ಕೊನೆಗೂ ಬುಡಕಟ್ಟು ಮಹಿಳೆಯೊಬ್ಬರು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ದ್ರೌಪತಿ ಮುರ್ಮು ಅವರು ಭಾರತದ ರಾಷ್ಟ್ರಪತಿ ಆಗುತ್ತಿರುವ ಎರಡನೇ ಮಹಿಳೆ ಮತ್ತು ಮೊದಲ ಬುಡಕಟ್ಟು ಮಹಿಳೆ. ಅಲ್ಲದೇ ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ರಾಷ್ಟ್ರಪತಿ. ಮಾತ್ರವಲ್ಲ ಅತ್ಯುನ್ನತ ಹುದ್ದೆಗೆ ಏರಿದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅತಿ ಬಡತನ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದು ರಾಷ್ಟ್ರಪತಿಯಾಗುವವರೆಗಿನ ಮುರ್ಮು ಅವರ ಜೀವನ ಪಯಣ ನಿಜಕ್ಕೂ ಸ್ಪೂರ್ತಿದಾಯಕ. ಅವರು ಇಂದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಬಹಳ ದೂರದ ಹಾದಿಯನ್ನು ಸವೆಸಿ ಬಂದಿದ್ದಾರೆ. ತಮ್ಮ ಜೀವನದಲ್ಲಿ ಹಲವಾರು ದುರಂತಗಳನ್ನು ಅನುಭವಿಸಿದರೂ ಧೃತಿಗೆಡದೆ ಎಲ್ಲವನ್ನೂ ಎದುರಿಸಿದ್ದಾರೆ. 2009-2015ರ ನಡುವೆ ಕೇವಲ ಆರು ವರ್ಷಗಳ ಅಂತರದಲ್ಲಿ ಅವರು ತನ್ನ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದಾರೆ. ದುರಂತದ ಬಳಿಕ ಅವರು ಬ್ರಹ್ಮ ಕುಮಾರಿಯರ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡರು ಮತ್ತು ತಮ್ಮ ಸಾಮಾಜಿಕ ಜೀವನದಲ್ಲಿ ಧೃತಿಗೆಡದೆ ಮುಂದೆ ಸಾಗಿ ಬಂದರು.
ಮುರ್ಮು ಅವರಿಗೆ ಮೂವರು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು. ಅವರ ಪತಿ ಶ್ಯಾಮ್ ಚರಣ್ ಮುರ್ಮು. ಸುದ್ದಿ ವರದಿಗಳ ಪ್ರಕಾರ, ಆಕೆಯ ಒಬ್ಬ ಮಗ 2009 ರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಎರಡನೇ ಮಗ ಮೂರು ವರ್ಷಗಳ ನಂತರ ರಸ್ತೆ ಅಪಘಾತದಲ್ಲಿ ನಿಧನರಾದರು. ಬಳಿಕ ಹೃದಯಾಘಾತದಿಂದ ಪತಿಯನ್ನು ಕಳೆದುಕೊಂಡರು. ಮುರ್ಮು ಅವರ ಪುತ್ರಿ ಇತಿಶ್ರೀ ಪ್ರಸ್ತುತ ಒಡಿಶಾದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜೂನ್ 20, 1958 ರಂದು ಜನಿಸಿದ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್. ಮುರ್ಮು ಅವರು ಸ್ವಾತಂತ್ರ್ಯದ ನಂತರ ಜನಿಸಿದ ದೇಶದ ಮೊದಲ ರಾಷ್ಟ್ರಪತಿಯೂ ಆಗುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ.
ರಾಯರಂಗಪುರದಿಂದ ಅವರು ಬಿಜೆಪಿಯೊಂದಿಗೆ ರಾಜಕೀಯ ಬದುಕಿನ ಮೊದಲ ಹೆಜ್ಜೆ ಇಟ್ಟರು. 1997 ರಲ್ಲಿ ರಾಯರಂಗ್‌ಪುರ ಅಧಿಸೂಚಿತ ಪ್ರದೇಶ ಕೌನ್ಸಿಲ್‌ನಲ್ಲಿ ಕೌನ್ಸಿಲರ್ ಆಗಿದ್ದರು ಮತ್ತು 2000 ರಿಂದ 2004 ರವರೆಗೆ ಒಡಿಶಾದ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಹುದ್ದೆ ಅಲಂಕರಿಸಿದರು. 2015 ರಲ್ಲಿ, ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು 2021 ರವರೆಗೆ ಹುದ್ದೆಯಲ್ಲಿ ಇದ್ದರು.
ಮುರ್ಮು 2014 ರ ವಿಧಾನಸಭಾ ಚುನಾವಣೆಯಲ್ಲಿ ರಾಯರಂಗಪುರದಿಂದ ಸ್ಪರ್ಧಿಸಿದ್ದರು, ಆದರೆ ಬಿಜೆಡಿ ಅಭ್ಯರ್ಥಿ ಮುಂದೆ ಸೋತಿದ್ದರು. ಜಾರ್ಖಂಡ್ ಗವರ್ನರ್ ಆಗಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ಮುರ್ಮು ರಾಯರಂಗ್‌ಪುರದಲ್ಲಿ ಧ್ಯಾನ ಮತ್ತು ಸಾಮಾಜಿಕ ಕಾರ್ಯಗಳಿಗೆ ತನ್ನ ಸಮಯವನ್ನು ಮೀಸಲಿಟ್ಟರು.
“ಸಾಕಷ್ಟು ನೋವು ಮತ್ತು ಹೋರಾಟವನ್ನು ಅನುಭವಿಸಿರುವ ಮುರ್ಮು ಅವರು ಎಂಥಹುದೇ ಪರಿಸ್ಥಿತಿಯಲ್ಲೂ ನಲುಗುವುದಿಲ್ಲ” ಎಂದು ಮುರ್ಮು ಅವರನ್ನು ಹತ್ತಿರದಿಂದ ಬಲ್ಲ ಒಡಿಶಾ ಬಿಜೆಪಿಯ ಮಾಜಿ ಅಧ್ಯಕ್ಷ ಮನಮೋಹನ್ ಸಮಾಲ್ ಹೇಳುತ್ತಾರೆ.
ಸಂತಾಲ್ ಎಂಬ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಅವರು ಸಂತಾಲಿ ಮತ್ತು ಒಡಿಯಾ ಭಾಷೆಗಳಲ್ಲಿ ಅತ್ಯುತ್ತಮ ವಾಗ್ಮಿ. ತಮ್ಮ ಪ್ರದೇಶದಲ್ಲಿ ರಸ್ತೆಗಳು ಮತ್ತು ಬಂದರುಗಳಂತಹ ಮೂಲಸೌಕರ್ಯಗಳನ್ನು ಸುಧಾರಿಸಲು ಅವರು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಎಂದು ಸಮಲ್ ಹೇಳಿದ್ದಾರೆ.
ಎನ್‌ಡಿಎ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ ಬಳಿಕ ಅವರು ಹೇಳಿದ ಮಾತು, “ನನಗೆ ಆಶ್ಚರ್ಯ ಮತ್ತು ಸಂತೋಷವಾಗುತ್ತಿದೆ. ದೂರದ ಮಯೂರ್‌ಭಂಜ್ ಜಿಲ್ಲೆಯ ಬುಡಕಟ್ಟು ಮಹಿಳೆಯಾದ ನಾನು ಉನ್ನತ ಹುದ್ದೆಗೆ ಅಭ್ಯರ್ಥಿಯಾಗುವ ಬಗ್ಗೆ ಯೋಚಿಸಿರಲಿಲ್ಲ. ನಾನು ಈ ಅವಕಾಶವನ್ನು ನಿರೀಕ್ಷಿಸಿರಲಿಲ್ಲ. ನೆರೆಯ ಜಾರ್ಖಂಡ್‌ನ ರಾಜ್ಯಪಾಲೆಯಾದ ನಂತರ ಆರು ವರ್ಷಗಳಿಂದ ನಾನು ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ. ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂಬುದು.
ಅತೀ ವಿನಂಬ್ರ ಹಿನ್ನೆಲೆ, ಮಿತ ಭಾಷಿ, ಅಪರಿಮಿತ ಅನುಭವ, ಸೇವಾಭಾವ ಹೊಂದಿರುವ ಮುರ್ಮು ಅವರು ದೇಶದ ರಾಷ್ಟ್ರಪತಿಯಾಗಿ ಅತ್ಯುತ್ತಮ ಸೇವೆಯನ್ನು ದೇಶಕ್ಕೆ ನೀಡುತ್ತಾರೆ ಎಂಬ ಆಶಾಭಾವ ಎಲ್ಲರಿಗೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.