ಅಮೇರಿಕಾದ ಇಂಗ್ಲಿಷ್ ಚಿತ್ರರಂಗದ ಕೇಂದ್ರವಾದ ಹಾಲಿವುಡ್ ನಿಂದ ಪ್ರೇರೇಪಣೆಗೊಂಡು ಹಿಂದಿ ಚಲನಚಿತ್ರೋದ್ಯಮದ ಪ್ರಮುಖ ತಾಣವಾಗಿದ್ದ ಬಾಂಬೆ (ಇಂದಿನ ಮುಂಬೈ) ಸಿನೆಮಾಸ್ ಅನ್ನು 1960-70 ನೇ ಇಸವಿಯಲ್ಲಿ ಬಾಲಿವುಡ್ ಎಂದು ಕರೆಯಲಾಯಿತು. ಬಾಲಿವುಡ್ ಎನ್ನುವ ಶಬ್ದವನ್ನುಸೃಷ್ಟಿಸಿದವರ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಅರುವತ್ತನೇ ದಶಕದ ಸಿನಿ ಪತ್ರಕರ್ತೆ ಬೆವಿಂದಾ ಕೊಲಾಸೋ ‘ಸ್ಕ್ರೀನ್’ ಹೆಸರಿನ ಸಿನಿಮ್ಯಾಗಜಿನ್ ನಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ “ಆನ್ ದ ಬಾಲಿವುಡ್ ಬೀಟ್” ಹೆಸರಿನ ಲೇಖನವನ್ನು ಪ್ರಕಟಿಸಿ ಬಾಲಿವುಡ್ ಎನ್ನುವ ಹೆಸರನ್ನು ತಾನು ಮೊದಲ ಬಾರಿಗೆ ಪರಿಚಯಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಗೀತಕಾರ ಹಾಗೂ ಸಿನೆಮಾ ನಿರ್ಮಾಪಕ ಅಮಿತ್ ಖನ್ನಾನೇ ಬಾಲಿವುಡ್ ಪದದ ಜನಕ ಎನ್ನುವ ಮಾತುಗಳೂ ಇವೆ. ಆದರೆ ಹಿಂದಿ ಚಿತ್ರರಂಗವನ್ನು ವ್ಯಂಗ್ಯ ಮಾಡಲು ಬಾಲಿವುಡ್ ಎಂಬ ಶಬ್ದವನ್ನು ಸೃಷ್ಟಿ ಮಾಡಲಾಯಿತು ಎಂಬ ಟೀಕೆಯೂ ಬಾಲಿವುಡ್ ಶಬ್ದದ ವ್ಯುತ್ಪತ್ತಿಯ ಮೇಲಿದೆ. ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ಬಹಳ ಉತ್ತಮ ಸಿನೆಮಾಗಳನ್ನು ಒದಗಿಸಿದೆ. ಆದರೆ ಬಾಲಿವುಡ್ ಗೆ ಅಂಟಿರುವ ಭೂಗತ ಜಗತ್ತಿನ ಸಂಬಂಧ, ಸ್ವಜನಪಕ್ಷಪಾತ, ಸೋಗಲಾಡಿತನ, ಪಾಕಿಸ್ತಾನ ಪ್ರೀತಿ, ಡ್ರಗ್ಸ್, ಸ್ವೇಚ್ಛಾಚಾರ,ಮಿತಿ ಮೀರಿದ ಅಶ್ಲೀಲತೆ, ಭಾರತೀಯತೆಯೆಡೆಗಿನ ಅನಾದರ, ಹಿಂದೂ ವಿರೋಧೀ ಧೋರಣೆ. ತೆರೆಯಲ್ಲಿ ಪಾತಕಿಗಳ ವೈಭವೀಕರಣ, ದಕ್ಷಿಣದ ಭಾರತದ ಜನರ ಬಗ್ಗೆ ಅನಾದರ ಮೊದಲಾದ ವಿಚಾರಗಳು ಜನರಲ್ಲಿ ಬಾಲಿವುಡ್ ನ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ಸ್ವಜನ ಪಕ್ಷಪಾತವಂತೂ ಬಾಲಿವುಡ್ಡಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಹೆಸರು ಮಾಡಿದ ನಟರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಬಾಲಿವುಡ್ ನಲ್ಲಿ ಮೊದಲ ಆದ್ಯತೆ ಸಿಗುತ್ತದೆ. ವಂಶವಾದದ ಕೆಟ್ಟ ಪರಂಪರೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿದ್ದರೂ ಇಂದಿಗೂ ಅದೇ ವ್ಯವಸ್ಥೆ ಮುಂದುವರಿದಿದೆ. ಬಾಲಿವುಡ್ ಅನ್ನು ವಂಶಾಡಳಿತವೇ ಆಳುತ್ತಿದೆ. ಪ್ರಸಿದ್ಧ ನಟರಾಗಿದ್ದ ಪೃಥ್ವೀರಾಜ್ ಕಪೂರ್ ನ ಮೂಲಕ ಆತನ ಮಕ್ಕಳಾದ ರಾಜ್ ಕಪೂರ್, ಶಮ್ಮಿ ಕಪೂರ್, ಶಶಿ ಕಪೂರ್ ಹಿಂದಿ ಚಿತ್ರರಂಗಕ್ಕೆ ಪ್ರವೇಶವನ್ನು ಪಡೆದರು. ರಾಜ್ ಕಪೂರ್ ಮಗ ರಿಷಿ ಕಪೂರ್ ಚಿತ್ರರಂಗಕ್ಕೆ ಬಂದು ನಂತರ ರಿಷಿ ಕಪೂರ್ ಮಗನಾದ ರಣ್ಬೀರ್ ಕಪೂರ್ ಕೂಡಾ ಬಾಲಿವುಡ್ ಗೆ ಸುಲಭವಾಗಿ ಪ್ರವೇಶವನ್ನು ಪಡೆದ. ರಾಜ್ ಕಪೂರ್ ನ ಇನ್ನೋರ್ವ ಪುತ್ರ ರಣಧೀರ್ ಕಪೂರ್ ಗೂ ಹಿಂದೀ ಚಿತ್ರರಂಗಕ್ಕೆ ಸುಲಭವಾಗಿ ಪ್ರವೇಶ ದೊರೆಯಿತು. ರಣಧೀರ್ ನ ಪುತ್ರಿಯರಾದ ಕರಿಷ್ಮಾ ಕಪೂರ್ ಹಾಗೂ ಕರೀನಾ ಕಪೂರ್ಗಳಿಗೂ ಬಾಲಿವುಡ್ ರತ್ನಗಂಬಳಿಯನ್ನು ಹಾಸಿ ಸ್ವಾಗತವನ್ನು ಕೋರಿತು. ಪೃಥ್ವೀ ರಾಜ್ ಕಪೂರ್ ನ ವಂಶದ ನಾಲ್ಕನೇ ತಲೆಮಾರು ಕೂಡಾ ಬಾಲಿವುಡ್ಡಿನಲ್ಲಿ ಇಂದಿಗೂ ಸಕ್ರಿಯವಾಗಿರುವುದು ಬಾಲಿವುಡ್ ವಂಶವಾದ ಹಾಗೂ ಸ್ವಜನ ಪಕ್ಷಪಾತದ ಹಿಡಿತದಲ್ಲಿರುವುದನ್ನು ಸೂಚಿಸುತ್ತದೆ. ಬಾಲಿವುಡ್ ಗೀತಕಾರ , ಸ್ಕ್ರೀನ್ ರೈಟರ್ ಜಾವೇದ್ ಅಖ್ತರ್ ಅವರ ಮಕ್ಕಳಾದ ಫರ್ಹಾನ್ ಅಖ್ತರ್ ಹಾಗೂ ಝೋಯಾ ಅಖ್ತರ್ ಹಿಂದಿ ಸಿನೆಮಾ ಲೋಕಕ್ಕೆ ಬಂದಿದ್ದಾರೆ. ಹಿಂದಿ ಚಿತ್ರರಂಗದ, ನಿರ್ಮಾಪಕ,ಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದ ಸಲೀಂ ಖಾನ್ ತನ್ನ ಮಕ್ಕಳಾದ ಸಲ್ಮಾನ್ ಖಾನ್, ಸೊಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್ ಇವರನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ.
ಪೃಥ್ವೀ ರಾಜ್ ಕಪೂರ್ ಮೂಲಕವೇ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದ್ದ ಸುರೀಂದರ್ ಕಪೂರ್ ಮೂಲಕ ಅವರ ಮಕ್ಕಳಾದ ಬೋನಿ ಕಪೂರ್, ಅನಿಲ್ ಕಪೂರ್ ಹಾಗೂ ಸಂಜಯ್ ಕಪೂರ್ ಚಿತ್ರರಂಗಕ್ಕೆ ಬಂದರು. ಬೋನಿ ಕಪೂರ್ ಮಕ್ಕಳಾದ ಅರ್ಜುನ್ ಕಪೂರ್, ಜಾಹ್ನವಿ ಹಾಗೂ ಖುಶಿ ಇಂದು ಹಿಂದಿ ಚಿತ್ರ ರಂಗದಲ್ಲಿದ್ದಾರೆ. ಅನಿಲ್ ಕಪೂರ್ ಮಗಳಾದ ಸೋನಂ ಕಪೂರ್, ಮಗನಾದ ಹರ್ಷವರ್ಧನ್ ಅಪ್ಪನ ಹೆಸರಿನಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಟ ಧರ್ಮೇಂದ್ರನ ಮಕ್ಕಳಾದ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್ ಹಾಗೂ ಇಶಾ ಡಿಯೋಲ್ ಬಾಲಿವುಡ್ಗೆ ಅದೃಷ್ಟ ಪಡೆಯಲು ಪ್ರಯತ್ನಿಸಿದವರೇ. ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಕೂಡಾ ಅಪ್ಪನ ಹೆಸರಿನಿಂದ ಬಾಲಿವುಡ್ಗೆ ಬಂದು ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದಾಯಿತು. ಸೋನಾಕ್ಷಿ ಸಿನ್ಹಾಳೂ ಚಿತ್ರರಂಗಕ್ಕೆ ಎಂಟ್ರಿಯಾದದ್ದು ಅಪ್ಪ ನಟ ಶತ್ರುಘ್ನ ಸಿನ್ಹಾ ಮಗಳೆಂಬ ನೆಲೆಯಿಂದಲೇ. ಅಲಿಯಾ ಭಟ್ ಗೆ ಅವಕಾಶ ಸಿಕ್ಕಿದ್ದು ಅಪ್ಪ ಮಹೇಶ್ ಭಟ್ ನಿಂದಾಗಿ. ಅಮೀರ್ ಖಾನ್ ಅಪ್ಪ ಹಾಗೂ ಸಿನೆಮಾ ನಿರ್ಮಾಪಕ ತಾಹಿರ್ ಹುಸೈನ್ ಖಾನ್ ಬೆಂಬಲವಿಲ್ಲದಿದ್ದರೆ ಸಿನೆಮಾ ಹೀರೋ ಆಗಲು ಸಾಧ್ಯವಿರುತ್ತಿರಲಿಲ್ಲ. ಹೃತಿಕ್ ರೋಷನ್ ಅನ್ನು ಚಿತ್ರ ರಂಗಕ್ಕೆ ಕೈಹಿಡಿದು ಕರೆತಂದದ್ದು ಆತನ ಅಪ್ಪ ಹಾಗೂ ನಿರ್ಮಾಪಕ ರಾಕೇಶ್ ರೋಷನ್.
ಯಾವುದೇ ಪ್ರಭಾವೀ ಕುಟುಂಬದ ಹಿನ್ನೆಲೆಯಿಲ್ಲದಿದ್ದರೆ ಬಾಲಿವುಡ್ ಅನ್ನು ಸೇರುವುದು ಬಹಳ ಕಷ್ಟವೇ! ಸ್ವಪ್ರತಿಭೆಯಿಂದ ಮೇಲೆ ಬಂದ ಕಲಾವಿದರನ್ನು ಬಾಲಿವುಡ್ನ ಸ್ಥಾಪಿತ ಹಿತಾಸಕ್ತಿಗಳು ಬೆಳೆಯಲು ಬಿಡುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ನೋಡಿದಾಗ ಇದು ಅರ್ಥವಾಗುತ್ತದೆ. ಬಾಲಿವುಡ್ ನ ಅಗ್ರಗಣ್ಯರೆಲ್ಲಾ ಸುಶಾಂತ್ ಸಿಂಗ್ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಉದ್ಧವ್ ಠಾಕ್ರೆ ಸರಕಾರವೂ ಈ ಪ್ರಕರಣವನ್ನು ಮುಚ್ಚಿಹಾಕಲು ಸಾಕಷ್ಟು ಶ್ರಮಿಸಿತು. ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಬೆಂಬತ್ತಿದ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯನ್ನೇ ಜೈಲಿಗೆ ಕಳುಹಿಸಿತ್ತು ಮಹಾರಾಷ್ಟ್ರ ಸರಕಾರ. ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಈ ಪ್ರಕರಣವನ್ನು ಸಿಬಿಐನ ತನಿಖೆಗೆ ವಹಿಸಿಕೊಡಲಾಗಿದ್ದರೂ ಬಾಲಿವುಡ್ ನ ಕೆಲವು ಶಕ್ತಿಗಳು ಸತ್ಯವನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿವೆ. ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದ ಹಿಂದ ಸಿನೆಮಾದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಂಗನಾ ರಾಣಾವತ್ ಕೂಡಾ ಬಾಲಿವುಡ್ ಗಣ್ಯರಿಂದ ಭಾರೀ ಕಿರುಕುಳ ಅನುಭವಿಸಿದ್ದಾಳೆ. ಹೃತಿಕ್ ರೋಷನ್ ಕುಟುಂಬ, ಜಾವೇದ್ ಅಖ್ತರ್ ಮೊದಲಾದವರಿಂದ ಕಂಗನಾ ಬಹಳ ಕಷ್ಟಗಳನ್ನು ಎದುರಿಸಿದ್ದಾಳೆ. ಇವರೆಲ್ಲಾ ಸೇರಿ ಕಂಗನಾಳ ಮುಂಬಯಿಯಲ್ಲಿನ ಮನೆಯನ್ನು ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೋರೇಶನ್ ಕೆಡವಿ ಹಾಕುವಂತೆ ಮಾಡಲು ತೆರೆಮರೆಯಲ್ಲಿ ಶ್ರಮಿಸಿದ್ದಾರೆ. ಆದರೆ ಈ ಹೆಣ್ಣುಮಗಳ ಮೇಲೆ ನಡೆದ ದೌರ್ಜನ್ಯವನ್ನು ಬಾಲಿವುಡ್ಡಿನ ಯಾವೊಂದು ದನಿಯೂ ಖಂಡಿಸಲಿಲ್ಲ.
ಬಾಲಿವುಡ್ ಮತ್ತು ಭೂಗತ ಜಗತ್ತಿನ ನಡುವಿನ ಸಂಬಂಧ ಸದಾ ಚರ್ಚೆಯಲ್ಲಿರುವ ವಿಚಾರ. ಮುಂಬೈ ಸರಣಿ ಬಾಂಬು ದಾಳಿಯ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಚೋಟ ಶಕೀಲ್ ಹಿಂದಿ ಸಿನೆಮಾಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರು. ನಟಿ ಮೋನಿಕಾ ಬೇಡಿ ಪಾತಕಿ ಅಬೂ ಸಲೇಂ ಅನ್ನು ಮದುವೆಯಾದಳು. ಚೋಟಾ ಶಕೀಲ್ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದ ಸಂಜಯ್ ದತ್ ಅಕ್ರಮವಾಗಿ ಎ ಕೆ 47 ರೈಫಲ್ ಅನ್ನು ಹೊಂದಿದ್ದ ಕಾರಣ ಟಾಡಾ ಕಾಯ್ದೆಯಡಿಯಲ್ಲಿ ಜೈಲುವಾಸಿಯಾಗಬೇಕಾಯಿತು. ಭೂಗತ ಡಾನ್ ಗಳನ್ನು ವೈಭವೀಕರಿಸುವ ಎಷ್ಟೋ ಸಿನೆಮಾಗಳು ಬಾಲಿವುಡ್ಡಿನಲ್ಲಿ ಬಂದು ಹೋಗಿವೆ. ’ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಸಿನಿಮಾವು ಪಾತಕಿ ಹಾಜೀ ಮಸ್ತಾನ್ ನ ಕುರಿತಾಗಿ ಮಾಡಿದ ಸಿನೆಮಾವಾಗಿದೆ. ಕಂಪೆನಿ, ಡಿ ಡೇ ಮೊದಲಾದ ಸಿನೆಮಾಗಳು ದಾವೂದ್ ಇಬ್ರಾಹಿಂ ಜೀವನವನ್ನು ಹೋಲುತ್ತವೆ. ರಣ್ಬೀರ್ ಕಪೂರ್ ನ ಅಭಿನಯದಲ್ಲಿ ಸಂಜಯ್ ದತ್ತ್ ನ ಪಾತಕ ಜಗತ್ತಿನ ಸಂಪರ್ಕ ಹಾಗೂ ಆತನ ವಿವಾಹೇತರ ಸಂಬಂಧಗಳನ್ನು ಸಮರ್ಥಿಸುವ ಮತ್ತು ವೈಭವೀಕರಿಸುವ ಸಂಜೂ ಹೆಸರಿನ ಸಿನೆಮಾ ಸೂಪರ್ ಹಿಟ್ ಕೂಡಾ ಅಗಿದೆ! ಹೀರೋಗಳು ಯಾವುದೇ ರೀತಿಯ ಅಪರಾಧಗಳನ್ನು ಮಾಡಿದ್ದರೂ ಬಾಲಿವುಡ್ ಅವರನ್ನು ಹೊರಗಿಡುವುದಿಲ್ಲ. ಸಲ್ಮಾನ್ ಖಾನ್ ಮೇಲೆ ರಾಜಸ್ಥಾನದ ಸಂರಕ್ಷಿತ ಕೃಷ್ಣ ಮೃಗವನ್ನು ಬೇಟೆಯಾಡಿದ ಕೇಸು ಹಾಗೂ ರಸ್ತೆ ಬದಿಯಲ್ಲಿ ಮಲಗಿದ್ದ ನಿರ್ಗತಿಕರ ಮೇಲೆ ವಾಹನವನ್ನು ಹರಿಸಿ ಅವರ ಸಾವಿಗೆ ಕಾರಣವಾದ ಕೇಸುಗಳು ಇವೆ. ಆದರೂ ಸಲ್ಮಾನ್ ಗೆ ಬಾಲಿವುಡ್ಡಿನ ಹೃದಯವಂತ ಎನ್ನುವ ಬಿರುದು ಬೇರೆ! ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸಿನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದಾಗ ಹೃತಿಕ ರೋಷನ್, ಶತ್ರುಘ್ನ ಸಿನ್ಹಾ, ಪೂಜಾ ಬೇಡಿ, ರವೀನಾ ಟಂಡನ್, ಸ್ವರಾ ಭಾಸ್ಕರ್, ಜೂಹೀ ಚಾವ್ಲಾ ಮೊದಲಾದವರು ಆರ್ಯನ್ ಖಾನ್ ಗೆ ನೈತಿಕ ಬೆಂಬಲವನ್ನು ಸೂಚಿಸಿದ್ದರು. ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರೀಕರಣ ಜಾಲದ ಆರೋಪದಲ್ಲಿ ಜೈಲಿಗೆ ಹೋಗಿದ್ದರೂ, ಜೈಲಿಗೆ ಹೊರಬಂದ ನಂತರವೂ ಹಿಂದಿನಂತೆ ಸೆಲೆಬ್ರಿಟಿಯಾಗಿಯೇ ಉಳಿದಿದ್ದಾನೆ.
ಅಮೀರ್ ಖಾನ್ನ ಇತ್ತೀಚೆಗಿನ ಸಿನೆಮಾಗಳಲ್ಲಿ ಹಿಂದೂ ದೇವರುಗಳನ್ನು ಅವಹೇಳನ ಮಾಡುವುದೇ ಹೆಚ್ಚು. ಪಿಕೆ ಸಿನೆಮಾದಲ್ಲಿ ಶಿವನ ಪಾತ್ರಧಾರಿಯನ್ನು ಪಿಕೆ ಬೆನ್ನಟ್ಟುವ ಭಾಗ ವಿವಾದಕ್ಕೆ ಕಾರಣವಾಗಿತ್ತು. ಅಮೀರ್ ನ ಇತ್ತೀಚೆಗಿನ ಸಿನೆಮಾ ಲಾಲ್ ಸಿಂಗ್ ಚಡ್ಡಾದಲ್ಲಿ ಭಾರತೀಯ ಸೈನ್ಯವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಹಿಂದೂ ಪೂಜೆಯನ್ನು ಅವಹೇಳನ ಮಾಡಲಾಗಿದೆ. ಅಮೀರ್ ತಾನು ನಡೆಸಿಕೊಡುತ್ತಿದ್ದ ಟಿವಿ ಶೋ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಶಿವಲಿಂಗಕ್ಕೆ ಹಾಲನ್ನೆರೆದು ಹಾಳು ಮಾಡುವುದರ ಬದಲು ಹಾಲನ್ನು ಬಡ ಮಕ್ಕಳಿಗೆ ಕುಡಿಸಬಹುದು ಎಂದಿದ್ದ. ಇದೇ ಕಾರ್ಯಕ್ರಮದಲ್ಲಿ ಹಿಂದೂ ಆಚರಣೆಗಳಾದ ರಕ್ಷಾ ಬಂಧನ ಹಾಗೂ ಕರ್ವಾ ಚೌತ್ ಗಳನ್ನು ಅವಹೇಳನ ಮಾಡುವ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾನೆ ಅಮೀರ್. ಕೆಲವು ವರ್ಷಗಳ ಹಿಂದೆ ಅಮೀರ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದುದರಿಂದ ಮಡದಿ ಕಿರಣ ರಾವ್(ಈಗ ಮಾಜೀ ಪತ್ನಿ) ದೇಶವನ್ನು ಬಿಟ್ಟು ತೆರಳಲು ಹೇಳಿದ್ದಳು ಎಂದಿದ್ದ. ಗುಜರಾತಿಗೆ ನೀರುಣಿಸುವ ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯ ವಿರುದ್ಧದ ಹೋರಾಟಕ್ಕೆ ಮೇಧಾ ಪಾಟ್ಕರ್ ಜೊತೆಗೆ ಅಮೀರ್ ಖಾನ್ ಸೇರಿದ್ದ.
ಸಾಮಾಜಿಕ ಮಾಧ್ಯಮದ ಯುಗದಲ್ಲಿ ಜನಸಾಮಾನ್ಯರು ಇಂದು ಹಿಂದೆಂದಿಗಿಂತಲೂ ಚೆನ್ನಾಗಿ ಬಾಲಿವುಡ್ ಅನ್ನು ಅರ್ಥಮಾಡಿಕೊಂಡಿದ್ದಾರೆ. ಬಾಲಿವುಡ್ಡಿನ ಪಾಕಿಸ್ತಾನ ಪ್ರೀತಿ, ಹಿಂದೂ ವಿರೋಧೀ ಧೋರಣೆಗಳ ವಿರುದ್ಧವಾಗಿ ಜನರು ತಿರುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ ಬಾಯ್ಕಾಟ್ ಬಾಲಿವುಡ್, ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎನ್ನುವ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿವೆ. ಇದರ ಪರಿಣಾಮವಾಗಿಯೇ ಅಮೀರ್ ಖಾನ್ ನ ಅತೀ ನಿರೀಕ್ಷೆಯ ಸಿನಿಮಾ ಲಾಲ್ ಸಿಂಗ್ ಚಡ್ಡಾ ಹಾಗೂ ಅಕ್ಷಯ್ ಕುಮಾರ್ ನ ರಕ್ಷಾಬಂಧನ್ ಬಾಕ್ಸಾಫೀಸ್ ನಲ್ಲಿ ವಿಫಲವಾಗಿವೆ. 2022 ರಲ್ಲಿ 100 ಕೋಟಿಗಳಿಗಿಂತ ಹೆಚ್ಚು ಆದಾಯ ಗಳಿಸಿದ ಏಕೈಕ ಬಾಲಿವುಡ್ ಸಿನೆಮಾ ಗಂಗೂಬಾಯಿ ಕಾಥಿಯಾವಾಡಿ ಮಾತ್ರ. ಇತ್ತೀಚೆಗೆ ಬಿಡುಗಡೆಯಾದ ರಣ್ಬೀರ್ ಕಪೂರ್ ನ ಬಹುನಿರೀಕ್ಷೆಯ ಸಿನೆಮಾ ಶಂಶೇರಾ ಮಕಾಡೆ ಮಲಗಿದೆ. ಸದಾ ಹಿಂದೂ ವಿರೋಧೀ ಹೇಳಿಕೆಗಳಿಂದ ಪ್ರಸಿದ್ಧವಾಗಿರುವ ನಟಿ ತಾಪಸೀ ಪನ್ನು ಸಿನೆಮಾಗಳಾದ ಶಾಭಾಸ್ ಮಿಥಾಲಿ ಹಾಗೂ ದೋಬಾರಾ ಸಿನೆಮಾಗಳು ಇನ್ನಿಲ್ಲದಂತೆ ನೆಲಕಚ್ಚಿವೆ.
ಇದೀಗ ದಕ್ಷಿಣದ ಸಿನೆಮಾ ಕಾಲ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ನಿರ್ಮಾಣವಾದ ಬಾಹುಬಲಿ 1 ಹಾಗೂ ಬಾಹುಬಲಿ 2 ಸಿನೆಮಾಗಳು ದೇಶಾದ್ಯಂತ ಭಾರೀ ಮನ್ನಣೆಯನ್ನು ಪಡೆದದ್ದು ಮಾತ್ರವಲ್ಲದೆ 2022 ರಲ್ಲಿ ಬಿಡುಗಡೆಯಾದ ತೆಲುಗಿನ ಆರ್ ಆರ್ ಆರ್, ಪುಷ್ಪಾ, ಕನ್ನಡದ ಕೆಜಿಎಫ್ 2 ಮೊದಲಾದ ಸಿನೆಮಾಗಳು ಭಾಷೆ, ರಾಜ್ಯಗಳ ಗಡಿಗಳನ್ನು ಮೀರಿ ದೇಶಾದ್ಯಂತ ಸಾವಿರಾರು ಕೋಟಿ ರುಪಾಯಿಗಳ ಗಳಿಕೆಯನ್ನು ಮಾಡಿವೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಚಿತ್ರ ವಿಕ್ರಾಂತ್ ರೋಣ ಕೂಡಾ 200 ಕೋಟಿ ರುಪಾಯಿಗಳ ಬಾಕ್ಸಾಫೀಸ್ ಗಳಿಕೆಯನ್ನು ಕಂಡಿದೆ. ಚಾರ್ಲಿ 777 ಸಿನೆಮಾವು 150 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಅದಾಯವನ್ನು ತಂದಿದೆ.
ಕಾಶ್ಮೀರಿ ಪಂಡಿತರ ನರಮೇಧ, ಹೊರದಬ್ಬುವಿಕೆ ಮೊದಲಾದ ಸಮಸ್ಯೆಗಳನ್ನು ಆಧರಿಸಿ ನಿರ್ಮಾಣವಾದ ಹಿಂದೀ ಸಿನಿಮಾ “ದಿ ಕಾಶ್ಮೀರ್ ಫೈಲ್ಸ್” ಮಾರುಕಟ್ಟೆಯಲ್ಲಿ ಭಾರೀ ಯಶಸ್ಸನ್ನು ಗಳಿಸಿದೆ. ಬಾಲಿವುಡ್ಡಿನ ಇಕೋ ಸಿಸ್ಟಂ ಈ ಸಿನೆಮಾಗೆ ಯಾವ ರೀತಿಯ ನೆರವನ್ನೂ ನೀಡಿಲ್ಲ. ಕಪಿಲ್ ಶರ್ಮಾ ತನ್ನ ’ದಿ ಕಪಿಲ್ ಶರ್ಮಾ ಶೋ’ ವಿಗೆ ’ದಿ ಕಾಶ್ಮೀರ್ ಫೈಲ್ಸ್’ ತಂಡಕ್ಕೆ ಆಮಂತ್ರಣವನ್ನು ನೀಡಲು ನಿರಾಕರಿಸಿದನು. ಈ ಸಿನೆಮಾವು ಮುಸ್ಲಿಮರ ವಿರುದ್ಧ ದ್ವೇಷದ ಅಜೆಂಡಾವನ್ನು ಹೊಂದಿದೆ ಎಂದು ಬಾಲಿವುಡ್ ವಿಮರ್ಶಕರು ಹಾಗೂ ಪಂಡಿತರು ಅಪಪ್ರಚಾರವನ್ನು ಮಾಡಿದರು. ಆದರೆ ಜನರು ದಿ ಕಾಶ್ಮೀರ್ ಫೈಲ್ಸ್ ಗೆ ಭಾರೀ ಬೆಂಬಲವನ್ನು ಸೂಚಿಸಿದ ಕಾರಣ ಈ ಸಿನೆಮಾವು ಬಾಕ್ಸ್ ಆಫೀಸ್ ನಲ್ಲಿ 350 ಕೋಟಿ ರುಪಾಯಿಗಳನ್ನು ಗಳಿಸಿತು. ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಜೀವನದ ಕುರಿತ ಚಲನಚಿತ್ರ ರಾಕೆಟ್ರಿ: ದ ನಂಬಿ ಇಫೆಕ್ಟ್ ಸಿನೆಮಾ ಬಂದಾಗಲೂ ಬಾಲಿವುಡ್ ವಿಮರ್ಶಕರು ನಂಬಿ ನಾರಾಯಣನ್ ಓರ್ವ ಹಿಂದೂವಾದಿ ಎಂದು ಕರೆದು ವೀಕ್ಷಕರ ದಾರಿತಪ್ಪುವಂತೆ ಮಾಡಲು ಪ್ರಯತ್ನಿಸಿದರು. ಆದರೆ ಜನಸಾಮಾನ್ಯರು ಈ ಸಿನೆಮಾವನ್ನು ಕೈಬಿಡಲಿಲ್ಲ. ಈ ಎಲ್ಲ ಬೆಳವಣಿಗೆಗೆಳು ಬಾಲಿವುಡ್ಡಿನ ಮಂದಿ ತಮ್ಮ ಭ್ರಾಮಕ ಮನಸ್ಥಿತಿಯಿಂದ ಹೊರ ಬಂದು ವಾಸ್ತವತೆಯೆಡೆಗೆ ಹೊರಳಿದರೆ ಮಾತ್ರ ಬಾಲಿವುಡ್ ಸಿನೆಮಾ ರಂಗ ಉಳಿಯಲು ಸಾಧ್ಯ ಎಂಬುದನ್ನು ಸೂಚಿಸುತ್ತವೆ.
✍️ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.