖವೆಂಬಂತೆ ತನ್ನೊಂದಿಗೆ ಕೆಲ ಯುವಕರನ್ನು ಸೆಳೆದಿದ್ದಾನೆ. ಪ್ರಸ್ತುತ ಪೋಲಿಸರ ಕಣ್ಣು ತಪ್ಪಿಸಿ ಓಡುತ್ತಿದ್ದಾನೆ. ಹಿಂದೆ ಮಾನವ ಬಾಂಬರ್ ಗಳನ್ನು ತಯಾರಿಸುತ್ತಿದ್ದ ಸಂಘಟನೆಯು ಮಾಜಿ ಮುಖ್ಯಮಂತ್ರಿ ಬಿಯಾನ್ ಸಿಂಗ್ ಕೊಲೆಯನ್ನು ಮಾಡಿದ ಆರೋಪ ಹೊತ್ತಿದೆ. ಅಮೃತಪಾಲ್ ನನ್ನು ಬಂಧಿಸುವ ಸದ್ಯದ ಪೋಲಿಸ್ ಪ್ರಯತ್ನವು ಪಶ್ಚಿಮದ ರಾಷ್ಟ್ರಗಳಲ್ಲಿ ಭಾರತ ವಿರೋಧಿ ಕೃತ್ಯಗಳನ್ನು ಹೆಚ್ಚಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಖಲಿಸ್ಥಾನಿಯರ ಸುರಕ್ಷಿತ ತಾಣಗಳಾಗಿ ಮಾರ್ಪಾಟಾಗಿದ್ದು, ಅಲ್ಲಿನ ಸರಕಾರಗಳು ಭಾರತೀಯ ದೂತವಾಸ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿಯೂ ವಿಫಲವಾಗಿವೆ. ಈ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯವು ಬ್ರಿಟನ್ ರಾಯಭಾರಿಯನ್ನು ಕರೆಸಿ ಸ್ಪಷ್ಟನೆ ಕೇಳಿದೆ. ಮಾತ್ರವಲ್ಲ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದವರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜ್ಯಾರಿಗೊಳಿಸುವಂತೆ ಕೇಳಿಕೊಂಡಿದೆ. ದಿನಗಳ ಹಿಂದೆ ಅಮೃತಪಾಲ್ ಬಂಧಸಿಉವ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೊಟಕುಗೊಳಿಸಲಾಗಿತ್ತು. ಇದರ ಬಗ್ಗೆ ಕೆನಡಾ ಸಂಸದ ಜಗಮಿತ್ ಸಿಂಗ್ ತನ್ನ ಖೇದ ವ್ಯಕ್ತಪಡಿಸಿದ್ದು, ಈ ಕ್ರಮ ಪಂಜಾಬ್ ರಾಜ್ಯದ ನಾಗರಿಕ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಟ್ವೀಟ್ ಮಾಡಿದ್ದಾನೆ. ಅಬ್ಬಬ್ಬಾ ಎಂತಹ ಟ್ವೀಟ್ ಅಲ್ಲವೇ!! ಇಲ್ಲಿ ಓರ್ವ ಶಸ್ತ್ರಸಜ್ಜಿತ ದೇಶವಿರೋಧಿ ವ್ಯಕ್ತಿಯನ್ನು ಪೋಲಿಸರು ಬಂಧಿಸಲು ಯತ್ನಿಸುತ್ತಿದ್ದಾರೆ ಎಂಬ ವಿಚಾರವನ್ನು ಜಗಮಿತ್ ಸಿಂಗ್ ಮರೆತಿದ್ದಾನೆ ಎನ್ನಬಹುದು.
(ವಾರಿಸ್ ಪಂಜಾಬ್ ದೇ ಸಂಘಟನೆಯು 2021 ರ ಪಂಜಾಬ್ ವಿಧಾನಸಭಾ ಚುನಾವಣೆಯ ಆರಂಭಕ್ಕೂ ಮುನ್ನ ಹುಟ್ಟಿಕೊಂಡಿತ್ತು. ನಟ, ಲಾಯರ್ ಟರ್ನ್ಡ್ ಆಂದೋಲನ ಜೀವಿ ದೀಪ್ ಸಿಧು ಈ ಸಂಘಟನೆಯ ಸಂಸ್ಥಾಪಕ. ಸಾಮಾಜಿಕ ಸಂಘಟನೆಯೆಂದು ಹೇಳಿಕೊಂಡ ಈ ಸಂಘಟನೆಯ ಸ್ಥಾಪಕ ದೀಪ್ ಸಿಧು ಫೆ.15, 2022 ರಂದು ಕಾರ್ ಆಕ್ಸಿಡೆಂಟಿನಲ್ಲಿ ಮೃತಪಟ್ಟ. ಈ ಸಂಘಟನೆಯ ನಂತರದ ಚುಕ್ಕಾಣಿಯು ಅಮೃತಪಾಲನ ಕೈಗೆ ಬಂದಿತ್ತು. ಬಿಂದ್ರನ್ ವಾಲೆಯ ಹುಟ್ಟೂರಲ್ಲಿ ಏರ್ಪಟ್ಟ ಸಮಾರಂಭದಲ್ಲಿ ಅಮೃತಪಾಲ್ ವಾರಿಸ್ ಪಂಜಾಬ್ ಡೇಯ ಮುನ್ನಡೆಸುವವನಾದ. ಅಂದು ಅಲ್ಲಿ ಸೇರಿದ್ದ ಕಾರ್ಯಕರ್ತರು ಖಲಿಸ್ಥಾನಿ ಪರ ಘೋಷಣೆಗಳನ್ನು ಕೂಗುತ್ತಾರೆ.)
✍️ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.