ಬೆಳ್ತಂಗಡಿ : ವಿದ್ಯಾರ್ಜನೆಯಿಂದ ಬಡತನ, ಅಜ್ಞಾನದ ನಿವಾರಣೆ ಸಾಧ್ಯ. ಸಮಾಜ ಮುಖಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಶ್ರೀರಾಮ ಕ್ಷೇತ್ರದ ಶ್ರೀಗಳು ಸಮಾಜದಲ್ಲಿ ಆತ್ಮವಿಶ್ವಾಸವನ್ನು ಮೂಡಲು ಕಾರಣರಾಗಿದ್ದಾರೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.ಅವರು ಗುರುವಾರ ನಿತ್ಯಾನಂದ ನಗರದ ಶ್ರೀರಾಮಕ್ಷೇತ್ರದಲ್ಲಿ ಕನ್ಯಾಡಿ ದೇವರಗುಡ್ಡೆ ಶ್ರೀಗುರುದೇವ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ 6ನೇ ವರ್ಷದ ಸದ್ಗುರು ಪಟ್ಟಾಭಿಷೇಕ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಆತ್ಮಾನಂದ ಸರಸ್ವತೀ ಸ್ವಾಮೀಜಿಯವರ ಸಮಾಜಮುಖಿ ಕನಸುಗಳನ್ನು ಬ್ರಹ್ಮಾನಂದ ಶ್ರೀಗಳು ಸಮರ್ಥವಾಗಿ ಸಾಕಾರಗೊಳಿಸುತ್ತಿದ್ದಾರೆ. ಇವರು ಅವಿಭಜಿತ ದ.ಕ.ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಅನ್ಯ ಜಿಲ್ಲೆಗಳಲ್ಲೂ ಸಮಾಜದ ಜನತೆಯಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಸಮಸ್ತ ಸಮಾಜ ಒಂದೆಡೆ ಸೇರುವ ಕಾರ್ಯಕ್ರಮ ಇಂದಿನದ್ದಾಗಿದೆ ಎಂದರು.
ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಶ್ರೀಗಳು ರಾಜ್ಯದಲ್ಲಿರುವ ಸುಮಾರು ಮೂರುವರೆ ಕೋಟಿ ಅಸಂಘಟಿತ ಸಮಾಜಕ್ಕೆ ಧ್ವನಿಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ವಿಧಾನಸೌಧದಲ್ಲಿ ಹಲವಾರು ಸ್ವಾಮೀಜಿಯವರು ತಮ್ಮ ಕೆಲಸಕಾರ್ಯಗಳಿಗೆ ಬರುತ್ತಿರುತ್ತಾರೆ. ಆದರೆ ಕನ್ಯಾಡಿ ಶ್ರೀಗಳು ಹಾಗಿಲ್ಲ ಎಂದ ಕೋಟ ಉಭಯ ಜಿಲ್ಲೆಗಳಲ್ಲಿ ಕಲಾವಿದರನ್ನು ಜಾತಿ ಹೆಸರಲ್ಲಿ ಕಟ್ಟಿಹಾಕುವ ಪ್ರಯತ್ನದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸಾಂಸದ ನಳೀನ್ ಕುಮಾರ್ ಕಟೀಲು ಮಾತನಾಡಿ ಸಮಗ್ರ ಸಮಾಜದ ಚಿಂತನೆಯುಳ್ಳ ಗುರುಪೀಠಗಳು ಎಂದೂ ಸಂಕುಚಿತವಾಗಿರಲು ಸಾಧ್ಯವಿಲ್ಲ. ಕೇವಲ ದೇವರನ್ನೇ ಪೂಜೆ ಮಾಡುವುದು ಕಾಯಕವಲ್ಲ. ರಾಷ್ಟ್ರ ಭಕ್ತರ ನಿರ್ಮಾಣವೂ ಆಗಬೇಕು. ಈ ಕಾರ್ಯವನ್ನು ಕನ್ಯಾಡಿ ಶ್ರೀಗಳು ಮಾಡುತ್ತಿದ್ದಾರೆ ಎಂದರು.
ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸ್ವಾಮೀಜಿಗಳು ಮಠಗಳು ಸಂಘಟಿತವಾಗಿ ಎಲ್ಲಾ ಜನಾಂಗವನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವುದು ಅವುಗಳ ಮುಖ್ಯ ಧ್ಯೇಯವಾಗಿರಬೇಕು. ವ್ಯಕ್ತಿತ್ವವನ್ನು ಪ್ರಕೃತಿಯೊಂದಿಗೆ ಜೋಡಿಸಿಕೊಂಡರೆ ದೇವತೆಗಳ ಸಹಾಯ ಸಿಗುವುದು. ನಮ್ಮೊಳಗೆ ಸಂಕುಚಿತವಾಗಿರುವ ಪರಮಾತ್ಮನ ಅಂಶವನ್ನು ವಿಶಾಲವಾಗಿಸುವುದೇ ಗುರುಪೀಠಕ್ಕೆ ಕೊಡುವ ಕಾಣಿಕೆಯಾಗಿದೆ. ಪ್ರತಿಯೊಂದು ಕಾರ್ಯವನ್ನು ಕರ್ತವ್ಯ ಪ್ರಜ್ಞೆಯಿಂದ ಮಾಡಬೇಕು ಎಂದ ಶ್ರೀಗಳು ಶ್ರೀಗುರುದೇವ ಮಠದಲ್ಲಿ ಜಾತಿಮತ ಭೇದವಿಲ್ಲದೆ ೪೦೦ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆಂಬುದನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಶಾಸಕ ವಸಂತ ಬಂಗೇರ ವಹಿಸಿದ್ದರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ಜೆ.ಡಿ.ನಾಯ್ಕ, ರುಕ್ಮಯ ಪೂಜಾರಿ, ಶ್ರೀ ಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷೆ ಸುಜಿತಾ ವಿ.ಬಂಗೇರ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ, ಕೆ.ಎಮ್.ಸಿ. ಆಸ್ಪತ್ರೆಯ ಪ್ರೊ.ಎಮ್.ಎಸ್.ಕೋಟ್ಯಾನ್, ಆಂಧ್ರ ಪ್ರದೇಶದ ಮುಜುರಾಯಿ ಇಲಾಖಾಧಿಕಾರಿ ಸುಬ್ರಹ್ಮಣ್ಯಂ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್, ಗಂಗಾಧರ ಮಿತ್ತಮಾರು, ಆರ್.ವಿ.ನಾಯ್ಕ, ದೀಪಕ್ ನಾಯ್ಕ, ವಾಮನ್ ನಾಯ್ಕ, ಜೆ.ಜೆ.ನಾಯ್ಕ, ಡಿ.ಬಿ.ನಾಯ್ಕ, ರವೀಂದ್ರ ನಾಯ್ಕ, ನಾಗೇಶ್ ನಾಯ್ಕ, ವಿ.ಎನ್.ನಾಯ್ಕ, ಆನಂದ ನಾಯ್ಕ, ಅಣ್ಣಪ್ಪ ನಾಯ್ಕ, ಜಯಂತ ನಡಬೈಲು, ಮಂಜುನಾಥ ನಾಯ್ಕ, ಚಂದ್ರಶೇಖರ ಉಡುಪಿ, ಶಿವರಾಮ ಬನ್ನಂಜೆ, ಅನಂತರಾಮ್ ದೊಂಡೋಲೆ, ಟ್ರಸ್ಟಿಗಳಾದ ಜೆ.ಎನ್.ನಾಯ್ಕ, ಚಿತ್ತರಂಜನ್ ಮಂಗಳೂರು, ಮೋಹನ ಉಜ್ಜೋಡಿ, ಜಿ.ಪಂ.ಸದಸ್ಯ ಶೈಲೇಶ್ ಕುಮಾರ್, ಪ್ರತಾಪಸಿಂಹ ನಾಯಕ್, ರಾಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಅವರು ವೈದಿಕ ವಿಧಿ ವಿಧಾನಗಳ ಮೂಲಕ ಪೀಠಾರೋಹಣ, ಪಾದಪೂಜೆ, ಕಿರೀಟ ಧಾರಣೆ ನೆರವೇರಿಸಿದರು. ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.