ಈಗ ಎಲ್ಲಿ ನೋಡಿದರೂ ಆನ್ಲೈನ್ ನ್ಯೂಸ್, ವೆಬ್ಪೋರ್ಟಲ್ಗಳದ್ದೇ ಭರಾಟೆ. ಸಾಮಾಜಿಕ ಜಾಲತಾಣಗಳೇ ಆಳುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರಿಗೂ ತಮ್ಮದೊಂದು ಪೋರ್ಟಲ್ ಇರಬೇಕೆಂಬ ಹಂಬಲ. ಎಲ್ಲೆಲ್ಲಿಂದಲೂ ಸುದ್ದಿಯೊಂದನ್ನು ಹೆಕ್ಕಿ, ಜನರ ನಡುವೆ ಹರಿಬಿಡಲಾಗುತ್ತದೆ. ಇದು ಹಲವು ಆಯಾಮಗಳಲ್ಲಿ ಉಪಯೋಗಿಯೂ ಆದರೂ, ಇದರಿಂದ ದುರಪಯೋಗ ಇಲ್ಲದಿಲ್ಲ. ಜನ ಸತ್ಯಾಸತ್ಯತೆಯನ್ನು ಪರೀಕ್ಷಿಸದೇ ತಮಗೆ ಬಂದ ಮಾಹಿತಿಯೆಲ್ಲವನ್ನೂ ಇನ್ನೊಬ್ಬರ ಬಳಿ ಹಂಚಿಕೊಂಡುಬಿಡುತ್ತಾರೆ. ನಾವೂ ನಂಬಿಬಿಡುತ್ತೇವೆ. ಹೀಗಾಗಿಯೇ ಫೇಕ್ ನ್ಯೂಸ್ಗಳೂ ಈಗ ಹಿಂದೆಂದಿಗಿಂತ ಹೆಚ್ಚಾಗಿವೆ.
ನರೇಂದ್ರಮೋದಿಯವರು ಇತ್ತೀಚೆಗೆ ಮಾತನಾಡುತ್ತಾ ಇಂತಹ ಫೇಕ್ ನ್ಯೂಸ್ ಹರಡಿಸುವ ಮಾಧ್ಯಮಗಳ ಕುರಿತು ಎಚ್ಚರಿಕೆ ವಹಿಸಲು ಕರೆನೀಡಿದ್ದರು. “ಮಾಹಿತಿಯೊಂದನ್ನು ಹಂಚಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಬೇಕು ಮತ್ತದನ್ನು ಖಚಿತಪಡಿಸಿಕೊಳ್ಳಬೇಕು. ಇದರ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಳ್ಳಲು ಹಲವು ಉಪಕರಣಗಳೂ ಇವೆ” ಎಂಬುದನ್ನು ಅವರು ತಿಳಿಸಿದ್ದರು. ಸುಳ್ಳುಸುದ್ದಿಯೊಂದು ವಾಟ್ಸಪ್ ಮೂಲಕ ಹರಿದಾಡಿ, ಅದರಿಂದ ಉಂಟಾಗಿರುವ ವಿಪರೀತ ಪರಿಣಾಮಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಇದರಿಂದ ಹಲವರ ತೇಜೋವಧೆಯಾಗಿರುವುದನ್ನು ಗಮನಿಸಿದ್ದೇವೆ.
ನರೇಂದ್ರಮೋದಿಯವರು ಇದನ್ನು ಹೇಳಿದ ಕೆಲವೇ ದಿನಗಳಲ್ಲಿ ಅಂಥದ್ದೇ ಘಟನೆ ಕರ್ನಾಟಕದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರ ತೇಜೋವಧೆಗೆ ನಿಂತ ಮಂದಿ ಹರಿಬಿಟ್ಟ ಫೇಕ್ ಪೋಸ್ಟರ್ ಕೆಲವೇ ಕ್ಷಣಗಳಲ್ಲಿ ಗೊಂದಲವನ್ನೇ ಉಂಟುಮಾಡಿದ ಘಟನೆ ನಡೆದಿದೆ.
ಕಾಂಗ್ರೆಸ್ಸಿನ ಪಾಲಿಗೆ ದುಃಸ್ವಪ್ನವಾಗಿ ಕಾಡುವ ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದಾರೆಂದು ಫೇಕ್ ನ್ಯೂಸೊಂದನ್ನು ಹರಿಡಿಸಿ, ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿದೆ. IYC Karnataka, ಚಕ್ರವರ್ತಿ ಸೂಲಿಬೆಲೆಯವರು, “ಪುನೀತ್ ಅವರನ್ನು ಇಷ್ಟೊಂದು ಆರಾಧಿಸುವ ಅಗತ್ಯವೇನಿದೆ? ಅವರೇನು ಸೈನಿಕರೇ?” ಎಂದಿದ್ದಾರೆ ಎಂಬ ಫೇಕ್ ಪೋಸ್ಟರ್ ಒಂದನ್ನು ಮಾಡಿ ಹರಿಬಿಟ್ಟಿದೆ. ಅದಕ್ಕೆ Btv News ನ ವೆಬ್ ಪೋರ್ಟಲ್ ವಿನ್ಯಾಸ ಬೇರೆ! ರಾಜು ಮೌರ್ಯ ದಾವಣಗೆರೆ, ಹುಲಿಕುಂಟೆ ಮೂರ್ತಿಯಂತಹ ಕೆಲವು ಕಾಂಗ್ರೆಸ್ ಗುಲಾಮರು, ಬೆಂಬಲಿಗರು ಅದನ್ನು ನಂಬಿ ತಮ್ಮ ತಮ್ಮ ಫೇಸ್ಬುಕ್ ವಾಲ್ಗಳಲ್ಲಿ ಇದನ್ನು ಶೇರ್ ಮಾಡಿದ್ದಾರೆ. ತಕ್ಷಣ ಸೂಲಿಬೆಲೆಯವರ ಅಭಿಮಾನಿಗಳು, ಸುದ್ದಿ ನಿಜವೇ ಆಗಿದ್ದರೆ ವಿಡಿಯೊ ಹಾಕಿ ಎಂದು ಮುಗಿಬಿದ್ದ ಮೇಲೆ ಈ ಎಲ್ಲರೂ ಗಾಬರಿಗೊಂಡು ತಮ್ಮ ಪೋಸ್ಟ್ಗಳನ್ನು ಡಿಲೀಟ್ ಮಾಡಿಕೊಂಡು, ಪ್ರೊಫೈಲ್ ಲಾಕ್ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2014ರಲ್ಲಿ ನಮೋ ಬ್ರಿಗೇಡ್ ಅನ್ನೋ ತಂಡ ಕಟ್ಟಿಕೊಂಡು ಚಕ್ರವರ್ತಿ ಸೂಲಿಬೆಲೆಯವರು ಇಡೀ ರಾಜ್ಯ ತಿರುಗಾಡಿದ್ದು ಎಲ್ಲರಿಗೂ ಗೊತ್ತಿರುವ ಸುದ್ದಿ. ಆಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ತಳಮಳ ಹುಟ್ಟಿಕೊಂಡಿದ್ದು. 2019ರಲ್ಲಿಯೂ ಕಾಂಗ್ರೆಸ್ಸು ತಾನು ಅಧಿಕಾರಕ್ಕೆ ಬಂದುಬಿಡಬಹುದು ಎಂದು ಲೆಕ್ಕ ಹಾಕುವ ವೇಳೆಗೇ ಕರ್ನಾಟಕದಿಂದ ಮೋದಿಯವರಿಗೆ ಅತ್ಯಧಿಕ ಸೀಟು ಕೊಡಿಸುವ ಸಂಕಲ್ಪ ತೊಟ್ಟಿದ್ದು ಮತ್ತದೇ ಚಕ್ರವರ್ತಿ ಸೂಲಿಬೆಲೆಯವರ ಟೀಂ ಮೋದಿ ಎನ್ನುವ ತಂಡ. ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಮೋದಿಯ ರಥ, ಕರಪತ್ರ, ಹೀಗೆ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಸಾಗಿತು. ಕರ್ನಾಟಕದಲ್ಲಿ 2019ರ ಚುನಾವಣೆಗೆ ಬಂದ ಫಲಿತಾಂಶದಲ್ಲಿ ಈ ತಂಡದ್ದೇ ಸಿಂಹಪಾಲು ಎಂದರೆ ತಪ್ಪಾಗಲಾರದು.
ಈ ಎಲ್ಲ ಕೋಪ, ಆಕ್ರೋಶ ಕಾಂಗ್ರೆಸ್ಸಿಗರಿಗೆ, ಅವರ ಬೆಂಬಲಿಗರಿಗೆ ಇದ್ದೇ ಇದೆ. ಹೀಗಾಗಿಯೇ ಸಾಧ್ಯವಾದಾಗಲೆಲ್ಲ ಚಕ್ರವರ್ತಿಯವರ ತೇಜೋವಧೆ ಮಾಡುವ ಕಾರ್ಯಕ್ಕೆ ಅವರು ಕೈಹಾಕಿದ್ದಾರೆ. ಕರೋನಾ ಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಹಿಂದೆ ಮಾತಾಡಿದ್ದ ವಿಡಿಯೊಗಳನ್ನು ಹಾಕಿ, ಆತ ಸುಳ್ಳುಗಾರ ಎಂದು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಿತ್ತು. ಮೋದಿಯವರ ಬುಲೆಟ್ ಟ್ರೈನ್, ಗುಜರಾತಿನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಸೂಲಿಬೆಲೆಯವರು ಆಡಿರುವ ಮಾತುಗಳನ್ನು ಸುಳ್ಳು ಎಂದು ತೋರಿಸಲು ಹೆಣಗಾಡಿತು. ಸೂಲಿಬೆಲೆಯವರ ಅಭಿಮಾನಿಗಳು ಅದಕ್ಕೆ ಸರ್ಕಾರದ ವರದಿ ಸಹಿತ, ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನೂ ಹಿಡಿದು ಸಾಕ್ಷ್ಯಗಳನ್ನು ಕೊಟ್ಟಮೇಲೆ ಮೂರ್ಖರಾಗಿದ್ದು ಕಾಂಗ್ರೆಸ್ಸಿನವರೇ.
ಅದರದ್ದೇ ಮುಂದುವರೆದ ಭಾಗ ಪುನೀತ್ ರಾಜ್ಕುಮಾರ್ ಅವರ ಕುರಿತು ಚಕ್ರವರ್ತಿಯವರು ಕೆಟ್ಟದ್ದಾಗಿ ಮಾತನಾಡಿರುವರೆಂದು ಸುಳ್ಳು ಸುದ್ದಿ ಹಬ್ಬಿಸಿರೋದು. ಈ ಹಿಂದೆಯೇ ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿಯುವ ಅಂಕಣವೊಂದನ್ನು ಬರೆದಿದ್ದಾಗ ಅದರಲ್ಲಿ ಅಪ್ಪುರವರಿಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಹರಿದುಬಿಟ್ಟಿದ್ದರು. ಅದು ಅಪ್ಪು ಅಭಿಮಾನಿಗಳು ಮತ್ತು ಚಕ್ರವರ್ತಿಯವರ ನಡುವೆ ವೈಮನಸ್ಯ ಉಂಟುಮಾಡುವ ಪ್ರಯತ್ನವಾಗಿತ್ತಷ್ಟೆ. ಓದಿದವರಿಗೆ ಅದು ಸರ್ಕಾರದ ವಿರುದ್ಧದ ಆಕ್ರೋಶ ಎಂಬುದು ಸ್ಪಷ್ಟವಾಗಿತ್ತಾದರೂ ಬೇಕೆಂದೇ ವಿಷಯವನ್ನು ದೊಡ್ಡದಾಗಿ ಮಾಡಿದ್ದರು. ಚಕ್ರವರ್ತಿಯವರು ‘ಅಪ್ಪು ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ’ ಎಂದೂ ಹೇಳಿದ್ದರು. ಆ ವಿಷಯ ಅಲ್ಲಿಗೇ ಮುಗಿದಿತ್ತು. ಆದರೆ ಕಾಂಗ್ರೆಸ್ಗೆ ಸಮಾಧಾನವಿರಲಿಲ್ಲ.
ಕಾಂಗ್ರೆಸ್ಸು ಇದೀಗ ಫೇಕ್ ನ್ಯೂಸ್ ಹಿಡಿದು ಅವರನ್ನು ಮಟ್ಟಹಾಕುವ ಹಂತಕ್ಕೆ ತಲುಪಿದೆ. ರಾಷ್ಟ್ರೀಯ ಪಕ್ಷವೊಂದು ಹಿಂದೂ-ಮುಂದೂ ಯೋಚಿಸದೇ ತನ್ನ ಅಧಿಕೃತ ಟ್ವಿಟರ್ನಲ್ಲಿ ಫೇಕ್ನ್ಯೂಸ್ ಅನ್ನು ಹಾಕಿದೆ. ಇನ್ನೇನು ಚಕ್ರವರ್ತಿಯವರ ಕಥೆ ಮುಗಿದೇ ಹೋಯ್ತು ಎಂದು ಸಂಭ್ರಮಿಸಬೇಕೆನ್ನುವ ಹೊತ್ತಿಗೇ ಅಪ್ಪು ಅಭಿಮಾನಿಗಳು, ಚಕ್ರವರ್ತಿಯವರ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ಸಿಗೆ ಸಾಕ್ಷಿ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ತಕ್ಷಣ ತನ್ನ ಟ್ವೀಟನ್ನು ಡಿಲೀಟ್ ಮಾಡಿ ಕಾಂಗ್ರೆಸ್ಸು ಪಲಾಯನಗೈದಿದೆ. ಆದರೆ ಇತ್ತೀಚೆಗೆ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾಂಗ್ರೆಸ್ಸು ಮತ್ತು ಗುಲಾಮರ ಕೆಲಸ ಹೆಚ್ಚಾಗಿರುವುದರಿಂದ ಚಕ್ರವರ್ತಿಯವರ ಅಭಿಮಾನಿಗಳು ಈ ಎಲ್ಲ ಫೇಕ್ ನ್ಯೂಸ್ ಫ್ಯಾಕ್ಟರಿ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಬಿಟಿವಿಯಲ್ಲಿ ಬಂದಿದೆ ಎಂಬುದು ಸುಳ್ಳು ಎಂದು ಅರಿವಿದ್ದಾಗಲೂ, ಹಲವರು ಬಿಟಿವಿಯನ್ನು ಟ್ಯಾಗ್ ಮಾಡಿ ಸ್ಪಷ್ಟೀಕರಣ ನೀಡಲು ಕೇಳಿದಾಗಲೂ ಅದು ಪ್ರತಿಕ್ರಿಯಿಸದ ಕಾರಣ ಅದರ ಮೇಲೂ ಅಭಿಮಾನಿಗಳು ಗರಂ ಆಗಿದ್ದು, ದೂರು ನೀಡುವ ಸಾಧ್ಯತೆಯಿದೆ.
ಹೇಗೆ ಬ್ಲೂಟಿಕ್ ಇರುವ, ರಾಷ್ಟ್ರೀಯ ಪಕ್ಷವೊಂದರ ಅಧಿಕೃತ ಟ್ವಿಟರ್ ಕೂಡ ಫೇಕ್ ನ್ಯೂಸನ್ನು ಹಬ್ಬಬಲ್ಲದು ಎಂಬುದಕ್ಕೆ ಇದೊಂದು ಸಮರ್ಥ ಉದಾಹರಣೆ. ಇದನ್ನು ಬಯಲಿಗೆಳೆಯುವ ಮಾರ್ಗವೊಂದೇ. ನಮಗೆ ಬರುವ ಮಾಹಿತಿಯನ್ನೆಲ್ಲ ಕಣ್ಣುಮುಚ್ಚಿ ಒಪ್ಪದೇ, ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ, ನಂತರ ಮತ್ತೊಬ್ಬರಿಗೆ ಕಳಿಸುವುದರಿಂದ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.