News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿದ್ದರಾಮೋತ್ಸವದ ಬಳಿಕ ಕರ್ನಾಟಕದ ಕಾಂಗ್ರೆಸ್ ಸಂಪೂರ್ಣ ನಾಶ: ಪಿ. ರಾಜೀವ್

ಬೆಂಗಳೂರು: ಸದ್ಯ ವೆಂಟಿಲೇಟರ್‌ನಲ್ಲಿರುವ ಕರ್ನಾಟಕದ ಕಾಂಗ್ರೆಸ್ ಸಿದ್ದರಾಮೋತ್ಸವದ ಬಳಿಕ ಸಂಪೂರ್ಣ ಸರ್ವನಾಶವಾಗಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ. ರಾಜೀವ್ ಅವರು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಹಂತಕರ ಬಗ್ಗೆ ಸಹಾನುಭೂತಿ ಹೊಂದಿದ ಸಂಘಟನೆಗಳ ಜೊತೆ ಸಿದ್ದರಾಮಯ್ಯ ಸಖ್ಯವನ್ನು ಬೆಳೆಸುತ್ತಿದ್ದಾರೆ. 1991ರಲ್ಲಿ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕರಾಗಿದ್ದ ರಾಜೀವ್ ಗಾಂಧಿಯವರನ್ನು ಎಲ್‍ಟಿಟಿಇ ಸಂಘಟನೆ ಹತ್ಯೆ ಮಾಡಿತ್ತು. ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಹಂತಕರನ್ನು ಬಿಡುಗಡೆ ಮಾಡಬೇಕೆಂದು ದೊಡ್ಡ ಹೋರಾಟವನ್ನು ವಿಸಿಕೆ ಪಾರ್ಟಿ ಮಾಡಿತ್ತು. ಎಲ್‍ಟಿಟಿಇ ಮುಖಂಡ ಪ್ರಭಾಕರನ್ ಹುಟ್ಟುಹಬ್ಬ ಆಚರಣೆಯನ್ನು ತನ್ನ ಪ್ರಣಾಳಿಕೆಯಲ್ಲಿ ಇಲ್ಲಿನವರೆಗೆ ಇಟ್ಟುಕೊಂಡು ಬಂದ ಪಕ್ಷ ವಿಸಿಕೆ ಎಂದು ವಿವರಿಸಿದರು.

ವಿಸಿಕೆ ಪಕ್ಷ ಕೊಟ್ಟ ಪ್ರಶಸ್ತಿಯನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯರಿಗೆ ಪಕ್ಷ ನಿಷ್ಠೆ ಇದ್ದಿದ್ದರೆ, ಗಾಂಧಿ ಕುಟುಂಬದ ಬಗ್ಗೆ ಗೌರವ ಇದ್ದಿದ್ದರೆ ಈ ಪ್ರಶಸ್ತಿಯನ್ನು ಅವರು ತಿರಸ್ಕರಿಸಬೇಕಿತ್ತು. ನಿಮ್ಮ ತಂದೆಯನ್ನು ಹತ್ಯೆ ಮಾಡಿದ ಹಂತಕರ ಬಗ್ಗೆ ಸಹಾನುಭೂತಿ ಇಟ್ಟುಕೊಂಡ ಪಕ್ಷ ನೀಡಿದ ಪ್ರಶಸ್ತಿಯನ್ನು ಸಿದ್ದರಾಮಯ್ಯನವರು ಸ್ವೀಕಾರ ಮಾಡಿದ್ದಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಯನ್ನು ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ರಾಹುಲ್ ಗಾಂಧಿಯವರ ಮುಂದೆ ಬಿಜೆಪಿ ಇಡುತ್ತಿದೆ. ಅವರ ಉತ್ತರ ನಿರೀಕ್ಷಿಸುವುದಾಗಿ ತಿಳಿಸಿದರು.

ಸಿದ್ದರಾಮಯ್ಯನವರು ಈ ಪ್ರಶಸ್ತಿ ಸ್ವೀಕರಿಸಿ ಗಾಂಧಿ ಕುಟುಂಬಕ್ಕೆ ಅವಮಾನ ಮಾಡಿದಂತಲ್ಲವೇ? ಹಂತಕರನ್ನು ಬೆಂಬಲಿಸಿದ ಹಾಗಾಗಲಿಲ್ಲವೇ? ಎಂದೂ ಅವರು ಪ್ರಶ್ನೆಗಳನ್ನು ಮುಂದಿಟ್ಟರು.
ಅಧಿಕಾರ ಮತ್ತು ಅನುಕೂಲಕ್ಕೆ ಸಿದ್ದರಾಮಯ್ಯ ಏನನ್ನಾದರೂ ಮಾಡುತ್ತಾರೆ ಎಂದು ಆರೋಪಿಸಿದ ಅವರು, ಸಿದ್ಧಾಂತ ಹೇಳುವುದಕ್ಕೆ ಮಾತ್ರ. ಅದು ಆಚರಣೆಗೆ ಅಲ್ಲ ಎಂದು ನಂಬಿರುವ ರಾಜಕಾರಣಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಟೀಕಿಸಿದರು.

ಸಮಾಜವಾದಿ ಸಿದ್ದರಾಮಯ್ಯ ಹೂಬ್ಲೆಟ್ ವಾಚನ್ನು ಕಟ್ಟುತ್ತಾರೆ. ಲೋಹಿಯಾವಾದಿ ಸಿದ್ದರಾಮಯ್ಯ ಅರ್ಕಾವತಿ ಡಿ ನೋಟಿಫಿಕೇಶನ್ ಅನ್ನು ರೀಡೂ ಮಾಡ್ತಾರೆ. ಎಲೆಕ್ಷನ್ ಹತ್ತಿರ ಬಂದಾಗ ಅಹಿಂದ ಜಪ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಎಲ್ಲ ದಲಿತ ನಾಯಕರನ್ನು ತುಳಿದು ಬೆಳೆದ ಸಿದ್ದರಾಮಯ್ಯರಿಗೆ ಡಾ.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಅವರನ್ನು ಕುತಂತ್ರದ ಮೂಲಕ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆಯವರನ್ನು ಮೆಲ್ಲಗೆ ಮೂಲೆಗುಂಪು ಮಾಡಿ ಕೂರಿಸಿದರು. ಈಗ ಡಿ.ಕೆ.ಶಿವಕುಮಾರರಿಗೆ ಖೆಡ್ಡಾ ತೋಡಲು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇವತ್ತು ಕಾಂಗ್ರೆಸ್ ಪಕ್ಷ ಯಾವ ದಾರುಣ ಸ್ಥಿತಿಗೆ ಬಂದಿದೆ ಎಂದರೆ ಸ್ವತಃ ರಾಹುಲ್ ಗಾಂಧಿಯವರು ಅಸಹಾಯಕರಾಗಿ ಸಿದ್ದರಾಮಯ್ಯನವರ ವ್ಯಕ್ತಿಪೂಜೆಯನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಗೋಳಾಟ ಅರಣ್ಯ ರೋದನವಾಗಿದೆ ಎಂದು ತಿಳಿಸಿದರು.

ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ದೇಶದಲ್ಲಿ ಒಂದೆಡೆ ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಡೆಯುತ್ತಿದೆ. ಇನ್ನೊಂದೆಡೆ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಆಚರಣೆಯೂ ನಡೆಯುತ್ತಿದೆ. ರಾಜಕೀಯ ವೇದಿಕೆಯಲ್ಲಿ ಈ ಉತ್ಸವ ನಡೆದಿದೆ. ಸಿದ್ದರಾಮಯ್ಯರದು ಮತಬ್ಯಾಂಕ್ ರಾಜಕಾರಣವೇ? ಸಿದ್ದರಾಮೋತ್ಸವವೇ? ಕಾಂಗ್ರೆಸ್ ಉತ್ಸವವೇ? ಎಂದು ಪ್ರಶ್ನಿಸಿದರು.

ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಶರದ್ ಪವಾರ್, ಮಮತಾ ಬ್ಯಾನರ್ಜಿ, ಗುಂಡೂರಾವ್ ಮತ್ತಿತರರು ಸ್ವಂತಿಕೆ ಪ್ರದರ್ಶನ ಮಾಡಲು ಹೋಗಿ ಪೆಟ್ಟು ತಿಂದಿದ್ದರು. ಆದರೆ, ಈಗ ಹೈಕಮಾಂಡ್ ಸಿದ್ದರಾಮೋತ್ಸವದ ಬಗ್ಗೆ ಚಕಾರ ಎತ್ತಿಲ್ಲ. ಇದು, ಹೈಕಮಾಂಡ್ ಸಿದ್ದರಾಮಯ್ಯನವರ ಮುಂದೆ ಮಂಡಿಯೂರಿದ್ದರ ಸಂಕೇತ. ದೊಡ್ಡ ಹೈಕಮಾಂಡ್ ಚಿಕ್ಕದಾಗಿದೆ. ಚಿಕ್ಕ ಸಿದ್ದರಾಮಯ್ಯ ದೊಡ್ಡದಾಗಿದ್ದಾರೆ. ಅನ್ನ ಹಳಸಿತ್ತು. ನಾಯಿ ಹಸಿದಿತ್ತು ಎಂಬುದು ಕಾಂಗ್ರೆಸ್- ಸಿದ್ದರಾಮಯ್ಯನವರಿಗೆ ಅನ್ವಯ ಆಗುತ್ತದೆ ಎಂದು ಅವರು ತಿಳಿಸಿದರು.
60-65 ವರ್ಷಗಳಿಂದ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿದೆ. ದಲಿತರು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಮೂಲೆಗುಂಪಾಗಿದ್ದಾರೆ. ಅವರನ್ನು ಮತಬ್ಯಾಂಕಾಗಿ ಬಳಸಿ ಕಾಂಗ್ರೆಸ್ ವಂಚಿಸಿದೆ. ದಲಿತರ ಸಮಾಧಿಯನ್ನು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸೇರಿ ಕಟ್ಟಿದ್ದಾರೆ ಎಂದು ಆರೋಪಿಸಿದರು.

ಡಾ. ಪರಮೇಶ್ವರರನ್ನು ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಡಬಾರದ ಹಿಂಸೆ ಕೊಟ್ಟು ರಾಜ್ಯದಿಂದ ಓಡಿಸಿದರು. ಕೆ.ಎಚ್.ಮುನಿಯಪ್ಪನವರಿಗೆ ಅವರ ಕ್ಷೇತ್ರದಲ್ಲಿ ಭವಿಷ್ಯ ಇಲ್ಲದಂತೆ ಮಾಡಿದ್ದಾರೆ. ಮಹದೇವಪ್ಪ, ಧ್ರುವನಾರಾಯಣರನ್ನು ಸೋಲಿಸಿದರು. ಬಸವಲಿಂಗಪ್ಪ ಅವರು 1992-93ರಲ್ಲಿ ಸಿಎಂ ಆಗಲು ತೀರ್ಮಾನ ಆಗಿತ್ತು. ಆದರೆ, ವೀರಪ್ಪ ಮೊಯಿಲಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಬಸವಲಿಂಗಪ್ಪ ಅವರು ಅನಾರೋಗ್ಯದಿಂದ ಸಾಯುವಂತಾಯಿತು ಎಂದರು.

ಸಿದ್ದರಾಮಯ್ಯರಿಗೆ ಪಕ್ಷದೊಳಗೆ ಶೇ 70-80ರಷ್ಟು ವಿರೋಧಿಗಳಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯರನ್ನು ಬೆಂಬಲಿಸುವ ಕಾರಣ ಯಾರೂ ಮಾತನಾಡುತ್ತಿಲ್ಲ. ದಲಿತ ಮುಖಂಡರು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯನ್ನು ಹೊರಗೆಳೆಯಬೇಕು. ಪುಂಗಿ ಊದುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯರನ್ನು ಬೆಂಬಲಿಸಿದರೆ ದಲಿತ ಮುಖಂಡರು ಸರ್ವನಾಶ ಆಗಲಿದ್ದೀರಿ ಎಂದು ಎಚ್ಚರಿಸಿದರು. ಡಾ. ಅಂಬೇಡ್ಕರರನ್ನು ಬದುಕಿದ್ದಾಗ ಗರಿಷ್ಠ ಪ್ರಮಾಣದಲ್ಲಿ ತುಳಿದ, ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷವನ್ನು ದಲಿತರು ಬೆಂಬಲಿಸಬಾರದು ಎಂದು ತಿಳಿಸಿದರು. ದಲಿತರು ಕಾಂಗ್ರೆಸ್‍ನಲ್ಲಿರುವುದು ಅಂಬೇಡ್ಕರರಿಗೆ ಮಾಡಿದ ದ್ರೋಹ ಎಂದು ನುಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top