ಭಾರತದ ಎಲ್ಲಾ ಹಳ್ಳಿಗಳು ಕೊಳಚೆ ಗುಂಡಿಗಳಾಗಿರುತ್ತವೆ, ಬಯಲು ಶೌಚಾಲಯದಿಂದ ಗಬ್ಬೆದ್ದು ನಾರುತ್ತಿರುತ್ತದೆ ಎಂಬ ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಮಹಾರಾಷ್ಟ್ರದಲ್ಲಿನ ಈ ಹಳ್ಳಿಯನ್ನು ನೋಡಿದ ಬಳಿಕ ಈ ರೀತಿಯ ಕಲ್ಪನೆ ಯಾರಲ್ಲೂ ಮೂಡಲು ಸಾಧ್ಯವಿಲ್ಲ.
ಮಹಾರಾಷ್ಟ್ರದ ಕರ್ತಾಜ್ ಸಮೀಪದ ತಂನಾಥ್ ಗ್ರಾಮವನ್ನು ಭಾರತದ ಅತ್ಯಂತ ಸ್ವಚ್ಛ ಮತ್ತು ಸುಂದರ ಗ್ರಾಮಗಳಲ್ಲಿ ಒಂದು ಎಂದೇ ಪರಿಗಣಿಸಬಹುದು. ಒಂದೇ ಒಂದು ಪ್ಲಾಸ್ಟಿಕ್ ತುಂಡಾಗಲಿ, ಕಾಗದದ ತುಂಡಾಗಲಿ ಇಲ್ಲಿ ಕಂಡು ಬರುದಿಲ್ಲ. ಬಯಲು ಶೌಚಾಲಯವಂತು ಇಲ್ಲಿ ಇಲ್ಲವೇ ಇಲ್ಲ. ಇಲ್ಲಿನ ಸ್ವಚ್ಛತೆ ಮತ್ತು ಸೌಂದರ್ಯಯವನ್ನು ನೋಡಿದೊಡನೆ ಭಾರತದ ಎಲ್ಲಾ ಗ್ರಾಮವೂ ಇದೇ ತರ ಇರಲಪ್ಪಾ ಎಂಬ ಉದ್ಗಾರ ಪ್ರತಿಯೊಬ್ಬನ ಬಾಯಿಯಿಂದಲೂ ಹೊರಹೊಮ್ಮುತ್ತದೆ.
ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಈ ಹಳ್ಳಿ ಸ್ವಚ್ಛತೆಯನ್ನು ಕಂಡದ್ದಲ್ಲ. ಸ್ವಚ್ಛತೆ ಎಂಬುದು ಇಲ್ಲಿನ ಜನರಲ್ಲಿ ಹಿಂದಿನಿಂದಲೂ ಇದೆ. ಇದಕ್ಕೆ ಕಾರಣ ಆ ಗ್ರಾಮದ ಒಬ್ಬ ಸಂತ. ಆ ಸಂತನ ದೇಗುಲವೊಂದು ಈ ಹಳ್ಳಿಯಲ್ಲಿದೆ. ‘ಸ್ವಚ್ಛತೆ ದೈವಭಕ್ತಿಗೆ ಸಮಾನವಾದುದು’ ಎಂಬದನ್ನು ಅವರು ಪ್ರತಿಪಾದನೆ ಮಾಡುತ್ತಿದ್ದರಂತೆ. ಜೀವನಪೂರ್ತಿ ಸ್ವಚ್ಛತೆಗಾಗಿ ಶ್ರಮಿಸಿದ್ದರಂತೆ. ಅವರ ಮಾರ್ಗದಲ್ಲೇ ನಡೆಯುತ್ತಿರುವ ಹಳ್ಳಿಗರು ಸ್ವಚ್ಛತೆಯನ್ನು ಜೀವಾಳವಾಗಿಸಿಕೊಂಡಿದ್ದಾರೆ.
ಇಲ್ಲಿನ ಸರ್ಪಂಚ್ ಕೂಡ ಅಷ್ಟೇ. ಪ್ರತಿ ಹಳ್ಳಿಗರೂ ಸ್ವಚ್ಛತೆಯನ್ನು ಕಾಪಾಡುವಂತೆ ನೋಡಿಕೊಳ್ಳುತ್ತಾರೆ. ಶೌಚಾಲಯಗಳನ್ನು ನಿರ್ಮಿಸಲು ಸಬ್ಸಿಡಿಗಳನ್ನು ನೀಡುತ್ತಾರೆ. ಇಲ್ಲಿ ಕಸ ಗುಡಿಸಲು ಯಾವುದೇ ಕಾರ್ಮಿಕರಿಲ್ಲ. ಜನರೇ ಪೊರಕೆ ಹಿಡಿದು ಮೂಲೆ ಮೂಲೆಯನ್ನೂ ಸ್ವಚ್ಛ ಮಾಡುತ್ತಾರೆ. ಈ ಹಳ್ಳಿಯಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕುವಂತಿಲ್ಲ.
ಈ ಹಳ್ಳಿಯಲ್ಲೊಂದು ಶೇಮ್ ಬೋರ್ಡ್ ಇದೆ, ಯಾರದರು ಕಸ ಬಿಸಾಡಿದರೆ, ಬಯಲು ಶೌಚ ಮಾಡಿದರೆ ಅವರ ಹೆಸರನ್ನು ಇದರಲ್ಲಿ ಬರೆಯಲಾಗುತ್ತದೆ. ಈ ಮೂಲಕ ಅವರು ನಾಚಿಗೆಪಟ್ಟುಕೊಳ್ಳುವಂತೆ ಮಾಡಲಾಗುತ್ತದೆ. ಶೌಚಾಲಯವಿಲ್ಲದ ಮನೆಯ ಹುಡುಗನನ್ನು ಈ ಹಳ್ಳಿಯ ಯುವತಿಯರು ಮದುವೆಯಾಗುವುದಿಲ್ಲ. ಮೊದಲು ಶೌಚಾಲಯ ಕಟ್ಟಿ ಅಮೇಲೆ ನಮ್ಮ ಮಗಳನ್ನು ಮದುವೆ ಮಾಡಿಕೊಡುತ್ತೇವೆ ಎನ್ನುತ್ತಾರೆ ಇಲ್ಲಿನ ಪೋಷಕರು.
ಈ ಸ್ವಚ್ಛ ಮತ್ತು ಸುಂದರ ಹಳ್ಳಿಯನ್ನು ನೋಡುವುದಕ್ಕಾಗಿ ಇಲ್ಲಿಗೆ ಬರುವವರೂ ಅಷ್ಟೇ. ತಮ್ಮ ಕಸಕಟ್ಟಿಗಳನ್ನು ಬ್ಯಾಗನಲ್ಲೇ ಇಟ್ಟುಕೊಂಡಿರಬೇಕು ಅಥವಾ ಕಸದಬುಟ್ಟಿಗೆ ಹಾಕಬೇಕು. ಅಪ್ಪಿ ತಪ್ಪಿ ಅಭ್ಯಾಸ ಬಲದಿಂದ ನೆಲಕ್ಕೆ ಬಿಸಾಡಿದರೆ ಅಷ್ಟೇ ಕಥೆ. ಅವರ ಹೆಸರೂ ಶೇಮ್ ಬೋರ್ಡ್ನಲ್ಲಿ ದಾಖಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.