ಯೋಗಿ ಆದಿತ್ಯನಾಥ್ ! ಬಹುಶಃ ‘ದಿ ಕಾಶ್ಮೀರ ಫೈಲ್ಸ್’ ನಂತೆಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಪದ. ಒಮ್ಮೆ ಅಧಿಕಾರಕ್ಕೆ ಬರುವುದೇ ಕಷ್ಟವಾಗಿರುವ ಬೃಹತ್-ವೈವಿಧ್ಯಮಯ ಉತ್ತರ ಪ್ರದೇಶದಲ್ಲಿ 5 ವರ್ಷಗಳ ಪೂರ್ಣಾವಧಿಯನ್ನ ಪೂರೈಸಿ, ಜನಬೆಂಬಲವನ್ನ ಕಾಪಿಟ್ಟುಕೊಂಡು, ಸರಳ ಬಹುಮತಕ್ಕಿಂತ 70 ಕ್ಕೂ ಅಧಿಕಸ್ಥಾನಗಳನ್ನ ಗೆದ್ದು ಪುನರಾಯ್ಕೆಗೊಂಡ ಏಕೈಕ ಮುಖ್ಯಮಂತ್ರಿ ಎಂಬ ಖ್ಯಾತಿ ಯೋಗಿ ಆದಿತ್ಯನಾಥರ ಪಾಲಾಗಿದೆ. ಸ್ವಾತಂತ್ರೋತ್ತರ ಉತ್ತರ ಪ್ರದೇಶ 21 ಮುಖ್ಯಮಂತ್ರಿಗಳನ್ನ ಕಂಡಿದೆಯಾದರೂ, ಯಾರೊಬ್ಬರೂ ಈ ಮಹತ್ಸಾಧನೆಯನ್ನ ಮಾಡಿರಲಿಲ್ಲ. ಪೂರ್ವ ಮುಖ್ಯಮಂತ್ರಿಗಳಾದ ಎನ್ ಡಿ ತಿವಾರಿ, ಚಂದ್ರಭಾನು ಗುಪ್ತ, ಬಹುಗುಣಮುಂತಾದ ಕೆಲವರು ಎರಡನೇ ಬಾರಿ ಅಧಿಕಾರಕ್ಕೆ ಏರಿದ್ದರೂ, ಈ ಮಟ್ಟದ ಯಶಸ್ಸನ್ನ ಯಾರೂ ಗಳಿಸಿರಲಿಲ್ಲ. ದೆಹಲಿ ಗದ್ದುಗೆಯ ಹೆಬ್ಬಾಗಿಲೆಂದೇ ಕರೆಯಲ್ಪಡುವ ಉತ್ತರ ಪ್ರದೇಶದಲ್ಲಿ ಮತ-ಪಂಥ-ಜಾತಿ-ಪರಿವಾರವಾದದ ಆಧಾರದ ಮೇಲೆ ಮತದಾರರ ಧ್ರುವೀಕರಣವನ್ನ ಮಾಡಿ ಅಧಿಕಾರಕ್ಕೇರುವ ಹಳೆ ಚಾಲಿಯನ್ನ ಮುಂದುವರಿಸಿದ್ದವರಿಗೆ ಪ್ರಬುದ್ಧ ಮತದಾರರು ಸರಿಯಾದ ಪಾಠವನ್ನೇ ಕಲಿಸಿ, ಒಡೆದಾಳುವ ನೀತಿಯನ್ನ ಈ ದೇಶ ಎಂದೂ ಒಪ್ಪುವುದಿಲ್ಲವೆಂಬ ಸ್ಪಷ್ಟವಾದ ಸಂದೇಶವನ್ನ, ಸರ್ವರ ಸರ್ವಾಂಗೀಣ ಅಭ್ಯುದಯಕ್ಕೆ ಶ್ರಮಿಸುತ್ತಿರುವ, ಅಭಿವೃದ್ಧಿ ಮತ್ತು ರಾಷ್ಟ್ರೀಯವಾದದ ಹೆಸರಿನಲ್ಲಿ ಚುನಾವಣೆಗೆ ಹೋದ ಯೋಗಿ ಆದಿತ್ಯನಾಥರನ್ನ ಗೆಲ್ಲಿಸುವ ಮೂಲಕ ರವಾನಿಸಿದ್ದಾರೆ.
ಘಾತುಕ ಶಕ್ತಿಗಳ ಕೇಂದ್ರ ಸ್ಥಾನಗಳಂತಿದ್ದ ಹತ್ರಾಸ್, ಲಖೀಮಪುರಗಳನ್ನೂ, ರೈತ ಕಿಚ್ಚು ‘ತೀವ್ರ’ವಾಗಿದ್ದ ಪಶ್ಚಿಮವಲಯದಲ್ಲೂ , ರೈತ ಬಹುಸಂಖ್ಯಾತ ಕ್ಷೇತ್ರಗಳಲ್ಲೂ ಬಿಜೆಪಿ ಯಶಸ್ಸನ್ನ ಗಳಿಸಿದೆ. ಭಾರತವನ್ನ (ವಿಶೇಷವಾಗಿ ಉತ್ತರಪ್ರದೇಶವನ್ನ) ಋಣಾತ್ಮಕವಾಗಿ ಚಿತ್ರಿಸಲು ವಿಶ್ವಮಟ್ಟದಲ್ಲಿ ನಡೆದಿದ್ದ ವ್ಯವಸ್ಥಿತವಾದ ಸಂಚನ್ನ ಈ ದೇಶದ ಎಲ್ಲಾಭಾಗದ ಮತದಾರರು ಛಿದ್ರಗೊಳಿಸಿದ್ದಾರೆ. ಪ್ರಾದೇಶಿಕ ವಿಚಾರಗಳಷ್ಟೇ ರಾಷ್ಟ್ರೀಯ ಏಕತೆ-ವಿಚಾರಗಳೂ ಮುಖ್ಯಎಂಬುದನ್ನ ನಮ್ಮ ಜನರು ಸಾರಿದ್ದಾರೆ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸವಾಲಾಗಿದೆ. ಜಾಗತಿಕ ವ್ಯವಸ್ಥೆ ಬದಲಾಗುತ್ತಿರುವ ಹೊಸ ಯುಗೋದಯದಲ್ಲಿ ನಾವೆಲ್ಲರೂ ಇದ್ದೇವೆ. ವಿಶ್ವರಂಗದಲ್ಲಿ ಭಾರತದ ಸ್ಥಾನ ಹಿಂದೆಂದಿಗಿಂತಲೂ ಉನ್ನತ ಸ್ಥಾನವನ್ನ ತಲುಪುತ್ತಿದೆ. ಇಂತಹಸನ್ನಿವೇಶದಲ್ಲಿ ಈ ದೇಶದ ಮತದಾರರು ದೂರದೃಷ್ಟಿಯೊಂದಿಗೆ ಅಚಲವಾದ, ಸುಭದ್ರವಾದ ಆಡಳಿತವನ್ನ ಬಯಸಿ ಮತವನ್ನ ಚಲಾಯಿಸಿದ್ದಾರೆ.
22 ಕೋಟಿಗೂ ಅಧಿಕ ಜನಸಂಖ್ಯೆ ಇರುವ ರಾಜ್ಯ ಉತ್ತರ ಪ್ರದೇಶ. ಈ ರಾಜ್ಯದ ಕುರಿತು ಕೆಲವು ವರ್ಷಗಳ ಪೂರ್ವದಲ್ಲಿಇದ್ದಂತಹ ಅಭಿಪ್ರಾಯವೆಂದರೆ ನಿರುದ್ಯೋಗ, ಕೊಲೆ ಸುಲಿಗೆ , ಭ್ರಷ್ಟಾಚಾರ, ಅನಾರೋಗ್ಯ, ಪರಿವಾರವಾದ ಮುಂತಾದವು ತಾಂಡವವಾಡುತ್ತಿರುವ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ರಾಜ್ಯವೆಂದು.
ಜಾತಿ-ಪರಿವಾರ-ನಿರಾಶಾವಾದದ ಕಾರ್ಗತ್ತಲಿನಲ್ಲಿ ಮುಳುಗಿದ್ದ ಉತ್ತರ ಪ್ರದೇಶಕ್ಕೆ ಆಶಾಕಿರಣದಂತೆ ಆಗಮಿಸಿದ್ದು2017ರಲ್ಲಿ ಮುಖ್ಯಮಂತ್ರಿಯಾಗಿ ಅಂದಿನ ಯುವ ಸಂಸದ, ಗೋರಖಪುರದ ಮಹಾಂತ್ ಯೋಗಿ ಆದಿತ್ಯನಾಥರ ಆಯ್ಕೆ. ಯೋಗಿ ಮುಖ್ಯಮಂತ್ರಿಯಾಗುವ ಮೊದಲೇ, ಭಾರತದ ಉತ್ಕೃಷ್ಟ ಸರ್ವಸಂಘ ಪರಿತ್ಯಾಗದ ಪರಂಪರೆ ಮಧ್ಯಪ್ರಾಚ್ಯ- ಪಾಶ್ಚಿಮಾತ್ಯ ನಾಗರಿಕತೆಗಳಲ್ಲಿರುವಂತೆ ರಿಲಿಜನ್ ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ನಂಬಿರುವ ಸ್ವಯಂಘೋಷಿತ ಪ್ರಗತಿಪರರು ಯೋಗಿಯವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದರು. ದೇಶದ ನೈತಿಕ ಅಧಃಪತನ ಎಂದೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಗಾಡಿದ್ದರು. ಇವರೆಲ್ಲರ ಸುಳ್ಳು ಆಪಾದನೆ-ಸಂದೇಹಗಳಿಗೆ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಯೋಗಿ ಸಮರ್ಥವಾದ ಉತ್ತರವನ್ನೇ ಕೊಟ್ಟಿದ್ದಾರೆ. ಯೋಗಿಯವರ ದಿಗ್ವಿಜಯಕ್ಕೆ ಕಾರಣಗಳೇನೆಂಬುದನ್ನ ನೋಡೋಣ.
ಶಿಕ್ಷಣದೊಂದಿಗೆ ಪ್ರಾರಂಭ ಮಾಡೋದಾದ್ರೆ, ಆಪರೇಷನ್ ಕಾಯಕಲ್ಪ್ , ಪ್ರೇರಣಾ, ಡಿಜಿಟಲ್ ಎಜುಕೇಶನ್ ನಂತಹಯೋಜನೆಗಳಿಂದ ಯೋಗಿ ಬೃಹತ್ ಉತ್ತರ ಪ್ರದೇಶದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ 93000 ಶಾಲೆಗಳ ಪುನರುತ್ಥಾನವಾಗಿದೆ. ಐಐಟಿ, ಹಾರ್ವರ್ಡ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ಸಲಹೆಗಳನ್ನ ಪಡೆದುಕೊಂಡು, ಅನೇಕ ಸರ್ವೆಗಳನ್ನ ಮಾಡಿ, ಶೈಕ್ಷಣಿಕ ಗುಣಮಟ್ಟವನ್ನ ಏರಿಸಲಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಆನ್ಲೈನ್ ಶಿಕ್ಷಣ ಬಡ ನಿರ್ಗತಿಕ ವಿದ್ಯಾರ್ಥಿಗಳಿಗೂ ಸಿಗುವಂತಾಗಲು UPSCERT , ದೀಕ್ಷಾ, ಖಾನ್ ಅಕಾಡಮಿ, ಗೂಗಲ್ ಮುಂತಾದ ಟೆಕ್ ಸಹಯೋಗದೊಂದಿಗೆ ಅವಿರತವಾಗಿ ಶ್ರಮಿಸಿದೆ. ಯೋಜನೆಗಳ ಅನುಷ್ಠಾನವನ್ನ ಪರಿಶೀಲಿಸಲು ದೇಶದಲ್ಲೇ ಮೊದಲ ಬಾರಿ ಜೀಯೋ ಟ್ಯಾಗಿಂಗ್ ಫೋಟೋಸ್ ಮುಂತಾದ ಆತ್ಯಾಧುನಿಕ ತಂತ್ರಜ್ಞಾನವನ್ನ ಬಳಸಲಾಗಿದೆ. ನ್ಯಾಯಯುತವಾದ ಪರೀಕ್ಷಾ ಪದ್ಧತಿ, ನೀಟ್, upsc , ಜೆಇ ಇಪರೀಕ್ಷೆಗಳಿಗೆ ಬಡ ಗ್ರಾಮೀಣ ವಿಧ್ಯಾರ್ಥಿಗಳನ್ನ ತಯಾರು ಮಾಡಲು ಅಭ್ಯುದಯ ಮುಂತಾದ ಯೋಜನೆಗಳು ತಲುಪಿವೆ.
ಸ್ವಾತಂತ್ರ್ಯ ಬಂದು ಇಷ್ಟು ದಶಕಗಳ ನಂತರವೂ ಅಕ್ಷರಶಃ ಕಗ್ಗತ್ತಲಿನಲ್ಲಿ ಮುಳುಗಿದ್ದ ಉತ್ತರ ಪ್ರದೇಶದ ಒಂದೂವರೆಲಕ್ಷ ಕುಗ್ರಾಮಗಳ 1.4 ಕೋಟಿ ಮನೆಗಳಿಗೆ ಸಬಿಕೊ ಬಿಜಲಿ ಯೋಜನೆಯಡಿಯಲ್ಲಿ ವಿದ್ಯುತ್ ಪೂರೈಸಲಾಗಿದೆ.
ಸಾರಿಗೆ ಮತ್ತು ರಸ್ತೆಗಳ ಅಭಿವೃದ್ಧಿಯ ಮೂಲಕ ಹೇಗೆ ಅಮೂಲಾಗ್ರ ಬದಲಾವಣೆಯನ್ನ ತರಬಹುದೆಂದು ಅಟಲ್ ಜಿ ತೋರಿಸಿಕೊಟ್ಟಿದ್ದರು. ಅದೇ ಪರಂಪರೆಯನ್ನ ಮೋದಿ ಯೋಗಿ ಜೋಡಿ ಗಂಗಾ, ಯಮುನಾ, ಪೂರ್ವಾಂಚಲ, ಬುಂದೇಲಖಂಡ ಮುಂತಾದ ಎಕ್ಸ್ಪ್ರೆಸ್ ವೇಗಳ ಮೂಲಕ ತೋರಿಸಿಕೊಡುತ್ತಿದ್ದಾರೆ. ಸದ್ಯದಲ್ಲೇ 5 ಅಂತರ ರಾಷ್ಟ್ರೀಯಏರ್ಪೋರ್ಟ್ ಗಳಿರುವ ಏಕೈಕ ರಾಜ್ಯವಾಗಿ ಉತ್ತರ ಪ್ರದೇಶ ಹೊರಹೊಮ್ಮಲಿದೆ. ಲಾಭ ಗಳಿಸಿದ ಕೆಲವೇ SRTC ಗಳಲ್ಲಿ ಯುಪಿಯದ್ದು ಒಂದು( 84 ಕೋಟಿ 2-19-2020).
ಗೂಂಡಾ ರಾಜ್ಯವೆಂದೇ ಕುಖ್ಯಾತಿಗೆ ಪಾತ್ರವಾಗಿದ್ದ ಯುಪಿಯಲ್ಲಿ ಕಾನೂನು ಸುವ್ಯವಸ್ಥೆಯನ್ನ ಕಾಪಾಡಿದ, ಭೂಮಾಫಿಯಾವನ್ನ ಮಟ್ಟಹಾಕಿದ ಕೀರ್ತಿಯೂ ಯೋಗಿಯವರಿಗೆ ಸಲ್ಲುತ್ತದೆ. ಈ ಎಲ್ಲ ಕ್ರಮಗಳ ಫಲವಾಗಿ , ರಾಜ್ಯಕ್ಕೆ2018-19ರ ಸಾಲಿನಲ್ಲಿ 1045 ಒಪ್ಪಂದಗಳ ಮೂಲಕ 4.28 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ರಕ್ಷಣಾಕ್ಷೇತ್ರದ ಆತ್ಮನಿರ್ಭರತೆಗಾಗಿ ಯುಪಿಯಲ್ಲಿ ಐಐಟಿ ಕಾನ್ಪುರ್ ಸಹಯೋಗದೊಂದಿಗೆ ದೇಶದ ಅತಿದೊಡ್ಡ ಡಿಫೆನ್ಸ್ಕಾರಿಡಾರ್ ( ರಕ್ಷಣಾ ಸರಕುಗಳ ಸ್ವದೇಶೀ ಉತ್ಪಾದನೆ) ನಿರ್ಮಾಣಗೊಳ್ಳುತ್ತಿದೆ. ಐಟಿ ಹಬ್ ಆಗಿ ಯುಪಿಮಾರ್ಪಾಡಾಗುತ್ತಿರುವುದಕ್ಕೆ ಮೈಕ್ರೋಸಾಫ್ಟ್ ಮುಂತಾದ ಕಂಪನಿಗಳು ಹೂಡಿಕೆ ಮಾಡುತ್ತಿರುವುದೇ ಸಾಕ್ಷಿ.
ರಾಜ್ಯದಾದ್ಯಂತ ಏಮ್ಸ್ ಗಳ ನಿರ್ಮಾಣ, ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೇಶಿಯಾಲಿಟಿ ಆಸ್ಪತ್ರೆ, ಜಪಾನೀಸ್ ಎನ್ಸೆಫಾಲಿಟಿಸ್ ಎಂಬ ಮಾರಣಾಂತಿಕ ರೋಗದ ನಿರ್ಮೂಲನ ಯೋಜನೆ ಮುಂತದ ತ್ವರಿತ ಕ್ರಮಗಳನ್ನಯೂನಿಸೆಫ್ ಶ್ಲಾಘಿಸಿದೆ. ಕೋವಿಡ್ ನಿರ್ವಹಣೆಯನ್ನೂ ಯೋಗಿ ಅತ್ಯುತ್ತಮವಾಗಿಯೇ ಮಾಡಿದ್ದಾರೆ. 22 ಕೋಟಿಗೂಅಧಿಕ ಜನರಿರುವ ರಾಜ್ಯದಲ್ಲಿ ಲಾಕ್ ಡೌನ್, ಸೋಂಕು ನಿಯಂತ್ರಣ ಮತ್ತು ಲಸಿಕೆಗಳ ಆಭಾದಿತ ಪೂರೈಕೆನ್ಯೂಜಿಲಂಡ್, ಯುರೋಪ್ ಗಳಲ್ಲಿ ಮಾಡಿದಷ್ಟು ಸುಲಭದ ಕೆಲಸವಲ್ಲ. ಲಾಕ್ ಡೌನ್ ನಿಂದ ರಾಜ್ಯಕ್ಕೆ ವಾಪಸಾದವಲಸೆ ಕಾರ್ಮಿಕರನ್ನ ಬಳಸಿಕೊಂಡು ಅನೇಕ ಯೋಜನೆಗಳನ್ನ ತ್ವರಿತವಾಗಿ ಪೂರೈಸಿದ್ದು ಸ್ಮರಣಾರ್ಹ. ಗಂಗಾನದಿಯಘಾಟ್ಗಳಲ್ಲಿ ನಿತ್ಯ ನಡೆಯುವ ಅಂತಿಮ ಸಂಸ್ಕರಾದ ಚಿತ್ರಗಳನ್ನ ತೆಗೆದು, ಕೋವಿಡ್ ಸಾವುಗಳೆಂದು ಬಿಂಬಿಸಿ ಭಾರತಕ್ಕೆಅವಮಾನಮಾಡಿದ ಅಂತಾರಾಷ್ಟ್ರೀಯ ಅವಾರ್ಡ್ಗಳನ್ನೂ ಪಡೆದವರೆಲ್ಲಿದ್ದಾರೆಂದು ಗೊತ್ತಿಲ್ಲ. ಯುಪಿಯಲ್ಲಿ ಕೋವಿಡ್ನಿರ್ವಹಣೆ ಅತ್ಯುತ್ತಮವಾಗಿಯೇ ನಡೆದಿದೆ ಎಂಬುದಕ್ಕೆ ಪ್ರಬುದ್ಧ ಮತದಾರರ ಈ ಫಲಿತಾಂಶವೇ ಸಾಕ್ಷಿ.
ಸಕಾಲದಲ್ಲಿ ಬೆಳೆಗಳ ಖರೀದಿ, MSP ಯ ಸಮರ್ಪಕ ಅನುಷ್ಠಾನ, 87 ಲಕ್ಷ ರೈತರ ಸಾಲ ಮನ್ನಾ, ಮಂಡಿಗಳಡಿಜಿಟಲೀಕರಣ ಮುಂತಾದ ಯೋಜನೆಗಳು ರೈತರ ಹೃದಯವನ್ನ ಗೆದ್ದಿವೆ. ಆಹಾರ ಮತ್ತು ನಾಗರೀಕ ಸರಬರಾಜುಇಲಾಖೆಯ ಸಂಪೂರ್ಣ ಡಿಜಿಟಲೀಕರಣ, 15 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ, ಕಳ್ಳಸಾಗಾಣಿಕೆಯನಿಯಂತ್ರಣ ಪಿಎಂ ಗರೀಬ್ ಕಲ್ಯಾಣ್ ಮುಂತದ ಕ್ರಮಗಳು ಹಸಿವು ಮುಕ್ತ ಯುಪಿಯನ್ನ ನಿರ್ಮಿಸುತ್ತಿವೆ. ಯುಪಿಯಲ್ಲಿ ಆಗುತ್ತಿರುವ ಸಾಂಸ್ಕೃತಿಕ ಬದಲಾವಣೆಯ ಕುರಿತು ನಮಗೆಲ್ಲ ತಿಳಿದೇ ಇದೆ. ಕಾಶಿ ಅಯೋಧ್ಯೆಯಲ್ಲಿಮಾತ್ರವಲ್ಲದೆ ಈ ಸತ್ಕಾರ್ಯ ರಾಜ್ಯದಾದ್ಯಂತ ಭರದಿಂದ ಸಾಗುತ್ತಿದೆ. ಯುಪಿ ಎಂದರೆ ತಾಜ್ ಮಹಲ್ ಮಾತ್ರವಲ್ಲ ! ಸಸ್ಟೈನ್ಬ್ಲ್ ಡೆವಲಪ್ಮೆಂಟ್ ಗೂ ಯುಪಿ ಹೆಸರುವಾಸಿಯಾಗುತ್ತಿದೆ. ಹಸಿರಿನ ಪ್ರಮಾಣ 3.08% ಗೆ ಹೆಚ್ಚಳ ( ನ್ಯಾಷನಲ್ಆವರೇಜ್ 2.89%) , ಇಂಗಾಲದ ಹೊರಸೂಸುವಿಕೆಯ ಇಳಿಕೆ, ಮರಗಳ ಜೀಯೋ ಟ್ಯಾಗಿಂಗ್ ಮುಂತಾದಪರಿಸರಸ್ನೇಹಿ ಯೋಜನೆಗಳ್ಳನ್ನ ಅನುಷ್ಟಾನಗೊಳಿಸಲಾಗಿದೆ.
ನಮ್ಮ ನಾಗರೀಕತೆ ಸಂಕಷ್ಟಕ್ಕೀಡಾದಾಗಲೆಲ್ಲ ಪಾರುಮಾಡಿದ್ದು ಸನ್ಯಾಸಿಗಳೇ. ಅದು ಚಾಣಕ್ಯನಿರಬಹುದು, ವಿದ್ಯಾರಣ್ಯರಿರಬಹುದು, ರಾಮದಾಸರಿರಬಹುದು, ಸ್ವಾಮಿ ಅಪರಾಂಪರರಾಗಿರಬಹುದು, ವಿವೇಕಾನಂದರಾಗಿರಬಹುದು. ಸರ್ವಸಂಘಪರಿತ್ಯಾಗಕ್ಕೆ ಹೊಸ ಭಾಷ್ಯವನ್ನ ಬರೆದದ್ದು ಭಾರತದ ಸನ್ಯಾಸಿಗಳು. ನಮ್ಮಸನ್ಯಾಸಿಗಳು ಕೇವಲ ಮತಪ್ರಚಾರಕರಲ್ಲ. ವಿಜ್ಞಾನಿಗಳು, ಸಮಾಜ ಸುಧಾರಕರು, ಸಮರ್ಥ ಆಡಳಿತಗಾರರು, ಯೋಧರು. ನಮ್ಮ ನಾಗರೀಕತೆಯ ಅಡಿಪಾಯ. ಈ ಭವ್ಯ, ಶ್ರೇಷ್ಠ ಪರಂಪರೆಯನ್ನ ನಾಥ ಪಂಥದ ಮಾಹಾಂತ ಯೋಗಿ ಆದಿತ್ಯನಾಥರು ಮುಂದುವರಿಸಿದ್ದಾರೆ. ನಮ್ಮ ದೇಶದ ಜನರು ಈ ನೆಲದ ಬೇರಿನೊಂದಿಗೆ ಬೆಸೆದುಕೊಂಡ ಅಭಿವೃದ್ಧಿಯ ಮಾದರಿಯನ್ನ, ಚಿಂತನೆಯನ್ನ (ಏಕಾತ್ಮ ಮಾನವತೆ) ಎಂದೂ ತಿರಸ್ಕರಿಸುವುದಿಲ್ಲವೆಂಬುದಕ್ಕೆ ಮತ್ತು ಪ್ರಖರ ರಾಷ್ಟ್ರೀಯವಾದವನ್ನ ಪ್ರತಿಪಾದಿಸುವ ಸಚ್ಚಾರಿತ್ರ್ಯವುಳ್ಳ ನಾಯಕನನ್ನ ಕೈಬಿಡುವುದಿಲ್ಲವೆಂಬುದಕ್ಕೆ ಯೋಗಿ ಆದಿತ್ಯನಾಥರ ವಿಜಯವೇ ಸಾಕ್ಷಿ. ನರ್ಮದೆಯ ತಟದ ಸನ್ಯಾಸಿಯೊಬ್ಬರ ಪ್ರೇರಣೆಯಿಂದ ಉದಯಿಸಿದ, ದೀನದಯಾಳ್ ಉಪಾಧ್ಯಾಯರಿಂದ ಸ್ಪುರಣಗೊಂಡ ‘ಏಕಾತ್ಮ ಮಾನವತೆ’ ಯಿಂದ ಮಾತ್ರ ದೇಶ-ವಿಶ್ವದ ಸರ್ವಾಂಗೀಣ ಅಭ್ಯುದಯ ಸಾಧ್ಯವೆಂಬುದು ಸಾಬೀತಾಗುತ್ತಿದೆ. ನಮ್ಮೆ ದೇಶದ ಜನರೂ ಈ ನಿಟ್ಟಿನಲ್ಲಿ ಜಾಗೃತರಾಗುತ್ತಿದ್ದಾರೆ. ಶುಭವಾಗಲಿ.
✍️ಮಂಚಲ್ ಮಹೇಶ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.