ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಅಭಿನಂದನೀಯ. 1925 ರಲ್ಲಿ ಆರ್.ಎಸ್.ಎಸ್.ಸ್ಥಾಪಿಸುವ ಮೂಲಕ ಚಾರಿತ್ರ ನಿರ್ಮಾಣದ ಮೂಲಕ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಎಂಬ ಉದಾತ್ತ ವಿಷನ್ ಮತ್ತು ಮಿಷನ್ ಎರಡನ್ನೂ ನೀಡಿದ ಪ್ರಯೋಗಶೀಲ ರಾಷ್ಟ್ರಚಿಂತಕರ ಬಗ್ಗೆ ವಿದ್ಯಾರ್ಥಿಗಳು ಓದಬೇಕು. ನಾನು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾದ ದಿನಗಳಿಂದ ಆರ್.ಎಸ್.ಎಸ್.ಶಾಖೆಯಲ್ಲಿ ಡಾಕ್ಟರ್ ಜೀ ಅವರ ಹೆಸರು ಚಿಂತನೆಗಳನ್ನು ಕೇಳಿ ಬೆಳೆದವನು. ರೋಹಿತ್ ಚಕ್ರತೀರ್ಥ ಅವರಿಗೆ ಅಭಿನಂದನೆಗಳು. ಈ ಕಾರಣಕ್ಕಾಗಿ ಪಠ್ಯಪುಸ್ತಕದ ಬಗೆಗಿನ ಅಸಹಿಷ್ಣುತೆ ಸಲ್ಲದು.
ಈಗ ಸಂಘಪರಿವಾರ ವಿರೋಧಿ ಚಿಂತಕರು ಎತ್ತುತ್ತಿರುವ ಪ್ರಶ್ನೆಗಳ ಕುರಿತು ಕೆಲವು ಪ್ರಶ್ನೆಗಳು
🔷 ಡಾ. ಹೆಡಗೆವಾರ್ ಅವರನ್ನು ಒಂದು ಪಕ್ಷದ ವ್ಯಕ್ತಿಯಂತೆ ಭಾವಿಸಿರುವುದು ನಿಮ್ಮ ಮಿತಿಯಲ್ಲವೇ? ಅವರು ರಾಜಕೀಯ ವ್ಯಕ್ತಿಯೋ ಸಾಂಸ್ಕೃತಿಕ ರಾಷ್ಟ್ರೀಯತೆಯ ನಿರ್ಮಾಪಕರೋ? ಆರ್.ಎಸ್.ಎಸ್.ಪರಿವಾರದಲ್ಲಿ ಎಷ್ಟು ಸಂಸ್ಥೆಗಳಿವೆ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಕೆಲಸಮಾಡಿದೆ ಎಂಬ ಬಗ್ಗೆ ಬರಗೂರು ರಾಮಚಂದ್ರಪ್ಪ ಅಥವಾ ಅಲ್ಲಮಪ್ರಭು ಬೆಟ್ಟದೂರು ಒಂದು ವಿಮರ್ಶಾತ್ಮಕ ಲೇಖನವನ್ನು ಬರೆಯಬೇಕಾಗಿ ಪ್ರಾರ್ಥಿಸುತ್ತೇನೆ.
ಅನಂತರ ಈ ಕುರಿತು ಚರ್ಚೆ ಆಗಲಿ.
🔷 ಬರಗೂರು ರಾಮಚಂದ್ರಪ್ಪ, ಅಲ್ಲಮಪ್ರಭು ಬೆಟ್ಟದೂರಾದಿ ಎಡಪಂಥೀಯ ಚಿಂತಕರು ಕಳೆದು ಮೂವತ್ತೈದು ವರ್ಷಗಳಿಗೂ ಅಧಿಕಕಾಲ ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಈವರೆಗೆ ಅವರು ರಚಿಸಿರುವ ಪಠ್ಯಪುಸ್ತಕಗಳಲ್ಲಾಗಲೀ ಅವರ ಸ್ವತಂತ್ರ ಕೃತಿಗಳಲ್ಲಾಗಲೀ ಆರ್.ಎಸ್.ಎಸ್.ಕುರಿತು ಒಂದಾದರೂ ಒಳ್ಳೆಯ ಅಂಶವನ್ನು ಬರೆದಿದ್ದಾರೆಯೇ? ಎಂಬುದಕ್ಕೆ ಉತ್ತರಿಸಲಿ.
🔷 ಈವರೆಗೆ ಪಠ್ಯ ಪುಸ್ತಕಗಳಲ್ಲಿ ಆರ್.ಎಸ್.ಎಸ್.ಚಿಂತನೆಗಳನ್ನು ಸೇರಿಸದೇ ಇದ್ದುದಕ್ಕೆ ಕಾರಣವೇನು? ಬೌದ್ಧಿಕ ಅಸ್ಪೃಶ್ಯತೆ ಒಂದು ಮಾನಸಿಕ ರೋಗವಲ್ಲವೇ?
🔷 ಈಗ ಡಾ. ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ವಿರೋಧಿಸುತ್ತಿರುವುದು ಅಸಹಿಷ್ಣುತೆ ಮತ್ತು ಬೌದ್ಧಿಕ ಫ್ಯಾಸಿಸಂ ಅಲ್ಲವೇ?
🔷 ಭಾರತದಲ್ಲಿ 1925 ರಲ್ಲಿ ಆರ್.ಎಸ್.ಎಸ್. ಹಾಗೂ ಕಮ್ಯುನಿಸ್ಟ್ ಎರಡು ಸಂಸ್ಥೆಗಳು ಆರಂಭವಾಗಿವೆ. ಕಮುನ್ಯುನಿಸಂ ಎಲ್ಲಾ ಪಠ್ಯಗಳಲ್ಲಿದೆ, ಆದರೆ ಜನರ ನಡುವೆ ಇಲ್ಲ. ಆರ್.ಎಸ್.ಎಸ್. ಯಾವುದೇ ಪಠ್ಯಪುಸ್ತಕದಲ್ಲಿ ಇಲ್ಲ ಆದರೆ ಜನರ ಮಧ್ಯೆ ಬೃಹದಾಕಾರವಾಗಿ ಬೆಳೆದಿದೆ. ಒಂದು ಚಿಂತನೆ ಕೇವಲ ಚಿಂತನೆಯಿಂದ ಬೆಳೆಯುವುದಿಲ್ಲ. ಚಿಂತಕರ ನಡವಳಿಕೆಗಳಿಂದ ಬೆಳೆಯುತ್ತದೆ. ನುಡಿದಂತೆ ನಡೆಯುವುದನ್ನು ಕಲಿಸುವುದೇ ಶಿಕ್ಷಣ. ಹಾಗಿರುವಾಗ ನುಡಿದಂತೆ ನಡೆದಿರುವವರು ಯಾವ ಚಿಂತಕರು ಎಂಬ ಬಗ್ಗೆಯೂ ಚರ್ಚೆಯಾಗಲಿ.
🔷 ಇಷ್ಟು ವರ್ಷಗಳ ಕಾಲ ಕಮ್ಯುನಿಸ್ಟ್, ಸಮಾಜವಾದಿ, ಕಾಂಗ್ರೆಸ್ ಸಂಬಂಧಿ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿಲ್ಲವೆ? ಆಗ ಅದೇಕೆ ಪಕ್ಷದ ಪಠ್ಯ ಎಂದೆನಿಸಲಿಲ್ಲ? ನಿಮಗೆ ಒಂದು ವೈಚಾರಿಕತೆ ಇರುವಂತೆ ಇತರರಿಗೂ ಒಂದು ವೈಚಾರಿಕತೆ ಇರುತ್ತದೆ. ಅದಕ್ಕೇಕೆ ವಿರೋಧ? ನಿಮ್ಮದನ್ನು ಮಕ್ಕಳು ಓದುವಂತೆ ಇತರರದನ್ನೂ ಓದಲಿ ಬಿಡಿ. ಅನಂತರ ಅವರಿಗೆ ಸರಿಯೆನಿಸಿದ್ದನ್ನು ಅವರು ಸ್ವೀಕರಿಸುತ್ತಾರೆ. ಮುಕ್ತತೆ ಇಲ್ಲದ ವೈಚಾರಿಕತೆ ಅದು ವೈಚಾರಿಕತೆ ಎನಿಸೋಲ್ಲ ಅಲ್ಲವೇ? ಬಹುತ್ವ ವೈಚಾರಿಕತೆಯಲ್ಲೂ ಬೇಕಲ್ಲವೇ? ಹಾಗಿರುವಾಗ ವಿರೋಧವೇಕೆ?
🔷 ಕಮ್ಯುನಿಸ್ಟ್, ಕಾಂಗ್ರೆಸ್, ಸಮಾಜವಾದಿ, ಮುಸ್ಲಿಂ ಲೀಗ್ ದುರ್ಬಲಗೊಂಡು ಎಲ್ಲರೂ ಧೃವೀಕರಣಗೊಂಡ ಬಳಿಕ ಅಂದರೆ ಅಂದಾಜು 2000 ದಿಂದೀಚೆಗೆ ಸಂಘಪರಿವಾರದ ವಿರೋಧವನ್ನೇ ವೈಚಾರಿಕತೆಯ ಹೆಸರಿನಲ್ಲಿ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗೆ ಪಠ್ಯದಲ್ಲಿ, ಸಂಶೋಧನಾ ವಿಷಯದಲ್ಲಿ, ಅಧ್ಯಾಪನದಲ್ಲಿ, ಸಂಘವಿರೋಧೀ ಬಿಜೆಪಿ ವಿರೋಧೀ ರಾಜಕಾರಣವನ್ನೇ ಮಾಡುತ್ತಿಲ್ಲವೇ? ಅದನ್ನು ಏನೆಂದು ಕರೆಯಬೇಕು? ದೆಹಲಿಯ ಜೆ.ಎನ್.ಯು.ಆದಿಯಾಗಿ ಕೇರಳದವರೆಗೆ ಸಂಘಪರಿವಾರದ ವಿದ್ಯಾರ್ಥಿಗಳ ಮೇಲೆ ಬೌದ್ಧಿಕವಾಗಿ ಹಾಗೂ ದೈಹಿಕವಾಗಿ ಹಲ್ಲೆ ನಡೆಸುತ್ತಾ ಬರಲು ಕಾರಣರಾದ ಮೇಷ್ಟ್ರುಗಳು, ಗುಪ್ತವಾಗಿ ನಗರನಕ್ಸಲರಾಗಿ ರಕ್ತಪಾತಕ್ಕೆ ಕಾರಣರಾದವರನ್ನು ಏನೆಂದು ಕರೆಯಬೇಕು? ಈ ಬಗ್ಗೆ ಬರಗೂರು ಅವರೇ ಉತ್ತರಿಸಿದರೆ ಉತ್ತಮ. ಏಕೆಂದರೆ ಅವರ ಬೌದ್ಧಿಕವಾಗಿ ಅಪ್ರಮಾಣಿಕರಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ.ಬರಗೂರು ಅವರು ಸಾಮಾಜಿಕ ನ್ಯಾಯ ಬಯಸುವ ಪ್ರಾಮಾಣಿಕ ಚಿಂತಕರು. ನುಡಿದಂತೆ ನಡೆದಿರುವವರು ಎಂದು ನಂಬಿದವನು ನಾನು.
🔷 ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗಸಮಾನತೆ ಮೂಲಕ ಸಹೋದರತ್ವ ಸಮಾನತೆ ಸ್ವಾತಂತ್ರ್ಯ ಸಾಧಿಸಿ ಆ ಮೂಲಕ ರಾಷ್ಟ್ರದ ಏಕತೆ ಅಖಂಡತೆ ಸಮಗ್ರತೆ ಸಾರ್ವಭೌಮತೆಯಿಂದ ಕೂಡಿದ ಭಾರತವನ್ನು ಕಟ್ಟುವುದು ನಮ್ಮ ಸಂವಿಧಾನದ ಆಶಯ.ನಮ್ಮ ಪಠ್ಯಪುಸ್ತಕಗಳೂ ಅದನ್ನು ಸಾಧಿಸುವುದಕ್ಕೆ ಪೂರಕವಾಗಿರಬೇಕು. ಮೊದಲು ವ್ಯಕ್ತಿತ್ವದ ನಿರ್ಮಾಣ ಅದರ ಮೂಲಕ ರಾಷ್ಟ್ರನಿರ್ಮಾಣ ಶಿಕ್ಷಣದ ಗುರಿ.ಈ ಆಶಯವನ್ನು ಈವರೆಗೆ ಸಾಧಿಸಿದ್ದೇವೆಯೇ? ಇಲ್ಲವೆಂದಾದರೆ ನಮ್ಮ ಎಡಪಂಥೀಯರೇ ಎಪ್ಪತ್ತು ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಆಳಿದರಲ್ಲಾ ಅವರೇನು ಸಾಧಿಸಿದ್ದಾರೆ? ಅವರ ಪ್ರಸಿದ್ಧ ಹೇಳಿಕೆ “ನಮ್ಮ ಬದುಕನ್ನು ನೋಡಬೇಡಿ ನಮ್ಮ ಬರಹಗಳನ್ನು ಮಾತ್ರ ನೋಡಿ” ಈ ಧೋರಣೆಯೇ ಅಲ್ಲವೇ ನಮ್ಮ ಜೀವನವನ್ನು ನಮ್ಮ ಶಿಕ್ಷಣವನ್ನು ನಮ್ಮ ನೈತಿಕತೆಯನ್ನು ಹಾಳುಮಾಡಿರುವುದು? ಇದೇ ಧೋರಣೆ ಅಲ್ಲವೇ ದಲಿತಚಳುವಳಿ ಬಂಡಾಯ ಚಳುವಳಿಯ ಜಮೀನ್ದಾರಿ ಬಂಡವಾಳಶಾಹಿ ಬುದ್ಧಿಜೀವಿಗಳಿಂದ ದೂರವಾಗಲು ಕಾರಢವಾದದ್ದು? ಇದೇ ಧೋರಣೆಯಲ್ಲವೇ ಕಮ್ಯುನಿಸ್ಟ್ ಸಿದ್ಧಾಂತದ ರಾಜಕೀಯ ಪಕ್ಷ ಕಾರ್ಮಿಕ ವಿದ್ಯಾರ್ಥಿ ಚಳುವಳಿಗಳು ಚೂರುಚೂರಾಗಿರುವುದು?
🔷 ಸಾಮಾಜಿಕ, ಪ್ರಾದೇಶಿಕ, ಲಿಂಗ ಸಮಾನತೆ ಸಾಧಿಸದ ಯಾವ ವಿಚಾರಕ್ಕೂ ಭಾರತದಲ್ಲಿ ಭವಿಷ್ಯವಿಲ್ಲ.ಅದು ಕೇವಲ ಮಾತಾಗದೆ ಕೃತಿಯಲ್ಲಿ ಬರಬೇಕು ಆಗಮಾತ್ರ ಅದು ಉಳಿಯುತ್ತದೆ ಬೆಳೆಯುತ್ತದೆ. ಇದು ಆರ್.ಎಸ್.ಎಸ್.ಆದಿಯಾಗಿ ಎಲ್ಲಾ ಪಂಥ ಪಕ್ಷಗಳಿಗೂ ಚಿಂತನಧಾರೆ ಚಿಂತಕರಿಗೂ ಅನ್ವಯಿಸುತ್ತದೆ. ಆರ್.ಎಸ್.ಎಸ್.ನ ದತ್ತಾತ್ರೇಯ ಹೊಸಬಾಳೆಯವರು”ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರಪುನರ್ನಿಮಾಣ” “ಸಾಮಾಜಿಕ ಸಾಮರಸ್ಯವಿಲ್ಲದೆ ರಾಷ್ಟ್ರಪುನರ್ ನಿರ್ಮಾಣಸಾಧ್ಯವಿಲ್ಲ”ಎಂಬುದನ್ನು ನನಗೆ ನನ್ನಂಥ ಎಬಿವಿಪಿ ಆರ್.ಎಸ್.ಎಸ್.ನ ಲಕ್ಷಾಂತರ ಕಾರ್ಯಕರ್ತರಿಗೆ ಕಲಿಸಿದ್ದಾರೆ. ಅದಕ್ಕೆ ಬಲವಿದ್ದರೆ ಬದುಕುತ್ತದೆ ಉಳಿಯುತ್ತದೆ ಬೆಳೆಯುತ್ತದೆ. ಬಾಯಲ್ಲಿ ಸಾಮಾಜಿಕ ನ್ಯಾಯ ಕೃತಿಯಲ್ಲಿ ಸಾಮಾಜಿಕ ಅನ್ಯಾಯ ಎಂಬ ಆತ್ಮವಂಚನೆಗಿಲ್ಲಿ ಜಾಗವಿಲ್ಲ…. ಶಿಕ್ಷಣದಲ್ಲೂ ಇಂಥ ಧ್ಯೇಯ ಅಗತ್ಯ ಆದರ್ಶ ಇಲ್ಲದವರು ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶ ಇರುವವರು ನೂರು ತಪ್ಪುಗಳನ್ನು ಮಾಡುತ್ತಾರೆ ಆದ ಕಾರಣ ಆದರ್ಶ ಅಗತ್ಯ ಎಂಬುದು ಸ್ವಾಮಿ ವಿವೇಕಾನಂದರ ನಿಲುವು.
🔷 ಶಿಕ್ಷಣದ ಧ್ಯೇಯ “ನನ್ನ ಬರಹವನ್ನಷ್ಟೇ ಅಲ್ಲ ನನ್ನ ಬದುಕನ್ನೂ ನೋಡು” ಎನ್ನುವ ನಡೆನುಡಿ ಒಂದಾದ ಸಿದ್ದಾಂತವಾಗಬೇಕೇ ವಿನಃ ನಡೆಯೊಂದು ಪರಿ ನುಡಿಯೊಂದು ಪರಿಯಂತಾಗಬಾರದು. ಆ ದೃಷ್ಟಿಯಿಂದ ಡಾ.ಹೆಡಗೆವಾರ್ ಅವರ ಮತ್ತು ಆರ್.ಎಸ್.ಎಸ್.ಚಿಂತನಗಳು ಕಾರ್ಯಪದ್ಧತಿಗಳು ಎಲ್ಲರಿಗೂ ಅಧ್ಯಯನ ಯೋಗ್ಯ…. ಆರ್.ಎಸ್.ಎಸ್.ಒಂದು ಧ್ಯೇಯವಾದಿ ವಿಚಾರಯಾತ್ರೆ ಅದು ನಿರಂತರವಾಗಿ ಬೆಳೆಯುತ್ತಿದೆ. ಅದೇ ಕಾರಣ ಉಳಿಯುತ್ತಿದೆ ಬೆಳೆಸುತ್ತಿದೆ. ಹಾಗಾಗಿ ಅಪಾರ ಸಂಖ್ಯೆಯಲ್ಲಿ ಎಡಪಂಥೀಯರಾದಿ ಸಮಾಜವಾದಿ ಕಾಂಗ್ರೆಸ್ ವಾದಿ ಮುಸ್ಲಿಂ ಲೀಗಾದಿಯಾಗಿ ಹಲವು ಚಿಂತಕರು ನಾಯಕರು ಆರ್.ಎಸ್.ಎಸ್.ಧೇಯದೆಡೆಗೆ ಬಂದಿದ್ದಾರೆ, ಬರುತ್ತಿದ್ದಾರೆ. ಈ ಬೆಳವಣಿಗೆಯ ಬಗ್ಗೆಯೂ ಶೈಕ್ಷಣಿಕ ಅಧ್ಯಯನಗಳು ಆತ್ಮಾವಲೋಕನಗಳು ನಡೆಯಬೇಕು. ಆರ್.ಎಸ್.ಎಸ್.ಒಂದು ಧೇಯವಾದಿ ದೀಪ ಕಣ್ಣು ಮುಚ್ಚಿಕೊಂಡವರಿಗೆ ಅದರ ಬೆಳಕು ಗೋಚರಿಸದಿದ್ದರೆ ತಪ್ಪು ದೀಪದ್ದಲ್ಲ. ಈ ಅಭಿಪ್ರಾಯ ಅಧ್ಯಯನದಿಂದ ಬಂದದ್ದಲ್ಲ. ನನ್ನ ಜೀವನದ ಸ್ವಂತ ಅನುಭವದಿಂದ ಬಂದದ್ದು. ಅಲ್ಲಿ ಎಲ್ಲಾ ವ್ಯಕ್ತಿಗಳು ಒಂದೇ ರೀತಿ ಇದ್ದಾರೆ ಎಂದಲ್ಲ.ಅಲ್ಲಿ ಯಾವ ದೋಷಗಳೂ ಇಲ್ಲ ಎಂದೂ ಅಲ್ಲ.ಆದರೆ ಅಲ್ಲಿ ನಡೆ ನುಡಿ ಒಂದೇ ಅಗಿದೆ.ಅಲ್ಲಿನ ಧ್ಯೇಯದಲ್ಲಿ ಯಾವ ದೋಷವೂ ಇಲ್ಲ. ಆದ್ದರಿಂದಲೇ ಅದು ಇಂದು ಬಿಜೆಪಿಗೆ ಮಾತ್ರವಲ್ಲ ಕಾಂಗ್ರೆಸ್ ಗೂ ಮಾದರಿಯಾಗಿದೆ.ಆರ್.ಎಸ್.ಎಸ್.ಮಾದರಿಯ ಪರ್ಯಾಯ ಶಕ್ತಿಯನ್ನು ಸೃಷ್ಟಿಸಲು ಇತ್ತೀಚೆಗೆ ಕಾಂಗ್ರೆಸ್ ಚಿಂತನೆಸಭೆಯಲ್ಲಿ ತೀರ್ಮಾನಿಸಿರುವ ಬಗ್ಗೆ ವರದಿಯಾಗಿದೆ. ಆದರೆ ಅಲ್ಲಿ ಇರುವುದು ಆರ್.ಎಸ್.ಎಸ್.ವಿರೋಧಿ ಬಿಜೆಪಿ ಸೋಲಿಸುವ ಬಯಕೆ ಇದೆಯೇ ವಿನಃ ರಾಷ್ಟ್ರೀಯ ಕಾಂಗ್ರೆಸ್ ಪರವಾದ ಕಾಂಗ್ರೆಸ್ ಗೆಲ್ಲಿಸುವ ಆ ಮೂಲಕ ದೇಶವನ್ನು ಸಮಾಜವನ್ನು ಸಂಸ್ಕೃತಿಯನ್ನು ಬಲಪಡಿಸುವ ಚಿಂತನೆಗಳಿಲ್ಲ ಎಂಬುದು ಗಮನಾರ್ಹ. ಇಂಥದ್ದಕ್ಕೆ ಕಾರಣ ಇಂದಿನ ಚಿಂತಕರು ಪ್ರತಿಕ್ರಿಯೆಯನ್ನೇ ವೈಚಾರಿಕತೆ ಎಂದು ಭಾವಿಸಿರುವುದಾಗಿದೆ. ಎದುರಾಳಿಯ ಶಕ್ತಿಗೆ ಭಯಪಡುವುದು ದೌರ್ಬಲ್ಯದ ಸಂಕೇತ.
🔷 ಈಗ “ಪಠ್ಯ ಪುಸ್ತಕ ಪಕ್ಷ ಪುಸ್ತಕವಲ್ಲ” (-ಬರಗೂರು ರಾಮಚಂದ್ರಪ್ಪ) “ಪಠ್ಯಕ್ರಮ ಎನ್ನುವುದು ಯಾವುದೇ ಪಕ್ಷದ ಮುಖವಾಣಿ ಆಗಬಾರದು”- (ಅಲ್ಲಮಪ್ರಭು ಬೆಟ್ಟದೂರು) ಅವರ ಹೇಳಿಕೆಗಳನ್ನು ಓದಿದಾಗ ಸ್ವತಃ ಅವರೇ ಪಕ್ಷಗಳ ಮುಖವಾಣಿಗಳಂತೆ ಬರೆದವರು ಬದುಕಿದವರು ಅವರೀಗ ವೈಯಕ್ತಿಕವಾದ ರಾಜನೀತಿಯ ಒಲವು ನಿಲುವುಗಳಿರುವುದು ತಪ್ಪಲ್ಲ ಆದರೆ ಬುದ್ಧಿಜೀವಿಗಳು ಪಕ್ಷದ ಕಾರ್ಯಕರ್ತರಂತೆ ವರ್ತಿಸುವುದು ರಾಜಕೀಯ ಮಾಡುವುದು ತಪ್ಪು.ಮೊದಮೊದಲು ಕಮ್ಯುನಿಸ್ಟ್ ಕಾರ್ಯಕರ್ತರಂತೆ ಇದ್ದವರು ಹೀಗೆ ಮಾತಾಡುವುದನ್ನು ನೋಡಿದಾಗ ಬೌದ್ಧಿಕತೆಯ ಅಪ್ರಮಾಣಿಕತೆಯ ಬಗ್ಗೆ ಕನಿಕರ ಹುಟ್ಟುತ್ತಿದೆ. ಈ ಬಗೆಯ ನಿಲುವುಗಳನ್ನು೧೯೮೮ ರಲ್ಲಿ ಕನ್ನಡ ಎಂ.ಎ., ಗೆ ಸೇರಿದ ದಿನದಿಂದಲೂ ನೋಡುತ್ತಾ ಬಂದಿದ್ದೇನೆ.
🔷 ನೆನಪಿಡಬೇಕಾದ ಸಂಗತಿ :
ಆರ್.ಎಸ್.ಎಸ್.ಅನ್ನು ಎಷ್ಟೆಷ್ಟು ವಿರೋಧಿಸುತ್ತಾರೋ ಅಷ್ಟಷ್ಟು ಆರ್.ಎಸ್.ಎಸ್. ಬೆಳೆಯುತ್ತದೆ. ಏಕೆಂದರೆ ಅದರದು ಪ್ರತಿಯಾತ್ಮಕ ಚಿಂತನೆಯಲ್ಲ ಕ್ರಿಯಾತ್ಮಕ ಚಿಂತನೆ. ವಿನಾಶಕಾರಿ ದೃಷ್ಟಿಕೋನವಲ್ಲ ರಚನಾತ್ಮಕ ದೃಷ್ಟಿಕೋನ. ಆರ್.ಎಸ್.ಎಸ್.ರಾಜಕೀಯ ಪಕ್ಷವಲ್ಲ ಅದೊಂದು ಹಿಂದೂಸ್ಥಾನದ ಪರಂಪರೆಯ ಸಾಂಸ್ಕೃತಿಕ ಚಲನಶೀಲ ನದಿ.
🔷 ಆರ್.ಎಸ್.ಎಸ್. ವಿಚಾರ ಎಂದರೆ ಭಾರತೀಯ ವಿಚಾರ. ಭಾರತೀಯ ವಿಚಾರ ಎಂದರೆ ಆರ್.ಎಸ್.ಎಸ್. ವಿಚಾರ ಎನ್ನುವಷ್ಟು ಅಭಿನ್ನ. ಆರ್.ಎಸ್.ಎಸ್.ದೃಷ್ಟಿಯಲ್ಲಿ ಭಾರತ ಹಿಂದೂ ಎರಡೂ ಅಭಿನ್ನ… ಇದು ತುಂಡಾಸುರರಿಗೆ ಅರ್ಥವಾಗುವುದಿಲ್ಲ ಏಕೆಂದರೆ ಅವರು ತುಂಡಾಸುರರು.
🔷 ಇಷ್ಟು ವರ್ಷಗಳ ಬಳಿಕವಾದರೂ ಆರ್.ಎಸ್.ಎಸ್.ಸ್ಥಾಪಕರ ಒಂದು ಭಾಷಣ ಪಠ್ಯದಲ್ಲಿ ಸೇರಿದೆ ಎನ್ನುವುದು ಶಿಕ್ಷಣದಲ್ಲಿ ಬಹುತ್ವಕ್ಕೆ ಜಾಗ ದೊರೆತಿದೆ ಎಂದರ್ಥ. ಆ ಲೇಖನ ಕುರಿತು ಆರ.ಎಸ್.ಎಸ್.ವಿಚಾರ ಮತ್ತು ಕಾರ್ಯಪದ್ಧತಿ ಕುರಿತ ಚರ್ಚೆ ನಡೆಯಲಿ.” ಅರ್ಥಮಾಡ್ಕಂಡ್ ಹಿಂಗಲ್ ಹಿಂಗೆ ಅನ್ನೋರ್ ಮಾತು ಗಂಗೆ. ಅರ್ಥವಾಗ್ದಿದ್ರೂ ಸಿಕ್ದಾಂಗ್ ಅನ್ನೋದು ಚಂದ್ರಮುಖಕ್ ಉಗ್ದಂಗೆ” ಜಿ. ಪಿ. ರಾಜರತ್ನಂ ಅವರ ಮಾತು ಸದಾ ನೆನಪಾಗುತ್ತದೆ.
ಅರ್ಥಪೂರ್ಣವಾಗಿ ಚರ್ಚೆ ನಡೆಯಲಿ, ಮಡಕೆ ಒಡೆಯದಂತೆ ಮೊಸರು ಕಡೆಯೋಣ.
ಸಂಘಪರಿವಾರವನ್ನು ವಿರೋಧಿಸುವುದಕ್ಕೆ ಹಿಂದೂ ಧರ್ಮವನ್ನು ನಿಂದಿಸುವುದಕ್ಕೆ ಶಿಕ್ಷಣ ಕ್ಷೇತ್ರದಲ್ಲೇ ಯಾರ್ಯಾರು ಎಷ್ಟೆಷ್ಟು ಸಮಯ ಪೇಪರು ದುಡ್ಡು ಸರ್ಕಾರದ ದುಡ್ಡು ಬಳಸಿದ್ದಾರೆ ಅವರು ಯಾವ್ಯಾವ ರಾಜಕೀಯ ಪಕ್ಷಗಳನ್ನು ಯಾವ್ಯಾವ ರಾಜನೀತಿಯ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದಾರೆ ಅದರ ಪರಿಣಾಮಗಳೇನು ಎಂಬ ಬಗ್ಗೆಯೂ ಯಾರಾದರೂ ಸಂಶೋಧನೆ ಮಾಡಲಿ.
✍️ ಡಾ. ಬಿ. ವಿ. ವಸಂತಕುಮಾರ್
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.